ಟೆಸ್ಟ್ ಹಾಗೂ ಟಿ20 ಮಾದರಿಯಿಂದ ಈಗಾಗಲೇ ನಿವೃತ್ತಿ ಹೇಳಿರುವ ವಿರಾಟ್ ಕೊಹ್ಲಿ ಇದೀಗ ಏಕದಿನ ಮಾದರಿಯಿಂದಲೂ ನಿವೃತ್ತಿ ಹೇಳುತ್ತಿದ್ದಾರೆ. ವಿದಾಯದ ದಿನಾಂಕ ಘೋಷಿಸಿದ್ದಾರೆ. ಕೊಹ್ಲಿ ತಮ್ಮ ಕೊನೆಯ ಏಕದಿನ ಸರಣಿ ಕುರಿತು ಮಾತನಾಡಿದ್ದಾರೆ.
ಮುಂಬೈ (ಸೆ.26) ವಿರಾಟ್ ಕೊಹ್ಲಿ ಮಾಡಿದ ಘೋಷಣೆಯಿಂದ ಅಭಿಮಾನಿಗಳು ಆಘಾತಗೊಂಡಿದ್ದಾರೆ. ಟೆಸ್ಟ್ ಹಾಗೂ ಟಿ20 ಮಾದರಿಯಿಂದ ನಿವೃತ್ತಿಯಾಗಿರುವ ವಿರಾಟ್ ಕೊಹ್ಲಿ ಇದೀಗ ಏಕದಿನ ಮಾದರಿಯಿಂದಲೂ ನಿವೃತ್ತಿಯಾಗುತ್ತಿದ್ದಾರೆ. ಈ ಕುರಿತು ಜಿಯೋಸ್ಟಾರ್ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಹೇಳಿದ್ದಾರೆ. 2027ರ ಏಕದಿನ ವಿಶ್ವಕಪ್ ನನ್ನ ಕೊನೆಯ ಏಕದಿನ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. 2027ರ ಐಸಿಸಿ ಏಕದಿನ ವಿಶ್ವಕಪ್ ನನ್ನ ಲಾಸ್ಟ್ 50 ಓವರ್ ಸರಣಿ ಎಂದು ವಿರಾಟ್ ಕೊಹ್ಲಿ ಖಚಿತಪಡಿಸಿದ್ದಾರೆ.
50 ಓವರ್ ಏಕದಿನ ವಿಶ್ವಕಪ್ ಎಲ್ಲಾ ಮಾದರಿಗಳಿಂತ ಶ್ರೇಷ್ಠ ಹಾಗೂ ಅತ್ಯಂತ ಪ್ರಮುಖ ಟೂರ್ನಿಯಾಗಿದೆ. ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲುವುದು ವೃತ್ತಿಪರ ಕ್ರಿಕೆಟಿಗನ ಪ್ರಮುಖ ಗುರಿಯಾಗಿರುತ್ತದೆ. ಭಾರತದಲ್ಲಿ 2027ರ ವಿಶ್ವಕಪ್ ಟೂರ್ನಿ ಆಡಲು ಉತ್ಸುಕನಾಗಿದ್ದೇನೆ. 2027ರ ವಿಶ್ವಕಪ್ ಟೂರ್ನಿ ಬಳಿಕ 50 ಓವರ್ ಏಕದಿನ ಮಾದರಿಗೂ ವಿದಾಯ ಹೇಳುತ್ತೇನೆ ಎಂದು ವಿರಾಟ್ ಕೊಹ್ಲಿ ಸಂದರ್ಶನದಲ್ಲಿ ಹೇಳಿದ್ದಾರೆ.
ಅಭಿಮಾನಿಗಳಿಗೆ ಆಘಾತ
ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್ ಮೂಲಕ ಏಕದಿನದಿಂದಲೂ ನಿವೃತ್ತಿಯಾಗುವುದಾಗಿ ಘೋಷಿಸುತ್ತಿದ್ದಂತೆ ಅಭಿಮಾನಿಗಳು ಆಘಾತಗೊಂಡಿದ್ದಾರೆ. ಟೀಂ ಇಂಡಿಯಾ ಜರ್ಸಿಯಲ್ಲಿ ಕೊಹ್ಲಿ ಬ್ಯಾಟಿಂಗ್ ನೋಡಲು ತುದಿಗಾಲಲ್ಲಿ ನಿಂತಿರುವ ಅಭಿಮಾನಿಗಳಿಗೆ ಕೊಹ್ಲಿ ವಿದಾಯದ ಹೇಳಿಕೆ ಆಘಾತ ನೀಡಿದೆ. ವಿರಾಟ್ ಕೊಹ್ಲಿ ಮಾಸ್ಟರ್ ಚೇಸಿಂಗ್, ಸ್ಫೋಟಕ ಬ್ಯಾಟಿಂಗ್, ಮೈದಾನದಲ್ಲಿನ ಅಗ್ರೇಸ್ಸೀವ್ ಆಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ನಡುವೆ ಕೊಹ್ಲಿ ಘೋಷಣೆ ಅಭಿಮಾನಿಗಳಿಗೆ ಬೇಸರ ತರಿಸಿದೆ.
2027ರ ಟ್ರೋಫಿ ಗೆಲ್ಲಲು ಎಲ್ಲಾ ಪ್ರಯತ್ನ
2027ರ ಏಕದಿನ ವಿಶ್ವಕಪ್ ನನ್ನ ಕೊನೆಯ ವಿಶ್ವಕಪ್ ಮಾತ್ರವಲ್ಲ, ಕೊನೆಯ ಏಕದಿನ ಸರಣಿ ಕೂಡ ಆಗಿದೆ. ಭಾರತಕ್ಕಾಗಿ ಮತ್ತೊಂದು ವಿಶ್ವಕಪ್ ಟ್ರೋಫಿ ಗೆಲ್ಲಲು ಎಲ್ಲಾ ಪ್ರಯತ್ನ ಮಾಡುತ್ತೇನೆ. ಗೆಲ್ಲಲೇಬೇಕೆಂಬ ಹಠವಿದೆ. ತಂಡಕ್ಕಾಗಿ ಎಲ್ಲಾ ಜವಾಬ್ದಾರಿ ನಿರ್ವಹಿಸಿ ಟ್ರೋಫಿ ಗೆಲ್ಲಿಸಿಕೊಡುವುದು ನನ್ನ ಮುಖ್ಯ ಗುರಿಯಾಗಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
2008ರಲ್ಲಿ ಏಕದಿನ ಮಾದರಿಗೆ ಪಾದರ್ಪಣೆ ಮಾಡಿದ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಕೀ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದಾರೆ. 2011ರಲ್ಲಿ ಚೊಚ್ಚಲ ವಿಶ್ವಕಪ್ ಆಡಿದ ವಿರಾಟ್ ಕೊಹ್ಲಿ ಟ್ರೋಫಿ ಗೆಲುವಿನಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು. 2011ರ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿದರೆ, ಶ್ರೀಲಂಕಾ ವಿರುದ್ಧಧ ಫೈನಲ್ ಪಂದ್ಯದಲ್ಲಿ 35 ರನ್ ಕಾಣಿಕೆ ನೀಡಿದ್ದರು. ಇನ್ನು ವಿಕೆಟ್ ಪತನದ ನಡುವೆ ಗೌತಮ್ ಗಂಭೀರ್ ಜೊತೆ 83 ರನ್ ಜೊತೆಯಾಟ ನೀಡಿದ್ದರು. 2015, 2019 ಹಾಗೂ 2023ರ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಆಟಗಾರನಾಗಿದ್ದರು. 2019ರಲ್ಲಿ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗಿಸಿತ್ತು.
ವಿರಾಟ್ ಕೊಹ್ಲಿ 2024ರ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಟಿ20 ಮಾದರಿಯಿಂದ ನಿವೃತ್ತಿ ಹೇಳಿದ್ದರು. ಕೊಹ್ಲಿ ನಿರ್ಧಾರ ಅಭಿಮಾನಗಳಿಗೆ ಆಘಾತವಾಗಿತ್ತು. 2025ರಲ್ಲಿ ಏಕಾಏಕಿ ಟೆಸ್ಟ್ ಮಾದರಿಯಿಂದಲೂ ಕೊಹ್ಲಿ ನಿವೃತ್ತಿ ಹೇಳಿದ್ದರು. ಬಳಿಕ ಏಕದಿನ ಮಾದರಿಯಲ್ಲಿ ಮಾತ್ರ ಮುಂದುವರಿದಿದ್ದರು. ಇದೀಗ ಏಕದಿನ ಮಾದರಿಯಿಂದ 2027ರ ಏಕದಿನವೇ ತನ್ನ ಕೊನೆಯ ಪಂದ್ಯ ಎಂದಿದ್ದಾರೆ. ಇನ್ನು ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸದ್ಯ ಐಪಿಎಲ್‌ನಲ್ಲಿ ಮುಂದುವರಿಯಲಿದ್ದಾರೆ. ಸದ್ಯ ಲಂಡನ್‌ನಲ್ಲಿ ನೆಲೆಸಿರುವ ವಿರಾಟ್ ಕೊಹ್ಲಿ ಕೆಲ ವರ್ಷಗಳ ಕಾಲ ಐಪಿಎಲ್ ಟೂರ್ನಿಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ.


