ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟೀಸರ್, ಮಹಿಳೆಯರ ಘನತೆಗೆ ಕುಂದು ತರುತ್ತಿದೆ ಎಂಬ ಆರೋಪದ ಮೇಲೆ ವಿವಾದಕ್ಕೆ ಸಿಲುಕಿದೆ. ಆಮ್ ಆದ್ಮಿ ಪಕ್ಷದ ದೂರಿನ ಅನ್ವಯ, ರಾಜ್ಯ ಮಹಿಳಾ ಆಯೋಗವು ಸೆನ್ಸಾರ್ ಮಂಡಳಿಯಿಂದ ವರದಿ ಕೇಳಿದ್ದು, ಚಿತ್ರತಂಡಕ್ಕೆ ಆರಂಭಿಕ ಹಂತದಲ್ಲೇ ಕಾನೂನು ಸಂಕಷ್ಟ ಎದುರಾಗಿದೆ.
ಬೆಂಗಳೂರು(ಜ.12) KVN ಪ್ರೊಡಕ್ಷನ್ಸ್ ನಿರ್ಮಾಣದ ಹಾಗೂ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರಕ್ಕೆ ಈಗ ಕಾನೂನು ಸಂಕಷ್ಟ ಎದುರಾಗುವ ಲಕ್ಷಣಗಳು ಕಾಣಿಸುತ್ತಿವೆ. ಈ ಚಿತ್ರದ ಟೀಸರ್‌ನಲ್ಲಿರುವ ದೃಶ್ಯಗಳು ಮಹಿಳೆಯರ ಘನತೆಗೆ ಕುಂದು ತರುತ್ತಿವೆ ಎಂಬ ದೂರು ದಾಖಲಾಗಿದ್ದು, ಮಹಿಳಾ ಆಯೋಗವು ಈ ಸಂಬಂಧ ಸೆನ್ಸಾರ್ ಮಂಡಳಿಗೆ ಪತ್ರ ಬರೆದಿದೆ.
ಮಹಿಳಾ ಆಯೋಗದಿಂದ ವರದಿ ಕೇಳಿ ಪತ್ರ
ಟಾಕ್ಸಿಕ್ ಚಿತ್ರದ ಟೀಸರ್ ಕುರಿತು ಕೇಳಿಬಂದಿರುವ ಗಂಭೀರ ದೂರುಗಳನ್ನು ಪರಿಗಣಿಸಿರುವ ರಾಜ್ಯ ಮಹಿಳಾ ಆಯೋಗವು, ಕೇಂದ್ರಿಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ಅಧಿಕೃತ ಪತ್ರ ಬರೆದಿದೆ. ಟೀಸರ್‌ನಲ್ಲಿರುವ ದೃಶ್ಯಗಳ ಕುರಿತು ನಿಯಮಾನುಸಾರ ಪರಿಶೀಲನೆ ನಡೆಸಿ, ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಆಯೋಗವು ಸೂಚಿಸಿದೆ. ಇದರಿಂದ ಚಿತ್ರತಂಡಕ್ಕೆ ಆರಂಭದಲ್ಲೇ ದೊಡ್ಡ ತಲೆನೋವು ಶುರುವಾಗಿದೆ.
ಆಮ್ ಆದ್ಮಿ ಪಕ್ಷದಿಂದ ದೂರು ಸಲ್ಲಿಕೆ
ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಅವರು ಮಹಿಳಾ ಆಯೋಗಕ್ಕೆ ದೂರು ನೀಡುವ ಮೂಲಕ ಈ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಟಾಕ್ಸಿಕ್ ಚಿತ್ರದ ಟೀಸರ್‌ನಲ್ಲಿ ಅಶ್ಲೀಲ ದೃಶ್ಯಗಳಿದ್ದು, ಅವು ಮಕ್ಕಳ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿವೆ. ಯಾವುದೇ ಮುನ್ನೆಚ್ಚರಿಕೆ ಅಥವಾ ವಯಸ್ಸಿನ ಮಿತಿ ಇಲ್ಲದೆ ಇಂತಹ ದೃಶ್ಯಗಳನ್ನು ಬಿಡುಗಡೆ ಮಾಡಿರುವುದು ಸರಿಯಲ್ಲ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಟಾಕ್ಸಿಕ್ ದೃಶ್ಯದಿಂದ ಮಕ್ಕಳು-ಮಹಿಳೆಯರ ಘನತೆಗೆ ಧಕ್ಕೆ
ಮನವಿಯಲ್ಲಿರುವ ಅಂಶಗಳ ಪ್ರಕಾರ, ಟೀಸರ್‌ನಲ್ಲಿರುವ ಅಶ್ಲೀಲ ಪ್ರೌಢ ದೃಶ್ಯಗಳು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುತ್ತಿವೆ. ಯಾವುದೇ ವಯಸ್ಸಿನ ಮಿತಿ ಇಲ್ಲದೆ ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ಈ ವಿಡಿಯೋಗಳು ಮಹಿಳೆಯರ ಘನತೆಯನ್ನು ಹರಾಜು ಹಾಕುತ್ತಿವೆ. ಇದು ಕೇವಲ ಒಂದು ಚಿತ್ರದ ವಿಷಯವಲ್ಲ, ಕನ್ನಡದ ಸಾಂಸ್ಕೃತಿಕ ಜಗತ್ತಿಗೆ ಮಾಡುತ್ತಿರುವ ಅವಮಾನ ಎಂದು ಅರ್ಜಿದಾರರು ಕಿಡಿಕಾರಿದ್ದಾರೆ.
ಸೋಷಿಯಲ್ ಮೀಡಿಯಾದಿಂದ ತೆಗೆದುಹಾಕಲು ಮನವಿ
ಕೇವಲ ಟೀಸರ್ ರದ್ದುಗೊಳಿಸುವುದು ಮಾತ್ರವಲ್ಲದೆ, ಯೂಟ್ಯೂಬ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಿಂದ ಈ ಟೀಸರನ್ನು ತಕ್ಷಣವೇ ತೆಗೆದುಹಾಕುವಂತೆ ಉಷಾ ಮೋಹನ್ ಮನವಿ ಮಾಡಿದ್ದಾರೆ. ಸಾರ್ವಜನಿಕವಾಗಿ ಲಭ್ಯವಿರುವ ಈ ದೃಶ್ಯಗಳು ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತಿವೆ ಎಂಬುದು ಅವರ ವಾದವಾಗಿದೆ. ಸೆನ್ಸಾರ್ ಮಂಡಳಿಯು ಈ ಬಗ್ಗೆ ನೀಡುವ ವರದಿಯ ಮೇಲೆ 'ಟಾಕ್ಸಿಕ್' ಚಿತ್ರದ ಮುಂದಿನ ಹಾದಿ ನಿರ್ಧಾರವಾಗಲಿದೆ.


