ಕೆ.ಎಲ್ ರಾಹುಲ್ ಅವರಂತೆ ರಾಹುಲ್ ದ್ರಾವಿಡ್ ಅವರಿಂದ ಗುರುತಿಸಲ್ಪಟ್ಟ ಬಿಹಾರದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ. ಐಪಿಎಲ್ ಮತ್ತು ಅಂಡರ್-19 ವಿಶ್ವಕಪ್‌ನಲ್ಲಿ ದಾಖಲೆಯ ಶತಕಗಳನ್ನು ಬಾರಿಸಿ ಭಾರತ ಕ್ರಿಕೆಟ್‌ನ ಭವಿಷ್ಯದ ತಾರೆಯಾಗಿ ಹೊರಹೊಮ್ಮುತ್ತಿದ್ದಾನೆ.
- ಸುದರ್ಶನ್, ಏಷ್ಯಾನೆಟ್ ಸುವರ್ಣನ್ಯೂಸ್
2003ನೇ ಇಸವಿ ಇರಬೇಕು. ಮಂಗಳೂರಿನ ಹುಡುಗನೊಬ್ಬ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆಲ ಕಚ್ಚಿ ನಿಂತು ಆಡುತ್ತಿದ್ದ. ಪಕ್ಕದಲ್ಲೇ ಇದ್ದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಬಂದಿದ್ದರು ರಾಹುಲ್ ದ್ರಾವಿಡ್. ಚಿನ್ನಸ್ವಾಮಿ ಮೈದಾನ ಬೌಂಡರಿ ಗೆರೆಯಾಚೆ ನಡೆಯುತ್ತಾ ಬರುತ್ತಿದ್ದ ಕರುನಾಡ ಬ್ಯಾಟಿಂಗ್ ದಿಗ್ಗಜನನ್ನು ಹುಡುಗ ಸೂಜಿಗಲ್ಲಿನಂತೆ ಸೆಳೆದು ಬಿಟ್ಟ.
ಮೈದಾನಕ್ಕೆ ಸುತ್ತು ಹಾಕುತ್ತಿದ್ದ ದ್ರಾವಿಡ್ 11ರ ಬಾಲಕ ಆಟವನ್ನು ಒಂದೂವರೆ ಗಂಟೆ ಜಾಗದಲ್ಲೇ ನಿಂತು ನೋಡಿ ಬಿಟ್ಟರು. ಹುಡುಗ ದ್ವಿಶತಕ ಬಾರಿಸಿದ್ದ. ಇವನು ‘ವಿಶೇಷ ಪ್ರತಿಭೆ’ ಎಂದವರೇ ಆಗಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಬಳಿ ಬಂದು, ‘ಈ ಹುಡುಗನ ಮೇಲೆ ಒಂದು ಕಣ್ಣಿಡಿ’ ಎಂದು ಹೇಳುತ್ತಾರೆ. ಆ ಚಿಕ್ಕ ವಯಸ್ಸಲ್ಲೇ ದ್ರಾವಿಡ್’ರಂಥಾ ದ್ರಾವಿಡ್ ಅವರನ್ನೇ ಬೆರಗುಗೊಳಿಸಿದ್ದವನ ಹೆಸರು ರಾಹುಲ್. ಕೆ.ಎಲ್ ರಾಹುಲ್.
23 ವರ್ಷಗಳ ಹಿಂದೆ ರಾಹುಲ್ ದ್ರಾವಿಡ್ ಗುರುತಿಸಿದ್ದ ಪ್ರತಿಭೆ ಈಗ ಭಾರತ ತಂಡದ ಆಧಾರಸ್ಥಂಭ. ಹೊಸ ಹುಡುಗರ ಪಾಲಿಗೆ ರಾಹುಲ್ ದ್ರಾವಿಡ್ ದ್ರೋಣಾಚಾರ್ಯನಂಥಾ ಗುರು. ಅಂಥಾ ಗುರುವಿನ ಕಣ್ಣಿಗೆ ಬಿದ್ದವನು ಭಾರತದ ಅಂಡರ್-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿ. 14 ವರ್ಷ, 316ನೇ ದಿನಕ್ಕೆ ಅಂಡರ್-19 ವಿಶ್ವಕಪ್ ಫೈನಲ್’ನಲ್ಲಿ 80 ಎಸೆತಗಳಲ್ಲಿ 175 ರನ್. 26ನೇ ಓವರ್ ಕೊನೆಗೊಳ್ಳುವ ಹೊತ್ತಿಗೆ 175 ರನ್ ಬಾರಿಸಿ ಪೆವಿಲಿಯನ್’ನಲ್ಲಿ ಬೆಚ್ಚಗೆ ಕೂತಿದ್ದ ವೈಭವ್ ಸೂರ್ಯವಂಶಿ.
ಬಿಹಾರಿ ಹುಡುಗ ಸೂರ್ಯವಂಶಿ ಬಗ್ಗೆ ಇವತ್ತು ಕ್ರಿಕೆಟ್ ಜಗತ್ತು ಉಘೇ ಉಘೇ ಎನ್ನುತ್ತಿದೆ ಎಂದರೆ, ಅದಕ್ಕೆ ಕಾರಣ ನಿಸ್ಸಂದೇಹವಾಗಿ ಅವನ ವಿಶೇಷ ಪ್ರತಿಭೆ, ಅವನ ಆಟ, ಅವನ ಸಾಮರ್ಥ್ಯ, ಅವನು ಪಟ್ಟ ಶ್ರಮ. ಆದರೆ ದೊಡ್ಡ ವೇದಿಕೆಗಳಲ್ಲಿ ಈ ಸಣ್ಣ ಹುಡುಗನಿಗೆ ಅವಕಾಶಗಳ ಬುನಾದಿ ಹಾಕಿದವರು ರಾಹುಲ್ ದ್ರಾವಿಡ್.
ರಾಹುಲ್ ದ್ರಾವಿಡ್‌ಗೆ ವೈಭವ್ ಮಾಹಿತಿ ಕೊಟ್ಟ ಲಕ್ಷ್ಮಣ್
ಹುಡುಗರು ಚಿನ್ನದಾಂಡು ಆಡುವ ವಯಸ್ಸಲ್ಲಿ ಬ್ಯಾಟ್ ಹಿಡಿದು ದಾಂಡಿಗನಂತೆ ಚಚ್ಚುತ್ತಿದ್ದ ವೈಭವ್ ಸೂರ್ಯವಂಶಿ. ಆಗಿನ್ನು 13 ವರ್ಷದ ಪೋರ. ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಜ್ಯೂನಿಯರ್ ತಂಡ ಅಂಡರ್-19 one-day Challenger tournament ಆಡುತ್ತಿತ್ತು. ಭಾರತ ಪರ ಆಟಕ್ಕಿಳಿದ 13ರ ವೈಭವ್ ಸೂರ್ಯವಂಶಿ 58 ಎಸೆತಗಳಲ್ಲಿ ಶತಕ ಬಾರಿಸಿ ಬಿಟ್ಟ. ಹುಡುಗನ ಆಟ ನೋಡಿ ಹುಬ್ಬೇರಿಸಿ ಬಿಟ್ಟರು ವಿವಿಎಸ್ ಲಕ್ಷ್ಮಣ್. ‘ಇವನು ಪೋರನಲ್ಲ, ಪ್ರಚಂಡ ಪೋರ’ ಎಂದುಕೊಂಡವರೇ ಫೋನ್ ಕೈಗೆತ್ತಿಕೊಂಡು ಡಯಲ್ ಮಾಡಿದ್ದು ರಾಹುಲ್ ದ್ರಾವಿಡ್ ಅವರಿಗೆ. ಆಗ ದ್ರಾವಿಡ್ ರಾಜಸ್ಥಾನ ರಾಯಲ್ಸ್ ತಂಡದ ಹೆಡ್ ಕೋಚ್.
‘‘ಹೀಗೊಬ್ಬ ಹುಡುಗನಿದ್ದಾನೆ, ನೋಡು’’ ಎಂದು ಸೂರ್ಯವಂಶಿ ಬಗ್ಗೆ ದ್ರಾವಿಡ್ ಅವರಿಗೆ ಹೇಳಿದ್ದರು ಲಕ್ಷ್ಮಣ್. ಹೊಸ ಹುಡುಗರನ್ನು ಸದಾ ಬೆರಗುಗಣ್ಣುಗಳಿಂದ ನೋಡುವ ಮಹಾಗುರು ರಾಹುಲ್ ದ್ರಾವಿಡ್. ಲಕ್ಷ್ಮಣ್ ಅವರೇ ಹೇಳುತ್ತಿದ್ದಾರೆ ಎಂದರೆ ಹುಡುಗ ವಿಶೇಷ ಪ್ರತಿಭೆಯೇ ಇರಬೇಕು ಎಂದುಕೊಂಡ ದ್ರಾವಿಡ್, ಸೂರ್ಯವಂಶಿಯನ್ನು ರಾಜಸ್ಥಾನ ರಾಯಲ್ಸ್ ಶಿಬಿರಕ್ಕೆ ಕರೆಸುತ್ತಾರೆ. ಅವನ ಪ್ರವೇಶ ಹೇಗಿತ್ತು ಎಂದರೆ ಮೊದಲ ಎಸೆತವನ್ನೇ ಕ್ರೀಡಾಂಗಣದಿಂದ ಹೊರಗೆ ಅಟ್ಟಿ ಬಿಡುತ್ತಾನೆ.
2025ರ ಐಪಿಎಲ್‌ನಲ್ಲಿ ತಾನಾಡಿದ ಮೊದಲ ಎಸೆತವನ್ನೇ ಸಿಕ್ಸರ್‌ಗಟ್ಟಿದ ವೈಭವ್
ಹುಡುಗ ರೆಡಿ ಇದ್ದ. 2025ರ ಐಪಿಎಲ್ ಟೂರ್ನಿಯಲ್ಲಿ ಸೂರ್ಯವಂಶಿಯನ್ನು ಐಪಿಎಲ್ ಅಖಾಡಕ್ಕೆ ಇಳಿಸಿಯೇ ಬಿಡುತ್ತಾರೆ ದ್ರಾವಿಡ್. ಸಣ್ಣವನ ಕಣ್ಣುಗಳಲ್ಲಿದ್ದ ಧೈರ್ಯ ದೊಡ್ಡದು. ಅದು ‘ಯಾರೇ ಎದುರು ನಿಂತರೂ ಸಿಕ್ಸರ್ ಬಾರಿಸಿ ಬಿಡುವೆ’ ಎಂಬ ಹುಂಬ ಧೈರ್ಯ. ಹಾಗೇ ಮಾಡಿ ಬಿಟ್ಟ ಸೂರ್ಯವಂಶಿ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯ. ಜೀವನದ ಮೊಟ್ಟ ಮೊದಲ ಐಪಿಎಲ್ ಮ್ಯಾಚ್. ಎದುರಲ್ಲಿದ್ದ ಬೌಲರ್ ಮುಂಬೈನ ಸ್ವಿಂಗ್ ಚತುರ ಶಾರ್ದೂಲ್ ಠಾಕೂರ್. ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್’ಗೆ ಅಟ್ಟಿ ಬಿಟ್ಟ. ಅದು ಭಾರತೀಯ ಕ್ರಿಕೆಟ್’ನಲ್ಲಿ ಹೊಸ ಪ್ರತಿಭೆಯೊಂದು ಉದಯಿಸಿದ ಕ್ಷಣ. ನಂತರ ಗುಜರಾತ್ ಟೈಟನ್ಸ್ ವಿರುದ್ಧ 14ನೇ ವಯಸ್ಸಿಗೆ 35 ಎಸೆತಗಳಲ್ಲಿ ಶತಕ ಚಚ್ಚಿ ಬಿಸಾಕಿದ ವೈಭವ್ ಸೂರ್ಯವಂಶಿ. ಐಪಿಎಲ್ ಹುಟ್ಟಿದ 3 ವರ್ಷಗಳ ನಂತರ ಹುಟ್ಟಿದವನು ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ಆ ದಿನ. ಇದೆಲ್ಲಾ ಒಂದು ದಿನಕ್ಕೆ ಸೀಮಿತ ಎಂದವರಿಗೆ ಹೆಜ್ಜೆ ಹೆಜ್ಜೆಗೂ ಉತ್ತರ ಕೊಡುತ್ತಲೇ ಬಂದ. ಈ ಪೈಕಿ ದೊಡ್ಡ ಉತ್ತರ ಅಂಡರ್-19 ವಿಶ್ವಕಪ್ ಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ ಚಚ್ಚಿದ ಆ 175 ರನ್’ಗಳ ಇನ್ನಿಂಗ್ಸ್.
ವೈಭವ್ ಸೂರ್ಯವಂಶಿಯ ಶತಕಗಳ ಟ್ರ್ಯಾಕ್ ರೆಕಾರ್ಡ್:
* ಐಪಿಎಲ್: ಗುಜರಾತ್ ಟೈಟನ್ಸ್ ವಿರುದ್ಧ 38 ಎಸೆತಗಳಲ್ಲಿ 101 ರನ್
* ಅಂಡರ್-19 ಯೂತ್ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ 62 ಎಸೆತಗಳಲ್ಲಿ 104 ರನ್
* ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟಿ20: 42 ಎಸೆತಗಳಲ್ಲಿ 144 ರನ್
* ಅಂಡರ್-19 ಏಷ್ಯಾ ಕಪ್: ಯುಎಇ ವಿರುದ್ಧ 95 ಎಸೆತಗಳಲ್ಲಿ 171 ರನ್
* ಸೈಯದ್ ಮುಷ್ತಾಕ್ ಅಲಿ ಟಿ20: ಮಹಾರಾಷ್ಟ್ರ ವಿರುದ್ಧ 61 ಎಸೆತಗಳಲ್ಲಿ 108* ರನ್
* ವಿಜಯ್ ಹಜಾರೆ ಟ್ರೋಫಿ: ಅರುಣಾಚಲ ಪ್ರದೇಶ ವಿರುದ್ಧ 84 ಎಸೆತಗಳಲ್ಲಿ 190 ರನ್
* ಅಂಡರ್-19 ವಿಶ್ವಕಪ್ ಫೈನಲ್: ಇಂಗ್ಲೆಂಡ್ ವಿರುದ್ಧ 80 ಎಸೆತಗಳಲ್ಲಿ 175 ರನ್
ಧೈರ್ಯಂ ಸರ್ವತ್ರ ಸಾಧನಂ. ಹೌದು. ಭಯವೇ ಇಲ್ಲ ಹುಡುಗನಿಗೆ. ಭಯವಿಲ್ಲದ ಆಟವೇ ಸೂರ್ಯವಂಶಿಯ ಟ್ರೇಡ್ ಮಾರ್ಕ್. ದೇಹದ ಅಷ್ಟೂ ಶಕ್ತಿಯನ್ನು ತೋಳಿನ ಮೇಲೆ ಹಾಕಿ ಬಾರಿಸುವ ಆ ಸಿಕ್ಸರ್’ಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ವೈಭವ್ ಸೂರ್ಯವಂಶಿ ಬಿಹಾರದ ಸಮಷ್ಠಿಪುರದವನು. ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಜೀವನಕ್ಕೆ ಆಧಾರವಾಗಿದ್ದ ತುಂಡು ಜಮೀನನ್ನು ಮಾರಿದ್ದರು ತಂದೆ ಸಂಜೀವ್ ಸೂರ್ಯವಂಶಿ. ಮಗನನ್ನು ಭಾರತ ತಂಡದಲ್ಲಿ ನೋಡಬೇಕೆಂಬುದು ತಂದೆಯ ಕನಸು. ಮಾರ್ಚ್ 27ಕ್ಕೆ ಹುಡುಗನಿಗೆ 15 ವರ್ಷ ತುಂಬಲಿದೆ. ಹೀಗಾಗಿ ಭಾರತ ಸೀನಿಯರ್ ತಂಡದ ಪರ ಆಡಲು ಅವನು ಅರ್ಹ. ‘‘ಅವನು ಟೆಸ್ಟ್ ಕ್ರಿಕೆಟ್ ಆಡುವವರೆಗೆ ಅವನನ್ನು ದೊಡ್ಡ ಕ್ರಿಕೆಟರ್ ಎಂದು ನಾನು ಭಾವಿಸುವುದೇ ಇಲ್ಲ’’ ಎಂದಿದ್ದಾರೆ ಸೂರ್ಯವಂಶಿಯ ತಂದೆ ಸಂಜೀವ್ ಸೂರ್ಯವಂಶಿ. ಆಡುತ್ತಾನೆ. ವೈಭವ್ ಸೂರ್ಯವಂಶಿ ಭಾರತ ಪರ ಟೆಸ್ಟ್ ಕ್ರಿಕೆಟ್ ಆಡಿಯೇ ಆಡುತ್ತಾನೆ.


