ಈ ಬಾಲಿವುಡ್ ನಟಿ, ಆಮೀರ್ ಖಾನ್ ಮಲಸಹೋದರ ಹೈದರ್ ಅಲಿ ಖಾನ್ ಜೊತೆಗಿನ ವಿವಾಹ, ಕೌಟುಂಬಿಕ ದೌರ್ಜನ್ಯ ಮತ್ತು ನಂತರದ ಬೇರ್ಪಡುವಿಕೆಯ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದಾರೆ. 

ಈ ನಟಿ ಬಾಲಿವುಡ್‌ನಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಹಿಂದಿ ಟಿವಿ ಧಾರಾವಾಹಿಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಳು. ಭಾರತೀಯ ದೂರದರ್ಶನದ ಪರಿಚಿತ ಮುಖವೀಕೆ. ಇತ್ತೀಚೆಗೆ ತನ್ನ ವೈಯಕ್ತಿಕ ಜೀವನದಲ್ಲಿ ಎದುರಿಸಿದ ಸಮಸ್ಯೆಗಳ ಬಗ್ಗೆ ಹೇಳಿದ್ದಾಳೆ. ಆಕೆಗೊಂದು ವೃತ್ತಿಜೀವನವಿತ್ತು. ಆದರೆ ಅದರ ಹೊರತಾಗಿಯೂ ಆಕೆ ಬಹಳ ಸಮಯದವರೆಗೆ ಸಾರ್ವಜನಿಕರ ಗಮನದಿಂದ ದೂರ ಸರಿದಳು. ನಾವಿಲ್ಲಿ ಹೇಳುತ್ತಿರುವುದು ಹಲವಾರು ಹಿಂದಿ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ ಇವಾ ಗ್ರೋವರ್ ಅವರ ಬಗ್ಗೆ.

ಈಕೆ ಆಮೀರ್ ಖಾನ್ ಅವರ ಮಲಸಹೋದರ ಹೈದರ್ ಅಲಿ ಖಾನ್ ಅವರನ್ನು ವಿವಾಹವಾದರು. ಅವರ ಪ್ರೇಮ ಸಂಬಂಧ ಬಿರುಗಾಳಿಯಂತೆ ಪ್ರಾರಂಭವಾಯಿತು. ಇದು ಪರಿಚಯವಾಗಿ 18 ದಿನಗಳಲ್ಲಿ ನಡೆದ ತರಾತುರಿಯ ವಿವಾಹ. ಅವಳು ಹೈದರ್‌ ಜೊತೆಗೆ ಓಡಿಹೋಗಿ ಮದುವೆಯಾದಳು. ಆತನ ಜೊತೆಗಿನ ಇವಾ ಸಂಬಂಧವನ್ನು ಆಕೆಯ ತಾಯಿ ಕೊಂಚವೂ ಇಷ್ಟಪಡಲಿಲ್ಲ. ಅದಕ್ಕೆ ಕಾರಣ ಆತನ ಧರ್ಮ ಬೇರೆಯಾಗಿತ್ತು. ಆದರೂ ಇವಾ ಹಠ ಹಿಡಿದು ಹೈದರ್‌ ಜೊತೆ ಹೋದಳು.

ಆದರೆ ಇದು ಬಹುಕಾಲ ಉಳಿಯಲಿಲ್ಲ. ಇವಾ ಪ್ರಕಾರ ಈ ದಾಂಪತ್ಯ ಹಿಂಸಾತ್ಮಕವಾಗಿತ್ತು. ಹೈದರ್‌ ಅಲಿ ಖಾನ್‌ ಈಕೆಗೆ ಕೌಟುಂಬಿಕ ದೌರ್ಜನ್ಯ ಎಸಗುತ್ತಿದ್ದ. ಆದರೆ ಆಕೆ ಹೈದರ್ ಜೊತೆಗಿರಲು ತನ್ನ ಸರ್ವಸ್ವವನ್ನೂ ಅರ್ಪಿಸಿದಳು. ಪರಿಸ್ಥಿತಿಯನ್ನು ಸುಧಾರಿಸಲೋಸುಗ ಆತನಿಗೆ ಮಗುವನ್ನೂ ಹೆತ್ತುಕೊಟ್ಟಳು. ವಿಷಾದಕರ ಸಂಗತಿ ಎಂದರೆ ಸಮಸ್ಯೆಗಳು ಮುಂದುವರೆದವು. ಐದು ವರ್ಷಗಳ ನಂತರ ಅವರು ಬೇರ್ಪಡುವಂತೆ ಅದು ಮಾಡಿತು. ತನ್ನ ಮಗಳಿಂದ ದೂರವಾಗಿ ಇರುವ ಹೃದಯವಿದ್ರಾವಕ ಕಷ್ಟವನ್ನು ಸಹ ಅವಳು ಅನುಭವಿಸಿದಳು.

ಹೈದರ್ ಅಲಿ ಖಾನ್ ಯಾರು? ಈತ ಆಮಿರ್ ಖಾನ್ ಅವರ ಮಲಸಹೋದರ. ಆಮಿರ್ ಖಾನ್ ತಂದೆಯ ಎರಡನೇ ಮದುವೆಯಿಂದ ಜನಿಸಿದ ಮಗ. ಆಮಿರ್ ಅವರಂತಲ್ಲದೆ, ಹೈದರ್ ಹೆಚ್ಚಾಗಿ ಜನಮನದಿಂದ ದೂರವಿದ್ದರು. ಬಾಲಿವುಡ್‌ನಲ್ಲಿ ಈತ ಗಮನ ಸೆಳೆಯುವ ಸಂಪೂರ್ಣ ವೃತ್ತಿಜೀವನವನ್ನು ನಡೆಸಿಲ್ಲ. ಅವರು ಯಾವುದೇ ನಿರ್ಮಾಣ ಅಥವಾ ನಟನಾ ಪ್ರಯತ್ನಕ್ಕಿಂತ ಹೆಚ್ಚಾಗಿ ಚಲನಚಿತ್ರ ವ್ಯವಹಾರದೊಳಗಿನ ಸಂಪರ್ಕಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಇವಾ ಗ್ರೋವರ್ ಅವರೊಂದಿಗಿನ ಅವರ ತ್ವರಿತ ಮತ್ತು ವಿನಾಶಕಾರಿ ವಿವಾಹದಿಂದಾಗಿ ಅವರ ಹೆಸರು ಹೆಚ್ಚಾಗಿ ಸಾರ್ವಜನಿಕ ಚರ್ಚೆಯಲ್ಲಿತ್ತು.

ಇವಾ ಗ್ರೋವರ್ ಅವರ ಸಾಂಸಾರಿಕ ಬಿಕ್ಕಟ್ಟಿನ ನಿರ್ಣಾಯಕ ಅವಧಿಯಲ್ಲಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಅವರಿಗೆ ಸಹಾಯ ಮಾಡಿದರು. ಸ್ವತಃ ಆಮೀರ್‌ ಖಾನ್‌ ಅವರು ಇವರಿಗೆ ಸಪೋರ್ಟಿವ್‌ ಆಗಿದ್ದರು. ವೈಯಕ್ತಿಕ ಸವಾಲುಗಳ ನಡುವೆಯೂ ಸಲ್ಮಾನ್ ಖಾನ್ ಅವರಿಂದ ಇವಾ ಸಹಾಯವನ್ನು ಪಡೆದರು. ಸಲ್ಮಾನ್, ತನ್ನ ಕಷ್ಟದ ಸಮಯದಲ್ಲಿ ತುಂಬಾ ಸಹಾಯಕವಾಗಿದ್ದರು ಮತ್ತು ರಿಯಾಲಿಟಿ ಪ್ರೋಗ್ರಾಂ 'ಬಿಗ್ ಬಾಸ್' ನಲ್ಲಿಯೂ ಅವರಿಗೆ ಸ್ಥಾನ ನೀಡಿದರು ಎಂದು ಅವರು ಹೇಳಿದರು. ಆದಾಗ್ಯೂ, ಅವರ ವೈಯಕ್ತಿಕ ಪರಿಸ್ಥಿತಿಯಿಂದಾಗಿ ಮುಂದೆ ಬರುವ ಅವಕಾಶವನ್ನು ಇವಾ ನಿರಾಕರಿಸಬೇಕಾಯಿತು.

ಇವಾ ಅವರ ವೃತ್ತಿಪರ ಜೀವನ ಬಹಳ ವೈವಿಧ್ಯಮಯವಾಗಿದೆ. ಸಲ್ಮಾನ್ ಖಾನ್ ಎದುರು 'ರೆಡಿ'ನಂತಹ ಚಲನಚಿತ್ರಗಳಲ್ಲಿ, 'ಬಡೆ ಅಚ್ಚೆ ಲಗ್ತೇ ಹೈ' ಮತ್ತು 'ತಶನ್ ಎ ಇಷ್ಕ್' ನಂತಹ ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು. 2015 ರಿಂದ 2016 ರವರೆಗೆ 'ತಶನ್ ಇ ಇಷ್ಕ್' ಎಂಬ ದೂರದರ್ಶನ ಕಾರ್ಯಕ್ರಮದಲ್ಲಿ ನಟಿಸಿದರು. ಇವಾ ಈಗ ಮೌನವಾಗಿದ್ದಾರೆ. ತಮ್ಮ ವೈಯಕ್ತಿಕ ಜೀವನಕ್ಕೆ ಆದ್ಯತೆ ನೀಡುತ್ತಾರೆ. ಸಾಂದರ್ಭಿಕವಾಗಿ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳನ್ನು ಮಾಡುತ್ತಾರೆ.