ಬದುಕು ಎಷ್ಟೇ ಬ್ಯುಸಿಯಾಗಿದ್ದರೂ ನನ್ನನ್ನು ನೆಲದ ಮೇಲೆ ಇರಿಸಲು ಮತ್ತು ಜೀವನದಲ್ಲಿ ಯಾವುದು ನಿಜವಾಗಿಯೂ ಮುಖ್ಯ ಎಂಬುದನ್ನು ನೆನಪಿಸಲು ನನ್ನ ಕುಟುಂಬವೇ ಕಾರಣ" ಎಂದು ಹೇಳಿದ್ದಾರೆ. ಮಕ್ಕಳಾದ ಆರ್ಯನ್, ಸುಹಾನಾ ಮತ್ತು ಅಬ್ರಾಂ ಸೀಕ್ರೆಟ್ ಮ್ಯಾಟರ್ ಬಗ್ಗೆ ಶಾರುಖ್ ಏನು ಹೇಳಿದ್ದಾರೆ ನೋಡಿ..!

'ಲೆಗಸಿ' ಅಂದರೆ ಏನು ಎಂಬ ಬಗ್ಗೆ ಕಿಂಗ್ ಖಾನ್ ಶಾರುಖ್ ಬಿಚ್ಚಿಟ್ಟ ಮನದ ಮಾತು!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂಬೈ: ಬಾಲಿವುಡ್‌ನ 'ಬಾದ್‌ಶಾ' ಶಾರುಖ್ ಖಾನ್ (Shah Rukh Khan) ಸದ್ಯ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ನಾಲ್ಕು ವರ್ಷಗಳ ಸುದೀರ್ಘ ವಿರಾಮದ ನಂತರ 2023ರಲ್ಲಿ 'ಪಠಾಣ್' ಮೂಲಕ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ ಅವರು, ನಂತರ 'ಜವಾನ್' ಮತ್ತು 'ಡಂಕಿ' ಸಿನಿಮಾಗಳ ಮೂಲಕ ಬಾಕ್ಸಾಫೀಸ್‌ನಲ್ಲಿ ಸುನಾಮಿ ಎಬ್ಬಿಸಿದರು. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕಿಂಗ್ ಖಾನ್ ತಮ್ಮ ಬದುಕು, ಕುಟುಂಬ ಮತ್ತು ಯಶಸ್ಸಿನ ಬಗ್ಗೆ ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ.

ಶಾರುಖ್ ಖಾನ್ ಅವರ ಪಾಲಿಗೆ ಅವರ ಮಕ್ಕಳೇ ದೊಡ್ಡ ವಿಮರ್ಶಕರಂತೆ. ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಅವರು, "ನನ್ನ ಮಕ್ಕಳು ನನ್ನ ಬದುಕಿನ ಶ್ರೇಷ್ಠ ವಿಮರ್ಶಕರು! ನನ್ನ ಕುಟುಂಬವೇ ನನ್ನ ಪಾಲಿನ ಮಾರ್ಗದರ್ಶಿ ನಕ್ಷತ್ರ (North Star). ಬದುಕು ಎಷ್ಟೇ ಬ್ಯುಸಿಯಾಗಿದ್ದರೂ ನನ್ನನ್ನು ನೆಲದ ಮೇಲೆ ಇರಿಸಲು ಮತ್ತು ಜೀವನದಲ್ಲಿ ಯಾವುದು ನಿಜವಾಗಿಯೂ ಮುಖ್ಯ ಎಂಬುದನ್ನು ನೆನಪಿಸಲು ನನ್ನ ಕುಟುಂಬವೇ ಕಾರಣ" ಎಂದು ಹೇಳಿದ್ದಾರೆ. ಮಕ್ಕಳಾದ ಆರ್ಯನ್, ಸುಹಾನಾ ಮತ್ತು ಅಬ್ರಾಂ ತಮ್ಮ ತಂದೆಯ ಸಿನಿಮಾಗಳನ್ನು ನೋಡಿ ಮುಕ್ತವಾಗಿ ವಿಮರ್ಶೆ ಮಾಡುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ.

'ಪರಂಪರೆ' ಅಥವಾ 'ಲೆಗಸಿ'ಗೆ ಶಾರುಖ್ ಖಾನ್ ಹೊಸ ಅರ್ಥ

ಇನ್ನು 'ಪರಂಪರೆ' ಅಥವಾ 'ಲೆಗಸಿ' ಎನ್ನುವ ಪದಕ್ಕೆ ಶಾರುಖ್ ಹೊಸ ಅರ್ಥ ನೀಡಿದ್ದಾರೆ. ಒಬ್ಬ ವ್ಯಕ್ತಿಯ ಪರಂಪರೆ ಎಂದರೆ ಕೇವಲ ಕೆರಿಯರ್‌ನಲ್ಲಿ ಸಾಧಿಸಿದ ದೊಡ್ಡ ಯಶಸ್ಸು ಅಥವಾ ಸಾಧನೆಗಳಲ್ಲ. ಬದಲಿಗೆ ಕುಟುಂಬದ ಜೊತೆ ಹಂಚಿಕೊಂಡ ಮೌಲ್ಯಗಳು ಮತ್ತು ಸುಂದರ ನೆನಪುಗಳೇ ನಿಜವಾದ ಆಸ್ತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ಸಿನಿಮಾ ಕೆಲಸಗಳ ನಡುವೆಯೂ ಒಬ್ಬ ತಂದೆಯಾಗಿ ಸಣ್ಣ ಪುಟ್ಟ ಖುಷಿಗಳನ್ನು ಅನುಭವಿಸುವುದನ್ನು ನಾನು ಎಂದಿಗೂ ಬಿಟ್ಟುಕೊಡುವುದಿಲ್ಲ" ಎನ್ನುವ ಮೂಲಕ ತಮ್ಮ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ರೂಪವನ್ನು ತೋರಿಸಿದ್ದಾರೆ.

ಶಾರುಖ್ ಅವರ ಪುತ್ರ ಆರ್ಯನ್ ಖಾನ್ ಈಗಾಗಲೇ ನಿರ್ದೇಶನದತ್ತ ಹೆಜ್ಜೆ ಇಟ್ಟಿದ್ದು, ಮಗಳು ಸುಹಾನಾ ಖಾನ್ ತಂದೆಯ ಜೊತೆಯಲ್ಲೇ 'ಕಿಂಗ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಕ್ಕಳ ಈ ಆತ್ಮವಿಶ್ವಾಸವನ್ನು ಕಂಡು ಶಾರುಖ್ ಹೆಮ್ಮೆ ಪಡುತ್ತಾರೆ. ಅಷ್ಟೇ ಅಲ್ಲದೆ, ಮುಂಬೈನ ತಮ್ಮ ನಿವಾಸ 'ಮನ್ನತ್' ನಿಂದ ಕಾಣುವ ಅರಬ್ಬಿ ಸಮುದ್ರದ ಬಗ್ಗೆಯೂ ಶಾರುಖ್ ಮಾತನಾಡಿದ್ದಾರೆ. "ಸಮುದ್ರವು ನಿಮ್ಮನ್ನು ವಿನಮ್ರರನ್ನಾಗಿ ಮಾಡುತ್ತದೆ. ಜಗತ್ತಿನಲ್ಲಿ ಎಲ್ಲವನ್ನೂ ನಾವು ನಿಯಂತ್ರಿಸಲು ಸಾಧ್ಯವಿಲ್ಲ ಮತ್ತು ನಮಗಿಂತ ದೊಡ್ಡದಾದ ಸಂಗತಿಗಳು ಬಹಳಷ್ಟಿವೆ ಎಂಬುದನ್ನು ಸಮುದ್ರದ ಆಳ ಮತ್ತು ವಿಸ್ತಾರ ನೆನಪಿಸುತ್ತದೆ" ಎಂದಿದ್ದಾರೆ.

'ಕಿಂಗ್' ಸಿನಿಮಾ ಈ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆ

ಸಿದ್ಧಾರ್ಥ್ ಆನಂದ್ ನಿರ್ದೇಶನದ 'ಕಿಂಗ್' ಸಿನಿಮಾ ಈ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಅಭಿಷೇಕ್ ಬಚ್ಚನ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸುಹಾನಾ ಖಾನ್ ಮತ್ತು ಶಾರುಖ್ ಖಾನ್ ಅವರನ್ನು ಒಟ್ಟಾಗಿ ಬೆಳ್ಳಿ ಪರದೆಯ ಮೇಲೆ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ದೊಡ್ಡ ಕನಸುಗಳನ್ನು ಕಾಣುವುದು ಮತ್ತು ಅಷ್ಟೇ ಸುಲಭವಾಗಿ ಯಾವುದನ್ನೂ ಹಚ್ಚಿಕೊಳ್ಳದೆ ಮುನ್ನಡೆಯುವುದು ಜೀವನದ ಬ್ಯಾಲೆನ್ಸ್ ಎಂದು ಶಾರುಖ್ ಖಾನ್ ಸಂದರ್ಶನವನ್ನು ಮುಕ್ತಾಯಗೊಳಿಸಿದ್ದಾರೆ.