ಲಂಡನ್[ಅ.08]: ಇಂಗ್ಲೆಂಡ್ ಕ್ರಿಕೆಟ್ ತಂಡದ ನೂತನ ಕೋಚ್ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. ಚೊಚ್ಚಲ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಇಂಗ್ಲೆಂಡ್ ಕೋಚ್ ಟ್ರಾವರ್ ಬೇಲಿಸ್ ತಮ್ಮ ಪ್ರಧಾನ ಕೋಚ್ ಹುದ್ದೆಯಿಂದ ಕೆಳಗಿಳಿದ ಬೆನ್ನಲ್ಲೇ ಕ್ರಿಸ್ ಸಿಲ್ವರ್‌ವುಡ್ ಅವರನ್ನು ಇಂಗ್ಲೆಂಡ್ ಕೋಚ್ ಆಗಿ ನೇಮಕ ಮಾಡಲಾಗಿದೆ. 

ಇಂಗ್ಲೆಂಡ್ ಕೋಚ್ ಹುದ್ದೆಗೆ ಟೀಂ ಇಂಡಿಯಾ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್, ಅಲೆಕ್ ಸ್ಟೇವಾರ್ಟ್ ಹಾಗೂ ಗ್ರೇಹಂ ಫೋರ್ಡ್ ಪ್ರಮುಖ ಆಕಾಂಕ್ಷಿಗಳಾಗಿದ್ದರು. ಆದರೆ ಇಂಗ್ಲೆಂಡ್ ನಿರ್ದೇಶಕ ಆ್ಯಶ್ಲೆ ಗಿಲ್ಸ್ ಸಾಕಷ್ಟ ಅಳೆದುತೂಗಿ 44 ವರ್ಷದ ಕ್ರಿಸ್ ಸಿಲ್ವರ್‌ವುಡ್ ಅವರನ್ನು ಪ್ರಧಾನ ಕೋಚ್ ಆಗಿ ನೇಮಿಸಿದ್ದಾರೆ. ಕ್ರಿಸ್ ಸಿಲ್ವರ್‌ವುಡ್ 2017-18ರಿಂದಲೂ ಆ್ಯಷಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ವಿಶ್ವಕಪ್ ಗೆದ್ದ ಇಂಗ್ಲೆಂಡ್ ಕೋಚ್ ಈಗ ಸನ್‌ರೈಸರ್ಸ್‌ ಗುರು..!

ಆ್ಯಶ್ಲೆ ಗಿಲ್ಸ್ ತೀರ್ಮಾನವನ್ನು ಇಂಗ್ಲೆಂಡ್ ಕ್ರಿಕೆಟ್ ಆಡಳಿತ ಮಂಡಳಿ ಸಹಮತ ಸೂಚಿಸಿದ್ದು, ಕ್ರಿಸ್ ಸಿಲ್ವರ್‌ವುಡ್ ಅವಿರೋಧವಾಗಿ ಮುಖ್ಯ ಕೋಚ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಅನುಭವವಿರುವ ಗ್ಯಾರಿ ಕರ್ಸ್ಟನ್ ಕೋಚ್ ಆಗುವ ರೇಸ್’ನಲ್ಲಿ ಪ್ರಮುಖ ಸ್ಫರ್ಧಿಯಾಗಿ ಕಾಣಿಸಿಕೊಂಡಿದ್ದರಾದರೂ, ಸಂದರ್ಶನದ ವೇಳೆ ಸಮಧಾನಕರವಾದ ರೀತಿಯಲ್ಲಿ ಉತ್ತರಿಸದ ಹಿನ್ನಲೆಯಲ್ಲಿ ಇಂಗ್ಲೆಂಡ್ ಮಾಜಿ ವೇಗಿಗೆ ಮಣೆಹಾಕಲಾಗಿದೆ.

ICC World Cup 2019; ವೀಕ್ಷಣೆಯಲ್ಲಿ ದಾಖಲೆ ಬರೆದ ಟೂರ್ನಿ!

ಕ್ರಿಸ್ ಸಿಲ್ವರ್‌ವುಡ್ ಅವರನ್ನು ಇಂಗ್ಲೆಂಡ್ ತಂಡದ ಪ್ರಧಾನ ಕೋಚ್ ಆಗಿ ನೇಮಕವಾಗಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತಿದೆ ಎಂದು ಆ್ಯಶ್ಲೆ ಗಿಲ್ಸ್ ಹೇಳಿದ್ದಾರೆ. ಇನ್ನು ಕೋಚ್ ಹುದ್ದೆ ಅಲಂಕರಿಸಿದ ಬಳಿಕ ಮಾತನಾಡಿದ ಕ್ರಿಸ್ ಸಿಲ್ವರ್‌ವುಡ್, ನಾನು ಈ ವಿಚಾರ ಕೇಳಿ ಥ್ರಿಲ್ ಆಗಿದ್ದೇನೆ. ನನ್ನನ್ನು ಕೋಚ್ ಆಗಿ ನೇಮಿಸಿದ್ದಕ್ಕೆ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

2019ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಮೊದಲ ಬಾರಿಗೆ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.  ಇಂಗ್ಲೆಂಡ್ ಪ್ರಧಾನ ಕೋಚ್ ಟ್ರಾವರ್ ಬೇಲಿಸ್ ಮಾರ್ಗದರ್ಶನದಲ್ಲಿ ಇಯಾನ್ ಮಾರ್ಗನ್ ನೇತೃತ್ವದ ಆಂಗ್ಲರ ತಂಡ ಚೊಚ್ಚಲ ಏಕದಿನ ವಿಶ್ವಕಪ್ ಜಯಿಸಿ ಸಂಭ್ರಮಿಸಿತ್ತು. ಬೇಲಿಸ್ ಇದೀಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.