ಯಶ್ ವಿರುದ್ಧ ತೆಲುಗು ಮಾಧ್ಯಮ ಗರಂ; ಅಲ್ಲು ಅರ್ಜುನ್ ಗಾಗಿದ್ದ ಅವಮಾನಕ್ಕೆ ಸೇಡು ತೀರಿಸಿಕೊಂಡ್ರಾ?
ರಾಕಿಂಗ್ ಸ್ಟಾರ್ ಯಶ್ ವಿರುದ್ಧ ತೆಲುಗು ಮಾಧ್ಯಮ ಗರಂ ಆದ ವಿಚಾರ ಚರ್ಚೆಗೆ ಕಾರಣವಾಗಿದೆ. ಅಂದು ಅಲ್ಲು ಅರ್ಜುನ್ ಅವರಿಗೆ ಆಗಿದ್ದ ಅವಮಾನಕ್ಕೆ ತೆಲುಗು ಮಾಧ್ಯಮ ಸೇಡು ತೀರಿಸಿಕೊಂಡಿತಾ ಎನ್ನುವ ಮಾತುಗಳು ಕೇಳಿಬರುತ್ತಿದೆ.
ರಾಕಿಂಗ್ ಸ್ಟಾರ್ ಯಶ್(Yash) ಸದ್ಯ ಕೆಜಿಎಫ್2(KGF2) ಬಿಡುಗಡೆಯ ಬ್ಯುಸಿಯಲ್ಲಿದ್ದಾರೆ. ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುವ ಕೆಜಿಎಫ್-2 ಏಪ್ರಿಲ್ 14ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಯಶ್ ಮತ್ತು ತಂಡ ದೇಶದಾದ್ಯಂತ ಪ್ರಮೋಷನ್ ನಲ್ಲಿ ತೊಡಗಿಕೊಂಡಿದ್ದು ಭಾರತದ ಬಹುತೇಕ ಭಾಗಗಳಿಗೆ ಭೇಟಿ ನೀಡಿದ್ದಾರೆ. ಕೆಜಿಎಫ್ ಮೊದಲ ಭಾಗ ನೋಡಿದ ಎಲ್ಲರೂ ಚಾಪ್ಟರ್ 2 ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಭಾರತದಾದ್ಯಂತ ಸಂಚರಿಸುತ್ತಿರುವ ಯಶ್ ಇತ್ತೀಚಿಗಷ್ಟೆ ಆಂಧ್ರಪ್ರದೇಶದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಕೆಜಿಎಫ್-2 ವಿಚಾರವಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಡದಿಂದ ಯಶ್ ಹಾಜರಿದ್ದರು. ಪತ್ರಿಕಾಗೋಷ್ಠಿಗೆ ಹಾಜರಾಗುತ್ತಿದ್ದಂತೆ ಯಶ್ ವಿರುದ್ಧ ತೆಲುಗು ಮಾಧ್ಯಮ ಗರಂ ಆಗಿತ್ತು. ನಿಗದಿ ಪಡಿಸಿದ ಸಮಯಕ್ಕಿಂತ ಯಶ್ ತಡವಾಗಿ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ ಮಾಧ್ಯಮದವರು ಯಶ್ ವಿರುದ್ಧ ಅಸಮಾಧಾನ ಹೊರಹಾಕಿದರು.
ಕ್ಷಮೆ ಕೇಳಿದ ಯಶ್
ಪತ್ರಕರ್ತರೊಬ್ಬರು ಸುದ್ದಿಗೋಷ್ಠಿಗೆ ತಡವಾಗಿ ಬಂದಿದ್ದೀರಿ. ಎಲ್ಲರೂ ಗಂಟೆಯಿಂದ ಕಾಯುತ್ತಿದ್ದೀವಿ ಎಂದು ಹೇಳಿದರು. ಬಳಿಕ ಯಶ್ ತೆಲಗು ಮಾಧ್ಯಮದ ಮುಂದೆ ಕ್ಷಮೆ ಕೇಳಿದರು. ಜೊತೆಗೆ ಯಾಕೆ ತಡವಾಗಿದೆ ಎಂದು ಉತ್ತರ ನೀಡಿದರು. 'ದಯವಿಟ್ಟು ಕ್ಷಮಿಸಿ, ನನಗೆ ಈ ಬಗ್ಗೆ ಗೊತ್ತಿರಲಿಲ್ಲ, ಆಯೋಜಕರು ಹೇಳಿದ ಸಮಯಕ್ಕೆ, ಆ ಜಾಗಕ್ಕೆ ಹೋಗುತ್ತಾ ಇದ್ದೇವೆ. ನನಗೆ ಸಮಯದ ಬೆಲೆ ಗೊತ್ತು, ನಮ್ಮಿಂದ 10 ನಿಮಿಷ ತಡವಾಗಿದ್ದರು ಅದು ತಪ್ಪೆ, ಪ್ರೈವೆಟ್ ಫ್ಲೈಟ್ ನಲ್ಲಿ ಬಂದಿದ್ದು, ಹಾಗಾಗಿ ಟೇಕ್ ಆಫ್ ಆಗಲು ಸಮಯ ತೆಗೆದುಕೊಳ್ಳುತ್ತದೆ' ಎಂದು ಯಶ್ ಉತ್ತರಿಸಿದರು.
KGFಗೂ ಮೊದಲು ಅಪ್ಪು ಸಿನಿಮಾ ಮಾಡ್ಬೇಕಿತ್ತು Prashanth Neel, ಅದು ಮಿಸ್ ಆಗಿ ಕೆಜಿಎಫ್ ಮಾಡ್ಬೇಕಾಯ್ತು!
ಅಂದು ತಡವಾಗಿ ಬಂದಿದ್ದರು ಅಲ್ಲು ಅರ್ಜುನ್
ಇದೇ ರೀತಿಯ ಸಂದರ್ಭ ಅಂದು ತೆಲುಗು ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಬೆಂಗಳೂರಿನಲ್ಲಿ ಎದುರಾಗಿತ್ತು. ಪುಪ್ಪ ಸಿನಿಮಾ ಬಿಡುಗಡೆ ವೇಳೆ ಅಲ್ಲು ಅರ್ಜುನ್ ಮತ್ತು ತಂಡ ಪತ್ರಿಕಾಗೋಷ್ಠಿಗೆ ತಡವಾಗಿ ಆಗಮಿಸಿದ್ದರು. ಆಗ ಕನ್ನಡ ಮಾಧ್ಯಮ ಅಲ್ಲು ಅರ್ಜುನ್ ವಿರುದ್ಧ ಗರಂ ಆಗಿದ್ದರು. ಆಗ ಅಲ್ಲು ಅರ್ಜುನ್ ಯಶ್ ಹಾಗೆಯೇ ಉತ್ತರಿಸಿದ್ದರು. ದಯವಿಟ್ಟು ಕ್ಷಮಿಸಿ, ನನಗೆ ಈ ವಿಚಾರ ಗೊತ್ತಿರಲಿಲ್ಲ. ಆಯೋಜಕರು ನಿಗದಿ ಮಾಡಿದ ಸಮಯಕ್ಕೆ ಬರುತ್ತೇವೆ. ನಾನು ಖಾಸಗಿ ವಿಮಾನದಲ್ಲಿ ಬಂದೆ. ವಿಮಾನ ಟೇಕ್ ಆಫ್ ತಡವಾಯಿತು. ಹಾಗಾಗಿ ಸ್ವಲ್ಪ ಲೇಟ್ ಆಗುತ್ತದೆ. ನನಗೆ ಯಾರಿಗೂ ನೋವು ಮಾಡಲು ಇಷ್ಟ ಇಲ್ಲ ಎಂದು ಕ್ಷಮೆ ಕೇಳಿದ್ದರು.
RCB ಜೊತೆ ಕೈ ಜೋಡಿಸಿದ ಹೊಂಬಾಳೆ ಫಿಲ್ಮ್ಸ್, ಶುರುವಾಗಲಿದೆ ಮನರಂಜನೆಯ ಮಹಾಪರ್ವ!
ವೈರಲ್ ಆಗಿದೆ ವಿಡಿಯೋ
ಈ ಎರಡು ಘಟನೆ ಈಗ ಚರ್ಚೆಗೆ ಕಾರಣವಾಗಿದೆ. ಅಭಿಮಾನಿಗಳು ಅಂದು ಅಲ್ಲು ಅರ್ಜುನ್ ಗೆ ಆಗಿದ್ದ ಅವಮಾನಕ್ಕೆ ಇಂದು ಯಶ್ ವಿರುದ್ಧ ತೆಲುಗು ಮಾಧ್ಯಮ ಸೇಡು ತೀರಿಸಿಕೊಂಡಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಎರಡು ವಿಡಿಯೋ ಕ್ಲಿಪ್ಪಿಂಗ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಈ ಬಗ್ಗೆ ಇಬ್ಬರೂ ಸ್ಟಾರ್ ನಟರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.