Asianet Suvarna News Asianet Suvarna News

WPL 2024 : ಡೆಲ್ಲಿ ವಿರುದ್ಧ ಆರ್‌ಸಿಬಿಗೆ 1 ರನ್‌ ವೀರೋಚಿತ ಸೋಲು!

29 ಎಸೆತದಲ್ಲಿ 51 ರನ್‌ ಸಿಡಿಸಿದ ರಿಚಾ ಘೋಷ್‌, ಕೊನೆಯ ಎಸೆತದಲ್ಲಿ 2 ರನ್‌ ಬೇಕಿದ್ದಾಗ ರನೌಟ್‌ ಆದರು. ಇದರಿಂದಾಗಿ ಆರ್‌ಸಿಬಿಗೆ ಗೆಲುವು ಕೈತಪ್ಪಿತು.

Delhi Capitals beat Royal Challengers Bangalore by 1 run in last-ball thriller to qualify for playoffs kvn
Author
First Published Mar 11, 2024, 9:31 AM IST

ನವದೆಹಲಿ: 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌)ನಲ್ಲಿ ಆರ್‌ಸಿಬಿಯ ಪ್ಲೇ-ಆಫ್‌ ಹಾದಿ ಕಠಿಣಗೊಂಡಿದೆ. ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆರ್‌ಸಿಬಿ 1 ರನ್‌ ವೀರೋಚಿತ ಸೋಲು ಅನುಭವಿಸಿತು. 5ನೇ ಗೆಲುವು ದಾಖಲಿಸಿದ ಡೆಲ್ಲಿ, ಪ್ಲೇ-ಆಫ್‌ ಪ್ರವೇಶಿಸಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಡೆಲ್ಲಿ, ಬಾಕಿ ಇರುವ ಒಂದು ಪಂದ್ಯದಲ್ಲೂ ಗೆದ್ದು ನೇರವಾಗಿ ಫೈನಲ್‌ಗೇರುವ ವಿಶ್ವಾಸದಲ್ಲಿದೆ.

29 ಎಸೆತದಲ್ಲಿ 51 ರನ್‌ ಸಿಡಿಸಿದ ರಿಚಾ ಘೋಷ್‌, ಕೊನೆಯ ಎಸೆತದಲ್ಲಿ 2 ರನ್‌ ಬೇಕಿದ್ದಾಗ ರನೌಟ್‌ ಆದರು. ಇದರಿಂದಾಗಿ ಆರ್‌ಸಿಬಿಗೆ ಗೆಲುವು ಕೈತಪ್ಪಿತು.

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಜೆಮಿಮಾ ರೋಡ್ರಿಗ್ಸ್‌ (58) ಹಾಗೂ ಅಲೈಸ್‌ ಕ್ಯಾಪ್ಸಿ (48) ಅವರ ಆಕರ್ಷಕ ಆಟದ ನೆರವಿನಿಂದ 20 ಓವರಲ್ಲಿ 5 ವಿಕೆಟ್‌ಗೆ 181 ರನ್‌ ಕಲೆಹಾಕಿತು. ಕರ್ನಾಟಕದ ಶ್ರೇಯಾಂಕ ಪಾಟೀಲ್‌ 26 ರನ್‌ಗೆ 4 ವಿಕೆಟ್‌ ಕಬಳಿಸಿ ಗಮನ ಸೆಳೆದರು.

ದೊಡ್ಡ ಗುರಿ ಬೆನ್ನತ್ತಿದ ಆರ್‌ಸಿಬಿ 2ನೇ ಓವರಲ್ಲೇ ನಾಯಕಿ ಸ್ಮೃತಿ ಮಂಧನಾ (05) ವಿಕೆಟ್‌ ಕಳೆದುಕೊಂಡಿತು. ಸೋಫಿ ಮೊಲಿನ್ಯೂ(33) ಹಾಗೂ ಎಲೈಸಿ ಪೆರಿ(49) ಎರಡನೇ ವಿಕೆಟ್‌ಗೆ 80 ರನ್‌ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರೂ, ಕೇವಲ 4 ರನ್‌ ಅಂತರದಲ್ಲಿ ಇಬ್ಬರೂ ಔಟಾಗಿದ್ದು ಆರ್‌ಸಿಬಿಗೆ ಹಿನ್ನಡೆ ಉಂಟು ಮಾಡಿತು. ಬಳಿಕ ರಿಚಾ ಅವರ ಹೋರಾಟ ತಂಡವನ್ನು ಜಯದ ಹೊಸ್ತಿಲಿಗೆ ತಲುಪಿಸಿದರೂ ಗೆಲುವು ಕೈಗೆಟುಕಲಿಲ್ಲ.

ಸೋಮವಾರ ಗುಜರಾತ್‌ ವಿರುದ್ಧ ಯು.ಪಿ.ವಾರಿಯರ್ಸ್‌ ಗೆದ್ದರೆ ಆರ್‌ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲಬೇಕಾಗುತ್ತದೆ. ಒಂದು ವೇಳೆ ಯು.ಪಿ. ಸೋತರೆ ಆರ್‌ಸಿಬಿಗೆ ಅನುಕೂಲವಾಗಲಿದೆ.

ಸ್ಕೋರ್‌: ಡೆಲ್ಲಿ 20 ಓವರಲ್ಲಿ 181/5 (ಜೆಮಿಮಾ 58, ಕ್ಯಾಪ್ಸಿ 48, ಶ್ರೇಯಾಂಕ 4-26), ಆರ್‌ಸಿಬಿ 20 ಓವರಲ್ಲಿ 180/7 (ರಿಚಾ 51, ಪೆರಿ 49, ಕ್ಯಾಪ್ಸಿ 1-5)

ಸಿ.ಕೆ.ನಾಯ್ಡು ಟ್ರೋಫಿ ಫೈನಲ್‌: ರಾಜ್ಯ ಮೇಲುಗೈ

ಬೆಂಗಳೂರು: ಸಿ.ಕೆ.ನಾಯ್ಡು ಅಂಡರ್‌-23 ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಕರ್ನಾಟಕ ಮೊದಲ ದಿನವೇ ಉತ್ತರ ಪ್ರದೇಶ ವಿರುದ್ಧ ಮೇಲುಗೈ ಸಾಧಿಸಿದೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಕರ್ನಾಟಕ, ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗೆ 325 ರನ್‌ ಕಲೆಹಾಕಿದೆ. ಆರಂಭಿಕ ಬ್ಯಾಟರ್‌ ಮೆಕ್‌ನೀಲ್‌ 68 ರನ್‌ ಗಳಿಸಿದರೆ, ಯಶೋವರ್ಧನ್‌ ಔಟಾಗದೆ 84, ಕೃತಿಕ್‌ ಕೃಷ್ಣ ಔಟಾಗದೆ 58 ರನ್‌ ಗಳಿಸಿದ್ದಾರೆ. ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
 

Follow Us:
Download App:
  • android
  • ios