ಭಾರತ ವಿಶ್ವಕಪ್ ಸೋತಿದ್ದು ಒಳ್ಳೆಯದ್ದೇ ಆಯ್ತು:ಮತ್ತೆ ವಿವಾದಾತ್ಮಕ ಹೇಳಿಕೆ ಕೊಟ್ಟ ಪಾಕಿ ಅಬ್ದುಲ್ ರಜಾಕ್..!
ಪಾಕಿಸ್ತಾನ ಟಿವಿ ಚಾನೆಲ್‌ವೊಂದರ ಹಸ್ನಾ ಮನಾ ಹೈ ಎನ್ನುವ ಶೋನಲ್ಲಿ ಭಾಗವಹಿಸಿ ಮಾತನಾಡಿರುವ ರಜಾಕ್, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿತ್ತು ಹಾಗೂ ಇಂತಹ ಪ್ರತಿಷ್ಠಿತ ಟೂರ್ನಿಯನ್ನು ಆತಿಥೇಯ ದೇಶವು ಗೆದ್ದಿದ್ದರೂ ಅದು ನಿಜಕ್ಕೂ ಕ್ರೀಡೆಯ ದುರಂತ ಎನಿಸಿಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ.
ಕರಾಚಿ(ನ.24): ಇತ್ತೀಚೆಗಿನ ದಿನಗಳಲ್ಲಿ ಪದೇ ಪದೇ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಾಗುತ್ತಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಇದೀಗ ಮತ್ತೊಮ್ಮೆ ಭಾರತ ವಿರುದ್ದ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ತವರಿನಲ್ಲಿ ವಿಶ್ವಕಪ್ ಫೈನಲ್ ಸೋತ ಬೆನ್ನಲ್ಲೇ ಪಾಕಿ ರಜಾಕ್ ಮತ್ತೊಮ್ಮೆ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಆತಿಥೇಯ ಟೀಂ ಇಂಡಿಯಾ ಅಜೇಯವಾಗಿ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಈ ಮೂಲಕ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 6 ವಿಕೆಟ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತದ ವಿಶ್ವಕಪ್ ಗೆಲ್ಲುವ ಕನಸನ್ನು ನುಚ್ಚುನೂರು ಮಾಡಿತ್ತು. ಇದರ ಬೆನ್ನಲ್ಲೇ ರಜಾಕ್, ಭಾರತ ವಿಶ್ವಕಪ್ ಸೋತಿದ್ದು ಒಳ್ಳೆಯದ್ದೇ ಆಯಿತು ಎಂದು ವ್ಯಂಗ್ಯವಾಡಿದ್ದಾರೆ.
ವಿಶ್ವಕಪ್ ಫೈನಲ್: ಟೀವಿಯಲ್ಲಿ 30 ಕೋಟಿ ಮಂದಿ ವೀಕ್ಷಣೆ..!
ಪಾಕಿಸ್ತಾನ ಟಿವಿ ಚಾನೆಲ್‌ವೊಂದರ ಹಸ್ನಾ ಮನಾ ಹೈ ಎನ್ನುವ ಶೋನಲ್ಲಿ ಭಾಗವಹಿಸಿ ಮಾತನಾಡಿರುವ ರಜಾಕ್, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿತ್ತು ಹಾಗೂ ಇಂತಹ ಪ್ರತಿಷ್ಠಿತ ಟೂರ್ನಿಯನ್ನು ಆತಿಥೇಯ ದೇಶವು ಗೆದ್ದಿದ್ದರೂ ಅದು ನಿಜಕ್ಕೂ ಕ್ರೀಡೆಯ ದುರಂತ ಎನಿಸಿಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ.
"ಒಂದು ವೇಳೆ ಭಾರತ ವಿಶ್ವಕಪ್ ಗೆದ್ದಿದ್ದರೆ, ನಮಗೆ ನಿಜಕ್ಕೂ ಬೇಸರವಾಗುತ್ತಿತ್ತು. ಯಾಕೆಂದರೆ ಅವರು ತವರಿನ ಮೈದಾನದ ಲಾಭವನ್ನು ಬಳಸಿಕೊಂಡಂತೆ ಆಗುತ್ತಿತ್ತು. ಒಂದು ಸೆಮಿಫೈನಲ್ ಪಂದ್ಯದಲ್ಲಿ ಅವರು 400 ರನ್ ಬಾರಿಸಿದರೆ, ಎದುರಾಳಿ ತಂಡ 350 ರನ್ ಗಳಿಸಿತು. ಅದೇ ರೀತಿ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ 220-230 ರನ್ ಗಳಷ್ಟೇ ದಾಖಲಾದವು. ಇನ್ನು ಫೈನಲ್ ಪಂದ್ಯದಲ್ಲಿ 240 ರನ್ ದಾಖಲಾಯಿತು. ಅದರರ್ಥ ಎಲ್ಲೋ ಏನೋ ಯಡವಟ್ಟಾಗಿದೆ ಎಂದು. ಪಿಚ್‌ಗಳು ಹಾಗೂ ವಾತಾವರಣಗಳು ಯಾವಾಗಲೂ ನ್ಯಾಯಸಮ್ಮತವಾಗಿರಬೇಕು. ಪಿಚ್‌ಗಳು ಯಾವಾಗಲೂ ಎರಡು ತಂಡಗಳು ಸಮಬಲದ ಹೋರಾಟ ನೀಡುವಂತೆ ನಿರ್ಮಾಣ ಮಾಡಬೇಕು. ಒಂದು ವೇಳೆ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರೇ, ಆಗ ಭಾರತ ವಿಶ್ವಕಪ್ ಗೆಲ್ಲುತ್ತಿತ್ತು" ಎಂದು ಹೇಳಿದ್ದಾರೆ.
2024ರ ಐಪಿಎಲ್‌ನಿಂದ ಹಿಂದೆ ಸರಿದ ಬೆನ್ ಸ್ಟೋಕ್ಸ್..!
ಇನ್ನು ವಿಶ್ವಕಪ್ ಫೈನಲ್ ಪಂದ್ಯವನ್ನು ಒಂದು ಕ್ಷಣ ನೆನಪಿಸಿಕೊಳ್ಳುವುದಾದರೇ, ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಶುಭ್‌ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ತಲಾ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ರೋಹಿತ್ ಶರ್ಮಾ ಚುರುಕಿನ 47 ರನ್ ಸಿಡಿಸಿದರು. ಇನ್ನು ವಿರಾಟ್ ಕೊಹ್ಲಿ(54) ಹಾಗೂ ಕೆ ಎಲ್ ರಾಹುಲ್(66) ಅರ್ಧಶತಕ ಸಿಡಿಸಿದರು. ಅಂತಿಮವಾಗಿ ಟೀಂ ಇಂಡಿಯಾ 240 ರನ್ ಬಾರಿಸಿ ಸರ್ವಪತನ ಕಂಡಿತು.
ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಒಂದು ಹಂತದಲ್ಲಿ 47 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತಾದರೂ, ಆ ಬಳಿಕ ಟ್ರಾವಿಸ್ ಹೆಡ್ ಬಾರಿಸಿದ ಆಕರ್ಷಕ ಶತಕ(137) ಹಾಗೂ ಮಾರ್ನಸ್ ಲಬುಶೇನ್ ಬಾರಿಸಿದ ಅಜೇಯ ಅರ್ಧಶತಕ(58)ದ ನೆರವಿನಿಂದ ಇನ್ನೂ 7 ಓವರ್ ಬಾಕಿ ಇರುವಂತೆಯೇ 6 ವಿಕೆಟ್ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.