ಅಮಿತಾಭ್ ಪ್ರೀತಿ ತೊರೆದ ಮೇಲೆ... ನೋವಿನ ಸರಮಾಲೆ ತೆರೆದಿಟ್ಟ ನಟಿ ರೇಖಾ!
ನಟ ಅಮಿತಾಭ್ ಬಚ್ಚನ್ ಮತ್ತು ನಟಿ ರೇಖಾ ಅವರ ಪ್ರೀತಿಯ ವಿಷಯ ತೀರಾ ಹಳೆಯದು. ಅಮಿತಾಭ್ ಅವರ ಪ್ರೀತಿ ಹೋದ ಮೇಲೆ ನಟಿ ಅನುಭವಿಸಿರುವ ನೋವಿನ ಬಗ್ಗೆ ಏನು ಹೇಳಿದ್ದಾರೆ?
'ಬಿಗ್ ಬಿ' ಅಮಿತಾಭ್ ಬಚ್ಚನ್ ಮತ್ತು ರೇಖಾ ಅವರ ಲವ್ ಸ್ಟೋರಿ (Love story) ಎಲ್ಲರಿಗೂ ತಿಳಿದದ್ದೇ. 'ಇಮಾನ್ ಧರಂ', 'ಖೂನ್ ಪಸಿನ' , 'ಗಂಗಾ ಕಿ ಸೌಗಂಧ್', 'ಮುಕದ್ದರ್ ಕ ಸಿಕಂದರ್' , 'ಮಿಸ್ಟರ್ ನಟವರ್‌ಲಾಲ್', 'ಸುಹಾಗ್', ' ರಾಮ್ ಬಲರಾಮ್' ಸೇರಿದಂತೆ ಹಲವು ಚಿತ್ರಗಳಲ್ಲಿ ತೆರೆ ಹಂಚಿಕೊಂಡ ಈ ಜೋಡಿ ಅಭಿಮಾನಿಗಳ ಹಿಟ್ ಜೊಡಿಯಾಗಿತ್ತು. ದೋ ಅಂಜಾನೆ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗಿನಿಂದಲೂ ಇವರಿಬ್ಬರ ಸುದ್ದಿ ಬಿ-ಟೌನ್ದಲ್ಲಿ ಹರಿದಾಡುತ್ತಲೇ ಇತ್ತು. ಇದು ಕೇವಲ ಗಾಸಿಪ್ ಆಗಿರಲಿಲ್ಲ, ಬದಲಿಗೆ ಇಬ್ಬರೂ ಪ್ರೀತಿಸುತ್ತಿದ್ದುದು ಕೂಡ ನಿಜವೇ ಆಗಿತ್ತು. ಬೆಳ್ಳಿ ಪರದೆಯ ಮೇಲೆ ಈ ಜೋಡಿಯ ಕೆಮೆಸ್ಟ್ರಿಯನ್ನು ಹಾಡಿ ಕೊಂಡಾಡಿದ್ದ ಅಭಿಮಾನಿಗಳು, ನಿಜ ಜೀವನದಲ್ಲಿಯೂ ಇವರಿಬ್ಬರು ಜೋಡಿಯಾಗಲಿ ಎಂದೇ ಹಾರೈಸಿದ್ದರು. ಆದರೆ ವಿಧಿಯ ಲೀಲೆಯೇ ಬೇರೆಯಾಗಿತ್ತು. ಒಬ್ಬರನ್ನೊಬ್ಬರು ಬಿಟ್ಟಿರದ ಜೋಡಿ ಕೊನೆಗೆ ಹಾವು-ಮುಂಗುಸಿಯಾಗಿತ್ತು. ಇವರಿಬ್ಬರ ನಡುವೆ ಜಯಾ ಬಾಧುರಿ (Jaya Badhuri) ಎಂಟ್ರಿ ಕೊಟ್ಟಿದ್ದರು. ಅಮಿತಾಭ್ ಬಚ್ಚನ್ ಹಾಗೂ ಜಯಾ ಅವರು 1973ರಲ್ಲಿ ಮದುವೆಯಾದರು. ಅಮಿತಾಭ್ ಬಚ್ಚನ್ ಅವರ ಮದುವೆ ಜಯಾ ಅವರ ಜೊತೆಗೆ ಆದ ನಂತರ ರೇಖಾ ಜರ್ಜರಿತರಾಗಿದ್ದರು.
ಇದಾದ ಬಳಿಕ, ನಟ ರಿಷಿ ಕಪೂರ್, ನೀತು ಕಪೂರ್ ಮದುವೆಯಲ್ಲಿ ರೇಖಾ ದೊಡ್ಡ ಸಿಂಧೂರ ಇಟ್ಟುಕೊಂಡು ಕಾಣಿಸಿಕೊಂಡಿದ್ದರು. ಸಿಂಧೂರ ಇಟ್ಟುಕೊಂಡಿದ್ದು ನೋಡಿ ರೇಖಾ ರಹಸ್ಯವಾಗಿ ಮದುವೆ ಆಗಿದ್ದಾರಾ ಎಂದೂ ಗುಸುಗುಸು ಪ್ರಶ್ನೆ ಮಾಡತೊಡಗಿದ್ದರು. ಅಮಿತಾಭ್ ಮತ್ತು ರೇಖಾ ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೂ ಗುಲ್ಲಾಗಿತ್ತು. ನಂತರ ಅಮಿತಾಭ್ ಬಚ್ಚನ್ ಅವರ ಶೂಟಿಂಗ್ (Shotting) ವೇಳೆ ಜಯಾ ಮತ್ತು ಅವರ ತಾಯಿ ಬರುತ್ತಿದ್ದರು. ರೇಖಾ ಜೊತೆಗಿನ ಲವ್ ದೃಶ್ಯಗಳು ಇದ್ದಾಗ ಜಯಾ ಅವರು ಕಣ್ಣೀರು ಹಾಕುತ್ತಿದ್ದರು. ಆಮೇಲೆ ರೇಖಾ ಜೊತೆಗೆ ನಟಿಸೋದಿಲ್ಲ ಅಂತ ಅಮಿತಾಭ್ ಹೇಳಿಕೆ ನೀಡಿಬಿಟ್ಟರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಖುದ್ದು ರೇಖಾ ಹೇಳಿಕೊಂಡಿದ್ದರು.
ಖಾಸಗಿ ವಿಡಿಯೋ ವೈರಲ್: ನೋವು ತೋಡಿಕೊಂಡ ಖ್ಯಾತ ನಟಿ Priyanka
ಅದಾದ ಬಳಿಕವೂ ರೇಖಾ ಇದೇ ವಿಷಯವಾಗಿ ಸುದ್ದಿಯಲ್ಲೇ ಇದ್ದಾರೆ. ಅವರು ವೃತ್ತಿಪರ ಜೀವನಕ್ಕಿಂತ ವೈಯಕ್ತಿಕ ಜೀವನವೇ ಹೆಚ್ಚು ಸುದ್ದಿಯಾಗುತ್ತಿದೆ. ಈಗ ರೇಖಾ ಅವರಿಗೆ 68 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ ಸೌಂದರ್ಯ ಕಾಪಾಡಿಕೊಂಡಿರುವ ರೇಖಾ ಅವರ ಜೀವನವು ರಹಸ್ಯಗಳಿಂದ (Secret) ತುಂಬಿಹೋಗಿದೆ. 1990ರಲ್ಲಿ ಇವರು ಮುಖೇಶ್ ಅಗರ್ವಾಲ್ ಅವರನ್ನು ಮದುವೆಯಾಗಿದ್ದರು ಎಂಬ ಸುದ್ದಿಯಾಗಿದ್ದರೂ ಅದೇ ವರ್ಷ ಅವರು ಸಾವನ್ನಪ್ಪಿದರು. ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಮನಸ್ಸಿನ ತುಂಬೆಲ್ಲಾ ಅಮಿತಾಭ್ ಅವರನ್ನೇ ನೆಚ್ಚಿಕೊಂಡಿದ್ದ ನಟಿ ಕೊನೆಗೂ ಒಂಟಿಯಾಗಿಯೇ ಉಳಿದರು. ಅವರ ಗಂಡನ ಸಾವಿನ ಬಳಿಕ ರೇಖಾ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದರೂ ಅವೆಲ್ಲವೂ ನಂತರ ತಣ್ಣಗಾದವು.
ತಾವು ಒಂಟಿಯಾಗಿರುವ (alone) ಬಗ್ಗೆ ತಮಗೆ ಯಾವುದೇ ನೋವಿಲ್ಲ ಎಂದು ರೇಖಾ ಹೇಳಿಕೊಂಡಿದ್ದಾರೆ. ಆದರೆ ಪ್ರೀತಿ ಕಳೆದುಕೊಂಡ ನಂತರ ತಮ್ಮ ಸ್ಥಿತಿ ಹೇಗಿದೆ ಎಂದು ಸಂದರ್ಶನವೊಂದರಲ್ಲಿ ಅವರು ಈಗ ಮೌನ ಮುರಿದಿದ್ದಾರೆ. ಅಮಿತಾಭ್ ಬಚ್ಚನ್‌ಗಿಂತ ಮೊದಲು ರೇಖಾ ಅವರ ಹೆಸರು ವಿನೋದ್ ಮೆಹ್ರಾ ಮತ್ತು ಕಿರಣ್ ಕುಮಾರ್ ಅವರಂತಹ ನಟರೊಂದಿಗೆ ಕೇಳಿ ಬಂದಿತ್ತು. ಆಗ ಅವರ ಹಲವು ಸುದ್ದಿಗಳು ಪ್ರಕಟವಾಗಿದ್ದವು. ಆದರೆ ರೇಖಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಚಿತ್ರರಂಗದಲ್ಲಿ ಗಾಸಿಪ್ಗಳಿಗೇನೂ ಬರವಿಲ್ಲ ಎಂದಿದ್ದ ಅವರು ಅವುಗಳ ಬಗ್ಗೆ ಮೌನವಾಗಿದ್ದರು. ಆದರೆ ಅಮಿತಾಭ್ ಅವರ ಪ್ರೀತಿ ಕಳೆದುಕೊಂಡ ಮೇಲೆ ತಮ್ಮ ಜೀವನ ಹಾಳಾಗಿ ಹೋಯಿತು ಎಂದು ನಟಿ ಹೇಳಿಕೊಂಡಿದ್ದಾರೆ. ಅವರು ತೀರಾ ಕುಡಿತ ಮತ್ತು ಡ್ರಗ್ಸ್ (Drugs) ದಾಸರಾಗಿದ್ದರು ಎಂಬ ವಿಷಯವೂ ಕೇಳಿಬಂದಿತ್ತು. ಈ ಬಗ್ಗೆ ಪ್ರಶ್ನೆ ಕೇಳಿದಾಗ ಅವರು ಖುದ್ದು ಅದನ್ನು ಒಪ್ಪಿಕೊಂಡಿದ್ದಾರೆ. ಖಂಡಿತವಾಗಿಯೂ ನಾನು ಮದ್ಯ ಸೇವಿಸುತ್ತಿದ್ದೆ, ಡ್ರಗ್ಸ್ ಕೂಡ ಸೇವಿಸಿದ್ದೇನೆ ಎಂಬ ಉತ್ತರ ನೀಡಿದ್ದಾರೆ. ನಿಜವಾಗಿಯೂ ಪ್ರೀತಿಸುತ್ತಿರುವ ವ್ಯಕ್ತಿಯ ಅಗಲಿಕೆಯಿಂದ ಆಗುವ ನೋವು ಎಂಥದ್ದು ಎಂದು ನನಗೆ ತಿಳಿದಿದೆ. ಅದರಿಂದ ಹೊರಕ್ಕೆ ಬರುವುದು ಕಷ್ಟ. ನಾನು ಕೂಡ ಎಲ್ಲಾ ಕೆಟ್ಟ ಅಭ್ಯಾಸಗಳ ದಾಸನಾಗಿದ್ದೆ ಎಂದಿದ್ದಾರೆ. ಇತ್ತೀಚಿಗೆ ಅವರು ನೀಡಿರುವ ಈ ಸಂದರ್ಶನ ಈಗ ಪುನಃ ವೈರಲ್ ಆಗುತ್ತಿದೆ.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಲ್ಲಿ ನೆಪೋಟಿಸಂ ಮಾಫಿಯಾ: ಕಂಗನಾ ಗರಂ!