62ರ ಹರೆಯದ ನಟಿ ಮೀನಾಕ್ಷಿ ಶೇಷಾದ್ರಿ (meenakshi sheshadri), ತಮ್ಮ 1988ರ ಹಿಟ್ ಚಿತ್ರ 'ಶೆಹನ್‌ಶಾ'ದ 'ಹೇ ಯು' ಹಾಡಿನ ನೃತ್ಯವನ್ನು ಮರುಸೃಷ್ಟಿಸಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ಈ ವೈರಲ್ ರೀಲ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾದರೆ, ಕೆಲವರು ವಯಸ್ಸಿನ ಬಗ್ಗೆ ಟ್ರೋಲ್ ಮಾಡಿದ್ದಾರೆ. ಆದರೆ ಮೀನಾಕ್ಷಿ ತಮ್ಮದೇ ಶೈಲಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಮೀನಾಕ್ಷಿ ಶೇಷಾದ್ರಿ ಅಂದ್ರೆ ಹಿಂದಿ ಫಿಲಂ ಪ್ರಿಯರಿಗೆಲ್ಲಾ ಕಣ್ಣುಗಳು ಆಸೆಯಿಂದ ಮಿನುಗುತ್ತವೆ. ದಾಮಿನಿ, ಹೀರೋ, ಶೆಹನ್‌ಶಾ ಫಿಲಂಗಳ ಚಂಚಲ ಕಣ್ಣುಗಳ ಸುಂದರಿ ನಾಯಕಿ ಮೀನಾಕ್ಷಿಗೆ ಈಗ 62 ವರ್ಷ ಅಂದ್ರೆ ಯಾರೂ ನಂಬೋ ಹಾಗಿಲ್ಲ. ಸುದ್ದಿ ಏನು ಅಂದ್ರೆ ಆಕೆ ಇಂದು ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಹಲ್‌ಚಲ್ ಸೃಷ್ಟಿಸಿದ್ದಾರೆ. 1988ರ ಹಿಟ್ ಚಲನಚಿತ್ರ ಶೆಹನ್‌ಶಾದ ‘ಹೇ ಯು’ ಐಟಂ ನಂಬರ್ ಡ್ಯಾನ್ಸನ್ನು ಆಕೆ ರಿಕ್ರಿಯೇಟ್ ಮಾಡಿದ್ದಾರೆ. ಅವರ ರೀಲ್ ವೈರಲ್ ಆಗಿದೆ. ಅದು ಒಂದೆಡೆ ಮೆಚ್ಚುಗೆ ಗಳಿಸುತ್ತಿದ್ದರೆ, ಇನ್ನೊಂದೆಡೆ ಅವರ ವಯಸ್ಸಿನ ಮೇಲೆ ಕೆಲವರು ಟ್ರೋಲ್ ಮಾಡಿದ್ದಾರೆ. ಮೀನಾಕ್ಷಿ ಆ ಟ್ರೋಲ್‌ಗಳನ್ನು ಚಿಂದಿ ಮಾಡಿದ್ದಾರೆ.
ಮೂಲತಃ ಅಮಿತಾಭ್ ಬಚ್ಚನ್ ಹಾಗೂ ಅಮರೀಶ್ ಪುರಿ ಅಭಿನಯದ ‘ಶಹೆನ್‌ಶಾ’ ಚಿತ್ರದಲ್ಲಿ ಕಾಣಿಸಿಕೊಂಡ ‘ಹೇ ಯು’ ಹಾಡು ಆ ಕಾಲದಲ್ಲಿ ದೊಡ್ಡ ಹಿಟ್ ಆಗಿತ್ತು. ಮೀನಾಕ್ಷಿ ಶೇಷಾದ್ರಿ ಅದರಲ್ಲಿ ಮೈ ಕುಣಿಸಿ ಎಲ್ಲರ ಮನ ಸೆಳೆದಿದ್ದರು. ಇದೀಗ ಮಳೆ ನಡುವೆ ಕೆಂಪು ಉಡುಪಿನಲ್ಲಿ ಅದೇ ಹಾಡಿಗೆ ನೃತ್ಯ ಮಾಡುವ ಮೂಲಕ ತಮ್ಮ ಹಳೆಯ ಚೈತನ್ಯವನ್ನು ಮತ್ತೆ ಜೀವಂತಗೊಳಿಸಿದ್ದಾರೆ. ಅವರ ಅಭಿವ್ಯಕ್ತಿ, ನಗು ಮತ್ತು ನೃತ್ಯ ಚಲನೆಗಳು 1980ರ ದಶಕದ ಪರದೆಯ ಮೆರಗನ್ನು ನೆನಪಿಗೆ ತಂದಿವೆ.
ತಮ್ಮ ಪೋಸ್ಟ್‌ನಲ್ಲಿ ಅವರು, ಈ ಹಾಡು ತಮ್ಮ ವೃತ್ತಿಜೀವನದ ಪ್ರಮುಖ ಕ್ಷಣಗಳಲ್ಲಿ ಒಂದಾಗಿದ್ದು, ಅಮಿತಾಭ್ ಬಚ್ಚನ್ ಅವರೊಂದಿಗೆ ಮೊದಲ ಬಾರಿಗೆ ತೆರೆ ಹಂಚಿಕೊಂಡ ಸಂದರ್ಭ ಎಂದಿದ್ದಾರೆ. ಹಾಡಿಗೆ ಆಶಾ ಭೋಸ್ಲೆ ಧ್ವನಿ ನೀಡಿದ್ದು, ಅದ್ಭುತ ಸಂಯೋಜನೆ ಮತ್ತು ನೃತ್ಯ ವಿನ್ಯಾಸವು ಅದನ್ನು ಇನ್ನಷ್ಟು ಜನಪ್ರಿಯಗೊಳಿಸಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಟ್ರೋಲ್‌ಗಳು vs ಅಭಿಮಾನಿಗಳ ಬೆಂಬಲ
ರೀಲ್ ವೈರಲ್ ಆದ ನಂತರ ಕೆಲವರು ಅವರ ವಯಸ್ಸನ್ನು ಉಲ್ಲೇಖಿಸಿ ಟೀಕೆ ಮಾಡಿದರು. “ಈ ವಯಸ್ಸಿನಲ್ಲಿ ಇಂತಹ ಹಾಡುಗಳು ಅಗತ್ಯವೇ?” ಎಂಬ ರೀತಿಯ ಕಾಮೆಂಟ್‌ಗಳು ಕಂಡುಬಂದವು. ಆದರೆ, ಮೀನಾಕ್ಷಿ ಶೇಷಾದ್ರಿ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸದೇ, ಬೆಂಬಲ ಸೂಚಿಸಿದ ಅಭಿಮಾನಿಗಳ ಕಾಮೆಂಟ್‌ಗಳಿಗೆ ಮಾತ್ರ ಪ್ರತಿಕ್ರಿಯಿಸಿ ತಮ್ಮ ಶೈಲಿಯಲ್ಲಿ ಉತ್ತರ ನೀಡಿದರು.
ಅಭಿಮಾನಿಗಳು ಅವರನ್ನು “ಟೈಮ್‌ಲೆಸ್ ಸ್ಟಾರ್” ಎಂದು ಕೊಂಡಾಡಿದ್ದು, “ವಯಸ್ಸು ಕೇವಲ ಸಂಖ್ಯೆ ಮಾತ್ರ” ಎಂದು ಬೆಂಬಲ ವ್ಯಕ್ತಪಡಿಸಿದರು. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಭಾರೀ ಬೆಂಬಲ ಲಭಿಸಿದೆ.
‘ಶಹೆನ್‌ಶಾ’ ಚಿತ್ರದ ಪ್ರಭಾವ
1988ರಲ್ಲಿ ಬಿಡುಗಡೆಯಾದ ಶಹೆನ್‌ಶಾ ಚಿತ್ರವು ಆ ಕಾಲದ ಪ್ರಮುಖ ಹಿಟ್‌ಗಳಲ್ಲಿ ಒಂದಾಗಿತ್ತು. “ರಿಷ್ಟೇ ಮೇಂ ತೋ ಹಮ್ ತುಮ್ಹಾರೆ ಬಾಪ್ ಲಗ್ತೇ ಹೈಂ” ಎಂಬ ಸಂಭಾಷಣೆ ಅಮಿತಾಭ್ ಬಚ್ಚನ್ ಅವರ ಸ್ಟಾರ್ ಇಮೇಜ್‌ನ್ನು ಮತ್ತಷ್ಟು ಬಲಪಡಿಸಿತು. ಈ ಚಿತ್ರದ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ.
ಮೀನಾಕ್ಷಿ ಶೇಷಾದ್ರಿ 1980–90ರ ದಶಕದಲ್ಲಿ ಪ್ರಮುಖ ನಟಿಯಾಗಿದ್ದು, ಹೀರೋ, ದಾಮಿನಿ, ಘಾತಕ್ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಂತರ ಅವರು ಬಾಲಿವುಡ್‌ನಿಂದ ದೂರ ಸರಿದು ಅಮೆರಿಕದಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಅವರು ನೃತ್ಯ ಶಾಲೆ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಮೀನಾಕ್ಷಿ ಶೇಷಾದ್ರಿ ಅವರ ಈ ಹೊಸ ಪ್ರಯತ್ನ, ವಯಸ್ಸು ಕೇವಲ ಒಂದು ಸಂಖ್ಯೆ ಎಂಬ ಸಂದೇಶವನ್ನು ಮತ್ತೊಮ್ಮೆ ನೆನಪಿಸಿ, ಅಭಿಮಾನಿಗಳ ಮನಸ್ಸು ಗೆದ್ದಿದೆ.


