2027ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಗಳ ಟಿಕೆಟ್‌ಗಾಗಿ ಅಧಿಕೃತ 'ಟಿಕೆಟ್ ಬ್ಯಾಲೆಟ್' ಪ್ರಕ್ರಿಯೆ ಆರಂಭವಾಗಿದೆ. ಅಭಿಮಾನಿಗಳು ಐಸಿಸಿ ವೆಬ್‌ಸೈಟ್ ಮೂಲಕ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಲಾಟರಿ ಮಾದರಿಯಲ್ಲಿ ಟಿಕೆಟ್ ಹಂಚಿಕೆಯಾಗಲಿದ್ದು, ನವೆಂಬರ್ 21ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಬೆಂಗಳೂರು (ಅ.1): ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2027ರ ಐಸಿಸಿ (ICC) ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಗಳನ್ನು ಮೈದಾನದಲ್ಲಿ ನೇರವಾಗಿ ವೀಕ್ಷಿಸಲು ಕಾಯುತ್ತಿರುವ ಜಾಗತಿಕ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ವೇಳಾಪಟ್ಟಿ ಘೋಷಣೆಯಾದ ಬೆನ್ನಲ್ಲೇ ಕ್ರಿಕೆಟ್ ಮಂಡಳಿಯು ಟಿಕೆಟ್‌ಗಳ ಲಭ್ಯತೆಗಾಗಿ ಅಧಿಕೃತ 'ಟಿಕೆಟ್ ಬ್ಯಾಲೆಟ್' (Ticket Ballot) ಪ್ರಕ್ರಿಯೆಯನ್ನು ಆರಂಭ ಮಾಡಿದೆ.

ಅಭಿಮಾನಿಗಳು ಐಸಿಸಿಯ ಅಧಿಕೃತ ಟಿಕೆಟಿಂಗ್ ಪೋರ್ಟಲ್ (https://tickets.cricketworldcup.com) ಹಾಗೂ ಅಧಿಕೃತ ವೆಬ್‌ಸೈಟ್ (www.icc-cricket.com/tournaments/icc-cricket-world-cup-2027) ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಟಿಕೆಟ್ ಪಡೆಯುವ ಅವಕಾಶವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

ಬ್ಯಾಲೆಟ್ ಪ್ರಕ್ರಿಯೆ ಹೇಗೆ ಕೆಲಸ ಮಾಡುತ್ತದೆ?

ಟಿಕೆಟ್‌ಗಳನ್ನು ಹಂಚಿಕೆ ಮಾಡಲು ಐಸಿಸಿ ಪಾರದರ್ಶಕವಾದ 'ಬ್ಯಾಲೆಟ್ ಸಿಸ್ಟಮ್' ಜಾರಿಗೆ ತಂದಿದ್ದು, ಅದರ ಪ್ರಮುಖ ನಿಯಮಗಳು ಹಾಗೂ ಹಂತಗಳು ಹೀಗಿವೆ.

ಸಂಪೂರ್ಣ ಉಚಿತ ನೋಂದಣಿ: ಟಿಕೆಟ್ ಬ್ಯಾಲೆಟ್‌ಗೆ ಅರ್ಜಿ ಸಲ್ಲಿಸಲು ಯಾವುದೇ ಆನ್‌ಲೈನ್ ಶುಲ್ಕ ಇರುವುದಿಲ್ಲ. ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ಅಭಿಮಾನಿಗಳು ಯಾವುದೇ ಹಣವನ್ನು ಪಾವತಿಸಬೇಕಿಲ್ಲ.

ಮಲ್ಟಿಪಲ್ ಪಂದ್ಯಗಳಿಗೆ ಅವಕಾಶ: ಒಬ್ಬ ವ್ಯಕ್ತಿಯು ಪ್ರತಿ ಪಂದ್ಯಕ್ಕೆ ಒಂದು ಬ್ಯಾಲೆಟ್ ಅರ್ಜಿಯಂತೆ, ಟೂರ್ನಿಯ ಹಲವು ಪಂದ್ಯಗಳಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಮೊದಲು ಬಂದವರಿಗೆ ಮೊದಲ ಆದ್ಯತೆಯಲ್ಲ (Not First-Come, First-Served): ಈ ಪ್ರಕ್ರಿಯೆಯು 'ಮೊದಲು ಬಂದವರಿಗೆ ಆದ್ಯತೆ' ಎಂಬ ಆಧಾರದ ಮೇಲೆ ನಡೆಯುವುದಿಲ್ಲ. ವಿಂಡೋ ಓಪನ್ ಇರುವಷ್ಟು ದಿನಗಳಲ್ಲಿ ಯಾರು ಯಾವಾಗ ಅರ್ಜಿ ಸಲ್ಲಿಸಿದರೂ ಎಲ್ಲರಿಗೂ ಸಮಾನ ಅವಕಾಶ ಸಿಗಲಿದೆ.

ರಾಂಡಮ್ ಲಾಟರಿ ಮಾದರಿ ಆಯ್ಕೆ: ಒಂದು ವೇಳೆ ನಿರ್ದಿಷ್ಟ ಪಂದ್ಯಕ್ಕೆ ಟಿಕೆಟ್‌ಗಳ ಬೇಡಿಕೆಯು ಲಭ್ಯವಿರುವ ಆಸನಗಳ ಸಂಖ್ಯೆಗಿಂತ ಹೆಚ್ಚಿದ್ದರೆ, ಕಂಪ್ಯೂಟರೀಕೃತ ರ‍್ಯಾಂಡಮ್ (Randomized) ಬ್ಯಾಲೆಟ್ ಪ್ರಕ್ರಿಯೆಯ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.

ನವೆಂಬರ್ 21 ಕೊನೆಯ ದಿನಾಂಕ: ಈ ಬ್ಯಾಲೆಟ್ ವಿಂಡೋ 2026ರ ನವೆಂಬರ್ 21 ರ ಮಧ್ಯರಾತ್ರಿ 23:59 (SAST) ರವರೆಗೆ ತೆರೆದಿರುತ್ತದೆ.

ಟಿಕೆಟ್ ಖರೀದಿ ಪ್ರಕ್ರಿಯೆ ಮತ್ತು ಪ್ರಮುಖ ಸೂಚನೆ

ಬ್ಯಾಲೆಟ್ ಪ್ರಕ್ರಿಯೆಯಲ್ಲಿ ಆಯ್ಕೆಯಾದ (Successful) ಹಾಗೂ ಆಯ್ಕೆಯಾಗದ (Unsuccessful) ಅರ್ಜಿಗಳ ಬಗ್ಗೆ ಅರ್ಜಿದಾರರು ನೋಂದಣಿ ಸಮಯದಲ್ಲಿ ನೀಡಿದ ಇಮೇಲ್ ವಿಳಾಸಕ್ಕೆ ನೇರವಾಗಿ ಸಂದೇಶ ಕಳುಹಿಸಲಾಗುತ್ತದೆ. ಆಯ್ಕೆಯಾದ ಅಭಿಮಾನಿಗಳಿಗೆ ಇಮೇಲ್ ಮೂಲಕ ಮಾಹಿತಿ ನೀಡಿ, ನಿಗದಿತ ಅವಧಿಯಲ್ಲಿ ಟಿಕೆಟ್ ಖರೀದಿಸುವ ಪ್ರತ್ಯೇಕ ಲಿಂಕ್ ಹಾಗೂ ಹಂತಗಳನ್ನು ಒದಗಿಸಲಾಗುತ್ತದೆ. ಬ್ಯಾಲೆಟ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಿಂದ ಅಥವಾ ನೋಂದಣಿ ಮಾಡಿಕೊಳ್ಳುವುದರಿಂದಲೇ ತಕ್ಷಣಕ್ಕೆ ಟಿಕೆಟ್‌ಗಳು ಖಾತರಿಯಾಗುವುದಿಲ್ಲ ಅಥವಾ ಯಾವುದೇ ಹಣ ಪಾವತಿಯಾಗುವುದಿಲ್ಲ. ಬ್ಯಾಲೆಟ್‌ನಲ್ಲಿ ಆಯ್ಕೆಯಾದ ನಂತರವಷ್ಟೇ ಹಣ ಪಾವತಿಸಿ ಟಿಕೆಟ್ ಖರೀದಿಸಬೇಕಿರುತ್ತದೆ.