ಢಾಕಾ(ಮೇ.29): ನಾಯಕ ಕುಸಾಲ್ ಪರೆರಾ ಬಾರಿಸಿದ ಕೆಚ್ಚೆದೆಯ ಶತಕ ಹಾಗೂ ವೇಗಿ ದುಸ್ಮಂತ್ ಚಮೀರಾ ನಡೆಸಿದ ಮಾರಕ ದಾಳಿಯ ನೆರವಿನಿಂದ ಬಾಂಗ್ಲಾದೇಶ ಎದುರು ಶ್ರೀಲಂಕಾ ಕ್ರಿಕೆಟ್ ತಂಡವು 97 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಲಂಕಾದೆದರು ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಬಾಂಗ್ಲಾದ ಕನಸು ಭಗ್ನವಾಗಿದೆ. ಈ ಸೋಲಿನ ಹೊರತಾಗಿಯೂ ಬಾಂಗ್ಲಾದೇಶ ತಂಡವು 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡಕ್ಕೆ ನಾಯಕ ಕುಸಾಲ್ ಪರೆರಾ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಗುಣತಿಲಕ ಹಾಗೂ ಕುಸಾಲ್ ಪೆರೆರಾ ಜೋಡಿ 82 ರನ್‌ಗಳ ಜತೆಯಾಟವಾಡುವ ಮೂಲಕ ಲಂಕಾ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಾಯಕ ಪೆರೆರಾ 122 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 120 ರನ್‌ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್ ಧನಂಜಯ ಡಿಸಿಲ್ವಾ ಅಜೇಯ 55 ರನ್‌ ಬಾರಿಸುವ ಮೂಲಕ ತಂಡದ ಮೊತ್ತವನ್ನು 280ರ ಗಡಿ ದಾಟಿಸಿದರು. ಅಂತಿಮವಾಗಿ ಲಂಕಾ 6 ವಿಕೆಟ್ ಕಳೆದುಕೊಂಡು 286 ರನ್‌ ಕಲೆ ಹಾಕಿತ್ತು.

ಮೊದಲೆರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡವು ಮತ್ತೊಂದು ಗೆಲುವು ಪಡೆಯುವ ಲೆಕ್ಕಾಚಾರದೊಂದಿಗೆ ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿತು. ಆದರೆ ಲಂಕಾ ವೇಗಿ ದುಸ್ಮಂತ್ ಚಮೀರಾ ಬಾಂಗ್ಲಾದ ಇನ್ನೂ 30 ರನ್‌ ಕಲೆಹಾಕುವಷ್ಟರಲ್ಲೇ  ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಬಾಂಗ್ಲಾ ಪರ ಮೊಸದ್ದೇಕ್ ಹುಸೈನ್(51) ಹಾಗೂ ಮೊಹಮ್ಮದುಲ್ಲಾ(53) ಅರ್ಧಶತಕ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಮುಷ್ಫಿಕುರ್ ಆಕರ್ಷಕ ಶತಕ; ಲಂಕಾ ಎದುರು ಸರಣಿ ಗೆದ್ದ ಬಾಂಗ್ಲಾದೇಶ

ಅಂತಿಮವಾಗಿ ಬಾಂಗ್ಲಾದೇಶ ಕೇವಲ 189 ರನ್‌ಗಳಿಗೆ ಸರ್ವಪತನ ಕಂಡಿತು. ಲಂಕಾ ಪರ ಚಮೀರಾ ಕೇವಲ 16 ರನ್‌ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಇವರಿಗೆ ವಹಿಂದು ಹಸರಂಗ ಹಾಗೂ ರಮೇಶ್ ಮೆಂಡೀಸ್‌ ತಲಾ 2 ವಿಕೆಟ್‌ ಕಬಳಿಸುವ ಮೂಲಕ ಉತ್ತಮ ಸಾಥ್‌ ನೀಡಿದರು.