ʼರಾಕಿಂಗ್‌ ಸ್ಟಾರ್‌ʼ ಯಶ್‌ ʼರಾಮಾಯಣʼ ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರು ಕೇವಲ ಹದಿನೈದು ನಿಮಿಷಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಯಶ್‌ ಈ ಚಿತ್ರದ ಸಹ-ನಿರ್ಮಾಪಕರೂ ಹೌದು.

ʼಕೆಜಿಎಫ್‌ʼ ಸಿನಿಮಾಗಳ ಮೂಲಕ ವಿಶ್ವದಾದ್ಯಂತ ಹೆಸರು ಮಾಡಿರೋ ʼರಾಕಿಂಗ್‌ ಸ್ಟಾರ್‌ʼ ನಟ ಯಶ್‌ ಅವರು ಈಗ ʼಟಾಕ್ಸಿಕ್‌ʼ ಜೊತೆಯಲ್ಲಿ ʼರಾಮಾಯಣʼ ಸಿನಿಮಾವನ್ನು ಕೂಡ ಮಾಡುತ್ತಿದ್ದಾರೆ. ಇಷ್ಟುದಿನ ಹೀರೋ ಆಗಿ ಮೆರೆದಿದ್ದ ಯಶ್‌ ಅವರು ʼರಾಮಾಯಣʼ ಸಿನಿಮಾದಲ್ಲಿ ರಾವಣನಾಗಿ ಅಬ್ಬರಿಸಲಿದ್ದಾರೆ. ರಾಮ ಹಾಗೂ ರಾವಣನ ಕದನ ಹೇಗೆ ನಡೆಯಲಿದೆ ಎಂಬ ಕುತೂಹಲ ಶುರುವಾಗಿದೆ. ಈ ಮಧ್ಯೆ ನಟ ಯಶ್‌ ಅವರು ಈ ಸಿನಿಮಾದಲ್ಲಿ ಹದಿನೈದು ನಿಮಿಷಗಳ ಕಾಲ ಮಾತ್ರ ಕಾಣಿಸಿಕೊಳ್ತಾರೆ ಎಂಬ ವದಂತಿಯೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ಯಶ್‌ ಕೂಡ ಸಹನಿರ್ಮಾಪಕ!

ನಟ ಯಶ್‌ ಅವರು ಈ ಸಿನಿಮಾಕ್ಕೆ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ ಈ ಸಿನಿಮಾದ ಸಹನಿರ್ಮಾಪಕರು ಕೂಡ ಹೌದು ಎಂಬ ಮಾತು ಕೇಳಿ ಬಂದಿದೆ. “ರಾಮ ಹಾಗೂ ರಾವಣನ ಅಮರ ಕಥೆಯನ್ನು ಆಚರಿಸೋಣ” ಎಂದು ಮೊದಲೇ ಈ ಸಿನಿಮಾ ತಂಡ ಹೇಳಿಕೊಂಡಿದೆ. ಎರಡು ಭಾಗಗಳಲ್ಲಿ ʼರಾಮಾಯಣʼ ಸಿನಿಮಾ ತೆರೆ ಕಾಣಲಿದ್ದು, ಮೊದಲ ಭಾಗದಲ್ಲಿ ಯಶ್‌ ಅವರು 15 ನಿಮಿಷಗಳ ಕಾಲ ಕಾಣಲಿದ್ದಾರಾ ಎಂದು ಕಾದು ನೋಡಬೇಕಿದೆ. ನಿರ್ಮಾಪಕರೂ ಆಗಿರೋದಿಕ್ಕೆ ಯಶ್‌ ಅವರು ಇನ್ನೂ ಹೆಚ್ಚಿನ ಸಮಯ ತೆರೆ ಮೇಲೆ ಕಾಣಲೂಬಹುದು. ಈ ಬಗ್ಗೆ ಸಿನಿಮಾ ತಂಡವೇ ಮಾಹಿತಿ ಕೊಡಬೇಕಿದೆ.

ಪಾತ್ರಧಾರಿಗಳು ಯಾರು?

ನಟ ರಣಬೀರ್‌ ಕಪೂರ್‌ ಅವರು ರಾಮನಾಗಿ, ಲಕ್ಷ್ಮಣನಾಗಿ ರವಿ ದುಬೇ, ಹನುಮನಾಗಿ ಸನ್ನಿ ಡಿಯೋಲ್‌ ಅವರು ನಟಿಸುತ್ತಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ಅವರು ನಟಿಸುತ್ತಿದ್ದಾರೆ. ಈ ಬಿಗ್‌ ಬಜೆಟ್‌ ಸಿನಿಮಾದಲ್ಲಿ ನಟ ಯಶ್‌ ಅವರು ರಾವಣನಾಗಿ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ತಿರೋದು ನಿಜಕ್ಕೂ ಖುಷಿಯ ವಿಷಯ.

ಎರಡು ಭಾಗಗಳಲ್ಲಿ ತೆರೆ ಕಾಣಲಿರೋ ಸಿನಿಮಾ!

ಈ ಸಿನಿಮಾದ ಎರಡು ಪಾರ್ಟ್‌ಗಳಿಂದ ರಣಬೀರ್‌ ಕಪೂರ್‌ ಅವರು 150 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರಂತೆ. ಹನ್ಸ್‌ ಜಿಮ್ಮರ್‌ ಹಾಗೂ ಎಆರ್‌ ರೆಹಮಾನ್‌ ಅವರು ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಟೆರ್ರಿ ನೋಟರಿ, ಗೈ ನೊರಿಸ್‌ ಅವರು ಈ ಸಿನಿಮಾದ ಆಕ್ಷನ್‌ ದೃಶ್ಯಗಳಿಗೆ ನಿರ್ದೇಶನ ಮಾಡಲಿದ್ದಾರೆ. ನಮಿತ್‌ ಮಲ್ಹೋತ್ರ ಜೊತೆಗೆ ಯಶ್‌ ಅವರು ಕೂಡ ಈ ಸಿನಿಮಾಕ್ಕೆ ಹಣ ನೀಡಿದ್ದಾರೆ. ಎಂಟು ಬಾರಿ ಆಸ್ಕರ್‌ ಪ್ರಶಸ್ತಿ ವಿಜೇತ ವಿಎಫ್‌ಎಕ್ಸ್‌ ಕಂಪೆನಿ DNEG ಈಗ ವಿಶ್ಯುವಲ್‌ ಎಫೆಕ್ಟ್‌ ಒದಗಿಸುತ್ತಿದೆ.

ಈ ಸಿನಿಮಾ ಯಾವಾಗ ತೆರೆ ಕಾಣಲಿದೆ?

2026 ದೀಪಾವಳಿಗೆ ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್‌ ಆಗಲಿದೆ. 2027ರ ದೀಪಾವಳಿಗೆ ಎರಡನೇ ಭಾಗ ರಿಲೀಸ್‌ ಆಗಲಿದೆ. ದೊಡ್ಡ ಮಟ್ಟದಲ್ಲಿ ವೀಕ್ಷಕರನ್ನು ತಲುಪುವ ಯೋಜನೆಯನ್ನು ಹಾಕಿಕೊಂಡಿದ್ದು, ಸಿನಿಮಾ ಹೇಗೆ ಮೂಡಿ ಬರಲಿದೆ ಎಂಬ ಕುತೂಹಲ ಶುರುವಾಗಿದೆ.