ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಭಾರತ ಫೈನಲ್‌ಗೆ ತಲುಪಿದೆ. ಲಾಹೋರ್‌ನಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯ ವೀಕ್ಷಿಸುವ ಅಭಿಮಾನಿಗಳಿಗೆ ಪಿಸಿಬಿ ಉಚಿತ ಇಫ್ತಾರ್ ವ್ಯವಸ್ಥೆ ಮಾಡಿದೆ. ಟಿಕೆಟ್ ತೋರಿಸಿ ಖರ್ಜೂರ, ಜ್ಯೂಸ್, ಫಿಜ್ಜಾ ಒಳಗೊಂಡ ಬಾಕ್ಸ್ ಪಡೆಯಬಹುದು. ಪಂದ್ಯ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದ್ದು, ಇಫ್ತಾರ್ ಸಂಜೆ 6.05ಕ್ಕೆ ಇರುತ್ತದೆ. ಆತಿಥೇಯ ಪಾಕಿಸ್ತಾನವು ಟೂರ್ನಿಯಿಂದ ಹೊರಬಿದ್ದಿದೆ.
ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಟೀಂ ಇಂಡಿಯಾ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನು ಇಂದು ಲಾಹೋರ್‌ನಲ್ಲಿ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಫೈನಲ್ ಟಿಕೆಟ್‌ಗಾಗಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಡಲಿವೆ. ಈ ಪಂದ್ಯವನ್ನು ವೀಕ್ಷಿಸಲು ಗಡಾಫಿ ಮೈದಾನಕ್ಕೆ ತೆರಳಲಿರುವ ಕ್ರಿಕೆಟ್ ಅಭಿಮಾನಿಗಳಿಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಗುಡ್ ನ್ಯೂಸ್ ನೀಡಿದ್ದು, ಫ್ಯಾನ್ಸ್‌ಗೆ ಉಚಿತ ಇಫ್ತಾರ್ ಆಯೋಜಿಸಿದೆ.
ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ವೀಕ್ಷಿಸುವ ಅಭಿಮಾನಿಗಳು ಈ ಪಂದ್ಯದ ಮ್ಯಾಚ್ ಟಿಕೆಟ್ ತೋರಿಸಿ ಇಫ್ತಾರ್ ಬಾಕ್ಸ್‌ನಲ್ಲಿ ಖರ್ಜೂರ, ಜ್ಯೂಸ್ ಹಾಗೂ ಮಿನಿ ಫಿಜ್ಜಾ ಒಳಗೊಂಡ ಬಾಕ್ಸ್ ವಿತರಿಸಲು ತೀರ್ಮಾನಿಸಿದೆ. ಸದ್ಯ ಮುಸಲ್ಮಾನ ಬಾಂಧವರು ಪವಿತ್ರ ರಂಜಾನ್ ಪ್ರಯುಕ್ತ ಉಪವಾಸ ಆಚರಣೆ ಮಾಡುತ್ತಿದ್ದಾರೆ. ಇವರಿಗೆ ಅನುಕೂಲವಾಗಲಿ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಈ ವಿಶೇಷ ವ್ಯವಸ್ಥೆ ಮಾಡಿದೆ. ಇನ್ನು ಇದಷ್ಟೇ ಅಲ್ಲದೇ ಸ್ಟೇಡಿಯಂನಲ್ಲಿರುವ ಫುಡ್‌ಸ್ಟಾಲ್‌ನಲ್ಲಿ ಹಣ ಪಾವತಿಸಿ ವಿವಿಧ ರೀತಿಯ ಆಹಾರ ಹಾಗೂ ತಂಪು ಪಾನೀಯಗಳನ್ನು ಖರೀದಿಸಲು ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಕ್ಯಾಪ್ಟನ್ ಮುಟ್ಟಿದ್ದೆಲ್ಲಾ ಚಿನ್ನ: ಐಸಿಸಿ ಟೂರ್ನಿಯಲ್ಲಿ ಯಾರೂ ಮಾಡದ ದಾಖಲೆ ಬರೆದ ರೋಹಿತ್ ಶರ್ಮಾ!
ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದ ಟಾಸ್ ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಪಂದ್ಯಾಟ ಮಧ್ಯಾಹ್ನ 2.30ರಿಂದ ಆರಂಭವಾಗಲಿದೆ. ಇನ್ನು ಇಫ್ತಾರ್ ವೇಳಾಪಟ್ಟಿ ಇಂದು ಸಂಜೆ 6.05ರಿಂದ ಆರಂಭವಾಗಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಲು ಪಿಸಿಬಿ ಈ ಉಚಿತ ಇಫ್ತಾರ್ ವ್ಯವಸ್ಥೆ ಮಾಡಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ವಿರಾಟ್ ದಾಖಲೆಗಳ ಸುರಿಮಳೆ: ಕ್ಯಾಚ್, ರನ್ ಚೇಸಿಂಗ್‌ನಲ್ಲೂ ಕಿಂಗ್ ಕೊಹ್ಲಿ ದರ್ಬಾರ್!
ಗ್ರೂಪ್ ಹಂತದಲ್ಲೇ ಹೊರಬಿದ್ದ ಪಾಕಿಸ್ತಾನ:
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡವು ಬಿಸಿಸಿಐ ಜತೆ ಜಿದ್ದಿಗೆ ಬಿದ್ದು ತವರಿನಲ್ಲೇ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿತ್ತು. ಆದರೆ ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ ತಂಡವು ಟೂರ್ನಿಯಲ್ಲಿ ಒಂದೇ ಒಂದು ಗೆಲುವು ಕಾಣದೇ ಟೂರ್ನಿಯಲ್ಲಿ ಹೊರಬಿದ್ದಿತ್ತು. ಮೊದಲಿಗೆ ನ್ಯೂಜಿಲೆಂಡ್ ಎದುರು ಉದ್ಘಾಟನಾ ಪಂದ್ಯದಲ್ಲಿ ಮುಗ್ಗರಿಸಿದ್ದ ಪಾಕಿಸ್ತಾನ ತಂಡವು ಆ ಬಳಿಕ ಸಾಂಪ್ರದಾಯಿಕ ಎದುರಾಳಿ ಭಾರತ ಎದುರು ಹೀನಾಯ ಸೋಲು ಅನುಭವಿಸಿತ್ತು. ಇನ್ನು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯವು ಮಳೆಯಿಂದ ರದ್ದಾಗಿತ್ತು.
