ಇಂಗ್ಲೆಂಡ್ ಆಟಗಾರ ಹ್ಯಾರಿ ಬ್ರೂಕ್ ಸತತ ಎರಡನೇ ವರ್ಷ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಯ್ಕೆಯಾಗಿದ್ದ ಬ್ರೂಕ್, ಇಂಗ್ಲೆಂಡ್ ಕ್ರಿಕೆಟ್‌ಗೆ ಮಹತ್ವದ ಸಮಯವೆಂದು ಹೇಳಿದ್ದಾರೆ. ಬಿಸಿಸಿಐ ನಿಯಮದ ಪ್ರಕಾರ, ಗಾಯದ ಹೊರತಾಗಿ ಹಿಂದೆ ಸರಿದರೆ 2 ವರ್ಷ ನಿಷೇಧಕ್ಕೊಳಗಾಗುವ ಸಾಧ್ಯತೆಯಿದೆ. ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ ನಾಯಕ ಮತ್ತು ಬದಲಿ ಆಟಗಾರನನ್ನು ಘೋಷಿಸಿಲ್ಲ. ಮಾರ್ಚ್ 22ರಿಂದ ಐಪಿಎಲ್ ಆರಂಭವಾಗಲಿದೆ.
ಲಂಡನ್: ಇಂಗ್ಲೆಂಡ್ ತಂಡದ ಅಟಗಾರ ಹ್ಯಾರಿ ಬ್ರೂಕ್ ಸತತ ಎರಡನೇ ವರ್ಷವೂ ಐಪಿಎಲ್‌ನಿಂದ ಹಿಂದೆ ಸರಿದಿದ್ದು, ಬಿಸಿಸಿಐ ನಿಯಮಾವಳಿ ಪ್ರಕಾರ 2 ವರ್ಷ ಐಪಿಎಲ್‌ನಿಂದಲೇ ನಿಷೇಧಕ್ಕೊಳಗಾಗುವ ಸಾಧ್ಯತೆಯಿದೆ. ಈ ಸಲದ ಐಪಿಎಲ್‌ನಲ್ಲಿ ಬ್ರೂಕ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಯ್ಕೆಯಾಗಿದ್ದರು.
ಐಪಿಎಲ್‌ನಿಂದ ಹಿಂದೆ ಸರಿಯುವ ಬಗ್ಗೆ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ' ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಅಭಿಮಾನಿಗಳ ಕ್ಷಮೆಯಾಚಿಸುತ್ತೇನೆ. ಇದು ಇಂಗ್ಲೆಂಡ್ ಕ್ರಿಕೆಟ್‌ಗೆ ಮಹತ್ವದ ಸಮಯ. ಹಾಗಾಗಿ ಮುಂಬರುವ ಸರಣಿಗೆ ತಯಾರಿ ನಡೆಸಲು ಬಯಸುತ್ತೇನೆ.
ದೇಶಕ್ಕಾಗಿ ಆಡುವುದು ನನ್ನ ಆದ್ಯತೆ' ಎಂದಿದ್ದಾರೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡವೇ 2027ರ ಏಕದಿನ ವಿಶ್ವಕಪ್‌ನಲ್ಲಿ ಕಣಕ್ಕೆ?
ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಬರೋಬ್ಬರಿ 6.25 ಕೋಟಿ ರುಪಾಯಿ ನೀಡಿ ಹ್ಯಾರಿ ಬ್ರೂಕ್ ಅವರನ್ನು ಖರೀದಿಸಿತ್ತು.
ಬಿಸಿಸಿಐ ನಿಯಮದ ನಂತರ ಪ್ರಕಾರ, ಹರಾಜಿನಲ್ಲಿ ಆಯ್ಕೆಯಾದ ಯಾವುದೇ ವಿದೇಶಿ ಅಟಗಾರ ಗಾಯದ ಹೊರತಾಗಿ ಐಪಿಎಲ್‌ನಿಂದ ಹಿಂದೆ ಸರಿದರೆ 2 ವರ್ಷಗಳ ಕಾಲ ನಿಷೇಧಕ್ಕೆ ಒಳಪಡಬೇಕಾಗುತ್ತದೆ. 2024ರಲ್ಲಿ ತಮ್ಮ ಅಜ್ಜಿಯ ನಿಧನದ ಕಾರಣದಿಂದ ಹ್ಯಾರಿ ಬ್ರೂಕ್ ಐಪಿಎಲ್‌ನಿಂದ ಹಿಂದೆ ಸರಿದಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಇದುವರೆಗೂ ತನ್ನ ತಂಡದ ನಾಯಕ ಯಾರು ಎನ್ನುವುದನ್ನು ಘೋಷಿಸಿಲ್ಲ. ಇದರ ಜತೆಗೆ ಹ್ಯಾರಿ ಬ್ರೂಕ್ ಅವರ ಬದಲಿ ಆಟಗಾರನ ಹೆಸರನ್ನು ಡೆಲ್ಲಿ ಫ್ರಾಂಚೈಸಿ ಇದುವರೆಗೂ ಘೋಷಿಸಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅಕ್ಷರ್ ಪಟೇಲ್, ಕೆ ಎಲ್ ರಾಹುಲ್ ಅವರಂತಹ ಅನುಭವಿ ಆಟಗಾರರಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಯಾರಿಗೆ ನಾಯಕ ಪಟ್ಟ ಕಟ್ಟಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: 'ಆರ್‌ಸಿಬಿ ಈ ಸಲವೂ ಕಪ್ ಗೆಲ್ಲಬಾರ್ದು ಎಂದು ಪ್ರಾರ್ಥಿಸ್ತೇನೆ': ಮತ್ತೆ ವಿಷ ಕಾರಿದ CSK ಮಾಜಿ ಕ್ರಿಕೆಟಿಗ!
ಹ್ಯಾರಿ ಬ್ರೂಕ್ ಕೇವಲ ಒಂದು ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. 2023ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದ ಹ್ಯಾರಿ ಬ್ರೂಕ್ 11 ಪಂದ್ಯಗಳನ್ನಾಡಿ ಕೇವಲ 22.11ರ ಬ್ಯಾಟಿಂಗ್ ಸರಾಸರಿಯಲ್ಲಿ 190 ರನ್ ಬಾರಿಸಿದ್ದರು. ಈ ಪೈಕಿ ಕೋಲ್ಕತಾ ನೈಟ್ ರೈಡರ್ಸ್ ಎದುರು ಒಂದು ಶತಕವನ್ನು ಸಿಡಿಸಿದ್ದರು.
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇದೇ ಮಾರ್ಚ್ 22ರಿಂದ ಆರಂಭವಾಗಲಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಸವಾಲನ್ನು ಎದುರಿಸಲಿದೆ.
