* ಅಮೆರಿಕಾದಲ್ಲಿ 10 ಲಕ್ಷ ಡಾಲರ್‌ ಸಂಗ್ರಹಿಸಿದ ಮೊದಲ ಕನ್ನಡ ಸಿನಿಮಾ* ಕೆಜಿಎಫ್‌ 2 ಇತಿಹಾಸ: ಮೊದಲ ದಿನವೇ 250 ಕೋಟಿ ಗಳಿಕೆ* ವಿಶ್ವಾದ್ಯಂತ 10 ಸಾವಿರಕ್ಕೂ ಹೆಚ್ಚು ಪ್ರದರ್ಶನ* ಬುಕ್‌ ಮೈ ಶೋದಲ್ಲಿ 29 ಲಕ್ಷ ಟಿಕೆಟ್‌ ಅಡ್ವಾನ್ಸ್‌ ಬುಕಿಂಗ್‌* ದೇಶದ ಬಹುತೇಕ ವಿಮರ್ಶಕರಿಂದ 4 ಸ್ಟಾರ್‌ ರೇಟಿಂಗ್‌ 

ಬೆಂಗಳೂರು(ಏ,15): ಗುರುವಾರ ಬಿಡುಗಡೆಯಾದ ‘ಕೆಜಿಎಫ್‌ 2’ ಸಿನಿಮಾ ಇತಿಹಾಸ ಸೃಷ್ಟಿಸಿದೆ. ಯಶ್‌ ನಟನೆಯ ಈ ಸಿನಿಮಾ ಮೊದಲ ದಿನವೇ ವಿಶ್ವಾದ್ಯಂತ ರು.250 ಕೋಟಿಗೂ ಅಧಿಕ ಕಲೆಕ್ಷನ್‌ ದಾಖಲಿಸಿದೆ. ದೇಶದ ನಾನಾ ಭಾಗದ ಬಹುತೇಕ ವಿಮರ್ಶಕರು 4 ಸ್ಟಾರ್‌ ಕೊಟ್ಟು, ಕನ್ನಡ ಸಿನಿಮಾದ ಅಗಾಧ ವೈಭವ ಮೆಚ್ಚಿ ಕೊಂಡಾಡಿದ್ದಾರೆ. ತೆಲುಗು, ಮಲಯಾಳಂ, ಹಿಂದಿ ಭಾಷೆಯ ಅಭಿಮಾನಿಗಳು ಅಭೂತಪೂರ್ವವಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಅಮೆರಿಕಾ ಒಂದರಲ್ಲೇ ಮೊದಲ ದಿನವೇ 10 ಲಕ್ಷ ಡಾಲರ್‌ ಗಳಿಸಿದ ಮೊದಲ ಕನ್ನಡ ಸಿನಿಮಾ ಎಂಬ ಕೀರ್ತಿಗೂ ಕೆಜಿಎಫ್‌ 2 ಪಾತ್ರವಾಗಿದೆ.

"

ಪ್ರಶಾಂತ್‌ ನೀಲ್‌ ನಿರ್ದೇಶನದ, ವಿಜಯ್‌ ಕಿರಗಂದೂರು ನಿರ್ಮಾಣದ ‘ಕೆಜಿಎಫ್‌ 2’ ದೇಶಾದ್ಯಂತ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಂಡಿತ್ತು. ದಕ್ಷಿಣ ಭಾರತದಲ್ಲಿ 2600 ಸ್ಕ್ರೀನ್‌ಗಳಲ್ಲಿ ಶೋ ನಿಗದಿಯಾಗಿತ್ತು. ಹಿಂದಿ ಭಾಷೆಯಲ್ಲಿ ಅತಿ ಹೆಚ್ಚು ಪ್ರದರ್ಶನಗಳು ಇದ್ದುವು. ಬಹುತೇಕ ಕಡೆಗಳಲ್ಲಿ ಮುಂಜಾವು 4 ಗಂಟೆಗೆ ಮೊದಲ ಪ್ರದರ್ಶನ ಇತ್ತು. ಬೆಂಗಳೂರಲ್ಲಿ ಮೊದಲ ಪ್ರದರ್ಶನ 12 ಗಂಟೆಗೆ ನಿಗದಿಯಾಗಿತ್ತು. ಸಿನಿಮಾ ನೋಡಿ ಬಂದ ಬಹುತೇಕ ಅಭಿಮಾನಿಗಳು ‘ಕೆಜಿಎಫ್‌ 2’ ಮೆಚ್ಚಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಪರಭಾಷೆಯಲ್ಲಂತೂ ಮೂಲ ಕನ್ನಡ ಚಿತ್ರವೊಂದಕ್ಕೆ ಈ ರೀತಿಯ ಸ್ವಾಗತ ದೊರೆತಿದ್ದು ಇದೇ ಮೊದಲು.

ಹಿಂದಿ ಗಳಿಕೆ 100 ಕೋಟಿ:

ದೇಶದ ನಾನಾ ಭಾಗದ ಸಿನಿಮಾ ವಿಮರ್ಶಕರು ಚಿತ್ರಕ್ಕೆ 4 ಸ್ಟಾರ್‌ ಕೊಟ್ಟು ಚಿತ್ರವನ್ನು ಕೊಂಡಾಡಿದ್ದಾರೆ. ದಕ್ಷಿಣ ಭಾರತದ, ಕನ್ನಡ ಸಿನಿಮಾ ಈ ಮಟ್ಟಿಗೆ ಜನಪ್ರೀತಿ ಗಳಿಸಿದ್ದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದರಂತೆ ಅದ್ಭುತ ಎನ್ನುವ ರೀತಿಯಲ್ಲಿ ಕಲೆಕ್ಷನ್‌ ಆಗಿದೆ. ಹಿಂದಿ ಪ್ರದರ್ಶನಗಳಿಂದಲೇ 100 ಕೋಟಿ ರು.ಗೂ ಹೆಚ್ಚು ಕಲೆಕ್ಷನ್‌ ಆಗಿರುವ ಲೆಕ್ಕಾಚಾರ ಇದೆ. ದಕ್ಷಿಣ ಭಾರತದಲ್ಲಿ ಎಲ್ಲಾ ಭಾಷೆಯ ಪ್ರದರ್ಶನಗಳನ್ನು ಸೇರಿಸಿ ಸುಮಾರು ರು.120 ಕೋಟಿ ಸಂಗ್ರಹವಾಗಿರುವ ನಿರೀಕ್ಷೆ ಇದೆ. ಅಮೆರಿಕಾ ದೇಶವೊಂದರಲ್ಲಿಯೇ 10 ಲಕ್ಷ ಡಾಲರ್‌ (7.5 ಕೋಟಿ ರು.) ಸಂಗ್ರಹವಾಗಿದೆ. ಇನ್ನುಳಿದ ದೇಶಗಳಲ್ಲಿ ರು.20 ಕೋಟಿ ಸಂಗ್ರಹವಾಗಿದೆ. ಒಟ್ಟಾರೆ ಸಿನಿಮಾ ರು.250 ಕೋಟಿಗೂ ಹೆಚ್ಚು ಗಳಿಕೆ ದಾಖಲಿಸಿದೆ.

ಇದಲ್ಲದೇ ಅಡ್ವಾನ್ಸ್‌ ಬುಕಿಂಗ್‌ನಲ್ಲಿಯೂ ಕೆಜಿಎಫ್‌ 2 ದಾಖಲೆ ಬರೆದಿದೆ. ಬುಕ್‌ ಮೈ ಶೋ ಒಂದರಲ್ಲೇ 29 ಲಕ್ಷ ಬುಕಿಂಗ್‌ ಆಗಿದೆ. ಆ ಲೆಕ್ಕದಲ್ಲಿ ಪೇಟಿಎಂನಲ್ಲಿ ಬುಕಿಂಗ್‌ ಆದ ಸಂಖ್ಯೆಗಳ ಲೆಕ್ಕ ಸೇರಿಲ್ಲ. ಮೊದಲ ದಿನದ ಪ್ರೇಕ್ಷಕರ ಅಭಿಪ್ರಾಯ ಆಧರಿಸಿ ವಾರಾಂತ್ಯದಲ್ಲಿ ಇದೇ ರೀತಿ ಜನ ಸಿನಿಮಾ ನೋಡುವ ನಿರೀಕ್ಷೆ ಇದೆ. ಹಾಗಾಗಿ ಮೊದಲ ವಾರದಲ್ಲಿಯೇ ಕೆಜಿಎಫ್‌ 2 ಅನೇಕ ದಾಖಲೆಗಳನ್ನು ಮುರಿಯಲಿದೆ.

ಕರ್ನಾಟಕದಲ್ಲಿ 2500 ಶೋ:

ಕರ್ನಾಟಕದಲ್ಲಿಯೇ ಸುಮಾರು 2500ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದ್ದು, ಅದರಿಂದಲೇ ಸುಮಾರು ರು.25 ಕೋಟಿ ಕಲೆಕ್ಷನ್‌ ಆಗಿದೆ ಎನ್ನಲಾಗಿದೆ. ಆ ನಿಟ್ಟಿನಲ್ಲಿ ಮೊದಲ ದಿನ ಈ ಮಟ್ಟದ ಗಳಿಕೆ ಕಂಡ ದಾಖಲೆ ಬರೆದಿದೆ. ಕೆಲವು ಕಡೆ ಸಿಂಗಲ್‌ ಸ್ಕ್ರೀನ್‌ಗಳಲ್ಲಿ ಅಭಿಮಾನಿಗಳು ನಿಂತುಕೊಂಡೇ ಸಿನಿಮಾ ನೋಡಿದ್ದಾರೆ. ‘ಕೆಜಿಎಫ್‌ 2’ ಜೊತೆಗೆ ತಮಿಳಿನ ವಿಜಯ್‌ ಅವರ ‘ಬೀಸ್ಟ್‌’ ಸಿನಿಮಾ ತೆರೆ ಕಂಡಿದ್ದು, ಮೊದಲ ದಿನವೇ ಅಭಿಮಾನಿಗಳ ನೀರಸ ಪ್ರತಿಕ್ರಿಯೆಯಿಂದಾಗಿ ‘ಕೆಜಿಎಫ್‌ 2’ ಸಿನಿಮಾ ಇನ್ನಷ್ಟುಹೆಚ್ಚು ಜನ ನೋಡುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಕನ್ನಡದ ಸಿನಿಮಾ ‘ಕೆಜಿಎಫ್‌ 2‘ ಸಿನಿಮಾ ಭಾರತದ ಸಿನಿಮಾ ಇತಿಹಾಸದಲ್ಲಿ ಹೊಸತೊಂದು ಅಧ್ಯಾಯ ತೆರೆದಿದೆ.

ರಾಜ್ಯಾದ್ಯಂತ ಭರ್ಜರಿ ಗಳಿಕೆ

ಬೆಂಗಳೂರಿನಲ್ಲಿ 80ಕ್ಕೂ ಹೆಚ್ಚು ಸಿಂಗಲ್‌ ಥಿಯೇಟರ್‌ಗಳಲ್ಲಿ ಹಾಗೂ 150 ರಿಂದ 200 ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳಲ್ಲಿ ಕೆಜಿಎಫ್‌ 2 ಬಿಡುಗಡೆ ಆಗಿದೆ. ಊರ್ವಶಿ ಚಿತ್ರಮಂದಿರ ನಡುರಾತ್ರಿ 12 ಗಂಟೆಗೆ ಮೊದಲ ಪ್ರದರ್ಶನ ದಾಖಲಾಯಿತು. ವೀರೇಶ್‌ ಚಿತ್ರಮಂದಿರದಲ್ಲಿ ಕೆಜಿಎಫ್‌ 2 ಬದಲಿಗೆ 20 ನಿಮಿಷಗಳ ಕಾಲ ಕೆಜಿಎಫ್‌ 1 ಪ್ರದರ್ಶನಗೊಂಡು, ಅನಂತರ ಬದಲಿಸಲಾಗಿದೆ. ತುಮಕೂರಿನಲ್ಲಿ ಬೆಳಗಿನ ಜಾವ 2.30 ಕ್ಕೆ ಮೊದಲ ಪ್ರದರ್ಶನ ಆಯೋಜಿಸಲಾಗಿತ್ತು. ಮುಂಗಡ ಬುಕಿಂಗ್‌ ಪಡೆದವರು ಮಾತ್ರ ಸಿನಿಮಾ ನೋಡಲು ಸಾಧ್ಯವಾಯಿತು. ಟಿಕೆಟ್‌ ಸಿಗಬಹುದೆಂಬ ಕಾತುರದಲ್ಲಿ ಜನ ಥಿಯೇಟರ್‌ ಕಡೆ ಮುಖ ಮಾಡಿ ನಿರಾಶೆಯಿಂದ ವಾಪಸ್‌ ಆಗುತ್ತಿದ್ದರು. ಬಳ್ಳಾರಿಯಲ್ಲಿ ಮುಂಜಾನೆ 3.45 ಗಂಟೆಗೇ ಮೊದಲ ಪ್ರದರ್ಶನ ಇತ್ತು. ವಿಜಯನಗರ ಜಿಲ್ಲೆಯಲ್ಲಿ ಒಟ್ಟು 31 ಶೋ ಪ್ರದರ್ಶನಗಳು ಇದ್ದವು. ಹಾವೇರಿ 40 ಪ್ರದರ್ಶನ, ಕೊಪ್ಪಳ 52 ಪ್ರದರ್ಶನ, ಧಾರವಾಡ 48 ಶೋ, ಬೆಳಗಾವಿಯಲ್ಲಿ 60 ಪ್ರದರ್ಶನ ಹೀಗೆ ರಾಜ್ಯದ ನಾನಾ ಭಾಗದಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತೆಲುಗು ಅಭಿಮಾನಿಯ ಕಣ್ಣೀರು

ಕೆಜಿಎಫ್‌ 2 ವೀಕ್ಷಿಸಿದ ತೆಲುಗು ಅಭಿಮಾನಿಯೊಬ್ಬರು ಬಿಕ್ಕಿ ಬಿಕ್ಕಿ ಅಳುತ್ತಾ, ಯಶ್‌ ಮತ್ತು ಪ್ರಶಾಂತ್‌ ನೀಲ್‌ರನ್ನು ಕೊಂಡಾಡುವ ವಿಡಿಯೋ ವೈರಲ್‌ ಆಗಿತ್ತು. ತಮಿಳು ಪ್ರೇಕ್ಷಕರು ಕೂಡ ಚಿತ್ರಮಂದಿರದಿಂದ ಹೊರಬರುವ ಹೊತ್ತಿಗೆ ಚಿತ್ರದ ಮೋಡಿಗೆ ಒಳಗಾಗಿ ಆರ್ಭಟಿಸುತ್ತಿದ್ದರು. ಚಿತ್ರದ ಕುರಿತು ಎಲ್ಲಾ ಭಾಷೆಗಳನ್ನೂ ಅತ್ಯುತ್ತಮ ಅಭಿಪ್ರಾಯ ದಾಖಲಾಗಿದೆ.