Ramayana: ರಣಬೀರ್ ಕಪೂರ್ ಅಭಿನಯದ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಮಹಾಭಾರತ ಧಾರಾವಾಹಿಯಲ್ಲಿ ಶ್ರೀಕೃಷ್ಣನ ಪಾತ್ರ ನಿರ್ವಹಿಸಿದ್ದ ನೀತಿಶ್ ಭಾರದ್ವಾಜ್, ಸಿನಿಮಾದಲ್ಲಿ ರಾವಣನನ್ನು ನಾಯಕನಂತೆ ಮತ್ತು ಶ್ರೀರಾಮನನ್ನು ದುರ್ಬಲ ವ್ಯಕ್ತಿಯಂತೆ ಚಿತ್ರಿಸಲಾಗಿದೆ ಎಂದು ಟೀಕಿಸಿದ್ದಾರೆ.

ರಾಮಾಯಣ ಸಿನಿಮಾ ವಿರುದ್ಧ ನಿತೇಶ್ ಭಾರಧ್ವಜ್ ಗರಂ

ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಆದರೆ ಸಿನಿಮಾಗೆ ಮೆಚ್ಚುಗೆಯ ಜೊತೆಗೆ ಟೀಕೆಗಳೂ ವ್ಯಕ್ತವಾಗುತ್ತಿವೆ. ಇತ್ತೀಚೆಗಷ್ಟೇ ‘ಮಹಾಭಾರತ’ ಧಾರಾವಾಹಿಯಲ್ಲಿ ಭೀಷ್ಮ ಪಿತಾಮಹನ ಪಾತ್ರ ನಿರ್ವಹಿಸಿದ್ದ ಮುಕೇಶ್ ಖನ್ನಾ, ‘ರಾಮಾಯಣ’ ಸಿನಿಮಾದಲ್ಲಿ ಸೀತೆಯ ಫೈಟ್ ದೃಶ್ಯಗಳ ಬಗ್ಗೆ ಪ್ರಶ್ನೆ ಎತ್ತಿದ್ದರು. ಇದೀಗ ‘ಮಹಾಭಾರತ’ದಲ್ಲಿ ಶ್ರೀಕೃಷ್ಣನ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನೀತಿಶ್ ಭಾರದ್ವಾಜ್ ಕೂಡ ‘ರಾಮಾಯಣ’ ಚಿತ್ರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ರಾಮಾಯಣ’ ಸಿನಿಮಾವನ್ನು ಟೀಕಿಸಿದ ನೀತಿಶ್ ಭಾರದ್ವಾಜ್

ಬಿ.ಆರ್. ಚೋಪ್ರಾ ಅವರ ‘ಮಹಾಭಾರತ’ ಧಾರಾವಾಹಿಯಲ್ಲಿ ಶ್ರೀಕೃಷ್ಣನ ಪಾತ್ರ ನಿರ್ವಹಿಸಿ ಅಪಾರ ಜನಪ್ರಿಯತೆ ಗಳಿಸಿದ್ದ ನೀತಿಶ್ ಭಾರದ್ವಾಜ್, ಈ ಹಿಂದೆ ‘ರಾಮಾಯಣ’ ಸಿನಿಮಾದ ಟ್ರೇಲರ್ ಅನ್ನು ಮೆಚ್ಚಿಕೊಂಡಿದ್ದರು. ಅಲ್ಲದೆ, ಈ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಗಳಿಸಲಿದೆ ಎಂಬ ನಿರೀಕ್ಷೆಯನ್ನೂ ವ್ಯಕ್ತಪಡಿಸಿದ್ದರು. ಆದರೆ ಸಿನಿಮಾದ ಅಂತಿಮ ರೂಪವನ್ನು ನೋಡಿದ ಬಳಿಕ ಅವರಿಗೆ ನಿರಾಸೆಯಾಗಿದೆ.

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಭಗವಾನ್ ಶ್ರೀರಾಮನನ್ನು ಚಿತ್ರಿಸಿರುವ ರೀತಿಯ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಭಗವಾನ್ ರಾಮನನ್ನು ಯಾವುದೇ ಭಾವನೆಗಳಿಲ್ಲದ ಅತ್ಯಂತ ಸಾಮಾನ್ಯ ವ್ಯಕ್ತಿಯಂತೆ ತೋರಿಸಲಾಗಿದೆ. ಇದು ರಾಮನಲ್ಲ. ಭಗವಾನ್ ರಾಮ ಎಂದರೆ ಮರ್ಯಾದೆ ಮತ್ತು ಆದರ್ಶಗಳ ಪ್ರತಿರೂಪ" ಎಂದು ನೀತಿಶ್ ಹೇಳಿದ್ದಾರೆ. ಮುಂದುವರಿದು, ರಾಮನು ಅಯೋಧ್ಯೆಯಿಂದ ಅಳುತ್ತಾ ಹೊರಟುಹೋಗುವ ದೃಶ್ಯವೂ ಇಕ್ಷ್ವಾಕು ವಂಶದ ಘನತೆ ಮತ್ತು ಮರ್ಯಾದೆಗೆ ಹೊಂದಿಕೆಯಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾವಣನನ್ನು ನಾಯಕನಂತೆ ತೋರಿಸಿರುವುದಕ್ಕೆ ಆಕ್ಷೇಪ!

ಸಿನಿಮಾದಲ್ಲಿ ರಾವಣನನ್ನು ನಾಯಕನಂತೆ ಬಿಂಬಿಸಿರುವುದಕ್ಕೂ ನೀತಿಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. "ರಾವಣನಲ್ಲಿದ್ದ ದೋಷಗಳನ್ನು ಸಂಪೂರ್ಣವಾಗಿ ಮರೆಮಾಚಲಾಗಿದೆ. ಆತನ ಪಾತ್ರವನ್ನು ನೋಡಿದರೆ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ನಾಯಕನಂತೆ ಕಾಣುತ್ತದೆ. ನೀವು ಭಗವಾನ್ ರಾಮನ ಪಾತ್ರದಲ್ಲಿ ತೋರಿಸಿರುವ ವ್ಯಕ್ತಿಯೇ ಇಷ್ಟೊಂದು ದುರ್ಬಲನಾಗಿದ್ದರೆ, ಆತ ರಾವಣನನ್ನು ಹೇಗೆ ಸಂಹರಿಸುತ್ತಾನೆ? ಇಲ್ಲಿ ಖಳನಾಯಕನನ್ನು ನಾಯಕನನ್ನಾಗಿ ಮತ್ತು ನಾಯಕನನ್ನು ಖಳನಾಯಕನನ್ನಾಗಿ ಮಾಡಲಾಗುತ್ತಿದೆ" ಎಂದು ಅವರು ಟೀಕಿಸಿದ್ದಾರೆ.

ಮುಂದಿನ ಪೀಳಿಗೆ ರಾವಣನನ್ನು 'ಕೂಲ್ ಡ್ಯೂಡ್' ಎಂದು ಭಾವಿಸಬಹುದು!

ಇದಲ್ಲದೆ, ಇಂದಿನ ಯುವ ಪೀಳಿಗೆಯ ಬಗ್ಗೆ ಮಾತನಾಡಿರುವ ನೀತಿಶ್, ಓದುವ ಹವ್ಯಾಸ ಕಡಿಮೆಯಾಗಿರುವ ಯುವಕರು ಮುಂದಿನ ಎರಡು ವರ್ಷಗಳ ಕಾಲ ರಾವಣನನ್ನು ಒಬ್ಬ 'ಕೂಲ್ ಡ್ಯೂಡ್' ಎಂದು ಭಾವಿಸಿ ಆತನನ್ನು ಹೊಗಳುತ್ತಾ ಕಳೆಯಬಹುದು ಎಂದು ಹೇಳಿದ್ದಾರೆ. ಹೀಗಿರುವಾಗ ಸಿನಿಮಾದ ಎರಡನೇ ಭಾಗದಲ್ಲಿ ಶ್ರೀರಾಮನಿಂದ ರಾವಣನ ಸಂಹಾರವಾಗುವ ಘಟನೆಯನ್ನು ನಿರ್ಮಾಪಕರು ಹೇಗೆ ತೋರಿಸಲಿದ್ದಾರೆ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.

‘ರಾಮಾಯಣ’ ಒಂದು ಅಜೆಂಡಾ ಸಿನಿಮಾ ಎಂದ ನೀತಿಶ್!

‘ರಾಮಾಯಣ’ ಸಿನಿಮಾದ ನಿರ್ಮಾಣ ಸಂಸ್ಥೆಗೆ ಲಕ್ಸೆಂಬರ್ಗ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸಿಂಗಾಪುರದಿಂದ ಹಣಕಾಸಿನ ನೆರವು ದೊರೆತಿದೆ ಎಂದು ನೀತಿಶ್ ಭಾರದ್ವಾಜ್ ಆರೋಪಿಸಿದ್ದಾರೆ. ತಾವು 'ಅಜೆಂಡಾ ನಡೆಸುವವರು' ಎಂದು ಕರೆಯುವವರನ್ನು 'ಹೊಸ ಇಂಗ್ಲಿಷರು' ಎಂದು ಉಲ್ಲೇಖಿಸಿರುವ ಅವರು, ಭಾರತೀಯ ನಾಗರಿಕತೆಯನ್ನು ದುರ್ಬಲಗೊಳಿಸಲು ಸಿನಿಮಾವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ಸಿನಿಮಾದ ನಿರ್ಮಾಣಕ್ಕೆ ಬಂದಿರುವ ಹಣದ ಮೂಲ ಮತ್ತು ಹಣಕಾಸಿನ ವಹಿವಾಟಿನ ಸಂಪೂರ್ಣ ವಿವರಗಳನ್ನು ಸರ್ಕಾರ ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.