ವೆಸ್ಟ್ ಇಂಡೀಸ್‌ನ ದಂತಕಥೆ ಹಾಗೂ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್ ಸರ್ ಗಾರ್ಫೀಲ್ಡ್ ಸೋಬರ್ಸ್ (89) ನಿಧನರಾಗಿದ್ದಾರೆ. ತಮ್ಮ ಅಪ್ರತಿಮ ಬ್ಯಾಟಿಂಗ್, ಬೌಲಿಂಗ್ ಹಾಗೂ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ ವಿಶ್ವದಾಖಲೆಯ ಮೂಲಕ ಅವರು ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದ ಹೆಸರು ಗಳಿಸಿದ್ದರು.

ನವದೆಹಲಿ (ಜು.17): ಜಗತ್ತು ಕಂಡ ಅತ್ಯಂತ ಶ್ರೇಷ್ಠ ಕ್ರಿಕೆಟಿಗ ಹಾಗೂ ವೆಸ್ಟ್ ಇಂಡೀಸ್‌ನ ದಂತಕಥೆ ಆಲ್‌ರೌಂಡರ್ ಸರ್ ಗಾರ್ಫೀಲ್ಡ್ ಸೋಬರ್ಸ್ (89) ನಿಧನರಾಗಿದ್ದಾರೆ. ಕ್ರಿಕೆಟ್ ಇತಿಹಾಸದ ಅತ್ಯಂತ ಪ್ರಭಾವಶಾಲಿ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದ ಸೋಬರ್ಸ್, ತಮ್ಮ ವಿಶಿಷ್ಟ ಆಟದ ಶೈಲಿ ಮತ್ತು ಅಪ್ರತಿಮ ದಾಖಲೆಗಳ ಮೂಲಕ ಜಾಗತಿಕ ಕ್ರಿಕೆಟ್ ಅಂಗಳದಲ್ಲಿ ಅಚ್ಚಳಿಯದ ಆಟಗಾರನಾಗಿ ನಿಂತಿದ್ದರು. ಅವರ ನಿಧನಕ್ಕೆ ಜಾಗತಿಕ ಕ್ರಿಕೆಟ್ ವಲಯ ತೀವ್ರ ಕಂಬನಿ ಮಿಡಿದಿದೆ.

1954 ರಿಂದ 1974 ರ ನಡುವೆ ವೆಸ್ಟ್ ಇಂಡೀಸ್ ಪರ 93 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಗಾರ್ಫೀಲ್ಡ್ ಸೋಬರ್ಸ್, 57.78 ರ ಅದ್ಭುತ ಸರಾಸರಿಯಲ್ಲಿ 26 ಶತಕಗಳೂ ಸೇರಿದಂತೆ ಒಟ್ಟು 8,032 ರನ್ ಬಾರಿಸಿದ್ದರು. ಎಡಗೈ ಬ್ಯಾಟಿಂಗ್ ಬ್ಯಾಟ್ಸ್‌ಮನ್‌ ಆಗಿದ್ದ ಅವರು, 1958 ರಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 365 ರನ್ ಗಳಿಸಿ ದಾಖಲೆ ಬರೆದಿದ್ದರು. ಈ ಬೃಹತ್ ಇನಿಂಗ್ಸ್ ಬರೋಬ್ಬರಿ 36 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಇತಿಹಾಸದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿ ಅಬಾಧಿತವಾಗಿ ಉಳಿದಿತ್ತು.

ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲೂ ಅಪ್ರತಿಮ ಮಾಂತ್ರಿಕ

ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲೂ ಸೋಬರ್ಸ್ ಅದ್ಭುತ. ಕೇವಲ ವೇಗದ ಬೌಲಿಂಗ್‌ ಮಾತ್ರವಲ್ಲದೆ, ಎಡಗೈ ಫಿಂಗರ್-ಸ್ಪಿನ್ ಹಾಗೂ ಸಂದರ್ಭಕ್ಕೆ ತಕ್ಕಂತೆ ರಿಸ್ಟ್-ಸ್ಪಿನ್ ಕೂಡ ಮಾಡುತ್ತಿದ್ದ ಮಾಂತ್ರಿಕನಾಗಿದ್ದರು. ಟೆಸ್ಟ್ ವೃತ್ತಿಜೀವನದಲ್ಲಿ 235 ವಿಕೆಟ್‌ ಕಬಳಿಸಿದ್ದ ಸೋಬರ್ಸ್‌, ಅಸಾಧಾರಣ ಫೀಲ್ಡರ್ ಆಗಿಯೂ ಗುರುತಿಸಿಕೊಂಡಿದ್ದರು.

ಪ್ರಥಮ ದರ್ಜೆ ಕ್ರಿಕೆಟ್ ಮತ್ತು ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳ ವಿಶ್ವದಾಖಲೆ:

ಬಾರ್ಬಡೋಸ್ ಪರ ತಮ್ಮ 16 ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸೋಬರ್ಸ್, 17 ನೇ ವಯಸ್ಸಿಗೆ ವೆಸ್ಟ್ ಇಂಡೀಸ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. ಆರಂಭದಲ್ಲಿ ಬ್ಯಾಟಿಂಗ್‌ಗಿಂತ ಬೌಲಿಂಗ್‌ನಲ್ಲೇ ಹೆಚ್ಚು ಯಶಸ್ಸು ಕಂಡಿದ್ದ ಅವರು ನಂತರ ದಿಗ್ಗಜ ಬ್ಯಾಟರ್ ಆಗಿ ಬೆಳೆದರು. ತಮ್ಮ ಸುದೀರ್ಘ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ 28,314 ರನ್ ಗಳಿಸಿದ್ದಲ್ಲದೆ, 1,043 ವಿಕೆಟ್‌ಗಳನ್ನು ಕಬಳಿಸಿದ್ದರು. ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ತಂಡವನ್ನು ಪ್ರತಿನಿಧಿಸಿದ್ದ ಅವರು ಆ ತಂಡದ ಪರವಾಗಿಯೇ 7,041 ರನ್ ಗಳಿಸಿದ್ದರು. ವಿಶೇಷವೆಂದರೆ, 1968 ರಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಪರ ಆಡುವಾಗ, ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಓವರ್‌ನ ಎಲ್ಲಾ 6 ಎಸೆತಗಳಿಗೆ 6 ಸಿಕ್ಸರ್ ಚಚ್ಚಿದ ವಿಶ್ವದ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದರು.

ವೆಸ್ಟ್‌ ಇಂಡೀಸ್‌ ತಂಡದ ನಾಯಕ

1965 ರಿಂದ 1972 ರ ಅವಧಿಯಲ್ಲಿ ಅವರು ವೆಸ್ಟ್ ಇಂಡೀಸ್ ತಂಡದ ನಾಯಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಆಟಗಾರನಾಗಿ ಸಿಕ್ಕ ಯಶಸ್ಸು ನಾಯಕನಾಗಿ ಸಿಗದಿದ್ದರೂ, ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸಗಳ ಸಂದರ್ಭದಲ್ಲಿ 'ರೆಸ್ಟ್ ಆಫ್ ದಿ ವರ್ಲ್ಡ್ XI' ತಂಡಗಳಿಗೂ ನಾಯಕರಾಗಿದ್ದರು. ಕ್ರಿಕೆಟ್‌ಗೆ ಅವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ 1975 ರಲ್ಲಿ ಅವರಿಗೆ 'ನೈಟ್‌ಹುಡ್' (ಸರ್) ಗೌರವ ನೀಡಲಾಗಿತ್ತು. ಅಲ್ಲದೆ, ವಿಸ್ಡನ್ ನಿಯತಕಾಲಿಕೆಯು ಘೋಷಿಸಿದ '20 ನೇ ಶತಮಾನದ ಐದು ಶ್ರೇಷ್ಠ ಕ್ರಿಕೆಟಿಗರಲ್ಲಿ' ಇವರೂ ಒಬ್ಬರಾಗಿದ್ದರು. ಪಾಪ್ ಗಾಯಕಿ ರಿಹಾನ್ನಾ ಅವರೊಂದಿಗೆ ಬಾರ್ಬಡೋಸ್ ದೇಶದ ಜೀವಂತ ಇಬ್ಬರು 'ರಾಷ್ಟ್ರೀಯ ಹೀರೋ'ಗಳ ಪೈಕಿ ಸೋಬರ್ಸ್ ಕೂಡ ಒಬ್ಬರಾಗಿದ್ದರು.

Scroll to load tweet…