ನವದೆಹಲಿ[ಜ.10]: ಎರಡು ಬಾರಿ ವಿಶ್ವಕಪ್‌ ವಿಜೇತ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅತಿ ಶೀಘ್ರದಲ್ಲಿ ಏಕದಿನ ವೃತ್ತಿಬದುಕಿಗೆ ವಿದಾಯ ಘೋಷಿಸುವ ಸಾಧ್ಯತೆ ಇದೆ ಎಂದು ಪ್ರಧಾನ ಕೋಚ್‌ ರವಿಶಾಸ್ತ್ರಿ ತಿಳಿಸಿದ್ದಾರೆ. 

‘ನಾನು ಧೋನಿ ಜತೆ ಚರ್ಚಿಸಿದ್ದೇನೆ. ಅವರ ನಿಲುವೇನು ಎಂದು ನನಗೆ ತಿಳಿದಿದೆ. ಟೆಸ್ಟ್‌ ಕ್ರಿಕೆಟ್‌ನಿಂದ ಈಗಾಗಲೇ ನಿವೃತ್ತಿ ಪಡೆದಿರುವ ಧೋನಿ, ಸದ್ಯದಲ್ಲೇ ಏಕದಿನ ಕ್ರಿಕೆಟ್‌ಗೂ ಗುಡ್‌ಬೈ ಹೇಳಬಹುದು’ ಎಂದು ಶಾಸ್ತ್ರಿ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ಜನ ಧೋನಿಯನ್ನು ಗೌರವಿಸಬೇಕು. ಅವರು ದೇಶಕ್ಕಾಗಿ ನಿರಂತರವಾಗಿ ಎಲ್ಲಾ ಮಾದರಿಯಲ್ಲೂ ಆಡಿದ್ದಾರೆ. ಈ ವಯಸ್ಸಿನಲ್ಲಿ ಅವರು ಕೇವಲ ಟಿ20 ಕ್ರಿಕೆಟ್‌ ಮಾತ್ರ ಆಡಲು ಸಾಧ್ಯ. ಅದಕ್ಕಾಗಿ ಅವರು ಆಟಕ್ಕೆ ಮರಳಬೇಕು. ಐಪಿಎಲ್‌ನಲ್ಲಿ ಅವರು ಆಡಲಿದ್ದಾರೆ. ಅವರ ದೇಹ ಹೇಗೆ ಸ್ಪಂದಿಸಲಿದೆ ಎನ್ನುವುದನ್ನು ನೋಡಬೇಕು’ ಎಂದು ಶಾಸ್ತ್ರಿ ಹೇಳಿದ್ದಾರೆ. 

ಟಿ20 ವಿಶ್ವಕಪ್‌ಗೆ ಧೋನಿ ಆಯ್ಕೆ ಬಗ್ಗೆ ಮಾತನಾಡಿರುವ ಶಾಸ್ತ್ರಿ, ‘ಖಂಡಿತವಾಗಿಯೂ ಅವರು ಐಪಿಎಲ್‌ನಲ್ಲಿ ಆಡಲಿದ್ದಾರೆ. ಧೋನಿ ಯಾವುತ್ತಿಗೂ ತಮ್ಮ ನಿರ್ಧಾರಗಳು ತಂಡಕ್ಕೆ ಸಮಸ್ಯೆಯಾಗುವುದನ್ನು ಇಷ್ಟಪಡುವುದಿಲ್ಲ. ಐಪಿಎಲ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದರೆ, ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಲಾಗುತ್ತದೆ’ ಎಂದಿದ್ದಾರೆ.

ಮಹೇಂದ್ರ ಸಿಂಗ್ ಧೋನಿ 2019ರ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್’ನಿಂದ ದೂರವೇ ಉಳಿದಿದ್ದಾರೆ. ಒಂದು ಕಡೆ ಧೋನಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2020ರ ಟಿ20 ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.   

ಜನವರಿ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ