ಐಶ್ವರ್ಯಾ ರೈ ಮಂಗಳೂರು ಮೂಲದ ಬೆಕ್ಕಿನ ಕಣ್ಣಿನ ಸುಂದರಿ. ಬೆಳೆದದ್ದೆಲ್ಲ ಬಾಂಬೆಯಲ್ಲೇ ಆದರೂ ಆಕೆ ತನ್ನ ಹುಟ್ಟೂರನ್ನು ಮರೆತಿಲ್ಲ. ತನ್ನೂರಿನ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ನೇಮ, ಭೂತಕೋಲದಂಥಾ ಜನಪದೀಯ ಆಚರಣೆಗಳಲ್ಲಿ ಭಾಗವಹಿಸಿದ ಉದಾಹರಣೆಗಳೂ ಇವೆ. ಅಲ್ಲೆಲ್ಲ ಈಕೆಯನ್ನು ಹತ್ತಿರದಿಂದ ಕಂಡವರು ಐಶ್ ಬಗ್ಗೆ ಅಭಿಮಾನದಿಂದ ಮಾತನಾಡುತ್ತಾರೆ. ಐಶ್ವರ್ಯಾ ರೈ ಬಾಲಿವುಡ್ ನ ಅನಭಿಷಿಕ್ತ ರಾಣಿಯಾಗಿ ಮೆರೆದವರು. ಹಾಲಿವುಡ್ ಸಿನಿಮಾಗಳಲ್ಲೂ ಮಿಂಚಿದವರು. ಐಶ್ ಅಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧ ಹೆಸರು. ವಿಶ್ವ ಸುಂದರಿ ಕಿರೀಟ ಧರಿಸಿದ್ದ ಈ ಬ್ಯೂಟಿಫುಲ್ ಲೇಡಿಯ ಬಗ್ಗೆ, ಅವರ ವರ್ತನೆ ಬಗ್ಗೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರವೇ ವ್ಯಕ್ತವಾಗಿದೆ. ಹೃತಿಕ್ ರೋಶನ್ ರಂಥ ಕಲಾವಿದರೂ ಮೊದಲು ಐಶ್ವರ್ಯಾ ಅವರ ಗೌರವ ಕೊಡುವ ಗುಣ, ವಿನಯವನ್ನು ತಪ್ಪಾಗಿ ಅರ್ಥೈಸಿಕೊಂಡು ಆಮೇಲೆ, ಛೇ, ನಾನು ಅಂದುಕೊಂಡ ಹಾಗಲ್ಲವಲ್ಲ ಈಕೆ ಅಂತ ಅಚ್ಚರಿಯಿಂದ ನೋಡಿದ್ದಿದೆ. 

ಆರಾಧ್ಯ ಬರ್ತ್‌ಡೇ: ಬಚ್ಚನ್ ಫ್ಯಾಮಿಲಿ ಬಗ್ಗೆ ನೀವರಿಯದ ಸೀಕ್ರೆಟ್ಸ್! ...

ಈ ಎಲ್ಲರಿಗಿಂತ ಜಯಾ ಬಚ್ಚನ್ ಹೊರತಾದವರಲ್ಲ. ಎಷ್ಟೇ ದೊಡ್ಡ ಫ್ಯಾಮಿಲಿಗೆ ಸೇರಿದವರಾಗಿದ್ದರೂ, ತಮ್ಮ ಕ್ಷೇತ್ರದಲ್ಲಿ ಎಷ್ಟೇ ಎತ್ತರಕ್ಕೆ ಹೋಗಿದ್ದರೂ ಕೆಲವೊಂದು ಮಿತಿಗಳನ್ನು ಮೀರೋದು ಕಷ್ಟ. ಅದರಲ್ಲಿ ಮುಖ್ಯವಾದದ್ದು ಸೊಸೆ ಬಗೆಗಿನ ಭಾವನೆ. ತನಗೊಬ್ಬ ಸೊಸೆ ಬರುತ್ತಿದ್ದಾಳೆ ಅಂದಕೂಡಲೇ ಅತ್ತೆಯಾದವಳ ಮನಸ್ಸಿನ ಒಳಗೊಳಗೇ ಅಸ್ಥಿರತೆಯ ತಾಕಲಾಟ ಶುರುವಾಗುತ್ತದೆ. ಮಗನನ್ನು ತನ್ನಿಂದ ಎಲ್ಲಿ ಕಿತ್ತುಕೊಳ್ತಾಳೋ ಈ ಸೊಸೆ ಅನ್ನೋ ಫೀಲಿಂಗು ಅವರ ನಿದ್ದೆಯನ್ನು ಕಸಿಯುತ್ತದೆ. ಜೊತೆಗೆ ಆಕೆಯ ಪ್ರತಿಯೊಂದು ಕ್ರಿಯೆಯನ್ನೂ ಭೂತಗನ್ನಡಿ ಇಟ್ಟು ನೋಡುವ ಪ್ರವೃತ್ತಿ ಬೆಳೆಯುತ್ತಾ ಹೋಗುತ್ತೆ. ಜಯಾ ಬಚ್ಚನ್ ಎಂಥಾ ದೊಡ್ಡ ವ್ಯಕ್ತಿಯಾದರೂ ಇಂಥಾ ಭಾವನೆಗಳಿರದೇ ಇರೋದಕ್ಕೆ ಸಾಧ್ಯವಿಲ್ಲ. ಆದರೆ ಅವರೆಲ್ಲ ನಿರೀಕ್ಷೆಗಳನ್ನು ತಲುಪಿ, ಅದಕ್ಕೆಲ್ಲೂ ಚ್ಯುತಿ ಬರದ ಹಾಗೆ ನಡೆದುಕೊಂಡವರು ಐಶ್ವರ್ಯಾ ರೈ ಬಚ್ಚನ್. 

ಮಗಳಿಗೊಂದು ಪ್ರೀತಿಯ ಪತ್ರ..! ಪುತ್ರಿಗೆ ಭುವನ ಸುಂದರಿಯ ಬರ್ತ್‌ಡೇ ವಿಶ್ ಇದು ...

'ಅಷ್ಟು ದೊಡ್ಡ ಸ್ಟಾರ್ ಆದರೂ ಆಕೆ ಫ್ಯಾಮಿಲಿಯಲ್ಲಿ ಒಬ್ಬ ವಿಧೇಯ ಸೊಸೆಯ ಹಾಗಿರುತ್ತಾಳೆ. ಹಿರಿಯರನ್ನು ಗೌರವಿಸೋದು ಅವಳ ಸ್ವಭಾವದಲ್ಲೇ ಇದೆ. ಕಾರ್ಯಕ್ರಮದಲ್ಲಿ ಉಳಿದವರೆಲ್ಲ ಮುಂದೆ ನಿಂತಿದ್ದರೆ ಈಕೆ ಹಿಂದೆ ನಿಂತಿರುತ್ತಾಳೆ. ಹೆಚ್ಚಾಗಿ ಮೌನ. ಯಾವ ವಿಚಾರದಲ್ಲೂ ಅನಗತ್ಯ ಮೂಗು ತೂರಿಸುವುದಿಲ್ಲ. ಯಾರನ್ನೂ ಅವಮಾನಿಸುವಂಥಾ ಮಾತನ್ನಾಡುವುದಿಲ್ಲ. ಇದೀಗ ಆರಾಧ್ಯಳಿಗೆ ಪ್ರೀತಿಯ ಅಮ್ಮನಾಗಿದ್ದಾಳೆ. ನನಗೆ ಅವಳನ್ನು ಕಂಡರೆ ಬಹಳ ಪ್ರೀತಿ' ಅಂತ ಜಯಾ ಬಚ್ಚನ್ ಸೊಸೆಯನ್ನು ಹೊಗಳಿದ್ದಾರೆ. 

ಜಯಾ ಐಶ್ ಬೇಬಿಯನ್ನು ಹೊಗಳೋದು ಇದೇ ಮೊದಲಲ್ಲ. ಈ ಹಿಂದೆಯೇ ಕರೀಷ್ಮಾ ಕಪೂರ್ ಸೊಸೆಯಾಗಿ ಬಂದಿದ್ದರೆ ತನ್ನ ಮನೆಯ ಸ್ಥಿತಿ ಏನಾಗುತ್ತಿತ್ತು, ಐಶ್ ಬಂದ ಕಾರಣ ಏನಾಗಿದೆ ಅನ್ನೋದನ್ನು ಜಯಾ ಬಚ್ಚನ್ ಸಾರ್ವಜನಿಕವಾಗಿಯೇ ಹೇಳಿದ್ದರು. ತಮ್ಮ ಸೊಸೆಯನ್ನು ಅಪರಂಜಿ ಎಂಬರ್ಥದಲ್ಲಿ ಹೊಗಳಿದ್ದರು. ಇದೀಗ ಮೊಮ್ಮಗಳು ಆರಾಧ್ಯ ಬರ್ತ್ ಡೇ ದಿನವೂ ಸೊಸೆ, ಮೊಮ್ಮಗಳ ಜೊತೆ ಫೋಟೋಗೆ ಫೋಸ್ ನೀಡಿದ್ದಾರೆ. 

ಹಾಗೆ ನೋಡಿದರೆ ಐಶ್ ಬೇಬಿಗೆ ಮುಂಬೈ, ದುಬೈ ಸೇರಿದಂತೆ ಹಲವೆಡೆ ಐಷಾರಾಮಿ ಮನೆಗಳಿವೆ. ಆದರೆ ಈಕೆ ಮುಂಬೈನ ಅಮಿತಾಬ್ ಬಚ್ಚನ್ ನಿವಾಸದಲ್ಲೇ ಅಭಿಷೇಕ್ ಹಾಗೂ ಆರಾಧ್ಯಾಳೊಡನೆ ವಾಸವಾಗಿದ್ದಾರೆ. ಇನ್ನೊಂದು ಮಜಾ ಅನಿಸೋದು ಈ ಅತ್ತೆ ಸೊಸೆಯರು ತಮ್ಮ ಸೀರೆ ಶೇರ್ ಮಾಡಿಕೊಳ್ಳೋ ರೀತಿ. ಅತ್ತೆ ಉಟ್ಟ ಸೀರೆಯನ್ನು ಐಶ್ವರ್ಯಾ ಉಟ್ಟು ಪಬ್ಲಿಕ್ ಆಗಿ ಕಾಣಿಸಿಕೊಂಡದ್ದಿದೆ. ಸೊಸೆ ಐಶ್ವರ್ಯಾ ರೈಯ ವಾರ್ಡ್ ರೋಬ್ ನಲ್ಲಿರುವ ಸೀರೆಯನ್ನು ಜಯಾ ಬಚ್ಚನ್ ಉಟ್ಟುಕೊಳ್ಳೋದಿದೆ. ಇವರಿಬ್ಬರಿಗೂ ಸೀರೆ ಕೊಳ್ಳಲಾಗದ ಬಡತನ ಇಲ್ಲ. ಆದರೆ ಅವರ ಈ ಆಟಿಟ್ಯೂಡ್ ಅತ್ತೆ ಸೊಸೆಯರ ನಡುವೆ ಅಕ್ಕರೆ, ಬಾಂಧವ್ಯವನ್ನು ಸೂಚಿಸುತ್ತದೆ. 

ಪೋಟೋಗಳು : ಬಾಲಿವುಡ್‌ನ ಫೇಮಸ್‌ ಅತ್ತೆ ಸೊಸೆ ಜೋಡಿ ನೋಡಿ! ...
ನಮ್ಮ ಕನ್ನಡ ನಾಡಿನ ಈ ಹೆಣ್ಣುಮಗಳು ಉತ್ತರದ ಪ್ರತಿಷ್ಠಿತ ಬಚ್ಚನ್ ಫ್ಯಾಮಿಲಿಯ ಪೆರ್ಫೆಕ್ಟ್ ಸೊಸೆಯಾಗಿ ಅವರಿಂದ ಸೈ ಅನಿಸಿಕೊಳ್ಳುವ ಮೂಲಕ ನಮ್ಮ ನೆಲದ ಸಂಸ್ಕೃತಿ, ಆಚಾರ, ಸಂಸ್ಕಾರಗಳಿಗೂ ಗೌರವ ತಂದಿದ್ದಾಳೆ ಅನಿಸುತ್ತದೆ.