ಭಾರತ 1-0 ಮುನ್ನಡೆಯಲ್ಲಿದ್ದರೂ, ಶುಭ್‌ಮನ್‌ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್ ತಂಡಕ್ಕೆ ಚಿಂತೆ ತಂದಿದೆ. ಗುರುವಾರದ 2ನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸರಣಿ ಸಮಬಲಗೊಳಿಸಲು ಪ್ರಯತ್ನಿಸಲಿದ್ದು, ಹಾರ್ದಿಕ್ ಪಾಂಡ್ಯ ಐತಿಹಾಸಿಕ ದಾಖಲೆಯ ಹೊಸ್ತಿಲಲ್ಲಿದ್ದಾರೆ.

ಮುಲ್ಲಾನ್‌ಪುರ(ಚಂಡೀಗಢ): ಆರಂಭಿಕ ಟಿ20 ಪಂದ್ಯದಲ್ಲಿ ಭಾರತ 101 ರನ್‌ಗಳಿಂದ ಭರ್ಜರಿ ಜಯಗಳಿಸಿದ್ದರೂ ತಂಡದ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಿದೆ. ಇದಕ್ಕೆ ಕಾರಣ ತಾರಾ ಬ್ಯಾಟರ್‌ಗಳ ಕಳಪೆ ಆಟ. ಶುಭ್‌ಮನ್‌ ಗಿಲ್ ಹಾಗೂ ಸೂರ್ಯಕುಮಾರ್‌ ಯಾದವ್‌ ರನ್‌ ಗಳಿಸಲು ಪರದಾಡುತ್ತಿದ್ದು, ಗುರುವಾರ ನಡೆಯಲಿರುವ 2ನೇ ಟಿ20 ಪಂದ್ಯದಲ್ಲಾದರೂ ಅಬ್ಬರಿಸಬಲ್ಲದೇ ಎಂಬ ಪ್ರಶ್ನೆ ಮೂಡಿದೆ.

5 ಪಂದ್ಯಗಳ ಸರಣಿಯಲ್ಲಿ ಭಾರತ ಈಗ 1-0 ಮುನ್ನಡೆಯಲ್ಲಿದೆ. ಮುಲ್ಲಾನ್‌ಪುರದ ಪಂದ್ಯದಲ್ಲೂ ಗೆದ್ದು ಸರಣಿ ಮುನ್ನಡೆ ಸಾಧಿಸುವುದು ತಂಡದ ಗುರಿ. ಆದರೆ ತಾರಾ ಬ್ಯಾಟರ್‌ಗಳು ಕೈಕೊಡುತ್ತಿರುವುದು ತಂಡದ ಆತ್ಮವಿಶ್ವಾಸ ಕುಗ್ಗಿಸಿದೆ. ಮೊದಲ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಅಬ್ಬರಿಸದಿದ್ದರೆ ತಂಡದ ಫಲಿತಾಂಶ ಬೇರೆಯೇ ಇರುತ್ತಿತ್ತು. ಇದು ಪುನರಾವರ್ತನೆ ಆಗದೆ ಸಂಘಟಿತ ಆಟವಾಡಬೇಕಾದ ಅಗತ್ಯ ತಂಡಕ್ಕಿದೆ. ಅಲ್ಲದೆ, ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಈ ಸರಣಿ ‘ಅಭ್ಯಾಸ’ ಎಂಬಂತೆ ಇರುವುದರಿಂದ ಆಟಗಾರರು ತಮ್ಮ ಸ್ಥಾನ ಗಟ್ಟಿಗೊಳಿಸಬೇಕಿದ್ದರೆ ಉತ್ತಮ ಪ್ರದರ್ಶನ ನೀಡಬೇಕಿದೆ.

ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಬದಲು ಜಿತೇಶ್‌ ಶರ್ಮಾ ಆಯ್ಕೆಯಾಗಿದ್ದರು. ಆರಂಭಿಕ ಸ್ಥಾನಕ್ಕೆ ಗಿಲ್‌ ಮರಳಿರುವುದರಿಂದ ಸಂಜುಗೆ ಅಲ್ಲೂ ಸ್ಥಾನ ಸಿಗುತ್ತಿಲ್ಲ. ತಂಡದ ಆಡಳಿತ ಜಿತೇಶ್‌ ಮೇಲೆ ಹೆಚ್ಚಿನ ನಂಬಿಕೆ ಇಟ್ಟುಕೊಂಡಿದ್ದು, ಸರಣಿಯಲ್ಲಿ ಅವರಿಗೆ ಮತ್ತಷ್ಟು ಸ್ಥಾನ ಸಿಗುವ ಸಾಧ್ಯತೆಯಿದೆ. ಹೀಗಾದರೆ ಸಂಜು ಈ ಪಂದ್ಯಕ್ಕೂ ಆಯ್ಕೆಯಾಗುವ ನಿರೀಕ್ಷೆಯಿಲ್ಲ. ಇನ್ನು ಅರ್ಶ್‌ದೀಪ್‌ ಸಿಂಗ್‌ ಹಾಗೂ ಕುಲ್ದೀಪ್‌ ಯಾದವ್‌ ಒಟ್ಟಿಗೆ ಕಣಕ್ಕಿಳಿಯುವುದು ತಂಡ ಸಂಯೋಜನೆಗೆ ಅಡ್ಡಿ ಎಂದು ಪರಿಗಣಿಸಿರುವ ತಂಡದ ಆಡಳಿತ, ಈ ಪಂದ್ಯದಲ್ಲೂ ಕುಲ್ದೀಪ್‌ರನ್ನು ಹೊರಗಿಡುವ ಸಾಧ್ಯತೆಯಿದೆ.

Scroll to load tweet…

ಸರಣಿ ಸಮಬಲ ಗುರಿ:

ಆರಂಭಿಕ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ದ.ಆಫ್ರಿಕಾ ಈ ಪಂದ್ಯದಲ್ಲಿ ಪುಟಿದೇಳುವ ನಿರೀಕ್ಷೆಯಲ್ಲಿದ್ದು, ಸರಣಿ ಸಮಬಲದ ಕಾತರದಲ್ಲಿದೆ. ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ಸುಧಾರಿತ ಆಟ ಕಂಡುಬರಬೇಕಿದ್ದು, ನಾಯಕ ಮಾರ್ಕ್‌ರಮ್‌, ಡಿ ಕಾಕ್‌, ಮಿಲ್ಲರ್, ಬ್ರೆವಿಸ್‌, ಸ್ಟಬ್ಸ್‌ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

ಪಂದ್ಯ ಆರಂಭ: ಸಂಜೆ 7 ಗಂಟೆಗೆ

ನೇರಪ್ರಸಾರ: ಸ್ಟಾರ್‌ಸ್ಪೊರ್ಟ್ಸ್‌, ಹಾಟ್‌ಸ್ಟಾರ್‌

--100 ಸಿಕ್ಸರ್‌, 100 ವಿಕೆಟ್‌ಗಳ ದಾಖಲೆ ಸನಿಹದಲ್ಲಿ ಪಾಂಡ್ಯ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಈವರೆಗೂ ಕೇವಲ ಮೂವರು ಮಾತ್ರ 100+ ಸಿಕ್ಸರ್, 100+ ವಿಕೆಟ್‌ ಸಾಧನೆ ಮಾಡಿದ್ದಾರೆ. ಅವರೆಂದರೆ ಜಿಂಬಾಬ್ವೆಯ ಸಿಕಂದರ್‌ ರಝಾ, ಅಫ್ಘಾನಿಸ್ತಾನದ ಮೊಹಮ್ಮದ್‌ ನಬಿ ಹಾಗೂ ಮಲೇಷ್ಯಾದ ವಿರನ್‌ದೀಪ್‌ ಸಿಂಗ್‌. ಈ ಸಾಧನೆ ಮಾಡಿದ ವಿಶ್ವದ 4ನೇ, ಭಾರತದ ಮೊದಲ ಆಟಗಾರ ಎನಿಸಿಕೊಳ್ಳಲು ಹಾರ್ದಿಕ್‌ ಪಾಂಡ್ಯಗೆ ಕೇವಲ 1 ವಿಕೆಟ್‌ ಅಗತ್ಯವಿದೆ. ಅವರು ಭಾರತ ಪರ 121 ಟಿ20 ಪಂದ್ಯಗಳಲ್ಲಿ 100 ಸಿಕ್ಸರ್‌ ಬಾರಿಸಿದ್ದು, 99 ವಿಕೆಟ್‌ ಪಡೆದಿದ್ದಾರೆ. 1919 ರನ್‌ ಕಲೆಹಾಕಿದ್ದಾರೆ.