2026ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿವೆ. ಒಂದು ವೇಳೆ ಮಳೆಯಿಂದಾಗಿ ಈ ಮಹತ್ವದ ಪಂದ್ಯ ರದ್ದಾದರೆ, ಸೂಪರ್-8 ಹಂತದಲ್ಲಿನ ಪ್ರದರ್ಶನವನ್ನು ಆಧರಿಸಿ ಇಂಗ್ಲೆಂಡ್ ಫೈನಲ್‌ಗೆ ಪ್ರವೇಶಿಸಲಿದ್ದು, ಭಾರತ ಟೂರ್ನಿಯಿಂದ ಹೊರಬೀಳುವ ಆತಂಕ ಎದುರಿಸಲಿದೆ.

ಮುಂಬೈ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಇದೀಗ ನಿರ್ಣಾಯಕ ಘಟ್ಟದತ್ತ ಬಂದು ನಿಂತಿದೆ. ಈಗಾಗಲೇ ಗ್ರೂಪ್ ಸ್ಟೇಜ್ ಹಾಗೂ ಸೂಪರ್-8 ಸ್ಟೇಜ್ ಮುಕ್ತಾಯವಾಗಿದ್ದು, ಇದೀಗ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್‌ 04ರಂದು ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಇನ್ನು ಮಾರ್ಚ್ 05ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು ಇಂಗ್ಲೆಂಡ್ ಸವಾಲಿಗೆ ರೆಡಿಯಾಗಿದೆ. ಈ ಪಂದ್ಯಕ್ಕೆ ಮುಂಬೈನ ಐತಿಹಾಸಿಕ ವಾಂಖೇಡೆ ಮೈದಾನ ಆತಿಥ್ಯ ವಹಿಸಿದೆ.

ಭಾರತ-ಇಂಗ್ಲೆಂಡ್ ಮ್ಯಾಚ್ ಮೇಲೆ ಎಲ್ಲರ ಕಣ್ಣು:

ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಯಾಕೆಂದರೆ ಸತತ ಮೂರನೇ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಎರಡೂ ತಂಡಗಳು ಟೂರ್ನಿಯಲ್ಲಿ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದ್ದು, ಫೈನಲ್‌ಗೇರುವ ನೆಚ್ಚಿನ ತಂಡಗಳೆನಿಸಿವೆ. ಹೀಗಿರುವಾಗಲೇ ಒಂದು ವೇಳೆ ಮಳೆಯಿಂದಾಗಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ರದ್ದಾದರೇ ಫೈನಲ್ ಟಿಕೆಟ್ ಯಾರಿಗೆ ಸಿಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಜೋರಾಗಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ ಬನ್ನಿ.

ಐಸಿಸಿಯು ಈಗಾಗಲೇ ನಾಕೌಟ್ ಪಂದ್ಯಗಳಿಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಇನ್ನು ಒಂದು ವೇಳೆ ಸೆಮಿಫೈನಲ್ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದರೆ, ಮೀಸಲು ದಿನವಾದ ಮರು ದಿನ ಪಂದ್ಯ ನಡೆಸಲು ಐಸಿಸಿ ರೆಡಿಯಾಗಿದೆ. ಅಂದರೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮ್ಯಾಚ್ ಮಾರ್ಚ್ 05ರಂದು ಅರ್ಧಕ್ಕೆ ಸ್ಥಗಿತವಾದರೇ, ಮರುದಿನ ಅಂದರೆ ಮಾರ್ಚ್ 06ರಂದು ಇನ್ನುಳಿದ ಪಂದ್ಯವನ್ನು ಪೂರ್ಣಗೊಳಿಸಲು ತೀರ್ಮಾನಿಸಿದೆ. ಆದರೆ ಮೀಸಲು ದಿನದಲ್ಲೂ ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿ ಸಂಪೂರ್ಣ ಮ್ಯಾಚ್ ನಡೆಯದಿದ್ದರೇ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ. ಒಂದು ವೇಳೆ ಸೆಮಿಫೈನಲ್ ಪಂದ್ಯವು ಯಾವುದೇ ಫಲಿತಾಂಶವಿಲ್ಲದೇ ರದ್ದಾದರೇ, ಇಂಗ್ಲೆಂಡ್ ತಂಡವು ಫೈನಲ್ ಪ್ರವೇಶಿಸಲಿದ್ದು, ಹಾಲಿ ಚಾಂಪಿಯನ್ ಭಾರತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಅಧಿಕರತವಾಗಿ ಹೊರಬೀಳಲಿದೆ.

ಐಸಿಸಿ ನಿಯಮವೇನು?

ಐಸಿಸಿಯು ನಾಕೌಟ್ ಪಂದ್ಯಗಳ ಫಲಿತಾಂಶ ಬರಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ನಡೆಸಲಿದೆ. ಆದರೆ ಇದರ ಹೊರತಾಗಿಯೂ ಮ್ಯಾಚ್ ರದ್ದಾದರೇ, ಸೂಪರ್-8 ಹಂತದ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ತಂಡವು ಫೈನಲ್ ಪ್ರವೇಶಿಸಿದೆ. ಹೀಗಾದಲ್ಲಿ ಇಂಗ್ಲೆಂಡ್ ತಂಡವು ಸೂಪರ್-8 ಹಂತದಲ್ಲಿ ಸತತ 3 ಮ್ಯಾಚ್ ಗೆಲ್ಲುವ ಮೂಲಕ ಅಗ್ರಸ್ಥಾನಿಯಾಗಿ ಸೆಮೀಸ್ ಪ್ರವೇಶಿಸಿದೆ. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಒಂದು ಮ್ಯಾಚ್ ಸೋತು, ಇನ್ನುಳಿದ ಎರಡು ಮ್ಯಾಚ್ ಗೆದ್ದು ಸೆಮೀಸ್ ಪ್ರವೇಶಿಸಿದೆ. ಇದೀಗ ಸೆಮೀಸ್ ಮ್ಯಾಚ್ ರದ್ದಾದರೇ ಇಂಗ್ಲೆಂಡ್ ನೇರವಾಗಿ ಫೈನಲ್‌ಗೆ ಎಂಟ್ರಿಕೊಡಲಿದೆ.