ರಾಕಿಂಗ್ ಸ್ಟಾರ್ ಯಶ್ ಮೊದಲ ಬಾರಿಗೆ ರಾಧಿಕಾ ಪಂಡಿತ್ ಅವರನ್ನು ಮನೆಗೆ ಕರೆದುಕೊಂಡು ಹೋದಾಗ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನು ವಿವರಿಸಿದ್ದಾರೆ. 

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ (Radhika Pandit) ಚಂದನವನದ ಸ್ಟಾರ್ ಜೋಡಿಗಳಾಗಿದ್ದಾರೆ. ಕಿರುತೆರೆಯಿಂದ ವೃತ್ತಿ ಜೀವನ ಆರಂಭಿಸಿದ ಇವರಿಬ್ಬರು ಇಂದು ಕನ್ನಡ ಸಿನಿಮಾದ ಪ್ರಮುಖ ಕಲಾವಿದರಾಗಿದ್ದಾರೆ. ಮೊಗ್ಗಿನ ಮನಸು ಚಿತ್ರದ ಮೂಲಕ ಬೆಳ್ಳಿ ತೆರೆಗೆ ಯಶ್ ಮತ್ತು ರಾಧಿಕಾ ಪಾದಾರ್ಪಣೆ ಮಾಡಿದ್ದರು. ದೀರ್ಘ ಸಮಯದವರೆಗೆ ಪ್ರೀತಿಸಿದ ಯಶ್ ಮತ್ತು ರಾಧಿಕಾ ಕುಟುಂಬಸ್ಥರ ಒಪ್ಪಿಗೆ ಪಡೆದುಕೊಂಡು ಮದುವೆಯಾಗಿದ್ದಾರೆ. ರಾಕಿಂಗ್ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು, ಪ್ರೀತಿ ತುಂಬಿರುವ ಈ ಕುಟುಂಬದ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.

ಇತ್ತೀಚೆಗೆ ನಟ ರಾಕಿಂಗ್ ಸ್ಟಾರ್‌ ಯಶ್ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮುನ್ನಲೆಗೆ ಬಂದಿದೆ. ಈ ವಿಡಿಯೋದಲ್ಲಿ ಮೊದಲಸಲ ರಾಧಿಕಾ ಪಂಡಿತ್ ಅವರನ್ನು ಮನೆಗೆ ಕರೆದುಕೊಂಡು ಹೋದ ದಿನದ ಬಗ್ಗೆ ಮಾತನಾಡಿದ್ದಾರೆ. ಹಬ್ಬದ ದಿನದಂದು ಮಹಾಲಕ್ಷ್ಮೀಯಂತೆ ಮನೆಗೆ ಬಂದ ರಾಧಿಕಾ ಪಂಡಿತ್ ಅವರನ್ನು ನೋಡಿ ಯಶ್‌ಗೆ ಪೋಷಕರು ಖಡಕ್ ಆಗಿ ಕೆಲವೊಂದು ಮಾತುಗಳನ್ನು ಹೇಳಿದ್ದರು. ಅಂದು ನಡೆದ ಘಟನೆಯ ಬಗ್ಗೆ ಯಶ್ ಹೇಳಿದ್ದೇನು ಅಂತ ನೋಡೋಣ ಬನ್ನಿ.

ಆ ದಿನದ ಬಗ್ಗೆ ಯಶ್ ಹೇಳಿದ್ದೇನು?

ಹಬ್ಬದ ದಿನ ರಾಧಿಕಾ ಅವರನ್ನು ಮನೆಗೆ ಕರೆದುಕೊಂಡು ಹೋದೆ. ಹೀಗೆ ನಟಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದು ಅದು ಮೊದಲ ಬಾರಿ. ರಾಧಿಕಾ ಮನೆಗೆ ಬರುತ್ತಿದ್ದಂತೆ ಪೋಷಕರಿಗೆ ಬಹುತೇಕ ಎಲ್ಲಾ ಅರ್ಥ ಆಗಿತ್ತು. ಆವತ್ತು ವರಮಹಾಲಕ್ಷ್ಮೀ ಹಬ್ಬವಿತ್ತು. ಆ ದಿನ ಮನೆಯಲ್ಲಿರುವ ಒಡೆವೆಯನ್ನು ಹಾಕಳ್ಳೊಮ್ಮಾ.. ಎಂದು ರಾಧಿಕಾಗೆ ಕೊಟ್ರು. ಹಾಗೆಲ್ಲಾ ಮನೆ ಒಡವೆಯನ್ನು ಯಾರಿಗೂ ಕೊಡಲ್ಲ.

ಈ ವೇಳೆ ನನ್ನೊಂದಿಗೆ ಮಾತನಾಡಿದ ಅಮ್ಮಾ, ಏನಾದರೂ ಮಾಡಪ್ಪ ಒಂದು ಸಲ ನೀನು ಯಾರನ್ನು ಸೊಸೆ ಅಂತ ಕರ್ಕೊಂಡು ಬರ್ತಿಯಾ ಅವರೇ ನಮ್ಮ ಮನೆಯ ಸೊಸೆ. ನೀನು ಸೀರಿಯಸ್ ಆಗಿದ್ರೆ ಮಾತ್ರ ಇದನ್ನೆಲ್ಲಾ ಮಾಡು. ಇಲ್ಲಾಂದ್ರೆ ನಮ್ಮ ಮನೆಗೆ ಯಾರನ್ನೂ ಸೇರಿಸಲ್ಲ. ಸೊಸೆ ಅಂದ್ರೆ ಒಬ್ಬಳೇ ಅಂತ ಹೇಳಿದ್ದರು. ಪೋಷಕರ ಮಾತಿನಲ್ಲಿ ಮಕ್ಕಳು ಹುಡುಗ ಬುದ್ದಿಯಲ್ಲಿ ಏನೇನು ಮಾಡಬಾರದು ಅನ್ನೋ ಕಾಳಜಿ ಇತ್ತು. ಲವ್ ಅಂತ ಆಗಿದ್ದೇ ಫಸ್ಟ್ ಟೈಮ್. ನಾವು ಸಹ ನಮ್ಮ ಪ್ರೀತಿಯ ವಿಷಯದಲ್ಲಿ ತುಂಬಾ ಸೀರಿಯಸ್‌ ಆಗಿದ್ದೀವಿ ಎಂದು ಹೇಳಿದ್ದಾರೆ.

ಯಶ್-ರಾಧಿಕಾ ಜೋಡಿ ಸೂಪರ್ ಹಿಟ್

ಯಶ್ ಮತ್ತು ರಾಧಿಕಾ ಜೊತೆಯಾಗಿ ಡ್ರಾಮಾ, ಮೊಗ್ಗಿನ ಮನಸು, ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ, ಸಂತು ಸ್ಟ್ರೇಟ್ ಫಾರ್ವರ್ಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ನಾಲ್ಕು ಸಿನಿಮಾಗಳು ಸೂಪರ್ ಹಿಟ್ ಕನ್ನಡ ಚಿತ್ರಗಳಾಗಿವೆ. ರಾಧಿಕಾ ಪಂಡಿತ್ ಮದುವೆ ಬಳಿಕ ಸಿನಿಮಾಗಳಿಂದ ದೂರವಿದ್ದು, ಮಕ್ಕಳ ಲಾಲನೆ-ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. 2007ರಲ್ಲಿ ಯಶ್ ಮತ್ತು ರಾಧಿಕಾ ನಂದಗೋಕುಲ ಧಾರಾವಾಹಿಯಲ್ಲಿಯೂ ಜೊತೆಯಾಗಿ ನಟಿಸಿದ್ದರು.

ಬಣ್ಣದ ಲೋಕದಲ್ಲಿ ಜೊತೆಯಾದ ಯಶ್ ಮತ್ತು ರಾಧಿಕಾ ಪಂಡಿತ್ 12ನೇ ಆಗಸ್ಟ್ 2016ರಂದು ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆಪ್ತರು ಮತ್ತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. 9ನೇ ಡಿಸೆಂಬರ್ 2016ರಂದು ಯಶ್-ರಾಧಿಕಾ ಮದುವೆ ನಡೆದಿತ್ತು. ನಂತರ ಬೆಂಗಳೂರು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದರು. ಯಶ್ ಮತ್ತು ರಾಧಿಕಾ ದಂಪತಿ ಯಶೋಮಾರ್ಗ ಫೌಂಡೇಶನ್ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

View post on Instagram