ಸ್ಮಾರ್ಟ್ಫೋನ್ ಕುರಿತು ಸುಳ್ಳು ಹೇಳಿ ಪೇಚಿಗೆ ಸಿಲುಕಿದ ನಟ ಅಮಿತಾಭ್: 10 ಲಕ್ಷ ದಂಡಕ್ಕೆ ಆಗ್ರಹ
ಸ್ಮಾರ್ಟ್ಫೋನ್ ಜಾಹೀತಾರೊಂದರಲ್ಲಿ ಗ್ರಾಹಕರ ದಿಕ್ಕು ತಪ್ಪಿಸಿ ಸುಳ್ಳು ಮಾಹಿತಿ ನೀಡಿರುವುದಾಗಿ ನಟ ಅಮಿತಾಭ್ ಬಚ್ಚನ್ ವಿರುದ್ಧ ಆರೋಪ ಕೇಳಿಬಂದಿದ್ದು, 10 ಲಕ್ಷ ದಂಡಕ್ಕೆ ಆಗ್ರಹಿಸಲಾಗಿದೆ.
ವಯಸ್ಸು ಎನ್ನುವುದು ದೇಹಕ್ಕೆ ಮಾತ್ರ, ಮನಸ್ಸಿಗೆ ಅಲ್ಲ ಎನ್ನುವ ಗಾದೆ ಮಾತನ್ನು ಇದಾಗಲೇ ಹಲವಾರು ಮಂದಿ ಸಾಬೀತು ಮಾಡಿದ್ದಾರೆ. ಇನ್ನು ನಟನೆಯ ವಿಷಯಕ್ಕೆ ಬಂದರೆ ಕೆಲವು ಹಿರಿಯ ನಟರಿಗೆ ಸರಿಸಾಟಿ ಯುವಕರೂ ಇಲ್ಲವೇನೋ ಎನ್ನಿಸುತ್ತದೆ. ಅಂಥವರಲ್ಲಿ ಒಬ್ಬರು ನಟ ಅಮಿತಾಭ್ ಬಚ್ಚನ್ (Amitabh Bachchan). ಅಮಿತಾಭ್ ಅವರಿಗೆ ಈಗ 80 ವರ್ಷ. ಈ ವಯಸ್ಸಿನಲ್ಲೂ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಹಲವು ಜಾಹೀರಾತುಗಳಲ್ಲಿ ಭಾಗವಹಿಸುತ್ತಿದ್ದಾರೆ, ಕೆಲವು ಕಡೆಗಳಲ್ಲಿ ಹಿನ್ನೆಗೆ ದನಿಯನ್ನೂ ನೀಡುತ್ತಾರೆ. ಈ ವಯಸ್ಸಿನಲ್ಲಿಯೂ ಬಿಡುವಿಲ್ಲದೇ ಅವಿರತವಾಗಿ ದುಡಿಯುತ್ತಿದ್ದಾರೆ ಅಮಿತಾಭ್. ಈಗ ಅವರ ಜನಪ್ರಿಯ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್ಪತಿ’ (Kaun Banega Crorepati) ಮತ್ತೊಮ್ಮೆ ತೆರೆ ಮೇಲೆ ಬಂದಿದೆ. ಕಳೆದ ಒಂದೂವರೆ ದಶಕಗಳಿಂದ ಈ ಷೋ ನಡೆಸಿಕೊಡುತ್ತಿದ್ದಾರೆ ಅಮಿತಾಭ್.
ಹಲವು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿರೋ ನಟನಿಗೆ ಈಗ ಸಂಕಷ್ಟ ಎದುರಾಗಿದೆ. 10 ಲಕ್ಷ ರೂಪಾಯಿ ದಂಡವನ್ನು ಕಟ್ಟುವಂತೆ ಒತ್ತಾಯಿಸಲಾಗುತ್ತಿದೆ. ಅಷ್ಟಕ್ಕೂ ಆಗಿದ್ದೇನೆಂದರೆ ನಟ ಸುಳ್ಳು ಹೇಳಿದ್ದಾರೆ ಎನ್ನುವ ಆರೋಪ! ಹೌದು. ಜಾಹೀರಾತೊಂದರಲ್ಲಿ ನಟ ಅಮಿತಾಭ್ ಬಚ್ಚನ್ ಸುಳ್ಳು ಹೇಳಿ, ಗ್ರಾಹಕರನ್ನು ದಾರಿತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಅಲ್ಲದೆ, ಸಣ್ಣ-ಮಧ್ಯಮ ಸಗಟು ವ್ಯಾಪಾರಿಗಳಿಗೆ ನಷ್ಟವಾಗುವ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ಗಂಭೀರ ಆರೋಪ ಮಾಡಿದೆ. ಇದು ಆನ್ಲೈನ್ ಶಾಪಿಂಗ್ ಮಳಿಗೆ ಫ್ಲಿಪ್ಕಾರ್ಟ್ ಕುರಿತು ಆಗಿದೆ. ಇದರ ರಾಯಭಾರಿ ಆಗಿರುವ ನಟ, ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಫ್ಲಿಪ್ಕಾರ್ಟ್ನ ಬಿಗ್ಬಿಲಿಯನ್ ಡೇ ಕುರಿತ ಜಾಹೀರಾತು. ಇದರಲ್ಲಿ ಗುಣಮಟ್ಟದ, ದುಬಾರಿ ಸ್ಮಾರ್ಟ್ಫೋನ್ ಗಳನ್ನು ಕಡಿಮೆ ಬೆಲೆಗೆ ನೀಡುತ್ತಿರುವ ಆಫರ್ ಕುರಿತಾಗಿ ಇದೆ.
ಕೇರಳದಲ್ಲಿ ದೇವಿಯ ಪೀಠದಲ್ಲಿ ನಟಿ ಖುಷ್ಬೂ: ಕಾಲು ತೊಳೆದು ನಾರಿ ಪೂಜೆ ಮಾಡಿದ ಅರ್ಚಕರು
ಈ ಜಾಹೀರಾತಿನಲ್ಲಿ ಅಮಿತಾಭ್ ಅವರು ತಪ್ಪು ಮಾಹಿತಿ ನೀಡಿ ಗ್ರಾಹಕರ ದಾರಿ ತಪ್ಪಿಸಿದ್ದಾರೆ ಎಂದು ಸಿಎಐಟಿ ಆರೋಪಿಸಿದ್ದು, ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ ದೂರು ನೀಡಿದೆ. ಈ ಜಾಹೀರಾತು, ಗ್ರಾಹಕರ ದಿಕ್ಕು ತಪ್ಪಿಸುವಂತಿದ್ದು, ತಪ್ಪು ಮಾಹಿತಿಯನ್ನು ಒಳಗೊಂಡಿದೆ ಎನ್ನುವ ಆರೋಪವಿದೆ. ಆದ್ದರಿಂದ ಫ್ಲಿಪ್ಕಾರ್ಟ್ ಸಂಸ್ಥೆಯ ಜೊತೆ ಅಮಿತಾಭ್ ಅವರಿಗೂ 10 ಲಕ್ಷ ರೂಪಾಯಿ ದಂಡ ವಿಧಿಸಬೇಕು ಹಾಗೂ ಈ ಕೂಡಲೇ ಜಾಹೀರಾತನ್ನು ಹಿಂಪಡೆಯುವಂತೆ ಫ್ಲಿಪ್ಕಾರ್ಟ್ಗೆ ಸೂಚಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ ಮೊಬೈಲ್‌ಗಳಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿರುವ ಡೀಲ್‌ಗಳು ಚಿಲ್ಲರೆ ಅಂಗಡಿಗಳಲ್ಲಿ ಆಫ್‌ಲೈನ್‌ನಲ್ಲಿ ಲಭ್ಯವಿರುವುದಿಲ್ಲ ಎಂದು ಜಾಹೀರಾತಿನ ಒಂದು ಸ್ಥಳದಲ್ಲಿ ಬಚ್ಚನ್ ಗ್ರಾಹಕರಿಗೆ ಹೇಳುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. Flipkart ಬಚ್ಚನ್ ಮೂಲಕ ಗ್ರಾಹಕರಲ್ಲಿ ಬೆಲೆಗಳ ಬಗ್ಗೆ ಗೊಂದಲವನ್ನು ಹರಡುತ್ತಿದೆ. ಇದು ಕಾನೂನಿನ ಉಲ್ಲಂಘನೆಯಾಗಿದೆ ಎಂದು CAT ಹೇಳಿದೆ.
ಜಾಹೀರಾತಿನಲ್ಲಿ ಕಚೇರಿಯೊಂದರಲ್ಲಿ ನಡೆಯುತ್ತಿರುವ ಮಾತುಕತೆಯ ಸನ್ನಿವೇಶವಿದ್ದು, ವ್ಯಕ್ತಿಯೊಬ್ಬ ಫ್ಲಿಫ್ಕಾರ್ಟ್ನ ಬಿಗ್ಬಿಲಿಯನ್ ಡೇನಲ್ಲಿ ಪ್ರೀಮಿಯಂ ಸ್ಮಾರ್ಟ್ಫೋನ್ಗಳಿಗೆ ಭಾರಿ ಕಡಿಮೆ ಬೆಲೆ ಇದ್ದು ಒಳ್ಳೆಯ ಆಫರ್ಗಳಿವೆ ಎನ್ನುತ್ತಾನೆ, ಅದಕ್ಕೆ ಮತ್ತೊಬ್ಬ ವ್ಯಕ್ತಿ, ಆ ಆಫರ್ಗಳನ್ನು ಪಕ್ಕದ ಅಂಗಡಿಯವನೂ ಕೊಡುತ್ತಾನೆ ಎನ್ನುತ್ತಾನೆ. ಕೂಡಲೇ ಪ್ರತ್ಯಕ್ಷವಾಗುವ ಅಮಿತಾಭ್, ಫ್ಲಿಪ್ಕಾರ್ಟ್ ಕೊಡುತ್ತಿರುವ ಆಫರ್ಗಳನ್ನು ಅಂಗಡಿಯವ ಕೊಡಲು ಸಾಧ್ಯವೇ ಇಲ್ಲ, ಇಂಥಹಾ ಆಫರ್ಗಳು ಫ್ಲಿಪ್ಕಾರ್ಟ್ನ ಬಿಗ್ಬಿಲಿಯನ್ ಡೇ ನಲ್ಲಿ ಮಾತ್ರವೇ ಸಿಗುತ್ತವೆ ಎನ್ನುತ್ತಾರೆ. ಆದರೆ ಅಸಲಿಗೆ ಇದು ಸುಳ್ಳು ಎನ್ನುವುದು ಆರೋಪ.
ರಜನೀಕಾಂತರನ್ನು ಭಿಕ್ಷುಕ ಎಂದು ತಿಳಿದ ಮಹಿಳೆ ನೀಡಿದ್ರು 10 ರೂಪಾಯಿ! ಮುಂದೇನಾಯ್ತು?