S Janaki Kannada Songs: ಗಾಯನ ನಿವೃತ್ತಿ ಜೀವನ ನಡೆಸುತ್ತಿರುವ ಎಸ್‌.ಜಾನಕಿ, ಕನ್ನಡ ಸಿನಿಮಾದ ಒಂದು ಹಾಡಿಗಾಗಿ ದೇವರಿಗೆ ಹರಕೆ ಹೊತ್ತಿದ್ದರು. ಈ ಹಾಡು ತಮ್ಮ ವೃತ್ತಿಜೀವನದ ಅತಿ ಕಠಿಣವಾದ ಹಾಡು ಎಂದು ಹೇಳಿದ್ದಾರೆ.

ಬೆಂಗಳೂರು: ಎಸ್‌.ಜಾನಕಿ ಸಂಗೀತ ಲೋಕಕಂಡ ಅದ್ಭುತ ಗಾಯಕಿ. ಕನ್ನಡ , ಮಲಯಾಳಂ , ತೆಲುಗು , ತಮಿಳು , ಹಿಂದಿ , ಸಂಸ್ಕೃತ , ಒಡಿಯಾ , ತುಳು , ಉರ್ದು , ಪಂಜಾಬಿ , ಬಡಗ , ಬಂಗಾಳಿ , ಕೊಂಕಣಿ ಮತ್ತು ಇಂಗ್ಲಿಷ್, ಜಪಾನೀಸ್ , ಜರ್ಮನ್ ಸೇರಿದಂತೆ ಸುಮಾರು 20 ಭಾಷೆಗಳಲ್ಲಿ ಎಸ್. ಜಾನಕಿ ಹಾಡಿದ್ದಾರೆ. ಗಾಯನ ನಿವೃತ್ತಿಗೆ ಹೇಳಿರುವ ಎಸ್‌.ಜಾನಕಿ, ನಿವೃತ್ತಿ ಜೀವನವನ್ನು ಆನಂದಿಸತ್ತಿದ್ದಾರೆ. ಕನ್ನಡ ಸಿನಿಮಾದ ಒಂದು ಹಾಡು ಹಾಡಲು ದೇವರಿಗೆ ಹರಕೆ ಕಟ್ಟಿಕೊಂಡಿದ್ದರು. ಹಾಡು ಚೆನ್ನಾಗಿ ಬರಲಿ ಎಂದು ದೇವರಿಗೆ 100 ರೂಪಾಯಿ ಮುಡಿಪು ಮೀಸಲಿಟ್ಟಿದ್ದೆ. ಒಂದು ರೀತಿ ದೇವರಿಗೆ ಲಂಚ ಕೊಟ್ಟಿದ್ದೆ ಎಂದು ಎಸ್‌.ಜಾನಕಿ ಅವರೇ ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಕನ್ನಡ ಸಿನಿಮಾದ ಆ ಹಾಡು ನನ್ನ ವೃತ್ತಿಜೀವನದ ಅತಿ ಕಠಿಣವಾದ ಸಾಂಗ್ ಎಂದು ಎಸ್‌.ಜಾನಕಿ ಹೇಳುತ್ತಾರೆ. ಈ ಹಾಡಿನ ಬಗ್ಗೆ ಎಸ್‌.ಜಾನಕಿ ಮಾತನಾಡಿರುವ ಆಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಸುಮಾರು 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಎಸ್‌.ಜಾನಕಿ ಹಾಡಿದ್ದಾರೆ. ಎಸ್ ಜಾನಕಿ ಅವರು ಹಾಡಿದ ಅತಿ ಹೆಚ್ಚು ಹಾಡುಗಳು ಕನ್ನಡದಲ್ಲಿವೆ. ನಂತರ ಸ್ಥಾನದಲ್ಲಿ ಮಲಯಾಳಂ ಭಾಷೆಯಲ್ಲಿವೆ. 1957ರಲ್ಲಿ ಎಸ್‌ ಜಾನಕಿ ಮೊದಲ ಕನ್ನಡ ಹಾಡು ಹಾಡಿದರು. ನಂತರ 60ರ ದಶಕದ ಬಳಿಕ ಸಾವಿರಾರು ಕನ್ನಡ ಹಾಡುಗಳಿಗೆ ಎಸ್‌ ಜಾನಕಿ ಧ್ವನಿಯಾದರು. 1970-80ರ ವೇಳೆ ದೇಶದ ನಂಬರ್ ಗಾಯಕಿಯಾದರು. ಕೆ. ವೆಂಕಟೇಶ್, ರಾಜನ್-ನಾಗೇಂದ್ರರಿಂದ ಹಿಡಿದು ಹಂಸಲೇಖವರ ಸಂಗೀತ ಸಂಯೋಜನೆಯಲ್ಲಿ ಎಸ್‌. ಜಾನಕಿ ಹಾಡಿದ್ದರು. ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿ ಸರಿಗಮಪ ರಿಯಾಲಿಟಿ ಶೋಗೆ ತೀರ್ಪುಗಾರರಾಗಿಯೂ ಎಸ್‌ ಜಾನಕಿ ಕೆಲಸ ಮಾಡಿದ್ದಾರೆ. 

ಇದನ್ನೂ ಓದಿ: ಮೈಸೂರಿನ ಮಸಣಿಕಮ್ಮ ದೇವಿ ದರ್ಶನ ಪಡೆದ ಗಾಯಕಿ ಎಸ್. ಜಾನಕಿ; ಕಾಲಿಗೆ ಬಿದ್ದ ಅರ್ಚಕ!

ಕನ್ನಡದ ಯಾವ ಹಾಡು?
ವೈರಲ್ ಆಗಿರುವ ವಿಡಿಯೋದಲ್ಲಿ ಎಸ್‌. ಜಾನಕಿ ಅವರು ಕನ್ನಡ ಸಿನಿಮಾ 'ಹೇಮಾವತಿ'ದ ಹಾಡಿನ ಬಗ್ಗೆ ಮಾತನಾಡಿದ್ದಾರೆ. ಕ್ಲಾಸಿಕ್ ಹೇಮಾವತಿ ಹಾಡು ಎರಡು ರಾಗಗಳನ್ನು ಮಿಕ್ಸ್ ಹೊಂದಿತ್ತು. ಎಲ್‌ ವೈದ್ಯನಾಥನ್ ಅವರ ಸಂಗೀತ ಸಂಯೋಜನೆ ಇತ್ತು. ಹಾಡಿನ ಸಾಲು ಒಂದು ರಾಗದಲ್ಲಿದ್ರೆ, ಮತ್ತೊಂದು ಸಾಲು ಇನ್ನೊಂದು ರಾಗದಲ್ಲಿತ್ತು. ಸ್ವರವೂ ಸಹ ತುಂಬಾ ಫಾಸ್ಟ್ ಆಗಿತ್ತು. ಇಡೀ ಹಾಡು ಸಹ ವೇಗವಾಗಿದ್ದರಿಂದ ರಿಹರ್ಸಲ್ ಮಾಡುವಾಗಲೂ ಕಷ್ಟವಾಗಿತ್ತು. ರೆಕಾರ್ಡಿಂಗ್ ವೇಳೆಯೂ ಹಂತಹಂತವಾಗಿ ಹಾಡು ಹಾಡಿ ಮುಗಿಸಿದೆ. ನಾನು ತ್ಯಾಗರಾಜ ಮತ್ತು ರಾಘವೇಂದ್ರ ಸ್ವಾಮಿಗೆ ಹರಕೆ ಕಟ್ಟಿಕೊಂಡೆ. ಎರಡು ದೇವರಿಗೆ ಪ್ರತ್ಯೇಕವಾಗಿ ನೂರು ರೂಪಾಯಿ ಲಂಚ ನೀಡಿದೆ. ಒಂದು ರಾಗ ರಾಘವೇಂದ್ರ ಸ್ವಾಮಿ ಮತ್ತು ಮತ್ತೊಂದು ರಾಗ ತ್ಯಾಗರಾಜ ಸ್ವಾಮಿ ಅಂತ 100 ರೂಪಾಯಿ ಮುಡಿಪಿಟ್ಟು ಹಾಡು ಹಾಡಿದ್ದೆ ಎಂದು ಎಸ್‌ ಜಾನಕಿ ಹೇಳಿದ್ದಾರೆ.

ಎನ್‌ ವೀರಸ್ವಾಮಿ ನಿರ್ಮಾಣದ ಹೇಮಾವತಿ ಸಿನಿಮಾವನ್ನು ಸಿದ್ದಲಿಂಗಯ್ಯ ನಿರ್ದೇಶನ ಮಾಡಿದ್ದರು. 1977ರಲ್ಲಿ ಬಿಡುಗಡೆಯಾದ ಹೇಮಾವತಿ ಸಿನಿಮಾದ ಚಿ.ಉದಯಶಂಕರ ಬರೆದ "ಶಿವ ಶಿವ ಎನ್ನದ ನಾಲಿಗೆ ಏಕೆ" ಹಾಡನ್ನು ಎಸ್‌ ಜಾನಕಿ ಹಾಡಿದ್ದರು. 

ಇದನ್ನೂ ಓದಿ: ಎಸ್‌. ಜಾನಕಿ ಹುಡುಕಿದ ಪ್ರತಿಭೆ; ಆ ತಾಯಿಗೆ ಈಗ ಹೇಗಾಗಿರಬೇಕು?

YouTube video player