ಆರ್‌ಸಿಬಿಗೆ ಮೊದಲ ಟ್ರೋಫಿ ಗೆಲ್ಲಿಸಿಕೊಟ್ಟ ಕೋಚ್‌ನ್ನು ಇದೀಗ ಮುಂಬೈ ಇಂಡಿಯನ್ಸ್ 2027ರ ಆವೃತ್ತಿಗೆ ಹೆಡ್ ಕೋಚ್ ಆಗಿ ನೇಮಕ ಮಾಡಿಕೊಂಡಿದೆ. ಈ ಮೂಲಕ ಟ್ರೋಫಿ ಕೊರಗು ನೀಗಿಸಲು ಮುಂದಾಗಿದೆ.
ಮುಂಬೈ (ಸೆ.24) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊದಲ ಟ್ರೋಫಿ ಗೆಲುವಿನ ಹಿಂದಿದ್ದ ಮುಖ್ಯ ಕೋಚ್ ತಂಡದ ಜವಾಬ್ದಾರಿಯಿಂದ ಹೊರಬಂದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಹೌದು, ಆರ್‌ಸಿಬಿ ಮಹಿಳಾ ತಂಡದ ಕೋಚ್ ಲ್ಯೂಕ್ ವಿಲಿಯಮ್ಸ್ ಇದೀಗ ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. 2027ರ ಐಪಿಎಲ್ ಟೂರ್ನಿಯಲ್ಲಿ ಲ್ಯೂಕ್ ವಿಲಿಯಮ್ಸ್ ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಕೋಚಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಆರ್‌ಸಿಬಿ ಟ್ರೋಫಿ ಹಿಂದಿನ ರೂವಾರಿ
ಆರ್‌ಸಿಬಿ ತಂಡ ಟ್ರೋಫಿ ಇಲ್ಲದೆ ಕೊರಗುತ್ತಿತ್ತು. ಪುರುಷರ ತಂಡ ಹಾಗೂ ಮಹಿಳೆಯರ ತಂಡ ಟ್ರೋಫಿಗಾಗಿ ನಿರಂತರ ಹೋರಾಟ ನಡೆಸುತಿತ್ತು. 2024ರಲ್ಲಿ ಆರ್‌ಸಿಬಿ ಮಹಿಳಾ ತಂಡ ಚೊಚ್ಚಲ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಪುರುಷರ ತಂಡ ಟ್ರೋಫಿ ಗೆಲ್ಲುವ ಮೊದಲೇ ಮಹಿಳಾ ಆರ್‌ಸಿಬಿ ತಂಡ ಟ್ರೋಫಿ ಗೆದ್ದುಕೊಂಡಿತು. ಈ ವರ್ಷದ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಕೋಚಿಂಗ್ ಜವಾಬ್ದಾರಿ ನಿರ್ವಹಿಸುವ ಕಾರಣಕ್ಕಾಗಿ ಆರ್‌ಸಿಬಿ ಹೆಡ್ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು.
ಲಿಸಾ ಕೈಟ್ಲೆ ನಿರ್ಗಮನ
2027ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲ್ಯೂಕ್ ವಿಲಿಯಮ್ಸ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೋಚಿಂಗ್ ನೀಡಲಿದ್ದಾರೆ. 2025ರಿಂದ ಇದುವರೆಗೆ ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಜವಾಬ್ದಾರಿಯನ್ನು ಲಿಸಾ ಕೈಟ್ಲೆ ನಿರ್ವಹಿಸಿದ್ದರು. ಕಳೆದ ಆವೃತ್ತಿಯಲ್ಲಿ ಲಿಸಾ ಕೈಟ್ಲೆ ಮಾರ್ಗದರ್ಶನದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ 4ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿತ್ತು. ಇದು ಮುಂಬೈ ಇಂಡಿಯನ್ಸ್ ತಂಡದ ಅತ್ಯಂತ ಕಳಪೆ ನಿರ್ವಹಣೆಯಾಗಿತ್ತು.
ಮುಂಬೈ ಇಂಡಿಯನ್ಸ್ ಮಹಿಳಾ ತಂಡ 2023ರಲ್ಲಿ ಚೊಚ್ಚಲ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. 2024ರಲ್ಲಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ಎಲಿಮಿನೇಟರ್ ಹಂತದಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿತ್ತು. 2025ರಲ್ಲಿ ಮುಂಬೈ ಇಂಡಿಯನ್ಸ್ 2ನೇ ಟ್ರೋಫಿ ಗೆದ್ದು ಸಂಭ್ರಮಿಸಿತ್ತು.
ಲ್ಯೂಕ್ ವಿಲಿಯಮ್ಸ್ ಈ ಕುರಿತು ಸಂತಸ ಹಂಚಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಜವಾಬ್ದಾರಿ ನಿರ್ವಹಿಸಲು ಉತ್ಸುಕನಾಗಿದ್ದೇನೆ. ಹೊಸ ತಂಡ, ಹೊಸ ಆಟಗಾರರು, ಹೊಸ ಹುರುಪು ಇದೆ. ಹೀಗಾಗಿ ಎಲ್ಲಾ ಸವಾಲು ಸ್ವೀಕರಿಸಲು ಸಜ್ಜಾಗಿದ್ದೇನೆ ಎಂದು ಲ್ಯೂಕ್ ವಿಲಿಯಮ್ಸ್ ಹೇಳಿದ್ದಾರೆ.


