* ಏಷ್ಯಾಕಪ್ ಕ್ರಿಕೆಟ್‌ ಟೂರ್ನಿಗೆ ಕ್ಷಣಗಣನೆ * ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಯುಎಇಗೆ ಬಂದಿಳಿದ ಟೀಂ ಇಂಡಿಯಾ* ಆಗಸ್ಟ್‌ 28ರಂದು ಮೊದಲ ಪಂದ್ಯವನ್ನಾಡಲಿರುವ ಭಾರತ

ದುಬೈ(ಆ.24): ಬಹುನಿರೀಕ್ಷಿತ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಆಡಲು ಭಾರತ ತಂಡ ಮಂಗಳವಾರ ಯುಎಇಗೆ ಪ್ರಯಾಣಿಸಿತು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯಲ್ಲಿ ನಡೆದ ಫಿಟ್ನೆಸ್‌ ಶಿಬಿರದಲ್ಲಿ ಪಾಲ್ಗೊಂಡಿದ್ದ ಆಟಗಾರರು ದುಬೈಗೆ ತೆರಳಿದರು. ನಾಯಕ ರೋಹಿತ್‌ ಶರ್ಮಾ ನೇತೃತ್ವದ ತಂಡವು ಆಗಸ್ಟ್ 24ರಂದು ಅಭ್ಯಾಸ ಆರಂಭಿಸಲಿದ್ದು, ಆಗಸ್ಟ್‌ 28ರ ಪಾಕಿಸ್ತಾನ ವಿರುದ್ಧ ಮಹತ್ವದ ಪಂದ್ಯಕ್ಕೆ ಸಿದ್ಧತೆ ನಡೆಸಲಿದೆ. ತಂಡಕ್ಕೆ ಅಭ್ಯಾಸ ನಡೆಸಲು 4 ದಿನಗಳ ಕಾಲಾವಕಾಶ ಸಿಗಲಿದೆ. ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿದ್ದ ಕೆ.ಎಲ್‌.ರಾಹುಲ್‌, ದೀಪಕ್‌ ಹೂಡಾ, ಆವೇಶ್‌ ಖಾನ್‌, ದೀಪಕ್‌ ಚಹರ್‌, ಆಕ್ಷರ್‌ ಪಟೇಲ್‌ ಹರಾರೆಯಿಂದ ನೇರವಾಗಿ ದುಬೈ ತಲುಪಿದ್ದಾರೆ.

ಆಗಸ್ಟ್‌ 27ರಿಂದ ಏಷ್ಯಾಕಪ್‌ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ-ಆಫ್ಘಾನಿಸ್ತಾನ ತಂಡಗಳು ಸೆಣಸಲಿವೆ. ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಆಫ್ಘಾನಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ತಂಡಗಳ ಜೊತೆಗೆ ಅರ್ಹತಾ ಸುತ್ತಿನಲ್ಲಿ ಗೆಲ್ಲುವ ತಂಡವೊಂದು ಪಾಲ್ಗೊಳ್ಳಲಿದೆ. ಅರ್ಹತಾ ಸುತ್ತು ಚಾಲ್ತಿಯಲ್ಲಿದ್ದು ಯುಎಇ, ಹಾಂಕಾಂಗ್‌, ಕುವೈಟ್‌ ಮತ್ತು ಸಿಂಗಾಪುರ ಆಡುತ್ತಿವೆ. ಸಿಂಗಾಪುರ ಈಗಾಗಲೇ ಹೊರಬಿದ್ದಿದ್ದು, ಉಳಿದ 3 ತಂಡಗಳ ಪೈಕಿ ಒಂದು ತಂಡ ಪ್ರಧಾನ ಸುತ್ತಿಗೆ ಪ್ರವೇಶ ಪಡೆಯಲಿದೆ.

ಭಾರತೀಯ ಫ್ಯಾನ್ಸ್‌ ಹಾಗೂ ಮಾಧ್ಯಮಗಳು ಕೊಹ್ಲಿ ಮೇಲೆ ಅನಗತ್ಯ ಒತ್ತಡ ಹೇರುತ್ತಿವೆ: ವಾಸೀಂ ಅಕ್ರಂ

ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ ನೋಡಿ: 

ರೋಹಿತ್‌ ಶರ್ಮಾ(ನಾಯಕ), ಕೆ.ಎಲ್‌.ರಾಹುಲ್‌(ಉಪನಾಯಕ), ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ದೀಪಕ್‌ ಹೂಡಾ, ದಿನೇಶ್‌ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಆರ್‌. ಅಶ್ವಿನ್‌, ಯಜುವೇಂದ್ರ ಚಹಲ್‌, ರವಿ ಬಿಷ್ಣೋಯ್‌, ಭುವನೇಶ್ವರ್‌ ಕುಮಾರ್‌, ಅಶ್‌ರ್‍ದೀಪ್‌ ಸಿಂಗ್‌, ಆವೇಶ್‌ ಖಾನ್‌.

ಮೀಸಲು ಆಟಗಾರರು: ಶ್ರೇಯಸ್‌ ಅಯ್ಯರ್‌, ದೀಪಕ್‌ ಚಹರ್‌, ಅಕ್ಷರ್‌ ಪಟೇಲ್‌.

ಕೋಚ್‌ ದ್ರಾವಿಡ್‌ಗೆ ಕೋವಿಡ್‌

ಬೆಂಗಳೂರು: ಭಾರತ ತಂಡದ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ಗೆ ಕೊರೋನಾ ಸೋಂಕು ತಗುಲಿದ್ದು, ಏಷ್ಯಾಕಪ್‌ನಲ್ಲಿ ಆಡಲು ಯುಎಇಗೆ ಮಂಗಳವಾರ ತೆರಳಿದ ತಂಡದ ಜೊತೆ ಅವರು ಪ್ರಯಾಣಿಸಿಲ್ಲ. ಅವರು ಸಣ್ಣ ಪ್ರಮಾಣದ ಸೋಂಕಿನ ಲಕ್ಷಣಗಳಿದ್ದು, 2 ದಿನಗಳ ಬಳಿಕ ಮತ್ತೊಮ್ಮೆ ಕೋವಿಡ್‌ ಪರೀಕ್ಷೆ ನಡೆಸುವುದಾಗಿ ಬಿಸಿಸಿಐ ವೈದ್ಯಕೀಯ ತಂಡ ತಿಳಿಸಿದೆ. ದ್ರಾವಿಡ್‌ರ ವರದಿ ನೆಗೆಟಿವ್‌ ಬಂದ ಬಳಿಕ ಅವರು ದುಬೈಗೆ ತೆರಳುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಬೌಲಿಂಗ್‌ ಕೋಚ್‌ ಪರಾಸ್‌ ಮಾಂಬ್ರೆ ತಂಡದ ಅಭ್ಯಾಸ ಮೇಲ್ವಿಚಾರಣೆ ನಡೆಸಲಿದ್ದಾರೆ. ಒಂದು ವೇಳೆ ದ್ರಾವಿಡ್‌ ಚೇತರಿಸಿಕೊಳ್ಳದಿದ್ದರೆ ಎನ್‌ಸಿಎ ನಿರ್ದೇಶಕ ವಿವಿಎಸ್‌ ಲಕ್ಷ್ಮಣ್‌ರನ್ನು ಏಷ್ಯಾಕಪ್‌ಗೆ ಪ್ರಧಾನ ಕೋಚ್‌ ಆಗಿ ಬಿಸಿಸಿಐ ನೇಮಕ ಮಾಡಲಿದೆ.