ಸ್ಟಾರ್‌ ನಟಿ ಸಮಂತಾ ಹಾಗೂ ಖ್ಯಾತ ನಿರ್ದೇಶಕ ರಾಜ್‌ ನಿಡಿಮೊರ್‌ ಇಷ್ಟು ದಿನ ರಿಲೇಶನ್‌ಶಿಪ್‌ನಲ್ಲಿದ್ದವರು ಇದೀಗ ಸಾಂಪ್ರದಾಯಿಕವಾಗಿ ಪತಿ ಪತ್ನಿ ಆಗಿದ್ದಾರೆ. ರಹಸ್ಯವಾಗಿ ಮದುವೆಯಾಗಿದ್ದಾಗ ನಡೆದ ಸಂಗತಿ ಈಗ ರಿವೀಲ್‌ ಆಗಿದೆ.

ಸಮಂತ್‌ ರುತ್‌ ಪ್ರಭು (Samantha ruth prabhu) ಹಲವು ಆತ್ಮೀಯರ ಪಾಲಿಗೆ ಸ್ಯಾಮ್‌. ತೆಲುಗಿನ ಸ್ಟಾರ್‌ ನಟಿ ಮೂಲತಃ ಕ್ರಿಶ್ಚಿಯನ್‌ ಅನ್ನೋದು ಹಲವರಿಗೆ ತಿಳಿದಿಲ್ಲ. ಇವರ ತಂದೆ ಜೋಸೆಫ್‌ ಪ್ರಭು, ತಾಯಿ ನಿನೆತ್‌. ಅಪ್ಪ ತೆಲುಗು ಭಾಷಿಗರಾದರೆ ಅಮ್ಮ ಮಲಯಾಳಿ. ತಮಿಳ್ನಾಡಿನಲ್ಲಿ ಶಾಲೆ ಓದಿದ ಈ ಪ್ರತಿಭಾವಂತೆಗೆ ತೆಲುಗು ಭಾಷೆಯ ಜೊತೆಗೆ ತಮಿಳು ಭಾಷೆಯೂ ಸಲೀಸು. ಇಂಥಾ ಬ್ಯಾಗ್ರೌಂಡ್‌ನಿಂದ ಬಂದ ನಟಿ ಆಗಾಗ ತಮ್ಮ ಈಗಿರುವ ಮನೆಯ ಫೋಟೋ ಪೋಸ್ಟ್ ಮಾಡುತ್ತಿರುತ್ತಾರೆ. ಅದರಲ್ಲಿ ಹೆಚ್ಚಾಗಿ ಪೂಜಾ ಕೋಣೆಯ ಫೋಟೋ ಇರುತ್ತದೆ. ಈಕೆ ಸದಾ ಪೂಜಿಸುವುದು ದೇವಿಯನ್ನು. ಆಕೆಯ ಪೂಜಾ ರೂಮ್‌ನಲ್ಲಿ ಸದಾ ದೇವಿಯ ಚಿತ್ರದ ಮುಂದೆ ದೀಪವೊಂದು ಬೆಳಗುತ್ತಿರುತ್ತದೆ. ತನ್ನ ದಿನಚರಿಯಲ್ಲಿ ಆಕೆ ದೇವಿಗೆ ಕೈ ಮುಗಿಯದೇ ಇರೋದು ಬಲು ಅಪರೂಪ. ಅಷ್ಟಾಗಿಯೂ ಈ ನಟಿ ಅಪ್ಪಟ ಅಧ್ಯಾತ್ಮ ಸಾಧಕಿ. ಈಕೆಗೆ ಅಧ್ಯಾತ್ಮದ ದೀಕ್ಷೆ ನೀಡಿ ಭಿನ್ನ ಹಾದಿಯಲ್ಲಿ ಕರೆದೊಯ್ದವರು ಜಗ್ಗಿ ವಾಸುದೇವ ಅವರು. ಇವರು ಸದ್ಗುರು ಎಂದೇ ಜನಜನಿತ.

ಸಮಂತಾ ಬಗ್ಗೆ ಈ ಲೆವೆಲ್‌ನ ಬಿಲ್ಡಪ್‌ ಕೊಡೋದಕ್ಕೂ ರೀಸನ್‌ ಇದೆ. ಕ್ರಿಶ್ಚಿಯನ್‌ ಹಿನ್ನೆಲೆಯ ಹುಡುಗಿ ಇದೀಗ ರಾಜ್‌ ನಿಡಿಮೋರ್‌ ಎಂಬ ಹಿಂದಿ ನಿರ್ದೇಶಕನ ಜೊತೆಗೆ ಎರಡನೇ ಮದುವೆ ಆಗಿದ್ದಾರೆ. ವಿಶೇಷ ಅಂದರೆ ಇವರ ಮದುವೆ ಕೊಯಂಬತ್ತೂರಿನ ಇಶಾ ಫೌಂಡೇಷನ್‌ನಲ್ಲಿ ನಡೆದಿದೆ. ಇಲ್ಲಿನ ಲಿಂಗ ಭೈರವಿ ದೇವಿ ಆಲಯದಲ್ಲಿ ಇಬ್ಬರೂ ಸತಿಪತಿಗಳಾಗಿದ್ದಾರೆ. ಕ್ರಿಶ್ಚಿಯನ್‌ ಲೇಡಿ ಹಿಂದೂ ಹುಡುಗನನ್ನು ಮದುವೆ ಆಗ್ತಿದ್ದಾರೆ ಅನ್ನೋದು ಕಾಮನ್‌ ವಿಷಯ ಆಗಿದ್ದರೂ ಆಕೆ ಔಟ್ ಆಂಡ್‌ ಔಟ್‌ ಹಿಂದೂ ದೇವರನ್ನೇ ಪೂಜಿಸಿ, ಅದರಲ್ಲೂ ಅಧ್ಯಾತ್ಮದಲ್ಲಿ ಸಾಧನೆ ಮಾಡಿ ಆಧ್ಯಾತ್ಮ ಸಾಧನೆಯಲ್ಲಿ ಉನ್ನತ ಮಟ್ಟದ ಕ್ರಮದಲ್ಲಿ ಮದುವೆ ಆಗಿರೋದೇ ವಿಶೇಷ.

ಏನಿದು ಭೂತ ಶುದ್ಧಿ ವಿವಾಹ ಕ್ರಮ?

ಇವರು ಮದುವೆ ಆಗಿರೋ ಪದ್ಧತಿ ಸದ್ಯ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಇವರಿಬ್ಬರೂ ಮದುವೆಯಾದದ್ದು ಭೂತ ಶುದ್ಧಿ ವಿವಾಹ ಕ್ರಮದಲ್ಲಿ. ಆಧ್ಯಾತ್ಮದಲ್ಲಿ ದಂಪತಿ ಮದುವೆಯಾಗುವ ಮೊದಲು ತಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುವ ಒಂದು ಯೌಗಿಕ ಆಚರಣೆಯನ್ನು ಮಾಡಬೇಕು. ಪಂಚಭೂತ ಅಂದರೆ ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶ ಶುದ್ಧೀಕರಣವನ್ನು ಒಳಗೊಂಡಿರುವಂಥದ್ದು. ಇಬ್ಬರ ಭಾವನೆಗಳು, ಆಲೋಚನೆಗಳು ಮತ್ತು ದೈಹಿಕ ಗಡಿಗಳನ್ನು ಮೀರಿ ಆಳವಾದ ಸಂಪರ್ಕವನ್ನು ಸ್ಥಾಪಿಸುವ ವಿವಾಹವಿದು. ಈ ಮದುವೆಗೂ ಮೊದಲು ಗಂಡು ಹಾಗೂ ಹೆಣ್ಣು ದೇವಿಯಲ್ಲಿ ಸಂಪೂರ್ಣ ಶರಣಾಗತಿ ತೋರಿಸಬೇಕು. ತಂತ್ರ ಪದ್ಧತಿಯಲ್ಲಿ ದೇಹದ ಹೊರಗಿರುವ ಪಂಚಭೂತಗಳ ಜೊತೆಗೆ ಅಂತರಂಗವನ್ನೂ ಶುದ್ಧೀಕರಿಸಿ ಸಂಪೂರ್ಣ ಪರಿಶುದ್ಧ ಬಗೆಯಲ್ಲಿ ವಿವಾಹ ನಡೆದಿದೆ. ಈ ಬಂಧ ಹೆಚ್ಚು ಗಟ್ಟಿಯಾಗಿ ಕೊನೆಯವರೆಗೂ ಸೌಹಾರ್ದತೆಯಲ್ಲಿ ಉಳಿಯುತ್ತದೆ ಎಂಬ ನಂಬಿಕೆ.

View post on Instagram

ಭೈರವಿ ತಾಂತ್ರಿಕ ಪದ್ಧತಿಯ ಮಹಾನ್‌ ದೇವತೆ. ಆಕೆಯ ಸನ್ನಿಧಿಯಲ್ಲಿ ಮದುವೆ ನಡೆದದ್ದು ಹೆಚ್ಚು ಮಹತ್ವ ಪಡೆದಿದೆ. ದೇವಿಯ ಸಮ್ಮುಖದಲ್ಲಿ ಯೂನಿವರ್ಸ್‌ನ ಸಾಕ್ಷಿಯಾಗಿ ಸಂಪೂರ್ಣ ಆಧ್ಯಾತ್ಮ ಕ್ರಮದಲ್ಲಿ ನಡೆದ ಈ ಮದುವೆ ವಿಶೇಷದಲ್ಲಿ ವಿಶೇಷ ಅನಿಸಿಕೊಂಡಿದೆ. ಮೊದಲ ಮದುವೆಯಿಂದ ಹೊರಬಂದ ಮೇಲೆ ಸಮಂತಾ ಬಹಳ ದುಃಖಿತರಾಗಿದ್ದರು. ನಡುವೆ ಫ್ಯಾನ್‌ಗಳ ನಡುವಿನ ಗದ್ದಲವೂ ಜೋರಾಗಿ ಸಮಂತಾ ಬಲು ಮುಜುಗರ ಅನುಭವಿಸಿದ್ದರು. ಜೊತೆಗೆ ಆರೋಗ್ಯವೂ ಕೈಕೊಟ್ಟು ಸಮಸ್ಯೆಗಳ ಮೇಲೆ ಸಮಸ್ಯೆ ಬಂದು ಹೈರಾಣಾಗುವಂತಾಯ್ತು. ಹೀಗಾಗಿ ಈ ವಿವಾಹ ಬಂಧ ಗಟ್ಟಿಯಾಗಲಿ ಅಂತ ತಾನು ನಂಬಿದ್ದ ಅಧ್ಯಾತ್ಮ ತತ್ವದಡಿಯಲ್ಲೇ ಮದುವೆಯಾಗಿದ್ದಾರೆ.