ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮುಂಬೈನಿಂದ ಗೋವಾಗೆ ಸ್ಥಳಾಂತರಗೊಂಡ ಕೆಲ ವರ್ಷಗಳು ಉರುಳಿದೆ. ಇದೀಗ ಅರ್ಜುನ್ ತೆಂಡೂಲ್ಕರ್ ಹೆಸರು ಗೋವಾದಲ್ಲೂ ಇಲ್ಲ, ಇತ್ತ ಮುಂಬನಲ್ಲೂ ಇಲ್ಲದಾಗಿದೆ.
ಗೋವಾ (ಅ.10) ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕ್ರಿಕೆಟ್ ಕರಿಯರ್‌ಗಾಗಿ ಮುಂಬೈ ತೊರೆದು ಗೋವಾಗೆ ಸ್ಥಳಾಂತರಗೊಂಡಿದ್ದಾರೆ. 2022ರಿಂದ ಗೋವಾ ಪರ ಆಡುತ್ತಿರುವ ಅರ್ಜುನ್ ತೆಂಡೂಲ್ಕರ್‌ಗೆ ಇದೀಗ ಶಾಕ್ ಎದುರಾಗಿದೆ. ಗೋವಾ ರಣಜಿ ತಂಡ ಪ್ರಕಟಗೊಂಡಿದ್ದು, ಈ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್ ಹೆಸರಿಲ್ಲ. ಈಗಾಗಲೇ ಮುಂಬೈ ತೊರೆದಿರುವ ಅರ್ಜುನ್ ತೆಂಡೂಲ್ಕರ್ ಹೆಸರು ಎಲ್ಲೂ ಇಲ್ಲದಾಗಿದೆ. ಅರ್ಜುನ್ ಹಾಗೂ ಸಚಿನ್ ಅಭಿಮಾನಿಗಳು ತಂಡದಲ್ಲಿ ಅರ್ಜುನ್ ಹೆಸರಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಓಮಾನ್ ಸರಣಿಯಿಂದಲೂ ದೂರವಾಗಿದ್ದ ಅರ್ಜುನ್
ಇತ್ತೀಚೆಗೆ ಗೋವಾ ತಂಡ ಓಮಾನ್ ಪ್ರವಾಸ ಕೈಗೊಂಡಿತ್ತು. ಈ ಟೂರ್ನಿಯಲ್ಲೂ ಅರ್ಜುನ್ ತೆಂಡೂಲ್ಕರ್ ತಂಡದಲ್ಲಿ ಇರಲಿಲ್ಲ. ಇದೀಗ ಗೋವಾ ರಣಜಿ ಟೂರ್ನಿಯಲ್ಲೂ ಅರ್ಜುನ್ ತೆಂಡೂಲ್ಕರ್ ಹೆಸರಿಲ್ಲ. ಗೋವಾದಲ್ಲೂ ಅರ್ಜುನ್ ತೆಂಡೂಲ್ಕರ್ ಕ್ರಿಕೆಟ್ ಕರಿಯರ್‌ಗೆ ಕುತ್ತು ಬಿತ್ತಾ ಅನ್ನೋ ಪ್ರಶ್ನೆಗಳು ಎದ್ದಿದೆ. ಆದರೆ ಮೂಲಗಳ ಪ್ರಕಾರ ಅರ್ಜುನ್ ತೆಂಡೂಲ್ಕರ್ ಖುದ್ದು ತಂಡದಿಂದ ದೂರ ಉಳಿದಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಓಮನ್ ಸರಣಿ ಹಾಗೂ ರಣಜಿ ಟೂರ್ನಿಗೆ ಅರ್ಜುನ್ ತೆಂಡೂಲ್ಕರ್ ಲಭ್ಯವಿಲ್ಲ ಎಂದು ಮೊದಲೇ ಆಯ್ಕೆ ಸಮಿತಿಗೆ ತಿಳಿಸಿದ್ದರು ಎಂಬ ಮಾತುಗಳಿವೆ.
ಗೋವಾ ಪರ ಫರ್ಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಕಬಳಿಸಿರುವ ಅರ್ಜುನ್ ತೆಂಡೂಲ್ಕರ್ ಯಶಸ್ವಿ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2025-26ರ ರಣಜಿ ಟೂರ್ನಿಯಲ್ಲಿ ಗೋವಾ ಪ್ರತಿನಿಧಿಸಿದ್ದ ಅರ್ಜುನ್ ತೆಂಡೂಲ್ಕರ್ ಬಳಿಕ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡಿದ್ದರು. ಗೋವಾ ತಂಡದ ಕೀ ಪ್ಲೇಯರ್ ಆಗಿ ಅರ್ಜುನ್ ತೆಂಡೂಲ್ಕರ್ ಗುರುತಿಸಿಕೊಂಡಿದ್ದಾರೆ. ಆದರೆ ಸತತವಾಗಿ ಪ್ರಮುಖ ಎರಡು ಟೂರ್ನಿಗಳಿಂದ ಅರ್ಜುನ್ ತೆಂಡೂಲ್ಕರ್ ಹೊರಗುಳಿದಿರುವುದು ಕೆಲ ಅನುಮಾನಗಳಿಗೆ ಕಾರಣವಾಗಿದೆ.
ಲಖನೌ ಸೂಪರ್ ಜೈಂಟ್ಸ್ ತಂಡದ ಪರ ಐಪಿಎಲ್
ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದ ಅರ್ಜುನ್ ತೆಂಡೂಲ್ಕರ್‌ಗೆ ಆಡುವ ಅವಕಾಶ ಸಿಗಲಿಲ್ಲ. 2021ರಿಂದ ಸತತವಾಗಿ ಐಪಿಎಲ್ ಟೂರ್ನಿಯಲ್ಲಿದ್ದರೂ 2023ರಲ್ಲಿ ಪಾದಾರ್ಪಣೆ ಮಾಡಿದ್ದರು. 2026ರಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡು ಮೊದಲ ವಿಕೆಟ್ ಸಾಧನೆ ಮಾಡಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ದ ಆಡಿ ಒಂದು ವಿಕೆಟ್ ಕಬಳಿಸಿದ್ದರು. ಐಪಿಎಲ್ ಟೂರ್ನಿಯಲ್ಲಿ 2023ರಿಂದ ಇದ್ದರೂ ಆಡಿದ್ದು ಕೇವಲ 6 ಪಂದ್ಯ ಮಾತ್ರ.


