ಐಶ್ವರ್ಯಾ ರೈ ಜೊತೆ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ಬರ್ಖಾ ಮದನ್, ಮಾಡೆಲಿಂಗ್ ಮತ್ತು ನಟನೆಯ ನಂತರ ಈಗ ಪಡೆದಿರುವ ರೂಪಾಂತರವೇ ವಿಶಿಷ್ಟ. ಈಗ ಆಕೆಯ ಹೆಸರೂ ಬೇರೆ, ಧರ್ಮವೂ ಬೇರೆ, ಸ್ವರೂಪವೂ ಬೇರೆಯಾಗಿದೆ.

ಒಮ್ಮೆ ಮಿಸ್‌ ಇಂಡಿಯಾ ಆಗಿ ಆಯ್ಕೆಯಾದರೆ, ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದರೆ ಅಲ್ಲಿ ದೊರೆತ ಜನಪ್ರಿಯತೆ ಅಂಥವರನ್ನು ಸೆಲೆಬ್ರಿಟಿ ಬದುಕಿನಲ್ಲಿ ಬಹುದೂರ ಕೊಂಡೊಯ್ಯುತ್ತದೆ. ಬಾಲಿವುಡ್‌ನಲ್ಲಿ, ಮಾಡೆಲ್‌ ಜಗತ್ತಿನಲ್ಲಿ ಮಿಂಚತೊಡಗುತ್ತಾರೆ. ಬಹುಮಂದಿ ಬಹುಕಾಲ ಅಲ್ಲಿ ಉಳಿಯುತ್ತಾರೆ. ಐಶ್ವರ್ಯಾ ರೈ, ಸುಷ್ಮಿತಾ ಸೇನ್‌, ಲಾರಾ ದತ್ತಾ, ಬಿಪಾಶ ಬಸು ಮೊದಲಾದವರು ಇದಕ್ಕೆ ಉದಾಹರಣೆ. ಆದರೆ ಹೀಗೆ ಬಂದ ಜನಮನದ ಆಕರ್ಷಣೆ, ಸೆಲೆಬ್ರಿಟಿ ಸ್ಟೇಟಸ್‌ನಿಂದ ದೂರ ಸರಿದು ಸರಳ ಜೀವನ ನಡೆಸಲು ಆಯ್ಕೆ ಮಾಡಿಕೊಳ್ಳುವವರು ಅಪರೂಪ. ಅಂಥ ಅಪರೂಪದ ಸೆಲೆಬ್ರಿಟಿಗಳಲ್ಲಿ ಬರ್ಖಾ ಮದನ್ ಕೂಡ ಒಬ್ಬರು. 

ಯಾರಿವರು ಎಂದು ನೀವು ಕೇಳಬಹುದು. ನಿಮಗೆ ಸುಲಭವಾಗಿ ನೆನಪಾಗಬೇಕಿದ್ದರೆ, ಐಶ್ವರ್ಯಾ ರೈ ಮಿಸ್‌ ಇಂಡಿಯಾ ಆಗಿ ಸೆಲೆಕ್ಟ್‌ ಆದ ಸ್ಪರ್ಧೆಯಲ್ಲಿ ಐಶ್‌ಗೆ ಪ್ರಬಲವಾದ ಪೈಪೋಟಿ ನೀಡಿದವಳು ಎಂದು ಹೇಳಬಹುದು. ಆಕೆಯ ಜೀವನವೆಂದರೆ ರೂಪಾಂತರದ ಒಂದು ಪ್ರಯಾಣ. ಬರ್ಖಾ ಮಾಡೆಲ್ ಆದಳು, ನಟಿಯಾದಳು. ಆದರೆ ಅಲ್ಲಿ ಬಹುಕಾಲ ನಿಲ್ಲಲಿಲ್ಲ. ಆ ಥಳಥಳಿಸುವ ಬದುಕಿನಿಂದ ಆಚೆ ಬಂದು ಬೌದ್ಧ ಸನ್ಯಾಸಿನಿಯಾದಳು. ಪ್ರಸ್ತುತ ಆಕೆಯ ಹೆಸರು ಗ್ಯಾಲ್ಟೆನ್ ಸ್ಯಾಮ್ಟೆನ್.

ಐಶ್ವರ್ಯ ರೈ ಅವರು ಮಿಸ್‌ ಇಂಡಿಯಾ ಆಗಿ ಸೆಲೆಕ್ಟ್‌ ಆದ ಸ್ಪರ್ಧೆಯ ಕಾಲಘಟ್ಟ ಭಾರತದಲ್ಲಿ ಮುಖ್ಯವಾದದ್ದು. ಅಲ್ಲಿಂದ ನಂತರ ಭಾರತದಲ್ಲಿ ಮಿಸ್‌ ಇಂಡಿಯಾ ಸೇರಿದಂತೆ ಇತರ ಸೌಂದರ್ಯ ಸ್ಪರ್ಧೆಗಳ ಕುರಿತು ತಿಳಿವಳಿಕೆ ಹೆಚ್ಚಾಯಿತು. ಊರೂರಿನಲ್ಲೂ ಸೌಂದರ್ಯ ಪ್ರಸಾಧನಗಳ ಮಾರಾಟದ ಭರಾಟೆ ಹೆಚ್ಚಾಯಿತು. ಭಾರತೀಯರು ಹೆಣ್ಣಿನ ಸೌಂದರ್ಯವನ್ನು ನೋಡುವ ರೀತಿಯೇ ಬದಲಾಯಿತು. ಇಂಥ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬರ್ಖಾ ಅವರನ್ನು ಶೋಬಿಝ್‌ ಜೀವನ ಕೈಬೀಸಿ ಕರೆಯುತ್ತಿತ್ತು. ಕೈತುಂಬ ಆಫರ್‌ಗಳೂ ಇದ್ದವು. 

1970ರಲ್ಲಿ ಪಂಜಾಬ್‌ನಲ್ಲಿ ಜನಿಸಿದ ಬರ್ಖಾ ಅವರು ಮಾಡೆಲ್ ಮತ್ತು ಸೌಂದರ್ಯ ರಾಣಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1994 ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸುಶ್ಮಿತಾ ಸೇನ್ ಮತ್ತು ಐಶ್ವರ್ಯಾ ರೈ ಅವರೊಂದಿಗೆ ಸ್ಪರ್ಧಿಸಿದರು. ಆದರೆ ಗೆಲ್ಲಲಿಲ್ಲ. ಅವರು ಮಿಸ್ ಟೂರಿಸಂ ಇಂಡಿಯಾ ಪ್ರಶಸ್ತಿಯನ್ನು ಗೆದ್ದರು ಮತ್ತು ಉದ್ಘಾಟನಾ ಮಿಸ್ ಟೂರಿಸಂ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಭಾಗವಹಿಸಿದರು. ಅದರಲ್ಲಿ ಅವರು ಮೂರನೇ ರನ್ನರ್ ಅಪ್ ಕಿರೀಟವನ್ನು ಪಡೆದರು.

ಅಕ್ಷಯ್ ಕುಮಾರ್, ರವೀನಾ ಟಂಡನ್ ಮತ್ತು ರೇಖಾ ನಟಿಸಿದ 1996 ರ ಚಲನಚಿತ್ರ ಖಿಲಾಡಿಯೋನ್ ಕಾ ಕಿಲಾಡಿಯಲ್ಲಿ ನಟಿಸುವ ಮೂಲಕ ಬರ್ಖಾ ನಟನಾ ಜೀವನಕ್ಕೆ ಪದಾರ್ಪಣೆ ಮಾಡಿದರು. ನಂತರ ಅವರು ರಾಮ್ ಗೋಪಾಲ್ ವರ್ಮಾ ಅವರ 2003ರ ಹಾರರ್‌ ಚಿತ್ರ, ಭೂತ್ ಸೇರಿದಂತೆ ಇತರ ಚಿತ್ರಗಳಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅವರು ಭೂತದ ಪಾತ್ರವನ್ನು ನಿರ್ವಹಿಸಿದರು. ಅಭಿನಯಕ್ಕಾಗಿ ಪ್ರಶಂಸೆ ಪಡೆದರು.

ಮನರಂಜನಾ ಉದ್ಯಮದಲ್ಲಿ ತನ್ನ ಯಶಸ್ಸಿನ ಹೊರತಾಗಿಯೂ ಬರ್ಖಾ ಅದರಲ್ಲಿ ನೆಲೆ ನಿಲ್ಲಲಿಲ್ಲ. ಆಕೆಯನ್ನು ಆಧ್ಯಾತ್ಮಿಕತೆ ಕೈಬೀಸಿ ಕರೆಯಿತು. ಅಂತರಂಗದ ಕರೆಗೆ ಆಕೆ ಓಗೊಟ್ಟಳು. ಟಿಬೆಟ್‌ನ ಧರ್ಮಗುರು ದಲೈ ಲಾಮಾ ಮತ್ತು ಅವರ ಬೋಧನೆಗಳಿಂದ ಬರ್ಖಾ ಆಳವಾದ ಸ್ಫೂರ್ತಿ ಪಡೆದಳು. ಅದು ಅವಳು ಬೌದ್ಧ ಧರ್ಮವನ್ನು ಸ್ವೀಕರಿಸಲು ಕಾರಣವಾಯಿತು.‌ ಟಿಬೆಟಿಯನ್ ಅಲ್ಲದಿದ್ದರೂ, ಬೌದ್ದ ಮತದಲ್ಲಿ ಜನಿಸದಿದ್ದರೂ ಆಕೆ ಬೌದ್ಧ ಸನ್ಯಾಸಿಯಾದಳು. ಆಕೆ ಈಗ ಧ್ಯಾನ ರಿಟ್ರೀಟ್‌ಗಳು, ಬೌದ್ಧ ಅಧ್ಯಯನಗಳು ಮತ್ತು ಸಾಮಾಜಿಕ ಸೇವೆಗಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಲಡಾಖ್‌ನಲ್ಲಿ ಮೂರು ವರ್ಷಗಳ ಆಳವಾದ ಧ್ಯಾನದ ಏಕಾಂತವಾಸವನ್ನು ಪೂರ್ಣಗೊಳಿಸಿದ್ದಾರಂತೆ.

'ಬೆಡ್ ಶೇರ್' ಹೇಳಿಕೆ ವಿವಾದ, ನಟಿ ಟಬು ಕೆಂಡಾಮಂಡಲ

2012ರಲ್ಲಿ, ಬರ್ಖಾ ಬೌದ್ಧ ಸನ್ಯಾಸಿನಿಯಾಗುವ ದೀಕ್ಷೆ ಪಡೆದರು. ಗ್ಯಾಲ್ಟೆನ್ ಸ್ಯಾಮ್ಟೆನ್ ಎಂಬ ಹೆಸರನ್ನು ಪಡೆದರು. 2024ರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಅವರು ಸನ್ಯಾಸಿಯಾದ ನಂತರ ತನ್ನ ತಲೆಯನ್ನು ಬೋಳಿಸಿಕೊಂಡದ್ದನ್ನು ಹಾಕಿದ್ದರು. “ನವೆಂಬರ್ 4, 2012, ಬೆಳಿಗ್ಗೆ 11:20ಕ್ಕೆ ನಾನು ಮರುಜನ್ಮ ಪಡೆದಿದ್ದೇನೆ" ಎಂದು ಬರೆದುಕೊಂಡರು. ಇಂದು ಬರ್ಖಾ ಹಿಮಾಲಯದ ಬೌದ್ಧವಿಹಾರಗಳಲ್ಲಿ ಇರುತ್ತಾರೆ. ಅವರ ಆಧ್ಯಾತ್ಮಿಕ ಪ್ರಯಾಣದ ವಿವರಗಳನ್ನು Instagramನಲ್ಲಿ ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಆಕೆಯ ಬಯೋದಲ್ಲಿನ ಸಂದೇಶದಲ್ಲಿ ಹೀಗಿದೆ: “ತಾಳ್ಮೆಯಿಂದ ಮಾತ್ರ ಪ್ರಕ್ಷುಬ್ಧ ಹೃದಯಗಳನ್ನು ಮೆರುಗುಗೊಳಿಸಬಹುದು. ನೀರು ನಿಂತಾಗ ಅದು ಕನ್ನಡಿಯಾಗುತ್ತದೆ." 

ರಾಮ್‌ ಗೋಪಾಲ ವರ್ಮಾ ಅವರ ಜೊತೆಗಿನ ಸಂಬಂಧದ ಬಗ್ಗೆ ಉರ್ಮಿಳಾ ಸ್ಪಷ್ಟನೆ