ಡೀಪ್ಫೇಕ್ ಹೆಸ್ರಲ್ಲಿ ಶಾರುಖ್, ಸಲ್ಮಾನ್, ರಣಬೀರ್, ಅಕ್ಷಯ್ಗೆ ಹೀಗೆಲ್ಲಾ ಮಾಡೋದಾ? ಉಫ್ ಎಂದ ಫ್ಯಾನ್ಸ್!
ಡೀಪ್ಫೇಕ್ ತಂತ್ರಜ್ಞಾನ ಬಳಸಿ ಶಾರುಖ್ ಖಾನ್, ಸಲ್ಮಾನ್ ಖಾನ್, ರಣಬೀರ್, ಅಕ್ಷಯ್ ಸೇರಿದಂತೆ ಕೆಲವರು ಬಾಲಿವುಡ್ ಸ್ಟಾರ್ಸ್ಗಳನ್ನು ಶಾಲಾ ವಿದ್ಯಾರ್ಥಿನಿಯನ್ನಾಗಿ ಮಾಡಲಾಗಿದ್ದು, ಅವರ ಹಾಡಿನ ವಿಡಿಯೋ ವೈರಲ್ ಆಗಿದೆ.
ತಂತ್ರಜ್ಞಾನ ಮುಂದುವರೆದಂತೆ ಒಳ್ಳೆಯದಾಗುವುದು ಬಿಟ್ಟು ಕೆಟ್ಟದ್ದೇ ಹೆಚ್ಚಾಗುತ್ತಿದೆ. ಇದಾಗಲೇ ಡೀಪ್ಫೇಕ್ ತಂತ್ರಜ್ಞಾನಕ್ಕೆ ಕೆಲವು ನಟಿಯರು ಸೇರಿದಂತೆ ಇನ್ನು ಕೆಲವರು ಗುರಿಯಾಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರ ವಿಡಿಯೋ ವೈರಲ್ ಆಗಿದ್ದು ಹಲ್ಚಲ್ ಸೃಷ್ಟಿಸಿತ್ತು. ಅದಾದ ಬಳಿಕ ಕತ್ರಿನಾ ಕೈಫ್, ಕಾಜೋಲ್ ಸೇರಿದಂತೆ ಕೆಲವು ನಟಿಯರ ತಿರುಚಿದ ಫೋಟೋಗಳು ವೈರಲ್ ಆದವು. ಇದೀಗ ನಟಿ ಆಲಿಯಾ ಭಟ್ ಅವರನ್ನು ತೀರಾ ಕೆಟ್ಟದಾಗಿ ಬಿಂಬಿಸುವ ಡೀಪ್ಫೇಕ್ ವಿಡಿಯೋ ವೈರಲ್ ಆಗುತ್ತಿದೆ. ಇದು ಆಲಿಯಾ ಅವರನ್ನುಮಾತ್ರವಲ್ಲದೇ ಸಿನಿ ತಾರೆಯರನ್ನೂ ಪೇಚಿಗೆ ಸಿಲುಕಿದೆ. ಹೀಗೆಯೇ ಮುಂದುವರೆದರೆ ಸಾಮಾನ್ಯ ಹೆಣ್ಣು ಮಕ್ಕಳ ಸ್ಥಿತಿಯೇನು ಎಂಬ ಪ್ರಶ್ನೆ ಉದ್ಭವಿಸಿದೆ. ಸಾಮಾನ್ಯವಾಗಿ ಯಾವುದಾದರೂ ವಿಡಿಯೋ, ಫೋಟೋಗಳು ವೈರಲ್ ಆದರೆ ಅದರ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡುವುದು ಕಡಿಮೆಯೇ. ಅಶ್ಲೀಲವಾಗಿ ಹೆಣ್ಣುಮಕ್ಕಳನ್ನು ಬಿಂಬಿಸಿದರೆ ಅವರ ಸ್ಥಿತಿ ಏನಾಗಬಹುದು ಎಂಬ ಬಗ್ಗೆ ಎಲ್ಲರಿಗೂ ಈಗ ಚಿಂತೆ ಶುರುವಾಗಿದೆ.
ರಶ್ಮಿಕಾ ಮಂದಣ್ಣ ಅವರ ಪ್ರಕರಣದಲ್ಲಿ ಆರೋಪಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ಆದರೆ ತಪ್ಪಿತಸ್ಥರು ಸುಲಭದಲ್ಲಿ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುವ ಕಾರಣ, ತಪ್ಪಿತಸ್ಥರಿಗೆ ಕಾನೂನಿನ ಯಾವುದೇ ಭಯ ಇಲ್ಲದ ಹಿನ್ನೆಲೆಯಲ್ಲಿ ಇಂಥ ಪ್ರಕರಣಗಳು ಹೆಚ್ಚುತ್ತಲೇ ಸಾಗಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಿನ ಹೆಚ್ಚಿನ ಚಿತ್ರತಾರೆಯರು ಚಿತ್ರಕ್ಕಾಗಿ ಹಾಗೂ ಪ್ರಚಾರಕ್ಕಾಗಿ ಯಾವುದೇ ತೆರನಾದ ಬಟ್ಟೆ ಧರಿಸುತ್ತಾರೆ. ಇಂಥ ಡೀಪ್ಫೇಕ್ ತಂತ್ರಜ್ಞಾನ ಅವರ ಮೇಲೆ ಅಷ್ಟು ಪ್ರಭಾವ ಬೀರದೇ ಹೋಗಬಹುದು. ಆದರೆ ಇದೇ ರೀತಿ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಯಾರಾದರೂ ಈ ತಂತ್ರಜ್ಞಾನ ಬಳಸಿದರೆ, ಅವರು ನಾಚಿಕೆ, ಮರ್ಯಾದೆಗೆ ಅಂಜಿ ಜೀವವನ್ನೇ ಕಳೆದುಕೊಳ್ಳಬಹುದು ಎಂಬ ಆತಂಕ ಎದುರಾಗಿದೆ.
ಇದು ಗಂಭೀರ ವಿಷಯವಾದರೆ, ಇದೇ ತಂತ್ರಜ್ಞಾನ ಬಳಸಿಕೊಂಡು ತಮಾಷೆಯ ವಿಡಿಯೋಗಳನ್ನೂ ಹರಿಬಿಡಲಾಗುತ್ತಿದೆ. ಇದೀಗ ನಟ ಶಾರುಖ್ ಖಾನ್, ಸಲ್ಮಾನ್ ಖಾನ್, ರಣಬೀರ್, ಅಕ್ಷಯ್ ಸೇರಿದಂತೆ ಕೆಲವರು ಬಾಲಿವುಡ್ ಸ್ಟಾರ್ಸ್ಗಳ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಚಿಕ್ಕ ಮಕ್ಕಳಂತೆ ಈ ನಟರನ್ನು ಬಿಂಬಿಸಲಾಗಿದೆ. ಅದೂ ಹುಡುಗಿಯರಂತೆ ಅವರನ್ನು ಕಾಣಿಸಲಾಗಿದ್ದು, ಚಿಕ್ಕ ಮಕ್ಕಳಂತೆ ಹಾಡನ್ನು ಹೇಳುವಂತೆ ತೋರಿಸಲಾಗಿದೆ.
ಈ ಡೀಪ್ಫೇಕ್ ವಿಡಿಯೋ ನೋಡಿ ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ. ಶಾರುಖ್ ಖಾನ್ ಅವರನ್ನು ಸೋ ಕ್ಯೂಟ್ ಎನ್ನುತ್ತಿದ್ದಾರೆ. ಆದರೆ ಇದೇ ವೇಳೆ ಹಲವರು ಆತಂಕವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಶಾರುಖ್ ಖಾನ್ ಅವರದ್ದೇನೋ ತಮಾಷೆಯಾಗಿ ಕಾಣಬಹುದು. ಆದರೆ ಇದೇ ತಂತ್ರಜ್ಞಾನ ಇಟ್ಟುಕೊಂಡು ಬೇರೆ ಬೇರೆ ರೀತಿಯಲ್ಲಿ ದುರುಪಯೋಗ ಆಗುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮದ ಅಗತ್ಯವಿದೆ ಎನ್ನುತ್ತಿದ್ದಾರೆ.
ನಟಿ ಆಲಿಯಾ ಭಟ್ ಡೀಪ್ಫೇಕ್ ವಿಡಿಯೋ ವೈರಲ್! ಶಾಕ್ನಲ್ಲಿ ಸಿನಿ ತಾರೆಯರು