ಬೆಂಗಳೂರು (ಸೆ. 26): ಶ್ರೀಪತಿ ಪಂಡಿತಾರಾಧ್ಯುಲು ಬಾಲಸುಬ್ರಹ್ಮಣ್ಯಂ ಹುಟ್ಟಿದ್ದು ಆಂಧ್ರಪ್ರದೇಶದ ನೆಲ್ಲೂರ್‌ ಸಮೀಪದ ಕೋನೆತಮ್ಮಪೇಟ ಎಂಬ ಊರಿನಲ್ಲಿ. 1946ರ ಜೂನ್‌ 4ರಂದು ಜನನ. ತಂದೆ ಎಸ್‌.ಪಿ.ಸಾಂಬಮೂರ್ತಿ ಖ್ಯಾತ ಹರಿಕಥಾ ವಿದ್ವಾಂಸ. ನಾಟಕಗಳಲ್ಲೂ ನಟಿಸುತ್ತಿದ್ದರು. ತಾಯಿ ಶಕುಂತಲಮ್ಮ. ಅವರದು ಸಂಪ್ರದಾಯಸ್ಥ ತೆಲುಗು ಬ್ರಾಹ್ಮಣರ ಕುಟುಂಬ. ತಂದೆಯ ಹರಿಕಥೆ ಮತ್ತು ನಾಟಕಗಳಲ್ಲಿ ಇರುತ್ತಿದ್ದ ಸಂಗೀತ ಬಾಲ್ಯದಲ್ಲಿಯೇ ಎಸ್‌ಪಿಬಿಯನ್ನು ಗಾಯನಲೋಕದತ್ತ ಸೆಳೆದಿತ್ತು.

ಸಾಂಬಮೂರ್ತಿ ಹಾಗೂ ಶಕುಂತಲಮ್ಮ ದಂಪತಿಗೆ ಎಂಟು ಮಕ್ಕಳು. ಎಸ್‌ಪಿಬಿ ಸೇರಿ ಮೂವರು ಗಂಡು ಮಕ್ಕಳು ಮತ್ತು ಖ್ಯಾತ ಗಾಯಕಿ ಎಸ್‌.ಪಿ.ಶೈಲಜಾ ಸೇರಿದಂತೆ ಐವರು ಹೆಣ್ಣುಮಕ್ಕಳು.

ಹುಟ್ಟೂರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆಯುತ್ತಲೇ ಎಸ್‌ಪಿಬಿ ಸಂಗೀತ ಶಿಕ್ಷಣವನ್ನೂ ಪಡೆಯುತ್ತಿದ್ದರು. ನಂತರ ತಂದೆಯ ಆಸೆಯಂತೆ ಅನಂತಪುರಕ್ಕೆ ತೆರಳಿ ಜೆಎನ್‌ಟಿಯು ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿಗೆ ಸೇರಿದರು. ಆದರೆ, ಟೈಫಾಯ್ಡ್‌ಗೆ ತುತ್ತಾಗಿ ಎಂಜಿನಿಯರಿಂಗ್‌ ಶಿಕ್ಷಣ ಅರ್ಧಕ್ಕೇ ನಿಂತಿತು.

ಕನ್ನಡಿಗರ ಪ್ರೀತಿ ನೆನೆದರೆ ಕಣ್ಣೀರು ಬರುತ್ತೆ: ತಮಿಳು, ಆಂಧ್ರದಲ್ಲೂ ಇದನ್ನೇ ಹೇಳಿದ್ರು ಎಸ್‌ಪಿಬಿ

ನಂತರ ಚೆನ್ನೈನ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ಸ್‌ನಲ್ಲಿ ಎಎಂಐಇ ಕೋರ್ಸ್‌ ಮುಗಿಸಿದರು. ಆದರೂ ತಾಂತ್ರಿಕ ಶಿಕ್ಷಣಕ್ಕಿಂತ ಹೆಚ್ಚಾಗಿ ಸಂಗೀತದ ಬಗ್ಗೆಯೇ ಅವರ ಮನಸ್ಸು ತುಡಿಯುತ್ತಿತ್ತು. ಎಂಜಿನಿಯರಿಂಗ್‌ ಓದುವಾಗಲೂ ಸಂಗೀತದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುತ್ತಿದ್ದರು. ಅವರಿಗೆ ದೈವದತ್ತ ಸುಮಧುರ ಕಂಠವಿತ್ತು.

ಸಂಗೀತ ಕ್ಷೇತ್ರದಲ್ಲಿ ಸಕ್ರಿಯವಾಗಿ ಪ್ರವೇಶಿಸುತ್ತಿದ್ದಂತೆಯೇ ಅವರನ್ನು ಅವಕಾಶಗಳು ಹುಡುಕಿಕೊಂಡು ಬರತೊಡಗಿದವು. ಈ ನಡುವೆ ಸಾವಿತ್ರಿ ಎಂಬುವರೊಂದಿಗೆ ವಿವಾಹವಾಯಿತು. ಒಬ್ಬಳು ಮಗಳು, ಒಬ್ಬ ಮಗ ಹುಟ್ಟಿದರು. ಮಗಳು ಪಲ್ಲವಿ. ಮಗ ಎಸ್‌ಪಿಬಿ ಚರಣ್‌. ಇವರೂ ಕೂಡ ಹಿನ್ನೆಲೆ ಗಾಯಕ ಮತ್ತು ಸಿನಿಮಾ ನಿರ್ಮಾಪಕ.

ಶಿರಸಿ: ಮಾರಿಕಾಂಬಾ ದೇವಿ ಮೂರ್ತಿ ತಲೆಯ ಮೇಲೆ ಎತ್ತಿ ಹಿಡಿದು ಗೌರವಿಸಿದ್ದ ಎಸ್‌ಪಿಬಿ

ಬಾಲ್ಯದಲ್ಲಿ ಹಾಡುಗಾರಿಕೆಯ ಜೊತೆಗೆ ಕೊಳಲು, ಹಾರ್ಮೋನಿಯಂ ನುಡಿಸುವುದನ್ನೂ ಎಸ್‌ಪಿಬಿ ಯಾರ ಸಹಾಯವೂ ಇಲ್ಲದೆ ತಾವೇ ಕಲಿತಿದ್ದರು. 1964ರಲ್ಲಿ ಚೆನ್ನೈನಲ್ಲಿ ತೆಲುಗು ಸಾಂಸ್ಕೃತಿಕ ಸಂಘಟನೆಯೊಂದು ಏರ್ಪಡಿಸಿದ್ದ ಗಾಯನ ಸ್ಪರ್ಧೆಯಲ್ಲಿ ಅವರಿಗೆ ಮೊದಲ ಬಹುಮಾನ ಬಂದಿತ್ತು. ಆಗ ಅವರಿಗೆ 18 ವರ್ಷ. ಔಪಚಾರಿಕವಾಗಿ ಸಂಗೀತವನ್ನು ಕಲಿಯದೆ, ಶಾಸ್ತ್ರೀಯ ಸಂಗೀತದ ಜ್ಞಾನವಿಲ್ಲದೆಯೇ ಹಾಡಿದ್ದರೂ ಕೇಳುಗರ ಮನವನ್ನೂ, ಸ್ಪರ್ಧೆಯ ತೀರ್ಪುಗಾರರ ಮನವನ್ನೂ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈ ಸ್ಪರ್ಧೆಯೇ ಅವರ ಐದು ದಶಕಗಳ ಸುದೀರ್ಘ ಹಿನ್ನೆಲೆ ಗಾಯನ ಯಾನಕ್ಕೂ ನಾಂದಿಯಾಯಿತು.