ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಯುವರಾಜ್ ಸಿಂಗ್‌ಗೆ ಬಿಸಿಸಿಐನಿಂದ ಸಿಗುವ ತಿಂಗಳ ಪೆನ್ಷನ್ ಎಷ್ಟು?
2011ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್, 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಬಿಸಿಸಿಐನಿಂದ ಯುವಿಗೆ ಪ್ರತಿ ತಿಂಗಳು ಎಷ್ಟು ಪಿಂಚಣಿ ಸಿಗುತ್ತದೆ ಎಂಬುದನ್ನು ತಿಳಿಯಿರಿ.
ಬೆಂಗಳೂರು: ಭಾರತ ಕ್ರಿಕೆಟ್ ತಂಡವು ವಿಶ್ವ ಕ್ರಿಕೆಟ್‌ಗೆ ಪರಿಚಯಿಸಿದ ಅದ್ಭುತ ಆಲ್ರೌಂಡರ್‌ಗಳ ಪೈಕಿ ಯುವರಾಜ್ ಸಿಂಗ್ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಭಾರತ ತಂಡವು 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. 2017ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದ ಯುವಿ, 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.
ಇನ್ನು ಐಪಿಎಲ್‌ನಲ್ಲಿ ಯುವಿ ಹಲವು ತಂಡಗಳನ್ನು ಪ್ರತಿನಿಧಿಸಿದ್ದು ಮಾತ್ರವಲ್ಲದೇ, ಐಪಿಎಲ್ ಇತಿಹಾಸದಲ್ಲಿ ದುಬಾರಿ ಆಟಗಾರರ ಪೈಕಿ ಒಬ್ಬರೆನಿಸಿಕೊಂಡಿದ್ದರು. ಇನ್ನು ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳು ಒಟ್ಟಾಗಿ ಆಯೋಜಿಸಿದ್ದ 2011ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಅಮೋಘ ಆಲ್ರೌಂಡ್ ಪ್ರದರ್ಶನದ ಮೂಲಕ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಕಾರಣಕ್ಕಾಗಿ ಯುವಿ 'ಸರಣಿ ಶ್ರೇಷ್ಠ ಪ್ರಶಸ್ತಿ'ಯನ್ನು ಮುಡಿಗೇರಿಸಿಕೊಂಡಿದ್ದರು. ಇನ್ನು 28 ವರ್ಷಗಳ ಬಳಿಕ ಭಾರತ ತಂಡವು ಏಕದಿನ ವಿಶ್ವಕಪ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವಿಗೆ ನಿವೃತ್ತಿ ನಂತರ ಬಿಸಿಸಿಐ ತಿಂಗಳಿಗೆ ಎಷ್ಟು ಪಿಂಚಣಿ ನೀಡುತ್ತಿದೆ ಎನ್ನುವ ಕುತೂಹಲವಿದೆ. ನಿಮ್ಮ ಈ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಐಸಿಸಿ ಚಾಂಪಿಯನ್ಸ್ ಟ್ರೋಫಿ: ಹಿಂದಕ್ಕೆ ಸರಿದರೆ ಪಾಕ್ ಕ್ರಿಕೆಟ್‌ಗೆ ಭಾರೀ ನಷ್ಟ
ಮಾಜಿ ಕ್ರಿಕೆಟಿಗ ಯುವಿಗೆ ಸಿಗುವ ಪೆನ್ಷನ್ ಎಷ್ಟು?
ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಸುಮಾರು 5 ವರ್ಷಗಳೇ ಕಳೆದಿವೆ. ಇದೀಗ ಮಾಧ್ಯಮಗಳ ವರದಿಗಳ ಪ್ರಕಾರ ಯುವರಾಜ್ ಸಿಂಗ್ ಅವರಿಗೆ ಬಿಸಿಸಿಐನಿಂದ ಸಿಗುವ ತಿಂಗಳ ಪಿಂಚಣಿ 52,500 ರುಪಾಯಿಗಳಾಗಿವೆ. ಈ ಮೊದಲು ಮಾಜಿ ಕ್ರಿಕೆಟಿಗರಿಗೆ ತಿಂಗಳಿಗೆ 30 ಸಾವಿರ ರುಪಾಯಿ ಪೆನ್ಷನ್ ಸಿಗುತ್ತಿತ್ತು. ಇತ್ತೀಚೆಗೆ ಆ ಪಿಂಚಣಿ ಮೊತ್ತವನ್ನು ಹೆಚ್ಚಿಸಲಾಗಿದೆ. ಟೈಮ್ಸ್ ನೌ ವರದಿಯ ಪ್ರಕಾರ 2019ರಿಂದಲೇ ಯುವರಾಜ್ ಸಿಂಗ್ ಪ್ರತಿತಿಂಗಳು ಬಿಸಿಸಿಐನಿಂದ ಪಿಂಚಣಿ ಪಡೆಯುತ್ತಿದ್ದಾರೆ.
ಬಿಸಿಸಿಐ ಮಾಜಿ ಕ್ರಿಕೆಟಿಗರಿಗೆ ಪಿಂಚಣಿ ಹೇಗೆ ನಿರ್ಧರಿಸುತ್ತದೆ?
ಬಿಸಿಸಿಐ ನಿಯಮಾವಳಿಗಳ ಪ್ರಕಾರ, ಆಟಗಾರನೊಬ್ಬ 25 ಪ್ರಥಮ ದರ್ಜೆ ಪಂದ್ಯಗಳನ್ನಾಡಿದರೆ, ಆತ ಬಿಸಿಸಿಐ ಪಿಂಚಣಿ ಪಡೆಯಲು ಅರ್ಹನಾಗುತ್ತಾನೆ. ಆ ಆಟಗಾರರ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುತ್ತಿದ್ದಂತೆಯೇ ಬಿಸಿಸಿಐನಿಂದ ಪಿಂಚಣಿಯನ್ನು ಪಡೆಯಲಾರಂಭಿಸುತ್ತಾನೆ. 25ರಿಂದ 49 ಪ್ರಥಮ ದರ್ಜೆ ಪಂದ್ಯಗಳನ್ನಾಡಿ ನಿವೃತ್ತಿಯಾಗುವ ಮಾಜಿ ಕ್ರಿಕೆಟಿಗರು ತಿಂಗಳಿಗೆ 30 ಸಾವಿರ ರುಪಾಯಿ ಪೆನ್ಷನ್ ಪ್ರತಿ ತಿಂಗಳು ಪಡೆಯುತ್ತಾರೆ. ಇನ್ನು 50 ರಿಂದ 74 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ ಮಾಜಿ ಕ್ರಿಕೆಟಿಗರು 45 ಸಾವಿರ ರುಪಾಯಿ ಪಿಂಚಣಿ ಪಡೆಯುತ್ತಾರೆ. ಇನ್ನು 75ಕ್ಕಿಂತ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳನ್ನಾಡುವ ಮಾಜಿ ಕ್ರಿಕೆಟಿಗರು ಬಿಸಿಸಿಐನಿಂದ ತಿಂಗಳಿಗೆ 52,500 ರುಪಾಯಿ ಪೆನ್ಷನ್ ಪಡೆದುಕೊಳ್ಳುತ್ತಾರೆ.
ಪೈಸೆ ಪೈಸೆಗೂ ಪರದಾಡುತ್ತಿರುವ ವಿನೋದ್ ಕಾಂಬ್ಳಿ; ಬೀದಿಗೆ ಬೀಳುವ ಆತಂಕದಲ್ಲಿ ಮಾಜಿ ಕ್ರಿಕೆಟರ್!
ಯುವಿ ಕ್ರಿಕೆಟ್ ಬದುಕಿನ ಕಿರು ಪರಿಚಯ:
2000ನೇ ಇಸವಿಯಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಯುವರಾಜ್ ಸಿಂಗ್, ಭಾರತ ಪರ 40 ಟೆಸ್ಟ್, 304 ಏಕದಿನ ಹಾಗೂ 58 ಟಿ20 ಪಂದ್ಯಗಳನ್ನಾಡಿದ್ದಾರೆ. 40 ಟೆಸ್ಟ್‌ನಿಂದ 1900 ರನ್, ಏಕದಿನ ಕ್ರಿಕೆಟ್‌ನಲ್ಲಿ 8701 ಹಾಗೂ ಟಿ20 ಕ್ರಿಕೆಟ್‌ನಿಂದ 1177 ರನ್ ಸಿಡಿಸಿದ್ದಾರೆ. ಇದಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್‌ನಲ್ಲಿ ಒಟ್ಟಾರೆ ಯುವಿ 150 ಬಲಿ ಪಡೆದಿದ್ದಾರೆ.