ಢಾಕಾ(ಮೇ.29): ಶ್ರೀಲಂಕಾ ವಿರುದ್ದದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಅಸಭ್ಯ ಪದಬಳಕೆ ಮಾಡಿದ ಬಾಂಗ್ಲಾದೇಶ ತಂಡದ ನಾಯಕ ತಮೀಮ್‌ ಇಕ್ಬಾಲ್‌ಗೆ ಮ್ಯಾಚ್‌ ರೆಫ್ರಿ ಪಂದ್ಯದ ಸಂಭಾವನೆಯ 15% ದಂಡ ವಿಧಿಸಿದ್ದಾರೆ.

ತಮೀಮ್ ಇಕ್ಬಾಲ್ ಐಸಿಸಿ ನೀತಿ ಸಂಹಿತೆಯ 2.3 ಅನುಚ್ಛೇದ ಉಲ್ಲಂಘಿಸಿರುವುದು ದೃಢಪಟ್ಟ ಬೆನ್ನಲ್ಲೇ ಐಸಿಸಿ ಬಾಂಗ್ಲಾ ನಾಯಕನಿಗೆ ದಂಡದ ಬರೆ ಎಳೆದಿದೆ. ಐಸಿಸಿ 2.3 ಅನುಚ್ಛೇದವು ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯದಲ್ಲಿ ಅಸಭ್ಯ ಪದ ಬಳಕೆಯ ಸಂಬಂಧಿಸಿದ್ದಾಗಿದೆ. ತಮೀಮ್ ಇಕ್ಬಾಲ್‌ಗೆ ಪಂದ್ಯದ ಸಂಭಾವನೆಯ 15% ದಂಡ ಮಾತ್ರವಲ್ಲದೇ, ಒಂದು ಋಣಾತ್ಮಕ ಅಂಕ(ಡಿಮೆರಿಟ್ ಪಾಯಿಂಟ್‌) ಸಹಾ ನೀಡಲಾಗಿದೆ. ಕಳೆದ 24 ತಿಂಗಳಲ್ಲಿ ಇಕ್ಬಾಲ್‌ ಮೊದಲ ಬಾರಿಸಿ ಐಸಿಸಿಯಿಂದ ಡಿಮೆರಿಟ್‌ ಪಾಯಿಂಟ್‌ ಪಡೆದಿದ್ದಾರೆ.

ಬಾಂಗ್ಲಾದೇಶ ಎದುರು ಕೊನೆಯ ಏಕದಿನ ಪಂದ್ಯ ಗೆದ್ದು ನಿಟ್ಟುಸಿರು ಬಿಟ್ಟ ಶ್ರೀಲಂಕಾ..!

ಬಾಂಗ್ಲಾದೇಶ ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಕ್ಯಾಚ್‌ ಔಟ್‌ ರಿವ್ಯೂ ವಿಫಲವಾದ ಬೆನ್ನಲ್ಲೇ ತಮೀಮ್‌ ಇಕ್ಬಾಲ್ ಅಸಭ್ಯ ಪದ ಬಳಕೆ ಮಾಡಿದ್ದಾರೆ. ತಮೀಮ್‌ ತಾವು ಮಾಡಿರುವ ತಪ್ಪನ್ನು ಹಾಗೂ ಶಿಕ್ಷೆಯ ಪ್ರಮಾಣವನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ಕುರಿತಂತೆ ಹೆಚ್ಚಿನ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ಮ್ಯಾಚ್ ರೆಫ್ರಿ ನೀಯುಮರ್ ರಶೀದ್ ತಿಳಿಸಿದ್ದಾರೆ.

ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡವು ಒಂದು ಪಂದ್ಯ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತ್ತು. ಆದರೆ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು 97 ರನ್‌ಗಳ ಅಂತರದ ಹೀನಾಯ ಸೋಲು ಕಾಣುವ ಮೂಲಕ ಲಂಕಾ ಎದುರು ವೈಟ್‌ವಾಷ್ ಸಾಧಿಸುವ ಕನಸು ಸದ್ಯಕ್ಕೆ ಕನಸಾಗಿಯೇ ಉಳಿಯುವಂತಾಯಿತು. ಇದೆಲ್ಲದರ ನಡುವೆ ತಮೀಮ್‌ಗೆ ದಂಡ ವಿಧಿಸಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.