ಒಂದು ಕಾಲದಲ್ಲಿ 150ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿದ್ದ ಪ್ರಸಿದ್ಧ ನಟಿ, ತಮ್ಮ ಗ್ಲಾಮರ್ ಜೀವನವನ್ನು ತ್ಯಜಿಸಿದ್ದಾರೆ. ವೈಯಕ್ತಿಕ ದುರಂತಗಳ ನಂತರ ಸನ್ಯಾಸತ್ವ ಸ್ವೀಕರಿಸಿ, ಇಂದು ಹಿಮಾಲಯ (Himalaya) ಗುಹೆಯಲ್ಲಿ ಭಿಕ್ಷೆ ಬೇಡುತ್ತಾ, ಧ್ಯಾನದಲ್ಲಿ ತೊಡಗಿ ಸರಳ ಜೀವನ ನಡೆಸುತ್ತಿದ್ದಾರೆ.
ಈಕೆ ಅನೇಕ ವರ್ಷಗಳ ಕಾಲ ಇಂಡಿಯನ್ ಟೆಲಿವಿಷನ್‌ನಲ್ಲಿ ದೇಶಾದ್ಯಂತ ಜನತೆಗೆ ಪರಿಚಿತ ಮುಖವಾಗಿದ್ದ ನಟಿ. ಅವರು 150ಕ್ಕೂ ಹೆಚ್ಚು ದೈನಂದಿನ ಹಿಟ್ ಧಾರಾವಾಹಿಗಳಲ್ಲಿ ಕಾಣಿಸಿಕೊಂಡವರು. ಪ್ರಭಾವಶಾಲಿ ಅಭಿನಯದ ಮೂಲಕ ಮನೆಮಾತಾದವರು. ಅವರ ಸ್ಕ್ರೀನ್ ಜೀವನ ಗ್ಲಾಮರ್‌ನಿಂದ ತುಂಬಿತ್ತು. ಆದರೆ ಅವರ ನಿಜ ಜೀವನದ ಕಥೆ ವಿಭಿನ್ನ ತಿರುವು ಪಡೆದುಕೊಂಡಿತು. ಒಂದು ಕಾಲದಲ್ಲಿ ಕ್ಯಾಮೆರಾಗಳ ಫ್ಲಾಶ್, ಬೆಳಕಿನಲ್ಲಿ ಬದುಕಿದ್ದ ನಟಿ, ತನ್ನ ನಟನಾ ವೃತ್ತಿ, ಸುಖಸೌಲಭ್ಯಗಳು ಮತ್ತು ತನ್ನ ಸಂಸಾರವನ್ನು ಸಹ ತ್ಯಜಿಸಿ, ಸನ್ಯಾಸಿಯಾದರು. ಇಂದು ಅವರು ಹಿಮಾಲಯದಲ್ಲಿ ಒಂದು ಗುಹೆಯಂಥ ಆಶ್ರಮದಲ್ಲಿದ್ದುಕೊಂಡು ನಿತಯದ ಊಟಕ್ಕಾಗಿ ಭಿಕ್ಷೆ ಬೇಡುತ್ತ, ಧ್ಯಾನ ಮಾಡುತ್ತ, ಕನಿಷ್ಠ ಅವಶ್ಯಕತೆಗಳೊಂದಿಗೆ ಬದುಕಿದ್ದಾರೆ.
ಯಾರವರು? ಅವರೇ ನೂಪುರ್ ಅಲಂಕಾರ್. ಎರಡು ದಶಕಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ 155ಕ್ಕೂ ಹೆಚ್ಚು ದೂರದರ್ಶನ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಶಕ್ತಿಮಾನ್, ಘರ್ ಕಿ ಲಕ್ಷ್ಮಿ ಬೇಟಿಯಾನ್, ಅಗ್ಲೆ ಜನಮ್ ಮೋಹೆ ಬಿಟಿಯಾ ಹಿ ಕಿಜೋ, ರೆಥ್ ಮತ್ತು ದಿಯಾ ಔರ್ ಬಾತಿ ಹಮ್‌ನಂತಹ ಕಾರ್ಯಕ್ರಮಗಳಲ್ಲಿ ಅವರು ಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಹುಮುಖ ಪ್ರತಿಭೆ. ಸೀರಿಯಲ್‌ಗಳಲ್ಲಿ ನಟಿಸಿಯೇ ಮನೆಮಾತಾದರು.
2022ರಲ್ಲಿ ನೂಪುರ್ ಮನರಂಜನಾ ಉದ್ಯಮದಿಂದ ದೂರ ಸರಿಯಲು ನಿರ್ಧರಿಸಿದರು. ಸನ್ಯಾಸ ಸ್ವೀಕರಿಸಿ ಪೀತಾಂಬರ ಮಾ ಎಂಬ ಹೆಸರನ್ನು ಪಡೆದರು. ಆಗ ಅವರ ಬದುಕಿನಲ್ಲಿ ಹಾಗೂ ವೈಯಕ್ತಿಕವಾಗಿ ಪ್ರಕ್ಷುಬ್ಧತೆ ಆವರಿಸಿತ್ತು. ಅವರು ತಮ್ಮ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡಿದ್ದರು. ಅದೇ ಸಮಯದಲ್ಲಿ ಪಿಎಂಸಿ ಬ್ಯಾಂಕ್ ಹಗರಣದಿಂದಾಗಿ ಅವರು ಕೂಡಿಟ್ಟ ಹಣವೆಲ್ಲ ನಷ್ಟವಾಯಿತು.
ಒಂದು ಸಂದರ್ಶನದಲ್ಲಿ ನೂಪುರ್ ಈ ಸತತ ಸವಾಲುಗಳು ತನ್ನ ಜೀವನದ ಉದ್ದೇಶವನ್ನು ಪುನರ್ವಿಮರ್ಶಿಸುವಂತೆ ಮಾಡಿತು ಎಂದು ಬಹಿರಂಗಪಡಿಸಿದರು. “ನನ್ನ ಉಳಿತಾಯ ಬ್ಯಾಂಕಿನ ನಷ್ಟದಲ್ಲಿ ಹೋಯಿತು. ನನ್ನ ತಾಯಿ ಮತ್ತು ನನ್ನ ಸಹೋದರಿಯ ಸಾವುಗಳು ಕೊನೆಯ ಹೊಡೆತ. ನಾನು ಅದಕ್ಕೂ ಮೊದಲೇ ಪ್ರಪಂಚದಿಂದ ದೂರವಾಗಲು ಪ್ರಾರಂಭಿಸಿದ್ದೆ. ನನಗೆ ಈ ಲೌಕಿಕ ಜೀವನವನ್ನು ನಡೆಸಲು ಆಸಕ್ತಿ ಇರಲಿಲ್ಲ, ಆದ್ದರಿಂದ ನನ್ನೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲರಿಗೂ ತಿಳಿಸಿ, ಅವರ ಅನುಮತಿ ಪಡೆದೇ ಸನ್ಯಾಸ ಸ್ವೀಕರಿಸಿದೆ. ಅವರೆಲ್ಲ ಇಷ್ಟವಿಲ್ಲದೆ ಒಪ್ಪಿಕೊಂಡರು. ಆಧ್ಯಾತ್ಮಿಕ ಮಾರ್ಗವನ್ನು ಆರಿಸಿಕೊಂಡೆ."
ಮುಂಬೈ ತೊರೆದ ನಂತರ ನೂಪುರ್ ಭಾರತದಾದ್ಯಂತ ಪ್ರಯಾಣಿಸಿದರು. ಸುಮಾರು ಮೂರು ವರ್ಷಗಳ ಕಾಲ, ಅವರು ಗುಹೆಗಳು, ಕಾಡುಗಳು ಮತ್ತು ದೂರದ ಆಶ್ರಮಗಳಲ್ಲಿ ವಾಸಿಸಿದರು. ಆಗಾಗ್ಗೆ ಕಠಿಣ ಹವಾಮಾನ ಎದುರಿಸಿದರು. ಹಿಮಪಾತ, ಅನಾರೋಗ್ಯದಿಂದ ಹೆಪ್ಪುಗಟ್ಟುವ ತಾಪಮಾನದಲ್ಲಿ ಬದುಕುಳಿದರು. ಆದರೆ ಆಧ್ಯಾತ್ಮಿಕ ಅಭ್ಯಾಸದಲ್ಲಿ ಶಾಂತಿಯನ್ನು ಕಂಡುಕೊಂಡರು. "ನಾನು ಸೌಕರ್ಯವಿಲ್ಲದೆ ಜೀವನವನ್ನು ಅನುಭವಿಸಲು ಬಯಸಿದ್ದೆ. ಪ್ರಕೃತಿಗೆ ಹತ್ತಿರದಲ್ಲಿ ಬದುಕುವುದು ನನಗೆ ಸ್ಪಷ್ಟತೆಯನ್ನು ತಂದಿತು" ಎನ್ನುತ್ತಾರೆ ನೂಪುರ್.
ಸರಳತೆ ಮತ್ತು ನಂಬಿಕೆಯ ಜೀವನ
ನೂಪುರ್ ಈಗ ಕೆಲವೇ ಬಟ್ಟೆ ಮತ್ತು ಕನಿಷ್ಠ ಆಸ್ತಿಯೊಂದಿಗೆ ಬದುಕುತ್ತಿದ್ದಾರೆ. ಸಾಂದರ್ಭಿಕವಾಗಿ ಭಿಕ್ಷೆ ಬೇಡುತ್ತಾರೆ. ಇದು ಅಹಂಕಾರವನ್ನು ಕರಗಿಸಲು ಸಹಾಯ ಮಾಡುತ್ತದೆ ಮತ್ತು ನಮ್ರತೆಯನ್ನು ಕಲಿಸುತ್ತದಂತೆ. "ಬಿಟ್ಟುಕೊಟ್ಟ ನಂತರ ಜೀವನ ಸರಳವಾಯಿತು. ಈಗ ಯಾವುದೇ ಬಿಲ್‌ಗಳು ಅಥವಾ ಒತ್ತಡಗಳಿಲ್ಲ, ಕೇವಲ ಶಾಂತಿ." ಎನ್ನುತ್ತಾರೆ.
ಪೀತಾಂಬರ ಮಾ ಆಗಿ, ಅವರು ಇತರರನ್ನು ಸರಳವಾಗಿ ಬದುಕಲು, ನೆಲೆಗೊಳ್ಳಲು, ಸಂಪತ್ತು ಅಥವಾ ಖ್ಯಾತಿಯನ್ನು ಬೆನ್ನಟ್ಟುವ ಬದಲು ಆಧ್ಯಾತ್ಮಿಕ ನೆಲೆ ಕಂಡುಕೊಳ್ಳಲು ಪ್ರೋತ್ಸಾಹಿಸುತ್ತಾರೆ. ನಂಬಿಕೆಯಲ್ಲಿ ಶಕ್ತಿಯನ್ನು ಕಂಡುಕೊಂಡಿದ್ದಾರೆ.
