ಏಷ್ಯಾಕಪ್‌ನಿಂದ ಶಾಹೀನ್ ಅಫ್ರಿದಿ ಔಟ್; ಟೀಂ ಇಂಡಿಯಾ ಆಟಗಾರರಿಗೆ ಬಿಗ್ ರಿಲೀಫ್ ಎಂದ ಪಾಕ್ ಮಾಜಿ ವೇಗಿ..!
ಕರಾಚಿ: ಬಹುನಿರೀಕ್ಷಿತ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಆಗಸ್ಟ್ 27ರಿಂದ ಯುಎಇನಲ್ಲಿ ಏಷ್ಯಾಕಪ್ ಟೂರ್ನಿಯು ಆರಂಭವಾಗಲಿದೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಸ್ಟಾರ್ ವೇಗಿ ಶಾಹೀನ್ ಅಫ್ರಿದಿ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದೀಗ ಪಾಕ್ ಮಾಜಿ ವೇಗಿ ಈ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಶಾಹೀನ್ ಅಫ್ರಿದಿ, ಮುಂಬರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಶಾಹೀನ್ ಅಫ್ರಿದಿ ಅಲಭ್ಯತೆ ಪಾಕ್ ತಂಡಕ್ಕೆ ಕೊಂಚ ಹಿನ್ನೆಡೆಯಾಗುವ ಸಾಧ್ಯತೆಯಿದೆ.
ಪಾಕಿಸ್ತಾನ ಕ್ರಿಕೆಟ್ ತಂಡವು ಏಷ್ಯಾಕಪ್ ಟೂರ್ನಿಯಲ್ಲಿ ತನ್ನ ಪಾಲಿನ ಮೊದಲ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡವನ್ನು ಎದುರಿಸಲಿದ್ದು, ಆಗಸ್ಟ್ 28ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಲಿದೆ.
ಇದೀಗ ಶಾಹೀನ್ ಅಫ್ರಿದಿ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದಿರುವುದು ಟೀಂ ಇಂಡಿಯಾ ಅಗ್ರಕ್ರಮಾಂಕದ ಬ್ಯಾಟರ್‌ಗಳ ಪಾಲಿಗೆ ಕೊಂಚ ನೆಮ್ಮದಿ ಸಿಕ್ಕಂತೆ ಆಗಿದೆ ಎಂದು ಪಾಕಿಸ್ತಾನದ ಮಾಜಿ ವೇಗಿ ವಕಾರ್ ಯೂನಿಸ್ ಅಭಿಪ್ರಾಯಪಟ್ಟಿದ್ದಾರೆ.
2021ರ ಅಕ್ಟೋಬರ್‌ನಲ್ಲಿ ದುಬೈನಲ್ಲಿ ನಡೆದಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶಾಹೀನ್ ಅಫ್ರಿದಿ, ಟೀಂ ಇಂಡಿಯಾದ ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.
ಆ ಪಂದ್ಯದಲ್ಲಿ ಭಾರತ ಎದುರು ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು 10 ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಎದುರು ಪಾಕಿಸ್ತಾನ ಕ್ರಿಕೆಟ್ ತಂಡವು ಗೆಲುವು ದಾಖಲಿಸಿತ್ತು. ಶಾಹೀನ್ ಅಫ್ರಿದಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಈ ಘಟನೆಯನ್ನು ಮೆಲುಕು ಹಾಕಿರುವ ವಕಾರ್ ಯೂನಿಸ್, ಶಾಹೀನ್ ಅವರ ಗಾಯದ ಸಮಸ್ಯೆಯು ಟೀಂ ಇಂಡಿಯಾ ಅಗ್ರಕ್ರಮಾಂಕದ ಬ್ಯಾಟರ್‌ಗಳ ಪಾಲಿಗೆ ನೆಮ್ಮದಿ ಸಿಗುವಂತೆ ಮಾಡಿದೆ. ಏಷ್ಯಾಕಪ್‌ನಲ್ಲಿ ಅವರು ಪಾಲ್ಗೊಳ್ಳದೇ ಇರುವುದು ಬೇಸರ ತರಿಸಿದೆ. ಆದಷ್ಟು ಬೇಗ ಫಿಟ್ ಆಗಿ ಎಂದು ವಕಾರ್ ಟ್ವೀಟ್ ಮಾಡಿದ್ದಾರೆ.
shaheen
ಮುಂಬರುವ ಏಷ್ಯಾಕಪ್ ಟೂರ್ನಿಯಲ್ಲಿ ಶಾಹೀನ್ ಅಫ್ರಿದಿ ಅನುಪಸ್ಥಿತಿ ಪಾಕಿಸ್ತಾನ ತಂಡವನ್ನು ಕಾಡಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಉಪನಾಯಕ ಶಾದಾಬ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.