ಅಂಡರ್ 19 ವಿಶ್ವಕಪ್ ಫೈನಲ್‌ನ ಹಿಂದಿನ ರಾತ್ರಿ ತಮಗೆ ನಿದ್ದೆ ಬಂದಿರಲಿಲ್ಲ ಎಂದು ವೈಭವ್ ಸೂರ್ಯವಂಶಿ ಹೇಳಿಕೊಂಡಿದ್ದಾರೆ. ಬಿಸಿಸಿಐನ 'ಒಂದು-ಟೂರ್ನಮೆಂಟ್' ನಿಯಮದಿಂದಾಗಿ ಇದು ತಮ್ಮ ಕೊನೆಯ ವಿಶ್ವಕಪ್ ಎಂಬುದು ಅವರಿಗೆ ಒತ್ತಡ ತಂದಿತ್ತು. ಈ ಫೈನಲ್‌ನಲ್ಲಿ 175 ರನ್ ಸಿಡಿಸಿ ಹಲವು ದಾಖಲೆಗಳನ್ನು ಬರೆದರು.

ಹರಾರೆ: ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದ ಹಿಂದಿನ ದಿನ ರಾತ್ರಿ ತಮಗೆ ನಿದ್ದೆಯೇ ಬಂದಿರಲಿಲ್ಲ ಎಂದು ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಹೇಳಿಕೊಂಡಿದ್ದಾರೆ. "ಇದೇ ನಮ್ಮ ಕೊನೆಯ ವಿಶ್ವಕಪ್ ಪಂದ್ಯ, ಇನ್ನೊಮ್ಮೆ ಈ ಟೂರ್ನಿಯಲ್ಲಿ ಆಡೋಕೆ ಆಗಲ್ಲ ಅನ್ನೋ ಯೋಚನೆ ಕಾಡುತ್ತಿತ್ತು" ಅಂತ 'ರೇ ಸ್ಪೋರ್ಟ್ಸ್‌'ಗೆ ನೀಡಿದ ಸಂದರ್ಶನದಲ್ಲಿ ವೈಭವ್ ಸೂರ್ಯವಂಶಿ ತಿಳಿಸಿದ್ದಾರೆ.

"ಫೈನಲ್ ಪಂದ್ಯವನ್ನು ನಾವು ಒಂದು 'ಸಾಮಾನ್ಯ ಆಟ' ಅಂತ ಅಂದುಕೊಳ್ಳೋಕೆ ಪ್ರಯತ್ನಪಟ್ಟರೂ ಅದು ಸಾಧ್ಯವಾಗಲಿಲ್ಲ. ಪಂದ್ಯದ ಹಿಂದಿನ ರಾತ್ರಿ ನಾನು ಒಂದು ಗಂಟೆ ಕೂಡ ಸರಿಯಾಗಿ ನಿದ್ದೆ ಮಾಡಿಲ್ಲ. ಯಾಕಂದ್ರೆ ನಮ್ಮ ಮೇಲೆ ಒತ್ತಡ ಇತ್ತು. ಮುಂದೆ ಭಾರತದ ಸೀನಿಯರ್ ತಂಡಕ್ಕಾಗಿ ವಿಶ್ವಕಪ್ ಆಡಬಹುದು, ಆದರೆ ಅಂಡರ್ 19 ವಿಶ್ವಕಪ್ ಆಡೋಕೆ ಇನ್ನೆಂದೂ ಅವಕಾಶ ಸಿಗಲ್ಲ. ಇದು ಯಾವುದೇ ಆಟಗಾರನಿಗೆ ಮರೆಯಲಾಗದ ಕ್ಷಣ" ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.
YouTube video player

ವೈಭವ್ ಸೂರ್ಯವಂಶಿ ಮತ್ತೆ ಯಾಕೆ ಅಂಡರ್-19 ವಿಶ್ವಕಪ್ ಆಡಲು ಸಾಧ್ಯವಿಲ್ಲ?

ವಯಸ್ಸಿನ ಪ್ರಕಾರ ನೋಡಿದರೆ, ವೈಭವ್‌ಗೆ ಇನ್ನೂ ಎರಡು ಅಂಡರ್-19 ವಿಶ್ವಕಪ್‌ (2028, 2030) ಆಡಲು ಅವಕಾಶವಿದೆ. ಆದರೆ, ಬಿಸಿಸಿಐನ 'ಒಂದು-ಟೂರ್ನಮೆಂಟ್' ನಿಯಮ ಇದಕ್ಕೆ ಅಡ್ಡಗಾಲು ಹಾಕುತ್ತಿದೆ. ಬಿಸಿಸಿಐ ನೀತಿಯ ಪ್ರಕಾರ, ಒಬ್ಬ ಆಟಗಾರ ಒಮ್ಮೆ ಅಂಡರ್-19 ವಿಶ್ವಕಪ್ ಆಡಿದರೆ, ಮತ್ತೆ ಅದೇ ಟೂರ್ನಿಗೆ ಆತನನ್ನು ಪರಿಗಣಿಸುವುದಿಲ್ಲ. ಜೂನಿಯರ್ ಮಟ್ಟದಲ್ಲಿ ವ್ಯಾಪಕವಾಗಿದ್ದ ವಯಸ್ಸಿನ ಮೋಸವನ್ನು ತಡೆಯಲು ಬಿಸಿಸಿಐ 2016ರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಹೆಚ್ಚು ಆಟಗಾರರಿಗೆ ಅವಕಾಶ ನೀಡುವುದು ಮತ್ತು ಹೊಸ ಪ್ರತಿಭೆಗಳನ್ನು ಹುಡುಕುವುದು ಕೂಡ ಇದರ ಉದ್ದೇಶವಾಗಿತ್ತು. ಆಟಗಾರರು ಅಂಡರ್ 19 ಮಟ್ಟದಲ್ಲೇ ಉಳಿಯದೆ, ಸೀನಿಯರ್ ಮಟ್ಟಕ್ಕೆ ಬೆಳೆಯಲು ಪ್ರೇರೇಪಿಸುವುದು ಬೋರ್ಡ್‌ನ ಗುರಿಯಾಗಿತ್ತು. ಹೀಗಾಗಿ, 2028ರಲ್ಲಿ ನಡೆಯುವ ಅಂಡರ್ 19 ವಿಶ್ವಕಪ್‌ನಲ್ಲಿ ವೈಭವ್‌ಗೆ ಆಡಲು ಅವಕಾಶ ಸಿಗುವುದಿಲ್ಲ. ಭಾರತದ ಮಾಜಿ ಆಟಗಾರ ಮತ್ತು ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಈ ಸಲಹೆಯನ್ನು ಮುಂದಿಟ್ಟಿದ್ದರು.

ಹಲವು ಅಪರೂಪದ ದಾಖಲೆ ಬರೆದ ವೈಭವ್ ಸೂರ್ಯವಂಶಿ:

ಬಿಹಾರ ಮೂಲದ 14 ವರ್ಷದ ಸ್ಪೋಟಕ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ, ಬಹುತೇಕ ತಾನಾಡಿದ ಎಲ್ಲಾ ಟೂರ್ನಿಯಲ್ಲೂ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಅತಿಕಿರಿಯ ಬ್ಯಾಟರ್ ಎನಿಸಿಕೊಂಡಿದ್ದರು. ಇದರ ಜತೆಗೆ ರಣಜಿ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಅಂಡರ್-19 ಏಷ್ಯಾಕಪ್ ಇದೀಗ ಅಂಡರ್-19 ವಿಶ್ವಕಪ್ ಟೂರ್ನಿಗಳಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.

ಅಂಡರ್-19 ವಿಶ್ವಕಪ್‌ನಲ್ಲಿ ಹಲವು ದಾಖಲೆ ಬರೆದ ವೈಭವ್

ತನ್ನ ವೃತ್ತಿಜೀವನದ ಏಕೈಕ ಅಂಡರ್ 19 ವಿಶ್ವಕಪ್ ಫೈನಲ್ ಅನ್ನು ವೈಭವ್ ಸ್ಮರಣೀಯವಾಗಿಸಿಕೊಂಡರು. ಕೇವಲ 80 ಎಸೆತಗಳಲ್ಲಿ 175 ರನ್ ಸಿಡಿಸಿದ ಅವರು, ಐಸಿಸಿ ಟೂರ್ನಿಗಳ ಫೈನಲ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ವೈಭವ್ ಕೇವಲ 55 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದ್ದರು. ಈ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 100 ರನ್‌ಗಳಿಂದ ಸೋಲಿಸಿ ಭಾರತ ಆರನೇ ಬಾರಿಗೆ ಕಿರೀಟ ಮುಡಿಗೇರಿಸಿಕೊಂಡಿತು.

ಇನ್ನು ಅಂಡರ್ 19 ವಿಶ್ವಕಪ್ ಇತಿಹಾಸದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗಿದೆ. ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ ಭಾರತ ಪರ ಏಳು ಪಂದ್ಯಗಳನ್ನಾಡಿ 30 ಸಿಕ್ಸರ್ ಸಿಡಿಸಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಈ ಮೊದಲು 2022ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಮರಿ ಎಬಿಡಿ ಖ್ಯಾತಿಯ ಡೆವಾಲ್ಡ್ ಬ್ರೆವೀಸ್ 18 ಸಿಕ್ಸರ್ ಸಿಡಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಆ ದಾಖಲೆಯನ್ನು ವೈಭವ್ ಅಳಿಸಿ ಹಾಕಿದ್ದಾರೆ.