ಕನ್ನಡಿಗರ ಪ್ರೀತಿ ನೆನೆದೆರೆ ಕಣ್ಣೀರು ಬರುತ್ತೆ: ತಮಿಳು, ಆಂಧ್ರದಲ್ಲೂ ಇದನ್ನೇ ಹೇಳಿದ್ದ ಎಸ್‌ಪಿಬಿ!

ಕನ್ನಡಿಗರ ಪ್ರೀತಿ ನೆನೆದೆರೆ ಕಣ್ಣೀರು ಬರುತ್ತೆ| ಇದೇ ಮಾತನ್ನು ತಮಿಳುನಾಡು, ಆಂಧ್ರದಲ್ಲೂ ಹೇಳಿದ್ದೇನೆ ಎನ್ನುತ್ತಿದ್ದರು ಬಾಲಸುಬ್ರಹ್ಮಣ್ಯಂ

SP Balasubrahmanyam Had Immense Love and Respect For Karnataka And Kannadigas Pod

ಮೈಸೂರು(ಸೆ.26): ‘ಕನ್ನಡಿಗರು ನನಗೆ ತೋರಿಸುತ್ತಿರುವ ಪ್ರೀತಿಗೆ ಯಾವ ರೀತಿ ಋುಣ ಸಂದಾಯ ಮಾಡಬೇಕೋ ಗೊತ್ತಾಗುತ್ತಿಲ್ಲ. ಇದೇ ಮಾತನ್ನು ತಮಿಳುನಾಡು, ಆಂಧ್ರದಲ್ಲೂ ಹೇಳಿದ್ದೇನೆ. ಕನ್ನಡಿಗರ ಪ್ರೀತಿ ನೆನಪಿಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತದೆ’ ಎಂದಿದ್ದರು ಎಸ್‌.ಪಿ. ಬಾಲಸುಬ್ರಹ್ಮಣ್ಯಂ.

2007ರ ಡಿ.16 ರಂದು ‘ಎದೆತುಂಬಿ ಹಾಡುವೆನು’ ಸ್ಪರ್ಧೆಯ ಫೈನಲ್ಸ್‌ನ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ್ದ ವೇಳೆ ಅವರು ನೀಡಿದ್ದ ಸಂದರ್ಶನದಲ್ಲಿ ‘ಮನತುಂಬಿ’ ಮಾತನಾಡಿದ್ದರು. ಆಗಲೇ ಅವರಿಗೆ 61 ವರ್ಷ. ಆ ವೇಳೆಗೆ ಅವರು ಹಾಡಲು ಶುರು ಮಾಡಿ 42 ವರ್ಷಗಳೇ ಕಳೆದಿದ್ದವು. ಅಷ್ಟುವರ್ಷಗಳಿಂದ ಹಾಡುತ್ತಿದ್ದರೂ ಅದೇ ‘ಕಂಠಸಿರಿ’ ಉಳಿಸಿಕೊಳ್ಳಲು ಹೇಗೆ ಸಾಧ್ಯವಾಯಿತು? ಎಂದು ಕೇಳಿದ ಕೂಡಲೇ ‘ಕಾಣದ ಊರಲಿ ನೀ ಕುಳಿತಿರುವೆ, ಎಲ್ಲರ ಕಥೆಯ ನೀ ಬರೆದಿರುವೆ’ ಹಾಡನ್ನು ನೆನಪು ಮಾಡಿಕೊಂಡಿದ್ದರು. ಕನ್ನಡ ಮತ್ತು್ತ ಕನ್ನಡಿಗರ ವಿಷಯ ಬಂದಾಗ ಎಸ್ಪಿ ಭಾವುಕರಾಗುತ್ತಿದ್ದರು.

‘ಮೇಲೆ ಕುಳಿತವನೊಬ್ಬ ನಮ್ಮ ಕಥೆ ಬರೆಯುತ್ತಿರುತ್ತಾನೆ. ಕರ್ಮ ಸಿದ್ಧಾಂತದಲ್ಲಿ ನನಗೆ ನಂಬಿಕೆ. ಇದೆಲ್ಲಾ ಭಗವಂತನ ಕೃಪೆ’ ಎಂದು ಕೈಜೋಡಿಸಿ, ಕಣ್ಮುಚ್ಚಿ ಮೇಲೆ ನೋಡಿದ್ದರು. ‘ಜನ ಎಲ್ಲಿಯವರೆಗೆ ಇಚ್ಛಿಸುತ್ತಾರೋ ಅಲ್ಲಿಯವರೆಗೆ ಹಾಡ್ತೀನಿ. ವೃತ್ತಿ ಬಗ್ಗೆ ಗೌರವ, ದೈವತ್ವದ ಬಗ್ಗೆ ನಂಬಿಕೆ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ’ ಎಂದಿದ್ದರು.

ಕನ್ನಡದಲ್ಲಿ ಥಟ್ಟನೆ ನೆನಪಿಗೆ ಬರುವ ಗೀತೆ ಯಾವುದು? ಎಂದು ಕೇಳಿದಾಗ ‘ಮಾಮರವೆಲ್ಲೋ ಕೋಗಿಲೆ ಎಲ್ಲೋ ಏನೀ ಸ್ನೇಹ ಸಂಬಂಧ, ಎಲ್ಲಿಯದೋ ಈ ಅನುಬಂಧ’ ಎಂದು ಗುನುಗಿದ್ದರು. ‘ತರಿಕೆರೆ ಏರಿ ಮೇಲೆ ನೂರು ಕುರಿ ಮರಿ ಮೇಯ್ತಿತ್ತು..’, ‘ಆಸೆಯ ಭಾವ, ಒಲವಿನ ಜೀವ..’, ‘ಕನಸಲು ನೀನೆ..’ ಇಂತಹ ಮಾಧುರ್ಯವಿರುವ ಗೀತೆಗಳು ಈಗೆಲ್ಲಿ ಎಂದು ಪ್ರಶ್ನಿಸಿದ್ದರು.

Latest Videos
Follow Us:
Download App:
  • android
  • ios