ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್‌ರೌಂಡರ್ ಮೊಹಮ್ಮದ್ ನವಾಜ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ದೊಡ್ಡ ಶಾಕ್ ನೀಡಿದೆ. ಡೋಪಿಂಗ್ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ನವಾಜ್ ಅವರಿಗೆ ಮೂರು ತಿಂಗಳ ಕಾಲ ಕ್ರಿಕೆಟ್‌ನಿಂದ ನಿಷೇಧ ಹೇರಲಾಗಿದೆ
ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್‌ರೌಂಡರ್ ಮೊಹಮ್ಮದ್ ನವಾಜ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ದೊಡ್ಡ ಶಾಕ್ ನೀಡಿದೆ. ಡೋಪಿಂಗ್ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ನವಾಜ್ ಅವರಿಗೆ ಮೂರು ತಿಂಗಳ ಕಾಲ ಕ್ರಿಕೆಟ್‌ನಿಂದ ನಿಷೇಧ ಹೇರಲಾಗಿದೆ. ಅವರ ದೇಹದಲ್ಲಿ ನಿಷೇಧಿತ ವಸ್ತುವಿನ ಅಂಶಗಳು ಪತ್ತೆಯಾಗಿರುವುದು ಈ ಕ್ರಮಕ್ಕೆ ಕಾರಣವಾಗಿದೆ.
ಏನಿದು ಪ್ರಕರಣ?
ಫೆಬ್ರವರಿ 7, 2026 ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದ ನಂತರ ನವಾಜ್ ಅವರಿಗೆ ಡೋಪಿಂಗ್ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಅವರ ದೇಹದಲ್ಲಿ 'ಕಾರ್ಬಾಕ್ಸಿ-ಟಿಎಚ್‌ಸಿ' (Carboxy-THC) ಎಂಬ ನಿಷೇಧಿತ ವಸ್ತುವಿನ ಕುರುಹುಗಳು ಪತ್ತೆಯಾಗಿವೆ ಎಂದು ಐಸಿಸಿ ತಿಳಿಸಿದೆ.
ನವಾಜ್ ಅವರು ಈ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ವಸ್ತುವನ್ನು ತಾವು ಕ್ರೀಡಾ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳಲು ಬಳಸಿಲ್ಲ, ಬದಲಿಗೆ ಕೇವಲ ವಿನೋದಕ್ಕಾಗಿ (Recreational purposes) ಬಳಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ನಿಷೇಧದ ಅವಧಿ ಮತ್ತು ರಿಯಾಯಿತಿ
ಐಸಿಸಿ ನಿಯಮದಂತೆ ನವಾಜ್ ಅವರಿಗೆ ಮೂರು ತಿಂಗಳ ನಿಷೇಧ ಹೇರಲಾಗಿದೆ. ಈ ನಿಷೇಧವು ಮೇ 1, 2026 ರಿಂದಲೇ ಜಾರಿಗೆ ಬಂದಿದೆ. ನವಾಜ್ ಈಗಾಗಲೇ ಎರಡುೂವರೆ ತಿಂಗಳ ಅಮಾನತು ಅವಧಿಯನ್ನು ಪೂರೈಸಿದ್ದಾರೆ. ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು, ಮಾದಕ ವ್ಯಸನ ಮುಕ್ತಿ ಚಿಕಿತ್ಸೆಗೆ ಒಳಗಾಗಲು ಸಮ್ಮತಿಸಿದ್ದಾರೆ. ಒಂದು ವೇಳೆ ಅವರು ಈ ಚಿಕಿತ್ಸಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ, ಅವರ ನಿಷೇಧದ ಅವಧಿಯನ್ನು ಕೇವಲ ಒಂದು ತಿಂಗಳಿಗೆ ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ಐಸಿಸಿ ಹೇಳಿದೆ.
ನವಾಜ್ ವೃತ್ತಿಜೀವನಕ್ಕೆ ದೊಡ್ಡ ಹಿನ್ನಡೆ
ಈ ಡೋಪಿಂಗ್ ಪ್ರಕರಣ ನವಾಜ್ ಅವರ ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಫೆಬ್ರವರಿ 7 ರಿಂದ ಮೇ 1 ರವರೆಗೆ ನವಾಜ್ ಆಡಿದ ಎಲ್ಲಾ ಪಂದ್ಯಗಳ ಫಲಿತಾಂಶಗಳು ಮತ್ತು ಅವರ ವೈಯಕ್ತಿಕ ದಾಖಲೆಗಳನ್ನು ಐಸಿಸಿ ರದ್ದುಗೊಳಿಸಿದೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಪ್ರಸಿದ್ಧ 'ಟಿ20 ಬ್ಲಾಸ್ಟ್' ಟೂರ್ನಿಯಲ್ಲಿ ಸರ್ರೆ (Surrey) ತಂಡದ ಪರ ಆಡಲು ನವಾಜ್ ಒಪ್ಪಂದ ಮಾಡಿಕೊಂಡಿದ್ದರು. ಈ ನಿಷೇಧದ ಹಿನ್ನೆಲೆಯಲ್ಲಿ ಅವರ ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ಮೇ 26 ರಿಂದ ಜುಲೈ 18 ರವರೆಗೆ ಅವರು ಆಡಬೇಕಿತ್ತು. ಪ್ರಸ್ತುತ ಪಾಕಿಸ್ತಾನ ತಂಡಕ್ಕೆ ಯಾವುದೇ ವೈಟ್-ಬಾಲ್ ಸರಣಿಗಳು ಇಲ್ಲದಿರುವುದರಿಂದ ತಂಡದ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲ. ಆದರೆ, ಒಬ್ಬ ಅನುಭವಿ ಆಲ್‌ರೌಂಡರ್ ಆಗಿ ಈ ರೀತಿ ಡೋಪಿಂಗ್ ವಿವಾದದಲ್ಲಿ ಸಿಲುಕಿರುವುದು ಪಾಕಿಸ್ತಾನ ಕ್ರಿಕೆಟ್‌ಗೆ ಮುಜುಗರ ಉಂಟುಮಾಡಿದೆ.


