Asianet Suvarna News Asianet Suvarna News

Asia Cup: ಟೀಮ್‌ ಇಂಡಿಯಾಗೆ ವಿವಿಎಸ್‌ ಲಕ್ಷ್ಮಣ್‌ ಹಂಗಾಮಿ ಕೋಚ್

ಟೀಮ್‌ ಇಂಡಿಯಾ ಕೋಚ್‌ ರಾಹುಲ್‌ ದ್ರಾವಿಡ್‌ಗೆ ಕರೋನಾ ಪಾಸಿಟಿವ್‌ ಆಗಿರುವ ಕಾರಣದಿಂದ ತಂಡದೊಂದಿಗೆ ದುಬೈಗೆ ಪ್ರಯಾಣ ಬೆಳೆಸಿಲ್ಲ. ಹಾಗಾಗಿ ಏಷ್ಯಾಕಪ್‌ನಲ್ಲಿ ಸ್ಪರ್ಧೆ ಮಾಡಲಿರುವ ಭಾರತ ತಂಡಕ್ಕೆ ಎನ್‌ಸಿಎ ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌ ಹಂಗಾಮಿ ಕೋಚ್‌ ಆಗಿರಲಿದ್ದಾರೆ.
 

BCCI Names VVS Laxman interim head coach of team India for Asia Cup san
Author
First Published Aug 24, 2022, 9:32 PM IST

ಮುಂಬೈ (ಆ.24): ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಟೀಂ ಇಂಡಿಯಾದ ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕಗೊಂಡಿದ್ದಾರೆ. ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪ್ರಸ್ತುತ ಕೊರೊನಾ ಪಾಸಿಟಿವ್‌ ಆಗಿದ್ದು, ದುಬೈಗೆ ತೆರಳಿರುವ ತಂಡದ ಜೊತೆ ಪ್ರಯಾಣ ಮಾಡಿಲ್ಲ. ರಾಹುಲ್‌ ದ್ರಾವಿಡ್‌, ಕೋವಿಡ್‌ ನೆಗೆಟಿವ್‌ ಆಗುವವರೆಗೂ ಲಕ್ಷ್ಮಣ್‌ ತಂಡದ ಹಂಗಾಮಿ ಕೋಚ್ ಆಗಿರಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಏಷ್ಯಾಕಪ್‌ನಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಆಗಸ್ಟ್ 28 ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ. ಲಕ್ಷ್ಮಣ್‌ ಹೆಸರು ಅಧಿಕೃತವಾಗಿ ಘೋಷಣೆ ಆಗುವ ಮುನ್ನವೇ, ಅವರೇ ತಂಡದ ಹಂಗಾಮಿ ಕೋಚ್ ಆಗಲಿದ್ದಾರೆ ಎನ್ನುವುದನ್ನು ಬಿಸಿಸಿಐ ಮೂಲಗಳು ಖಚಿತಪಡಿಸಿದ್ದವು. ಅದಲ್ಲದೆ, ಜಿಂಬಾಬ್ವೆ ಪ್ರವಾಸಕ್ಕೆ ತಂಡದೊಂದಿಗೆ ತೆರಳಿದ್ದ ಲಕ್ಷ್ಮಣ್‌ ಭಾರತಕ್ಕೆ ವಾಪಸಾಗದ ಹಿನ್ನಲೆಯಲ್ಲಿ ಅವರೇ ಕೋಚ್‌ ಆಗುವುದು ಬಹುತೇಕ ನಿಶ್ಚಿತವಾಗಿತ್ತು. ಇತ್ತೀಚೆಗೆ ನಡೆದ ಜಿಂಬಾಬ್ವೆ ಪ್ರವಾಸದ ವೇಳೆ ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ಜವಾಬ್ದಾರಿಯನ್ನು ಲಕ್ಷ್ಮಣ್‌ ಅವರಿಗೆ ನೀಡಲಾಗಿದ್ದರೆ, ದ್ರಾವಿಡ್‌ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ದ್ರಾವಿಡ್‌ ಅಲ್ಲದೆ, ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋಡ್‌, ಬೌಲಿಂಗ್‌ ಕೋಚ್‌ ಪರಾಸ್‌ ಮಾಂಬ್ರೆಗೂ ಕೂಡ ಜಿಂಬಾಬ್ವೆ ಪ್ರವಾಸದ ತಂಡದಲ್ಲಿ ಇದ್ದಿರಲಿಲ್ಲ.

ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದಿದ್ದ ಭಾರತ: ಭಾರತ ತಂಡದ ಮುಖ್ಯ ಕೋಚ್‌ ಆಗಿ ಜಿಂಬಾಬ್ವೆಗೆ ತೆರಳಿದ್ದ ಲಕ್ಷ್ಮಣ್‌ ಅಲ್ಲಿ ತಂಡದ ಸರಣಿ ಗೆಲುವಿಗೆ ಕಾರಣರಾಗಿದ್ದರು. ಹರಾರೆಯಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಮ್‌ ಇಂಡಿಯಾ 3-0 ಅಂತರದಿಂದ ಗೆಲುವು ಸಾಧಿಸಿತ್ತು. ಇದೀಗ ಲಕ್ಷ್ಮಣ್ ಸರಣಿ ಮುಗಿದ ಬಳಿಕ ನೇರವಾಗಿ ದುಬೈ ತಲುಪಿದ್ದು, ರೋಹಿತ್ ಶರ್ಮಾ ನೇತೃತ್ವದ ಏಷ್ಯಾಕಪ್ ತಂಡವನ್ನು ಸೇರಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಏಷ್ಯಾಕಪ್‌ನಲ್ಲಿ ತಂಡದಲ್ಲಿ ಭಾಗವಹಿಸದ ಜಿಂಬಾಬ್ವೆ ಸರಣಿಯ ಉಳಿದ ಸದಸ್ಯರು ಭಾರತಕ್ಕೆ ಮರಳಿದ್ದಾರೆ.

'ದ್ರಾವಿಡ್‌ ಅವರ ರಿಪೋರ್ಟ್‌ ನೆಗೆಟಿವ್‌ ಆದ ಬೆನ್ನಲ್ಲಿಯೇ ಅವರು ತಂಡವನ್ನು ಕೂಡಿಕೊಳ್ಳಲಿದ್ದಾರೆ. ಬಿಸಿಸಿಐ ಮೆಡಿಕಲ್‌ ಟೀಮ್‌ ಅವರ ಪ್ರಯಾಣವನ್ನು ಕ್ಲಿಯರ್‌ ಮಾಡುತ್ತದೆ' ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಏಷ್ಯಾಕಪ್‌ ಟಿ20 ಟೂರ್ನಿಗಾಗಿ ಯುಎಇಗೆ ತೆರಳುವ ಮುನ್ನ ಎಂದಿನಂತೆ ಕೋವಿಡ್‌-19 ಟೆಸ್ಟ್‌ ಮಾಡಲಾಗಿತ್ತು. ಈ ವೇಳೆ ದ್ರಾವಿಡ್‌ ಅವರಿಗೆ ಕೋವಿಡ್‌ ಪಾಸಿಟಿವ್‌ ಆಗಿರುವುದು ಪತ್ತೆಯಾಗಿದೆ. ದ್ರಾವಿಡ್‌ ಅವರಿಗೆ ಸಣ್ಣ ಪ್ರಮಾಣದ ಕೋವಿಡ್‌ ಸೂಚನೆಗಳಿವೆ, ಅವರ ಆರೋಗ್ಯವನ್ನು ಬಿಸಿಸಿಐ ಮೆಡಿಕಲ್‌ ಟೀಮ್‌ ನೋಡಿಕೊಳ್ಳುತ್ತದೆ ಎಂದು ಹೇಳಿದೆ.

Asia Cup 2022 ಯುಎಇಗೆ ಬಂದಿಳಿದ ಟೀಂ ಇಂಡಿಯಾ..!

ಆಟಗಾರರು ಅಥವಾ ಸಹಾಯಕ ಸಿಬ್ಬಂದಿ ಕರೋನಾ ಪಾಸಿಟಿವ್ ಆಗಿದ್ದರೆ, ಮೊದಲಿನಂತೆ ಗಂಭೀರವಾಗಿ ಐಸೋಲೇಷನ್‌ ಮಾಡಲಾಗುತ್ತಿಲ್ಲ. ಕಾಮನ್‌ವೆಲ್ತ್ ಗೇಮ್ಸ್‌ನ ಭಾರತ-ಆಸ್ಟ್ರೇಲಿಯಾ ಮಹಿಳಾ ತಂಡದ ಈವೆಂಟ್‌ನ ಅಂತಿಮ ದಿನದಂದು ಆಸ್ಟ್ರೇಲಿಯಾದ ಕ್ರಿಕೆಟಿಗ ತಹಿಲಾ ಮೆಕ್‌ಗ್ರಾತ್ ಕೋವಿಡ್‌ ಪಾಸಿಟಿವ್‌ ಆಗಿದ್ದರು. ಇದರ ಹೊರತಾಗಿಯೂ ಅವರಿಗೆ ಪಂದ್ಯ ಆಡಲು ಅವಕಾಶ ನೀಡಲಾಯಿತು. ಏಷ್ಯಾಕಪ್‌ ಟಿ20 ಟೂರ್ನಿ ಆಗಸ್ಟ್‌ 27 ರಿಂದ ಸೆ.11ರವರೆಗೆ ನಡೆಯಲಿದೆ.

ಏಷ್ಯಾಕಪ್‌ನಿಂದ ಶಾಹೀನ್ ಅಫ್ರಿದಿ ಔಟ್; ಟೀಂ ಇಂಡಿಯಾ ಆಟಗಾರರಿಗೆ ಬಿಗ್ ರಿಲೀಫ್ ಎಂದ ಪಾಕ್ ಮಾಜಿ ವೇಗಿ..!

ಏಷ್ಯಾಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿ.ಕೀ), ದೀಪಕ್ ಹೂಡಾ, ದಿನೇಶ್ ಕಾರ್ತಿಕ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯಜುವೇಂದ್ರ ಚಾಹಲ್, ರವಿ ಬಿಷ್ಣೋಯ್ ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.

Follow Us:
Download App:
  • android
  • ios