ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಭಾರತ ಫೈನಲ್ ತಲುಪಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಎಲ್ಲಾ ಐಸಿಸಿ ಟೂರ್ನಿಗಳ ಫೈನಲ್ ತಲುಪಿದ ಮೊದಲ ತಂಡವಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ 5ನೇ ಬಾರಿ ಫೈನಲ್ ಪ್ರವೇಶಿಸಿದೆ. 27 ವರ್ಷಗಳಿಂದ ಸೆಮಿಫೈನಲ್‌ನಲ್ಲಿ ಭಾರತ ಸೋತಿಲ್ಲ. ಫೈನಲ್ ಪಂದ್ಯ ಮಾರ್ಚ್ 9 ರಂದು ದುಬೈನಲ್ಲಿ ನಡೆಯಲಿದೆ. 

ದುಬೈ: ಆಸ್ಟ್ರೇಲಿಯಾವನ್ನು ಸ್ಪಿನ್‌ ಮಂತ್ರದಿಂದ ಹಣಿದು, ಹೆಡ್ಡೇಕ್‌ನಿಂದ ಪಾರಾದ ಟೀಂ ಇಂಡಿಯಾ 9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಬೌಲರ್‌ಗಳ ಮೊನಚು ದಾಳಿ, ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ ಸೇರಿದಂತೆ ತಾರಾ ಬ್ಯಾಟರ್‌ಗಳ ಅಭೂತಪೂರ್ವ ಆಟದಿಂದಾಗಿ ಆಸ್ಟ್ರೇಲಿಯಾ ವಿರುದ್ಧ ಮಂಗಳವಾರ ನಡೆದ ಸೆಮಿಫೈನಲ್‌ನಲ್ಲ ಭಾರತ 4 ವಿಕೆಟ್‌ ಗೆಲುವು ಸಾಧಿಸಿತು. ಈ ಮೂಲಕ ಭಾರತ ಹ್ಯಾಟ್ರಿಕ್‌ ಫೈನಲ್‌ಗೆ ಪ್ರವೇಶಿಸಿದರೆ, ಆಸ್ಟ್ರೇಲಿಯಾದ 3ನೇ ಟ್ರೋಫಿ ಕನಸು ನುಚ್ಚುನೂರಾಯಿತು. 

ದುಬೈ ಕ್ರೀಡಾಂಗಣದ ಈಗ ಭಾರತದ ತವರು ಮೈದಾನ ಇದ್ದಂತೆ. ಹೀಗಾಗಿ ಬ್ಯಾಟಿಂಗ್‌ ಅಥವಾ ಬೌಲಿಂಗ್‌ ಯಾವುದೇ ಸಿಕ್ಕರೂ ಅದಕ್ಕೆ ಸಿದ್ಧವಾಗಿಯೇ ಬಂದಿತ್ತು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾಕ್ಕೆ ಭಾರತ ಹೆಚ್ಚಿನ ರನ್ ಗಳಿಸಲು ಅವಕಾಶ ನೀಡಲಿಲ್ಲ. ಆಸೀಸ್‌ 49.3 ಓವರ್‌ಗಳಲ್ಲಿ 264 ರನ್‌ಗೆ ಆಲೌಟಾಯಿತು. ಭಾರತಕ್ಕೆ ಸಿಕ್ಕ ಗುರಿ ದುಬೈನಲ್ಲಿ ಸ್ಪರ್ಧಾತ್ಮಕ ಮೊತ್ತವಾಗಿತ್ತು. ಹೀಗಾಗಿ ಅಪಾಯ ತಂದೊಡ್ಡದೆ ಜವಾಬ್ದಾರಿಯುವ ಆಟ ಪ್ರದರ್ಶಿಸಿದ ಭಾರತೀಯ ಬ್ಯಾಟರ್ಸ್‌, ಇನ್ನೂ 11 ಎಸೆತ ಬಾಕಿ ಇರುವಂತೆ ತಂಡವನ್ನು ಗೆಲ್ಲಿಸಿದರು. ಇನ್ನು ಈ ಸೆಮಿಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಯಾವ ನಾಯಕನೂ ಮಾಡದ ದಾಖಲೆಯನ್ನು ಮಾಡಿದ್ದಾರೆ. 

ಎಲ್ಲಾ ಐಸಿಸಿ ಟೂರ್ನಿಯಲ್ಲಿ ಫೈನಲ್‌ಗೆ: ರೋಹಿತ್‌ ವಿಶ್ವದ ಮೊದಲ ನಾಯಕ

ರೋಹಿತ್‌ ಶರ್ಮಾ ಎಲ್ಲಾ 4 ಐಸಿಸಿ ಟೂರ್ನಿಗಳಲ್ಲಿ ತಮ್ಮ ತಂಡವನ್ನು ಫೈನಲ್‌ಗೇರಿಸಿದ ವಿಶ್ವದ ಮೊದಲ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ರೋಹಿತ್‌ ನಾಯಕತ್ವದಲ್ಲಿ ಭಾರತ 2023ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌, 2023ರ ಏಕದಿನ ವಿಶ್ವಕಪ್, 2024ರ ಟಿ20 ವಿಶ್ವಕಪ್‌ ಹಾಗೂ ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಫೈನಲ್‌ ಪ್ರವೇಶಿಸಿದೆ.

5ನೇ ಬಾರಿ ಫೈನಲ್‌ ಪ್ರವೇಶಿಸಿದ ಭಾರತ

ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿಯಲ್ಲಿ ದಾಖಲೆಯ 5ನೇ ಬಾರಿ ಫೈನಲ್‌ಗೇರಿದೆ. 2002, 2013ರಲ್ಲಿ ಟ್ರೋಫಿ ಗೆದ್ದಿರುವ ತಂಡ, 2000 ಹಾಗೂ 2017ರಲ್ಲಿ ಫೈನಲ್‌ನಲ್ಲಿ ಸೋತು ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

27 ವರ್ಷದಿಂದ ಭಾರತಕ್ಕೆ ಸೆಮಿಫೈನಲಲ್ಲಿ ಸೋಲಿಲ್ಲ

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಕಳೆದ 27 ವರ್ಷಗಳಿಂದ ಅಜೇಯ ದಾಖಲೆ ಹೊಂದಿದೆ. 1998ರ ಚೊಚ್ಚಲ ಆವೃತ್ತಿಯಲ್ಲಿ ಭಾರತ ಫೈನಲ್‌ನಲ್ಲಿ ಸೋತಿತ್ತು. ಆ ಬಳಿಕ ಸೆಮಿಫೈನಲ್‌ಗೇರಿದ ಪ್ರತಿ ಬಾರಿಯೂ ತಂಡ ಫೈನಲ್‌ ಪ್ರವೇಶಿಸಿದೆ. 2004, 2006, 2009ರಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿತ್ತು.

ಲಾಹೋರ್‌ನಿಂದ ದುಬೈಗೆ ಫೈನಲ್‌ ಪಂದ್ಯ ಸ್ಥಳಾಂತರ

ಟೂರ್ನಿಯ ಫೈನಲ್‌ ಪಂದ್ಯಕ್ಕೆ ದುಬೈ ಅಥವಾ ಲಾಹೋರ್‌ ಕ್ರೀಡಾಂಗಣವನ್ನು ಪಟ್ಟಿ ಮಾಡಲಾಗಿತ್ತು. ಭಾರತ ಫೈನಲ್‌ಗೇರಿದರೆ ಪಂದ್ಯ ದುಬೈನಲ್ಲಿ, ಇತರ ತಂಡಗಳು ಫೈನಲ್‌ಗೇರಿದ್ದರೆ ಪಂದ್ಯ ಲಾಹೋರ್‌ನಲ್ಲಿ ನಡೆಯಬೇಕಿತ್ತು. ಸದ್ಯ ಭಾರತ ತಂಡ ಫೈನಲ್‌ಗೇರಿದ್ದರಿಂದ ಈ ಪಂದ್ಯ ದುಬೈನಲ್ಲಿ ಮಾ.9ರಂದು ನಡೆಯಲಿದೆ. ದಕ್ಷಿಣ ಆಫ್ರಿಕಾ ಅಥವಾ ನ್ಯೂಜಿಲೆಂಡ್‌ ತಂಡದ ವಿರುದ್ಧ ಭಾರತ ಫೈನಲ್‌ ಆಡಲಿದೆ.