ವಿಶ್ವಕಪ್‌ ಇತಿಹಾಸದಲ್ಲಿಯೇ ಪೂರ್ಣ ಸದಸ್ಯ ತಂಡವೊಂದರ 2ನೇ ಅತಿದೊಡ್ಡ ಸೋಲನ್ನು ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ತಂಡ ಕಂಡಿದೆ. ಶನಿವಾರ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 229 ರನ್‌ಗಳಿಂದ ಇಂಗ್ಲೆಂಡ್‌ ತಂಡವನ್ನು ಬಗ್ಗುಬಡಿದಿದೆ. 

ಮುಂಬೈ (ಅ.21): ಒಂದೆರಡು ರನ್‌ಗಳಲ್ಲ.. ಹಾಲಿ ವಿಶ್ವ ಚಾಂಪಿಯನ್‌ ತಂಡದ ವಿರುದ್ಧ ಬರೋಬ್ಬರಿ 229 ರನ್‌ಗಳ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಗೆಲುವಿನ ಟ್ರ್ಯಾಕ್‌ಗೆ ಬಂದಿದೆ. ಇನ್ನೊಂದೆಡೆ, ಅಫ್ಘಾನಿಸ್ತಾನ ವಿರುದ್ಧ ಆಘಾತಕಾರಿ ಸೋಲು ಕಂಡಿದ್ದ ಇಂಗ್ಲೆಂಡ್‌ ತಂಡ ತನ್ನ ರನ್‌ಗಳ ಅಂತರದಲ್ಲಿ ತನ್ನ ಈವರೆಗಿನ ಅತಿದೊಡ್ಡ ಸೋಲು ಕಾಣುವ ಮೂಲಕ ಮತ್ತೊಂದು ಭಾರೀ ಏಟು ಪಡೆದುಕೊಂಡಿದೆ. ಶನಿವಾರ ವಾಂಖಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ 7 ವಿಕೆಟ್‌ಗೆ 399ರನ್‌ಗಳ ಬೃಹತ್‌ ಮೊತ್ತವನ್ನು ಪೇರಿಸಿತು. ಪ್ರತಿಯಾಗಿ, ಹರಿಣಗಳ ತಂಡದ ಶಿಸ್ತಿನ ಬೌಲಿಂಗ್‌ ಮುಂದೆ ಮಂಡಿಯೂರಿದ ಇಂಗ್ಲೆಂಡ್‌ ತಂಡ 22 ಓವರ್‌ಗಳಲ್ಲಿ 170 ರನ್‌ಗೆ ಆಲೌಟ್‌ ಆಗುವ ಮೂಲಕ 229 ರನ್‌ಗಳ ಸೋಲು ಕಂಡಿತು. ಇದು ಏಕದಿನದಲ್ಲಿಇಂಗ್ಲೆಂಡ್‌ನ ಅತ್ಯಂತ ಕೆಟ್ಟ ಸೋಲು ಎನಿಸಿದೆ. ಇದಕ್ಕೂ ಮುನ್ನ 2022ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್‌ನಲ್ಲಿ 222 ರನ್‌ಗಳ ಸೋಲು ಕಂಡಿದ್ದು ಇಂಗ್ಲೆಂಡ್‌ ತಂಡದ ಕೆಟ್ಟ ಸೋಲು ಎನಿಸಿತ್ತು. ಮತ್ತೊಂದೆಡೆ ಇದು ವಿಶ್ವಕಪ್‌ನಲ್ಲಿ ತಂಡವೊಂದರ 2ನೇ ದೊಡ್ಡ ಗೆಲುವು ಎನಿಸಿದೆ. ಇದಕ್ಕೂ ಮುನ್ನ 2015ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವೇ ವೆಸ್ಟ್‌ ಇಂಡೀಸ್‌ ವಿರುದ್ಧ 257 ರನ್‌ಗಳ ಗೆಲುವು ಸಾಧಿಸಿದ್ದು ಅಗ್ರಸ್ಥಾನದಲ್ಲಿದೆ.

ಮೊದಲಿಗೆ ಬ್ಯಾಟಿಂಗ್‌ನಲ್ಲಿ ಮ್ಯಾಜಿಕ್‌ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್‌ನ ಗೆಲುವಿಗೆ 400 ರನ್‌ಗಳ ಗುರಿ ನಿಗದಿ ಮಾಡಿತ್ತು. ಇಂಗ್ಲೆಂಡ್‌ ತಂಡದ ಬ್ಯಾಟಿಂಗ್‌ಗೆ ಬಹುದೊಡ್ಡ ಸವಾಲಾಗಿದ್ದ ಈ ಮೊತ್ತವನ್ನು ಚೇಸ್‌ ಮಾಡಲು ಆರಂಭಿಸಿದ ತಂಡಕ್ಕೆ ಆರಂಭದಲ್ಲಿಯೇ ದಕ್ಷಿಣ ಆಫ್ರಿಕಾದ ಬೌಲರ್‌ಗಳು ಕಡಿವಾಣ ಹೇರಿದರು. ಇದರಿಂದಾಗಿ ಯಾವ ಹಂತದಲ್ಲೂ ಇಂಗ್ಲೆಂಡ್‌ ತಂಡ ಮೊತ್ತ ಚೇಸಿಂಗ್‌ ಮಾಡುವ ಲಕ್ಷಣದಲ್ಲಿಯೇ ಕಾಣಲಿಲ್ಲ. ಯಾವೊಬ್ಬ ಬ್ಯಾಟ್ಸ್‌ಮನ್‌ ಕೂಡ ದಕ್ಷಿಣ ಆಫ್ರಿಕಾದ ಬೌಲರ್‌ಗಳು ಸವಾಲೊಡ್ಡಲು ಪ್ರಯತ್ನ ಮಾಡಲಿಲ್ಲ.

ಗಾಯದ ಕಾರಣದಿಂದಾಗಿ ರೀಸ್‌ ಟಾಪ್ಲೆ ಬ್ಯಾಟಿಂಗ್‌ಗೆ ಇಳಿಯಲಿಲ್ಲ. ಅವರು ಬದಲು ಕ್ರೀಸ್‌ಗೆ ಇಳಿದ ವೇಗದ ಬೌಲರ್‌ ಮಾರ್ಕ್‌ ವುಡ್‌ ಅಜೇಯ 43 ರನ್‌ ಬಾರಿಸಿದರೆ, 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಗುಸ್‌ ಅಟ್ಕಿನ್‌ಸನ್‌ 35 ರನ್‌ ಸಿಡಿಸಿದರು. ಇವರ ಹೊರತಾಗಿ ಉಳಿದ ಯಾವ ಬ್ಯಾಟ್ಸ್‌ಮನ್‌ಗಳು ಕೂಡ ಕನಿಷ್ಠ 20 ರನ್‌ ಬಾರಿಸಲೂ ಸಾಧ್ಯವಾಗಲಿಲ್ಲ. ಇನ್ನು ದಕ್ಷಿಣ ಆಫ್ರಿಕಾ ತಂಡದ ಬೌಲರ್‌ಗಳ ಪೈಕಿ ವೇಗಿ ಗೆರಾಲ್ಡ್‌ ಕೋಯೆಟ್ಜೆ ಗರಿಷ್ಠ ಮೂರು ವಿಕೆಟ್‌ ಉರುಳಿಸಿದರೆ, ಲುಂಜಿ ಎನ್‌ಗಿಡಿ ಹಾಗೂ ಮಾರ್ಕೋ ಜನ್ಸೆನ್‌ ತಲಾ 2 ವಿಕೆಟ್‌ ಸಂಪಾದನೆ ಮಾಡಿದರು. ಕಗೀಸೋ ರಬಾಡ ಹಾಗೂ ಕೇಶವ್‌ ಮಹಾರಾಜ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತಕ್ಕೆ ಡಬಲ್‌ ಶಾಕ್‌, ಜೇನುನೊಣ ಕಚ್ಚಿ ಬ್ಯಾಟ್ಸ್‌ಮನ್‌ ಇಂಜುರಿ!

ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ ಹೆನ್ರಿಚ್‌ ಕ್ಲಾಸೆನ್‌ ಅವರ ಅಮೋಘ ಶತಕದಿಂದ 399 ರನ್‌ ಬಾರಿಸಲು ಸಾಧ್ಯವಾಗಿಯಿತು. ಕೇವಲ 61 ಎಸೆತಗಳಲ್ಲಿ ಇವರು ಶತಕ ಬಾರಿಸಿದರು. ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್‌ 85 ರನ್‌ ಸಿಡಿಸಿದರೆ, ರಸ್ಸಿ ವಾನ್‌ ಡರ್‌ ಡುಸೆನ್‌ 60 ರನ್‌ ಸಿಡಿಸಿದರು. ಏಡೆನ್‌ ಮಾರ್ಕ್ರಮ್‌ 42 ಹಾಗೂ ಆಲ್ರೌಂಡರ್‌ ಮಾರ್ಕೋ ಜನ್ಸೆನ್‌ ಅಜೇಯ 75 ರನ್‌ ಸಿಡಿಸಿದ್ದರು. ಇಂಗ್ಲೆಂಡ್‌ ಪರವಾಗಿ ರೀಸ್‌ ಟಾಪ್ಲೆ 3 ವಿಕೆಟ್‌ ಉರುಳಿಸಿದರೆ, ಗುಸ್ ಅಟ್ಕಿನ್‌ಸನ್‌ ಹಾಗೂ ಸ್ಪಿನ್ನರ್‌ ಆದಿಲ್‌ ರಶೀದ್‌ ತಲಾ 2 ವಿಕೆಟ್‌ ಉರುಳಿಸಿದರು.

'ಪಾಕಿಸ್ತಾನ್‌ ಜಿಂದಾಬಾದ್‌ ಎನ್ನದೇ ಮತ್ತೇನು ಹೇಳ್ಬೇಕು..' ಬೆಂಗಳೂರು ಪೊಲೀಸ್‌ ಜೊತೆ ಪಾಕ್‌ ಯುವಕನ ಮಾತಿನ ಫೈಟ್‌!