2027ರ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಫೈನಲ್ ಮತ್ತು ಭಾರತ-ಪಾಕಿಸ್ತಾನ ಪಂದ್ಯಕ್ಕೆ ದಕ್ಷಿಣ ಆಫ್ರಿಕಾದ ವಾಂಡರರ್ಸ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಅಕ್ಟೋಬರ್ 7ರಂದು ಕೇಪ್‌ಟೌನ್‌ನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

ಬೆಂಗಳೂರು (ಅ.1): 2027ರ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಅತ್ಯಂತ ಮಹತ್ವದ ಫೈನಲ್ ಪಂದ್ಯ ಹಾಗೂ ಜಾಗತಿಕ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿರುವ ಪ್ರಸಿದ್ಧ ವಾಂಡರರ್ಸ್ ಕ್ರೀಡಾಂಗಣ (Wanderers Stadium) ಆತಿಥ್ಯ ವಹಿಸಲಿದೆ. 30,000ಕ್ಕೂ ಹೆಚ್ಚು ಆಸನ ಸಾಮರ್ಥ್ಯ ಹೊಂದಿರುವ, ದಕ್ಷಿಣ ಆಫ್ರಿಕಾದ ಅತ್ಯಂತ ದೊಡ್ಡ ಕ್ರಿಕೆಟ್ ಮೈದಾನ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ವಾಂಡರರ್ಸ್, 2003ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಆತಿಥ್ಯ ವಹಿಸಿತ್ತು. ಸುಂದರ ಪರ್ವತಗಳ ಹಿನ್ನೆಲೆ ಹೊಂದಿರುವ ಕೇಪ್‌ಟೌನ್‌ನ ಐಕಾನಿಕ್ ನ್ಯೂಲ್ಯಾಂಡ್ಸ್ ಮೈದಾನವನ್ನು ಹಿಂದಿಕ್ಕಿ ವಾಂಡರರ್ಸ್‌ಗೆ ಫೈನಲ್ ಹಾಗೂ ಭಾರತ-ಪಾಕ್ ಪಂದ್ಯದ ಆತಿಥ್ಯದ ಹಕ್ಕು ಸಿಕ್ಕಿದೆ.

ಅಕ್ಟೋಬರ್ 7 ರಂದು ಭಾರತ-ಆಸ್ಟ್ರೇಲಿಯಾ ಉದ್ಘಾಟನಾ ಪಂದ್ಯ

14ನೇ ಆವೃತ್ತಿಯ ಈ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 7 ರಿಂದ ಆರಂಭವಾಗಿ ನವೆಂಬರ್ 21 ರವರೆಗೆ ನಡೆಯಲಿದೆ. ಉದ್ಘಾಟನಾ ಪಂದ್ಯಕ್ಕೆ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನ ವೇದಿಕೆಯಾಗಲಿದ್ದು, ಗ್ರೂಪ್ ಹಂತದ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಮುಖಾಮುಖಿಯಾಗಲಿವೆ.

ವಿಂಡ್ಹೋಕ್‌ನಲ್ಲಿ ಸೂಪರ್ ಸೀರೀಸ್

ಮುಖ್ಯ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಆರಂಭವಾಗುವ ಮೊದಲು, ನಮೀಬಿಯಾದ ವಿಂಡ್ಹೋಕ್‌ನಲ್ಲಿರುವ ನಮೀಬಿಯಾ ಕ್ರಿಕೆಟ್ ಮೈದಾನದಲ್ಲಿ (Namibia Cricket Ground) 'ಸೂಪರ್ ಸೀರೀಸ್' ನಡೆಯಲಿದೆ. ಮೂರು ತಂಡಗಳು ಭಾಗವಹಿಸುವ ಈ ಪೂರ್ವಭಾವಿ ಸುತ್ತಿನ ಪಂದ್ಯಾವಳಿಯಲ್ಲಿ ವಿಜೇತರಾಗುವ ತಂಡವು, 12 ತಂಡಗಳು ಭಾಗವಹಿಸುವ ವಿಶ್ವಕಪ್‌ನ ಮುಖ್ಯ ಟೂರ್ನಿಗೆ ಅರ್ಹತೆ ಪಡೆಯಲಿದೆ.

ಮಹಾತ್ಮಾ ಗಾಂಧಿ ಜನ್ಮದಿನದಂದು ವಿಶ್ವಕಪ್‌ ಆರಂಭ

ಇನ್ನೂ ನಿರ್ಧಾರವಾಗದ ಎರಡು ತಂಡಗಳು ಸೇರಿದಂತೆ ಒಟ್ಟು 12 ತಂಡಗಳನ್ನು ತಲಾ ಆರರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ, ಜಿಂಬಾಬ್ವೆ ಮತ್ತು ಅರ್ಹತಾ ಸುತ್ತಿನಿಂದ ಬರುವ ಒಂದು ತಂಡವನ್ನು 'ಗ್ರೂಪ್ ಎ' ಯಲ್ಲಿ ಸೇರಿಸಲಾಗಿದೆ. ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಅರ್ಹತಾ ಸುತ್ತಿನಿಂದ ಬರುವ ಮತ್ತೊಂದು ತಂಡ 'ಗ್ರೂಪ್ ಬಿ' ಯಲ್ಲಿ ಇರಲಿವೆ.

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ 10 ತಂಡಗಳ ಪಂದ್ಯಾವಳಿಯಿಂದ ಈ ಎರಡು ಅರ್ಹತಾ ತಂಡಗಳನ್ನು ಅಂತಿಮಗೊಳಿಸಲಾಗುತ್ತದೆ; ಇದರಲ್ಲಿ ವಿಜೇತ ತಂಡವು ನೇರವಾಗಿ ಗ್ರೂಪ್ ಹಂತಕ್ಕೆ ಮುನ್ನಡೆದರೆ, ರನ್ನರ್-ಅಪ್ (ಫೈನಲ್‌ನಲ್ಲಿ ಸೋತ ತಂಡ) ಹಾಗೂ ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳು ಸೂಪರ್ ಸೀರೀಸ್‌ನಲ್ಲಿ ಆಡಲಿವೆ. ದಕ್ಷಿಣ ಆಫ್ರಿಕಾದಲ್ಲಿ ವಕೀಲರಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ಮಹಾತ್ಮ ಗಾಂಧಿಯವರ ಜನ್ಮದಿನದ ಸವಿನೆನಪಿಗಾಗಿ, ವಿಶ್ವಕಪ್ ಟೂರ್ನಿಯು ಅಕ್ಟೋಬರ್ 2 ರಿಂದ ಆರಂಭವಾಗಿ ನವೆಂಬರ್ 21 ರಂದು ಮುಕ್ತಾಯಗೊಳ್ಳಲಿದೆ.