ರಾಯಲ್ ಆಗಿದ್ದೇನೆ, ದರ್ಶನ್ ನನಗೇಕೆ ಆಸ್ತಿ ಕೊಡಿಸಬೇಕು?: ಸೋದರ ದಿನಕರ್ ತೂಗುದೀಪ
10 ವರ್ಷ ಹಿಂದೆಯೇ ಫಾರ್ಚೂನರ್ ಕಾರು ಖರೀದಿಸಿದ್ದವ ನಾನು. ಮನೆಯಲ್ಲಿದ್ದರೂ ರಾಯಲ್ ಆಗಿ ಬದುಕುವಷ್ಟು ಶಕ್ತಿ ಇದೆ. ಸ್ವಂತ ಮನೆ ಖರೀದಿಸೋದು ನನಗೆ ಕಷ್ಟ ಇಲ್ಲ. ದರ್ಶನ್ ಚಿಕಿತ್ಸೆಗೆ 1.5 ತಿಂಗಳು ಬೇಕು ಅಂತಾರೆ ಅವರ ಸೋದರ ದಿನಕರ್.
ಆರ್. ಕೇಶವಮೂರ್ತಿ
ಸ್ವಂತ ಮನೆ, ಕಾರು, ಸಿನಿಮಾ, ದರ್ಶನ್ ಜೊತೆಗಿನ ಬಾಂಧವ್ಯದ ಹಲವು ಪ್ರಶ್ನೆಗಳಿಗೆ ಸಹೋದರ ದಿನಕರ್ ತೂಗುದೀಪ ಮಾತನಾಡಿದ್ದಾರೆ.
ರಾಯಲ್ ಚಿತ್ರ ಹೇಗೆ ಬಂದಿದೆ?
ಹೆತ್ತವರಿಗೆ ಎಲ್ಲವೂ ಮುದ್ದು ಅಂತೀವಲ್ಲ, ಹಾಗೆ ‘ರಾಯಲ್’ ನನ್ನ ಸಿನಿಮಾ. ನಿರ್ಮಾಪಕ ಜಯಣ್ಣ, ಚಿತ್ರದ ನಾಯಕ ವಿರಾಟ್, ನನ್ನ ನಿರ್ದೇಶನದ ತಂಡ, ತಾಂತ್ರಿಕ ವಿಭಾಗ.. ಹೀಗೆ ಎಲ್ಲರಿಗೂ ಖುಷಿ ಕೊಟ್ಟಿದೆ. ಇಲ್ಲಿವರೆಗೂ ನಮ್ಮ ಚಿತ್ರವಾಗಿ ನಮಗೆ ತೃಪ್ತಿ ಕೊಟ್ಟಿದೆ. ಬಿಡುಗಡೆ ಆದ ಮೇಲೆ ಅದು ಪ್ರೇಕ್ಷಕರ ಸಿನಿಮಾ ಆಗುತ್ತದೆ ಎನ್ನುವ ನಂಬಿಕೆ ಇದೆ. ಜನವರಿ 22ಕ್ಕೆ ಚಿತ್ರ ತೆರೆಗೆ ಬರಲಿದೆ.
ಚಿತ್ರದಲ್ಲಿ ಅಂಥ ಭರವಸೆ ಮೂಡಿಸಿರೋದು ಏನು?
ಚಿತ್ರದ ಕತೆ. ತಾಯಿ ಮತ್ತು ಮಗನ ನಡುವಿನ ಕತೆಯನ್ನು ಹೇಳುವ ಸಿನಿಮಾ ಇದು. ತಾಯಿ ಮತ್ತು ಮಗನ ನಡುವಿನ ವಾತ್ಸಲ್ಯಕ್ಕೆ ಸೋಲು ಇರಲ್ಲ. ಇದರ ಜತೆಗೆ ಕಾಮಿಡಿ, ಆ್ಯಕ್ಷನ್, ಥ್ರಿಲರ್ ಕೂಡ ಇದೆ. ಈ ಜನರೇಷನ್‌ಗೆ ತುಂಬಾ ಹತ್ತಿರವಾಗುವ ಪ್ರೇಮ ಕತೆಯೂ ಇಲ್ಲಿದೆ. ಇದೆಲ್ಲವೂ ತಾಯಿ, ಮಗನ ಕತೆಯ ಮೂಲಕ ತೆರೆದುಕೊಳ್ಳುತ್ತವೆ. ಈಗ ಹಾಡುಗಳು ಬಿಡುಗಡೆ ಆಗುತ್ತಿವೆ. ಈಗಷ್ಟೇ ಮೂರನೇ ಹಾಡು ಬಂದಿದೆ. ತುಂಬಾ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ.
ಸ್ಟಾರ್ ನಟರ ಜತೆಗೆ ಸಿನಿಮಾ ಮಾಡಿದವರು ನೀವು. ಹೊಸ ನಟನ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಹೇಗಿತ್ತು?
ಸವಾಲಾಗಿತ್ತು. ಕ್ರಿಯೇಟಿವಿಗೆ ಹೆಚ್ಚು ಅವಕಾಶ ಇತ್ತು. ಹಾಗಂತ ನಾನು ಸ್ಟಾರ್ ಚಿತ್ರವನ್ನು ಒಂದು ರೀತಿ, ಹೊಸಬರ ಚಿತ್ರವನ್ನು ಒಂದು ರೀತಿ ನೋಡಲ್ಲ. ದೊಡ್ಡ ನಟನ ಚಿತ್ರಕ್ಕೆ ಹಾಕುವ ಶ್ರಮ ಹೊಸಬರ ಚಿತ್ರಕ್ಕೂ ಹಾಕುತ್ತೇನೆ. ಒಬ್ಬ ನಿರ್ದೇಶಕನಾಗಿ ಎಲ್ಲರ ಜತೆಗೂ ಸಿನಿಮಾ ಮಾಡಬೇಕು ಎಂಬುದು ನನ್ನ ಅಭಿಪ್ರಾಯ.
ನಿಮ್ಮ ಈ ಕಾಂಬಿನೇಶನ್ ಶುರುವಾಗಿದ್ದು ಹೇಗೆ?
ನಾನು ಪುನೀತ್‌ರಾಜ್‌ಕುಮಾರ್ ಅವರಿಗೆ ಒಂದು ಸಿನಿಮಾ ಮಾಡಬೇಕಿತು. ಅದಕ್ಕೆ ಜಯಣ್ಣ ಅವರೇ ನಿರ್ಮಾಪಕರು. ಆದರೆ, ಅಪ್ಪು ಅವರು ನಮ್ಮನ್ನು ಬಿಟ್ಟು ಹೋದರು. ಆ ಸಿನಿಮಾ ಆಗಲಿಲ್ಲ. ಆಗಲೇ ಜಯಣ್ಣ, ನಾನು ವಿರಾಟ್ ಜತೆಗೆ 5 ಚಿತ್ರ ಮಾಡುವ ಪ್ಲಾನ್ ಇದೆ. ಒಂದು ಚಿತ್ರವನ್ನು ನೀವೇ ಮಾಡಿಕೊಡಿ ಅಂತ ಕೇಳಿದರು. ಹಾಗೆ ನಾನು ವಿರಾಟ್‌ನ ‘ರಾಯಲ್’ ಚಿತ್ರಕ್ಕೆ ನಿರ್ದೇಶಕನಾದೆ. ಈ ಚಿತ್ರದ ಕತೆ ರಘು ನಿಡುವಳ್ಳಿ ಅವರದ್ದು.
ಪುನೀತ್ ಅವರಿಗೆ ಮಾಡಿಕೊಂಡಿದ್ದ ಸಿನಿಮಾ ಸಂಗತಿ ಏನು?
ಆ ಚಿತ್ರದ ಕತೆ ಕೇಳಿ ಪುನೀತ್ ಅವರೇ ತುಂಬಾ ಖುಷಿ ಪಟ್ಟಿದ್ದರು. ಇಂಥ ಸ್ಕ್ರಿಪ್ಟ್ ಇರುವ ಸಿನಿಮಾಗಾಗಿ ಕಾಯುತ್ತಿದ್ದೇನೆ ಅಂತ ಹೇಳಿದ್ದರು. ಖಂಡಿತ ಆ ಚಿತ್ರ ಬೇರೆಯವರ ನಟನೆಯಲ್ಲಿ ಬರುತ್ತದೆ. ಯಾಕೆಂದರೆ ಪುನೀತ್ ಅವರು ಆಸೆ ಪಟ್ಟಿದ್ದ ಕತೆ. ಅದು ಜನರ ಮುಂದೆ ಬರಬೇಕು ಎಂಬುದು ನನ್ನ ಕನಸು.
ದರ್ಶನ್ ಅವರ ಜತೆಗೆ ಸಿನಿಮಾ ಮಾಡೋ ಪ್ಲಾನ್ ಇನ್ನೂ ಇದಿಯಾ?
ಖಂಡಿತ ಇದೆ. ಅದರಲ್ಲಿ ಯಾವ ಬದಲಾವಣೆಯೂ ಇಲ್ಲ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕು ಅಂದರೆ 2026ಕ್ಕೆ ದರ್ಶನ್ ಅವರ ನಟನೆಯಲ್ಲಿ ನನ್ನ ನಿರ್ದೇಶನದ ಚಿತ್ರ ಸೆಟ್ಟೇರಲಿದೆ. ಇದರಲ್ಲಿ ಯಾರಿಗೂ ಯಾವ ಅನುಮಾನವೂ ಬೇಡ.
ಹಾಗಾದರೆ ಅದು ‘ಸರ್ವಾಂತರಯಾಮಿ’ ಚಿತ್ರನಾ?
ಇಲ್ಲ. ಬೇರೆ ಮೂರು ಕತೆಗಳನ್ನು ಮಾಡಿಕೊಂಡಿದ್ದೇನೆ. ಯಾಕೆಂದರೆ ‘ಸರ್ವಾಂತರಯಾಮಿ’ ಚಿತ್ರಕ್ಕೆ ಮಾಡಿಕೊಂಡಿದ್ದ ಸಾಕಷ್ಟು ಕತೆ, ದೃಶ್ಯಗಳನ್ನು ಬೇರೆ ಬೇರೆ ಕಡೆ ನಾನೇ ಬಳಸಿಬಿಟ್ಟಿದ್ದೇನೆ. ಹೀಗಾಗಿ ದರ್ಶನ್ ಅವರಿಗೆ ಬೇರೆಯದ್ದೇ ಕತೆ ಮಾಡಿದ್ದೇನೆ.
ಕತೆ ರೆಡಿ ಇದ್ದರೆ 2026ರವರೆಗೂ ಯಾಕೆ ಕಾಯುತ್ತೀರಿ?
ದರ್ಶನ್ ಅವರದ್ದು ಒಂದಿಷ್ಟು ಚಿತ್ರಗಳಿವೆ. ನಾನು ಒಂದಿಷ್ಟು ಪ್ರಾಜೆಕ್ಟ್‌ಗಳನ್ನು ಮಾಡಬೇಕಿದೆ. ಜತೆಗೆ ನಮ್ಮ ಅಕ್ಕನ ಮಗ ಚಂದುನನ್ನು ನಾನೇ ಲಾಂಚ್ ಮಾಡಬೇಕು. ನಮ್ಮ ಬ್ಯಾನರ್‌ನಲ್ಲೇ ಚಿತ್ರ ಮಾಡಬೇಕಿದೆ. ಚಂದುನನ್ನು ಲಾಂಚ್ ಮಾಡಿದ ನಂತರ ದರ್ಶನ್ ಅವರ ಜತೆಗಿನ ಸಿನಿಮಾ ಬಗ್ಗೆ ತಯಾರಿ ಮಾಡಿಕೊಳ್ಳಬೇಕಿದೆ. ಅದಕ್ಕೆ ಸಮಯ ಬೇಕು.
ಒಡಹುಟ್ಟಿದ ತಮ್ಮನಿಗೆ ವಾಸಕ್ಕೆ ಮನೆ ಇಲ್ಲ. ದಿನಕರ್ ಸಿಂಗಲ್ ರೂಮ್ ಬಾಡಿಗೆ ಮನೆಯಲ್ಲಿದ್ದಾರೆ, ದರ್ಶನ್ ಅವರು ಬೇರೆಯವರಿಗೆ 10 ಕೋಟಿ ಮನೆ ಕೊಡಿಸಿದ್ದಾರೆ... ದರ್ಶನ್ ಅವರು ಜೈಲಿಗೆ ಹೋದ ಸಂದರ್ಭದಲ್ಲಿ ಓಡಾಡಿದ ಈ ಸುದ್ದಿ ಬಗ್ಗೆ ಏನು ಹೇಳುತ್ತೀರಿ?
ಸುಖಾಸುಮ್ಮನೇ ಹೀಗೆ ಓಡಾಡುವ ಸುದ್ದಿಗಳಿಗೆ, ಹಬ್ಬಿಸುವ ವದಂತಿಗಳಿಗೆ ಉತ್ತರ ಕೊಟ್ಟುಕೊಂಡು ಕೂರಕ್ಕೆ ಆಗುತ್ತಾ ಹೇಳಿ? ಅಲ್ಲದೆ ಇಲ್ಲಿವರೆಗೂ ನಮ್ಮ ಬಗ್ಗೆ ಮಾಡಿರುವ ಸುದ್ದಿಗಳಲ್ಲಿ ಎಷ್ಟು ನಿಜ ಇತ್ತು ಅಥವಾ ಇದೆ ಹೇಳಿ. ಮಾತಾಡೋರು ಮಾತನಾಡಲಿ. ಸಮಯ ಬಂದಾಗ ಸತ್ಯ ಗೊತ್ತಾಗುತ್ತದೆ.
ಹಾಗಾದರೆ ಸತ್ಯ ಏನೂ?
‘ಜೊತೆ ಜೊತೆಯಲಿ’ ಸಿನಿಮಾ ನಿರ್ಮಿಸಿದ್ದು ನಾನೇ. ಆಗ ನಮ್ಮ ತಾಯಿ ಒಂದು ಮಾತು ಹೇಳಿದರು, ‘ನಿಮ್ಮ ತಂದೆ ಜೀವಪೂರ್ತಿ ದುಡಿದ ದುಡ್ಡನ್ನು ನೀನು ಒಂದೇ ಚಿತ್ರದಲ್ಲಿ ದುಡಿದೆ’ ಅಂತ. ‘ಬುಲ್ ಬುಲ್’, ‘ನವಗ್ರಹ’ ಸೇರಿ ಇಲ್ಲಿವರೆಗೂ ನಾನು 3 ಸಿನಿಮಾ ನಿರ್ಮಿಸಿದ್ದೇನೆ. ಮುೂರು ಬ್ಲಾಕ್ ಬಾಸ್ಟರ್ ಹಿಟ್. ಹತ್ತು ವರ್ಷಗಳ ಹಿಂದೆಯೇ ಫಾರ್ಚುನರ್ ಕಾರು ತೆಗೆದುಕೊಂಡಿದ್ದೇನೆ. ನಾಳೆಯೇ ನಾನು ಸಿನಿಮಾ ಮಾಡಲ್ಲ ಅಂತ ಮನೆಯಲ್ಲಿ ಕೂತರೂ ರಾಯಲ್ ಆಗಿಯೇ ಬದುಕುತ್ತೇನೆ. ಈಗ ಹೇಳಿ ನನಗೆ ಸ್ವಂತ ಮನೆ ಮಾಡಿಕೊಳ್ಳೋದು ಕಷ್ಟನಾ? ದರ್ಶನ್ ನನಗೆ ಮನೆ ಕೂಡ ಮಾಡಿಕೊಟ್ಟಿಲ್ಲ ಅಂತಾರಲ್ಲ, ಅವರಿಗೆ ಒಂದು ಮಾತು ಹೇಳುತ್ತೇನೆ. ಯಾವುದಾದರೂ ಮನೆ, ಪ್ರಾಪರ್ಟಿ ತೋರಿಸಿ ನನಗೆ ಇದು ಬೇಕು ದರ್ಶನ್ ಅಂದರೆ ಐದು ನಿಮಿಷ ಯೋಚನೆ ಕೂಡ ಮಾಡದೆ ನನಗೆ ಕೊಡಿಸುತ್ತಾನೆ.
ಬಹುಶಃ ನೀವು ದರ್ಶನ್ ಅವರಿಂದ ಮನೆ, ಸೈಟು ಮಾಡಿಸಿಕೊಂಡಿದ್ದರೆ ಈ ಮಾತು ಬರುತ್ತಿರಲಿಲ್ಲವೆನೋ?
ನಾನು ಯಾಕೆ ಮಾಡಿಸಿಕೊಳ್ಳಬೇಕು. ನಾನು ತುಂಬಾ ಸ್ವಾಭಿಮಾನಿ. ಯಾರ ಮುಂದೆಯೂ ನಾನು ಕೈ ಒಡ್ಡಲ್ಲ. ಇನ್ನೂ ದರ್ಶನ್ ಸೆಲ್ಪ್ ಮೇಡ್ ವ್ಯಕ್ತಿ. ನನ್ನದು ಅದೇ ರಕ್ತ. ನನ್ನ ದುಡಿಮೆಯಲ್ಲಿ ನಾನು ಬದುಕಬೇಕು, ನನ್ನ ದುಡಿಮೆ, ನನ್ನ ಕುಟುಂಬ, ನನ್ನ ಮಕ್ಕಳು ಅಂತ ಯೋಚನೆ ಮಾಡುತ್ತೇನೆ. ದರ್ಶನ್‌ಗೆ ನಾನೇ ಸಂಭಾವನೆ ಕೊಟ್ಟು ಸಿನಿಮಾ ಮಾಡುವಷ್ಟು ಶಕ್ತಿ ಇದ್ದಾಗ ದರ್ಶನ್ ನನಗೆ ಯಾಕೆ ಆಸ್ತಿ ಮಾಡಿ ಕೊಡಬೇಕು ಅಥವಾ ಕೊಡಿಸಬೇಕು?
ದರ್ಶನ್ ಅವರು ಯಾವಾಗ ಸಿನಿಮಾ ಶೂಟಿಂಗ್‌ಗೆ ಹಾಜರಾಗಬಹುದು?
ಈ ಬಗ್ಗೆ ನಾವು ಇನ್ನೂ ಮಾತನಾಡಿಕೊಂಡಿಲ್ಲ. ಯಾಕೆಂದರೆ ಅವರಿಗೆ ಚಿಕಿತ್ಸೆ ಆಗಬೇಕಿದೆ. ಅದಕ್ಕೆ ಒಂದುವರೆ ತಿಂಗಳು ಬೇಕಾಗುತ್ತದೆ ಅಂತ ಹೇಳುತ್ತಿದ್ದಾರೆ. ಹೀಗಾಗಿ ಈಗಲೇ ಆ ಬಗ್ಗೆ ಏನೂ ಹೇಳಲಾರೆ.
ನಿಮ್ಮ ನಿರ್ಮಾಣದ ‘ನವಗ್ರಹ’ ಮರು ಬಿಡುಗಡೆ ಆಗಿತ್ತು. ರೆಸ್ಪಾನ್ಸ್ ಹೇಗಿತ್ತು?
ಇತ್ತೀಚೆಗೆ ಮರು ಬಿಡುಗಡೆ ಆದ ಚಿತ್ರಗಳ ಪೈಕಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರ ನಮ್ಮ ‘ನವಗ್ರಹ’. ಮೊದಲ ಚಿತ್ರ ಪುನೀತ್‌ರಾಜ್‌ಕುಮಾರ್ ಅವರ ‘ಜಾಕಿ’. ತುಂಬಾ ಖುಷಿ ಕೊಟ್ಟಿಗೆ.