ನಾಟು ನಾಟು ಹಾಡಿಗೆ 'ಟೆಸ್ಲಾ ಲೈಟ್ ಶೋ' ಗೌರವ, ರಾಜಮೌಳಿ ಏನಂದ್ರು?
ಅತ್ಯುತ್ತಮ ಮೂಲಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದ ನಾಟು ನಾಟು ಸಂಭ್ರಮ ಮುಗಿದಿಲ್ಲ. ಇತ್ತೀಚೆಗೆ 'ಟೆಸ್ಲಾ ಲೈಟ್ ಶೋ' ಟ್ವಿಟರ್ ಹ್ಯಾಂಡಲ್‌ನಲ್ಲಿ ಟೆಸ್ಲಾ ಕಾರುಗಳ ಮೂಲಕ ಈ ಹಾಡಿಗೆ ವಿಶೇಷವಾಗಿ ಗೌರವ ಸಲ್ಲಿಸಲಾಗಿದೆ.
ನವದೆಹಲಿ (ಮಾ.21): ಆಸ್ಕರ್ ಅಂಗಳದಲ್ಲಿ ಐತಿಹಾಸಿಕ ಪ್ರಶಸ್ತಿ ಪಡೆದ ಬಳಿಕ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ಸಂಭ್ರಮಕ್ಕೆ ಪಾರವೇ ಇಲ್ಲ. ಇತ್ತೀಚೆಗೆ ಅವರು ತಮ್ಮ ಟ್ವಿಟರ್ ಪೇಜ್‌ನಲ್ಲಿ ನಿಜವಾಗಿಯೂ ನಾನು ಆನಂದದಲ್ಲಿದ್ದೇನೆ' ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಆದರೆ, ಅವರ ಟ್ವೀಟ್‌ಗೆ ಕಾರಣವೂ ಇದೆ. ಅದು ಆಸ್ಕರ್ ಗೌರವವಲ್ಲ. ಬದಲಾಗಿ ವಿಶ್ವದ ಐಷಾರಾಮಿ ಕಾರು ಕಂಪನಿಗಳಲ್ಲಿ ಒಂದಾದ ಟೆಸ್ಲಾ, ನಾಟು ನಾಟು ಹಾಡಿಗೆ ನೀಡಿರುವ ಗೌರವಕ್ಕೆ ಮೆಚ್ಚಿ ರಾಜಮೌಳಿ ಈ ಪೋಸ್ಟ್ ಮಾಡಿದ್ದಾರೆ. ಹೌದು, ಆಸ್ಕರ್ ವೇದಿಕೆ ಮಾತ್ರವಲ್ಲ ನಾಟು ನಾಟು ಹಾಗೂ ವಿಶ್ವದ ಬಹುತೇಕ ವೇದಿಕೆಗಳನ್ನು ತಲುಪಿದೆ. ಸೋಮವಾರ, ಇಂಟರ್ನೆಟ್‌ನಲ್ಲಿ ನಾಟು ನಾಟು ಹಾಡಿಗೆ ಸಂಬಂಧಿಸಿದ ಒಂದು ವಿಡಿಯೋ ವೈರಲ್ ಆಗಿತ್ತು. ಇದರಲ್ಲಿ ಟೆಸ್ಲಾ ಕಾರುಗಳು ಆಸ್ಕರ್ ಮೂಲಗೀತೆ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ನಾಟು ನಾಟು ಹಾಡಿನ ಬೀಟ್ಸ್‌ಗೆ ತನ್ನ ಲೈಟ್ ಶೋ ಮೂಲಕ ಗೌರವ ಸಲ್ಲಿಸಿದ್ದವು. ಈ ವೈರಲ್ ವಿಡಿಯೋವನ್ನು ಆರ್‌ಆರ್‌ಆರ್ ಚಿತ್ರ ತಂಡ ತನ್ನ ಹ್ಯಾಂಡಲ್‌ನಲ್ಲಿ ಪ್ರಕಟ ಮಾಡಿತ್ತು. ವಿಡಿಯೋ ಕ್ಲಿಪ್‌ನಲ್ಲಿ ನ್ಯೂಜೆರ್ಸಿಯಲ್ಲಿ ಹಾಡಿನ ಸಖತ್ ಬೀಟ್‌ಗೆ ಟೆಸ್ಲಾ ಕಾರುಗಳು ತನ್ನ ಲೈಟ್‌ಗಳನ್ನು ಅದರ ತಾಳಕ್ಕೆ ತಕ್ಕಂತೆ ಬೆಳಗುತ್ತಿರುವುದು ಕಂಡು ಬಂದಿದೆ.
ಈ ಅದ್ಭುತ ಗೌರವಕ್ಕೆ ಪ್ರತಿಕ್ರಿಯಿಸಿದ ಆರ್‌ಆರ್‌ಆರ್ ನಿರ್ದೇಶಕ ಎಸ್‌ಎಸ್ ರಾಜಮೌಳಿ, "ನ್ಯೂಜೆರ್ಸಿಯು ನಾಟು ನಾಟುಗೆ ನೀಡಿದ ಈ ಗೌರವ ನಿಜವಾಗಿಯೂ ಅವಿಸ್ಮರಣೀಯ. ಧನ್ಯವಾದಗಳು ವಂಶಿ ಕೊಪ್ಪುರವೂರಿ, #NASAA, ಪೀಪಲ್ ಮೀಡಿಯಾ ಫ್ಯಾಕ್ಟರಿ, ಮತ್ತು ಈ ಅಚ್ಚರಿಯ ಮತ್ತು ಅದ್ಭುತ ಟೆಸ್ಲಾ ಲೈಟ್ ಶೋಗೆ ಸಂಬಂಧಿಸಿದ ಎಲ್ಲರಿಗೂ ಧನ್ಯವಾದಗಳು...:) ಇದು ಒಂದು ಅದ್ಭುತ ಪ್ರದರ್ಶನ. ಎಂದು ಬರೆದುಕೊಂಡಿದ್ದಾರೆ.
ಇಷ್ಟಲ್ಲದೆ ಆರ್‌ಆರ್‌ಮೂವಿ ತಂಡದ ಹ್ಯಾಂಡಲ್ ಹಾಗೂ ಟ್ವಿಟರ್ ಹಾಗೂ ಟೆಸ್ಲಾದ ಮಾಲೀಕರಾಗಿರುವ ಎಲಾನ್ ಮಸ್ಕ್‌ಗೂ ಧನ್ಯವಾದ ಹೇಳಿದ್ದಾರೆ.ಕೆಲವು ದಿನಗಳ ಹಿಂದೆ, ಆರ್‌ಆರ್‌ಆರ್ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು ಲಾಸ್ ಏಂಜಲೀಸ್‌ನಲ್ಲಿ ನಡೆದ ವ್ಯಾನಿಟಿ ಫೇರ್ ಆಸ್ಕರ್, ಆಫ್ಟರ್ ಪಾರ್ಟಿ ಚಿತ್ರವನ್ನು ಅಪ್‌ಲೋಡ್ ಮಾಡಿದ್ದುರು. ವಿಶ್ವದಾದ್ಯಂತ ಆರ್‌ಆರ್‌ಆರ್‌ನ ನಾಟು ನಾಟು ಗೀತೆ ವೈರಲ್ ಆಗಿತ್ತು. ಇದರಿಂದಾಗಿ ಆಸ್ಕರ್‌ನ ಮೂಲಗೀತೆ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ, ಆಸ್ಕರ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಗೀತೆ ಎನ್ನುವ ಶ್ರೇಯ ಸಂಪಾದನೆ ಮಾಡಿತು. ಎಸ್‌ಎಸ್ ರಾಜಮೌಳಿ ಅವರು, ಆಸ್ಕರ್ ವಿಜೇತ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಆಸ್ಕರ್ ಜೊತೆ ಸಂಭ್ರಮದಿಂದ ನಗುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು.
ಭಾರತ ಆಸ್ಟ್ರೇಲಿಯಾ ಏಕದಿನ ನಡುವೆ ಆಸ್ಕರ್ ಗೆದ್ದ RRR ನಾಟು ನಾಟು ಹಾಡಿಗೆ ಕೊಹ್ಲಿ ಡ್ಯಾನ್ಸ್!
ಆಸ್ಕರ್ ಮಾತ್ರವಲ್ಲದೆ ವಿವಿಧ ಅಂತಾರಾಷ್ಟ್ರೀಯ ಪ್ರಶಸ್ತಿ ಸಮಾರಂಭದ ವೇದಿಕೆಯಲ್ಲಿ ಆರ್‌ಆರ್‌ಆರ್ ಶೈನ್ ಆಗಿದೆ. ಲಾಸ್ ಏಂಜಲಿಸ್‌ನಲ್ಲಿ ನಡೆದ ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿಯಲ್ಲಿ ಆರ್‌ಆರ್‌ಆರ್ ಎರಡು ಪ್ರಶಸ್ತಿಗಳನ್ನು ಜಯಿಸಿತ್ತು. ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಮತ್ತು ಅತ್ಯುತ್ತಮ ಮೂಲಗೀತೆ ವಿಭಾಗದಲ್ಲಿ ನಾಟು ನಾಟು ಪ್ರಶಸ್ತಿ ಜಯಿಸಿತ್ತು.
ಆಸ್ಕರ್ ಗೆದ್ದು ಭಾರತಕ್ಕೆ ವಾಪಾಸ್ ಆದ ರಾಮ್ ಚರಣ್ ನೋಡಲು ಮುಗಿಬಿದ್ದ ಫ್ಯಾನ್ಸ್
ಅದಲ್ಲದೆ, 80ನೇ ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನಲ್ಲಿ ಕೂಡ ನಾಟು ನಾಟು ಅತ್ಯುತ್ತಮ ಮೂಲಗೀತೆ ವಿಭಾಗದಲ್ಲಿ ಪ್ರಶಸ್ತಿ ಜಯಿಸಿತ್ತು. ಅದರೊಂದಿಗೆ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್ಸ್‌ನಲ್ಲಿ ನಾಲ್ಕು ಪ್ರಶಸ್ತಿಗಳನ್ನು ಜಯಿಸಿತ್ತು. ಇದರಲ್ಲೂ ಕೂಡ ನಾಟು ನಾಟು ಪ್ರಶಸ್ತಿ ಗೆದ್ದಿತ್ತು.