ವಾಂಖೆಡೆಯಲ್ಲಿ ಭಾರತ-ಇಂಗ್ಲೆಂಡ್ ಬಿಗ್ ಫೈಟ್! ಹೆಡ್-ಟು-ಹೆಡ್ ರೆಕಾರ್ಡ್ಸ್ ಹೀಗಿದೆ ನೋಡಿ!
ಟಿ20 ವಿಶ್ವಕಪ್ 2026ರ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಮಾರ್ಚ್ 5 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಎರಡೂ ತಂಡಗಳ ಬಲಾಬಲ, ರೆಕಾರ್ಡ್ಸ್ ಹೇಗಿದೆ? ಪಂದ್ಯದ ಗತಿ ಬದಲಿಸಬಲ್ಲ ಆಟಗಾರರು ಯಾರು? ಇಲ್ಲಿದೆ ಮಾಹಿತಿ.

ವಾಂಖೆಡೆಯಲ್ಲಿ ಭಾರತ vs ಇಂಗ್ಲೆಂಡ್ ಸೆಮಿಫೈನಲ್ ಫೈಟ್
ಟಿ20 ವಿಶ್ವಕಪ್ ಸೂಪರ್ 8 ಪ್ರದರ್ಶನ:
ಭಾರತ ತಂಡವು ಸೂಪರ್-8 ಹಂತವನ್ನು ಸೋಲಿನೊಂದಿಗೆ ಆರಂಭಿಸಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಭಾರೀ ಅಂತರದಿಂದ ಸೋಲು ಕಂಡಿತ್ತು. ಆದರೆ, ಆ ನಂತರ ಸೂರ್ಯಕುಮಾರ್ ಯಾದವ್ ಪಡೆ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿತು. ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸತತ ಗೆಲುವು ಸಾಧಿಸಿ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿತು.
ಇಂಗ್ಲೆಂಡ್ ತಂಡದ ಪ್ರದರ್ಶನ
ಇನ್ನೊಂದೆಡೆ, ಇಂಗ್ಲೆಂಡ್ ತಂಡ ಸೂಪರ್-8ರಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಗೆದ್ದಿದೆ. ಶ್ರೀಲಂಕಾ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಸೋಲಿಸಿ ಗ್ರೂಪ್-2ರಲ್ಲಿ ಟೇಬಲ್ ಟಾಪರ್ ಆಗಿದೆ. ಇಂಗ್ಲೆಂಡ್ ಸದ್ಯ ಫುಲ್ ಫಾರ್ಮ್‌ನಲ್ಲಿದ್ದರೆ, ಭಾರತ ತನ್ನ ಹೋರಾಟದ ಮನೋಭಾವವನ್ನು ನಂಬಿಕೊಂಡಿದೆ.
IND vs ENG : ಹೆಡ್ ಟು ಹೆಡ್ ರೆಕಾರ್ಡ್ಸ್
ಭಾರತ ಮತ್ತು ಇಂಗ್ಲೆಂಡ್ ತಂಡಗಳು ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು ಸತತ ಮೂರನೇ ಬಾರಿ. 2022ರ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ 10 ವಿಕೆಟ್‌ಗಳಿಂದ ಭಾರತವನ್ನು ಹೀನಾಯವಾಗಿ ಸೋಲಿಸಿತ್ತು. ಆದರೆ, 2024ರ ವಿಶ್ವಕಪ್‌ನಲ್ಲಿ ಭಾರತ ಸೇಡು ತೀರಿಸಿಕೊಂಡಿತು. ಆ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು 68 ರನ್‌ಗಳಿಂದ ಸೋಲಿಸಿ ಫೈನಲ್‌ಗೆ ಹೋಗಿದ್ದಲ್ಲದೆ, ಟ್ರೋಫಿಯನ್ನೂ ಗೆದ್ದುಕೊಂಡಿತು. ವಿಶ್ವಕಪ್ ಇತಿಹಾಸದಲ್ಲಿ ಈವರೆಗೆ ಎರಡೂ ತಂಡಗಳು 5 ಬಾರಿ ಮುಖಾಮುಖಿಯಾಗಿದ್ದು, ಇಂಗ್ಲೆಂಡ್ 3 ಬಾರಿ ಮತ್ತು ಭಾರತ 2 ಬಾರಿ ಗೆದ್ದಿವೆ. ಈ ಪಂದ್ಯ ಗೆದ್ದು ದಾಖಲೆಯನ್ನು ಸರಿಗಟ್ಟಲು ಟೀಂ ಇಂಡಿಯಾ ಎದುರು ನೋಡುತ್ತಿದೆ.
ಬ್ಯಾಟಿಂಗ್ ರೆಕಾರ್ಡ್ಸ್: ಪಾಂಡ್ಯ, ಬಟ್ಲರ್ ಜೋರು!
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ಗಳಲ್ಲಿ ಭಾರತದ ಆಟಗಾರರ ಪೈಕಿ ಹಾರ್ದಿಕ್ ಪಾಂಡ್ಯ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಅವರು 2 ಪಂದ್ಯಗಳಲ್ಲಿ 86 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ 84 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ (61) ಮತ್ತು ವಿರಾಟ್ ಕೊಹ್ಲಿ (59) ಕೂಡ ಪ್ರಮುಖ ರನ್ ಗಳಿಸಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ, ನಾಯಕ ಜೋಸ್ ಬಟ್ಲರ್ ಭಾರತದ ವಿರುದ್ಧ ಅತ್ಯಂತ ಅಪಾಯಕಾರಿ ಆಟಗಾರ. ಅವರು ಸೆಮಿಫೈನಲ್‌ಗಳಲ್ಲಿ 103 ರನ್ ಗಳಿಸಿದ್ದರೆ, ಅಲೆಕ್ಸ್ ಹೇಲ್ಸ್ 86 ರನ್ ಗಳಿಸಿದ್ದಾರೆ. ಹ್ಯಾರಿ ಬ್ರೂಕ್ ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಬಲ್ಲರು.
ಬೌಲಿಂಗ್ ಅಂಕಿಅಂಶಗಳು: ಕುಲ್ದೀಪ್, ಅಕ್ಷರ್ ಕೀ ಪ್ಲೇಯರ್ಸ್
ಬೌಲಿಂಗ್ ವಿಭಾಗದಲ್ಲಿ ಭಾರತದ ಪರ ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ 3 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಬುಮ್ರಾ 2 ವಿಕೆಟ್ ಪಡೆದಿದ್ದಾರೆ. ವಾಂಖೆಡೆ ಪಿಚ್ ಸ್ಪಿನ್ನರ್‌ಗಳಿಗೂ ಸಹಾಯ ಮಾಡುವ ಸಾಧ್ಯತೆ ಇರುವುದರಿಂದ ಇವರಿಬ್ಬರೂ ಪ್ರಮುಖ ಪಾತ್ರ ವಹಿಸಲಿದ್ದಾರೆ. ಇಂಗ್ಲೆಂಡ್ ಬೌಲರ್‌ಗಳಲ್ಲಿ, ಕ್ರಿಸ್ ಜೋರ್ಡಾನ್ ಭಾರತದ ವಿರುದ್ಧ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. ಅವರು ಸೆಮಿಫೈನಲ್‌ಗಳಲ್ಲಿ ಬರೋಬ್ಬರಿ 6 ವಿಕೆಟ್ ಪಡೆದಿದ್ದಾರೆ. ಆದಿಲ್ ರಶೀದ್ 2 ವಿಕೆಟ್ ಹಾಗೂ ಸ್ಯಾಮ್ ಕರನ್ ಮತ್ತು ಜೋಫ್ರಾ ಆರ್ಚರ್ ತಲಾ ಒಂದು ವಿಕೆಟ್ ಪಡೆದಿದ್ದಾರೆ. ಆದರೆ ಜೋರ್ಡರ್ & ರಶೀದ್ ಈ ವಿಶ್ವಕಪ್ ಆಡುತ್ತಿಲ್ಲ. ಎರಡೂ ತಂಡಗಳು ಮೂರನೇ ಬಾರಿಗೆ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

