ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಲ್ಲಿ ನೆಪೋಟಿಸಂ ಮಾಫಿಯಾ: ಕಂಗನಾ ಗರಂ!
ಆಲಿಯಾ ಭಟ್ ದಾದಾ ಸಾಹೇಬ್ ಪ್ರಶಸ್ತಿ ಪಡೆದ ಬೆನ್ನಲ್ಲೇ ಈ ಪ್ರಶಸ್ತಿ ವಿರುದ್ಧ ನಟಿ ಕಂಗನಾ ರಣಾವತ್ ಕಿಡಿ ಕಾರಿದ್ದು, ಟ್ವೀಟ್ ಮಾಡಿದ್ದಾರೆ. ಅವರು ಹೇಳಿದ್ದೇನು?
ಆಲಿಯಾ ಭಟ್ ಹೆಸರು ಕೇಳಿದರೆ ಕಂಗನಾ ರಣಾವತ್ (Kangana Ranaut) ಉರಿದುಕೊಳ್ಳುತ್ತಾರೆ. ಆಲಿಯಾ ಖ್ಯಾತ ನಿರ್ದೇಶಕ ಮಹೇಶ್ ಭಟ್ ಅವರ ಮಗಳು. ಮಹೇಶ್ ಅವರು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಆಲಿಯಾ ಬಾಲಿವುಡ್ ಹಾದಿ ಸುಗಮವಾಗಿತ್ತು. ‘ಧರ್ಮ ಪ್ರೊಡಕ್ಷನ್’ ನಿರ್ಮಾಣದ ಸಿನಿಮಾ ಮೂಲಕ ಆಲಿಯಾ ಬಾಲಿವುಡ್ಗೆ ಕಾಲಿಟ್ಟರು. ಅವರು ನಟಿಸಿದ ಹಲವು ಸಿನಿಮಾಗಳಿಗೆ ಕರಣ್ ಜೋಹರ್ ಬಂಡವಾಳ ಹೂಡಿದ್ದಾರೆ. ಈ ವಿಚಾರದಲ್ಲಿ ಆಲಿಯಾ ವಿರುದ್ಧ ಕಂಗನಾ ಈ ಮೊದಲಿನಿಂದಲೂ ದ್ವೇಷ ಸಾಧಿಸುತ್ತಾ ಬರುತ್ತಿದ್ದಾರೆ. ಕಳೆದ ವರ್ಷ ಆಲಿಯಾ ಭಟ್ ನಟನೆಯ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶದನ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಸಿನಿಮಾ ಬಿಡುಗಡೆಗೂ ಮುನ್ನ ಕಂಗನಾ ರಣಾವತ್ ಅವರು ಟೀಕೆ ಮಾಡಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋಲಲಿದೆ ಎಂದು ಕಂಗನಾ ಭವಿಷ್ಯ ನುಡಿದಿದ್ದರು. ‘ಇದು ಬಿಡುಗಡೆಯಾಗಲಿರುವ ದಿನ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂಪಾಯಿ ಸುಟ್ಟು ಬೂದಿಯಾಗಲಿದೆ. ಸಿನಿಮಾ ಇಂಡಸ್ಟ್ರಿಯ ಸಂಸ್ಕೃತಿಯನ್ನು ಆಲಿಯಾ ತಂದೆ (ಮಹೇಶ್ ಭಟ್) ಹಾಳು ಮಾಡಿದ್ದಾರೆ. ಅವರ ಸಿನಿಮಾಗಳನ್ನು ಜನರು ನೋಡುವುದನ್ನು ನಿಲ್ಲಿಸಬೇಕು. ಈ ಶುಕ್ರವಾರ ರಿಲೀಸ್ ಆಗುತ್ತಿರುವ ಸಿನಿಮಾ ಕೂಡ ಸೋಲು ಕಾಣಲಿದೆ’ ಎಂದಿದ್ದರು ಕಂಗನಾ. ಆದರೆ ಈ ಚಿತ್ರ ಬ್ಲಾಕ್ ಬಸ್ಟರ್ ಆಗಿರುವುದು ಈಗ ಇತಿಹಾಸ.
ಇದಾದ ಮೇಲೆ, ಸಿದ್ಧಾರ್ಥ್ ಮಲ್ಹೋತ್ರಾ (Siddharth Malhotra) ಮತ್ತು ಕಿಯಾರಾ ಅಡ್ವಾಣಿ (Kiara Adwani) ಅವರ ಮದುವೆಯ ಸಮಾರಂಭದಲ್ಲಿ ನಟ ಅನುಪಮ್ ಖೇರ್ ಅವರು ಆಲಿಯಾ ಭಟ್ ಜೊತೆ ಫೋಟೋ ತೆಗೆಸಿಕೊಂಡು ಅದನ್ನು ಶೇರ್ ಮಾಡಿದ್ದರು. ಫೋಟೋ ಶೇರ್ ಮಾಡಿರುವ ಅನುಪಮ್ ಖೇರ್, ಗಂಗೂಬಾಯಿ ಕಾಠಿಯಾವಾಡಿಯಲ್ಲಿ ಆಲಿಯಾ ಭಟ್ ಅವರ ಅಭಿನಯವನ್ನು ಶ್ಲಾಘಿಸಿದ್ದರು. 'ಪ್ರೀತಿಯ ಆಲಿಯಾ, ಈ ಮದುವೆಯ ಆರತಕ್ಷತೆಯಲ್ಲಿ ಬಹಳ ಸಮಯದ ನಂತರ ನಿಮ್ಮನ್ನು ಭೇಟಿಯಾಗುವುದು ತುಂಬಾ ಖುಷಿಕೊಡುತ್ತಿದೆ. ನೀವು ಶಾಲೆಯಲ್ಲಿ ಓದುತ್ತಿದ್ದ ದಿನಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ನೀವೊಬ್ಬ ಹುಟ್ಟು ನಟಿ ಎಂದು ಆಗಲಿಂದಲೇ ನಾನು ಯಾವಾಗಲೂ ನಿಮ್ಮನ್ನು ಹೇಗೆ ಕೀಟಲೆ ಮಾಡುತ್ತಿದ್ದೆ. ನಿಮ್ಮ ಅಭಿನಯವನ್ನು ನಾನು ತುಂಬಾ ಪ್ರೀತಿಸುತ್ತೇನೆ. ಅದರಲ್ಲಿಯೂ ವಿಶೇಷವಾಗಿ ಗಂಗೂಬಾಯಿಯಾಗಿ ನಿಮ್ಮ ಪಾತ್ರ ಅದ್ಭುತವಾಗಿದೆ. ಹೀಗೆಯೇ ಮುಂದುವರೆಯಿತು. ಯಾವಾಗಲೂ ಪ್ರೀತಿ ಮತ್ತು ಪ್ರಾರ್ಥನೆ ನಿಮ್ಮ ಜೊತೆಗೆ ಇರುತ್ತದೆ' ಎಂದು ಬರೆದಿದ್ದರು.
Rishabh Shetty: ಕಾಂತಾರ ಸ್ಟಾರ್ ರಿಷಬ್ ಶೆಟ್ಟಿಗೆ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ
ಇದನ್ನು ನೋಡಿದ್ದ ನಟಿ ಕಂಗನಾ ವಿರುದ್ಧ ನೆಟ್ಟಿಗರು ಕಾಲೆಳೆದಿದ್ದರು. ಅನುಪಮ್ ಖೇರ್ (Anupam Kher) ಅವರ ಮಾತನ್ನು ಕಂಗನಾ ಕೇಳಿಸಿಕೊಂಡಿದ್ದಾರಾ? ಈಗೇನೆನ್ನುತ್ತಾರೆ? ಏನಾದರೂ ಮಾತು ಹೊರಕ್ಕೆ ಬರುತ್ತಿವೆಯಾ?' ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಅರೆರೆ... ಕಂಗನಾ ಇನ್ನೂ ಕ್ಷೇಮವಾಗಿದ್ದಾರಾ ಎಂದು ಟೀಕಿಸಿದ್ದರು. ಇಷ್ಟಾದರೂ ಕಾಂಟ್ರವರ್ಸಿ ಕ್ವೀನ್ ಕಂಗನಾ, ಸುಮ್ಮನೇ ಆಗಿಲ್ಲ. ಇದೀಗ ದಾದಾಸಾಹೇಬ್ ಫಾಲ್ಕೆ (DadaSahebPhalke) ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟಿ ಮತ್ತು ನಟ ಪ್ರಶಸ್ತಿಗಳನ್ನು ಗೆದ್ದಿರುವ ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ ಅವರ ವಿರುದ್ಧ ಕಂಗನಾ ಮತ್ತೊಮ್ಮೆ ಕಿಡಿ ಕಾರಿದ್ದಾರೆ. ತಮ್ಮ ಟ್ವಿಟರ್ನಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಟಿ, ಅರ್ಹ ಪ್ರತಿಭೆಗಳಿಂದ ಎಲ್ಲಾ ಪ್ರಶಸ್ತಿಗಳನ್ನು ಕಸಿದುಕೊಳ್ಳಲಾಗಿದೆ. ಇದರಿಂದ ನೆಪೋ ಮಾಫಿಯಾ ಇನ್ನೂ ಜೀವಂತವಾಗಿದೆ ಎಂದು ತಿಳಿಯುತ್ತಿದೆ. ಪ್ರಶಸ್ತಿಗಳ ಸೀಸನ್ ಬರುತ್ತಲೇ ನೆಪೋಟಿಸಂ ಮಾಫಿಯಾ ಮತ್ತೆ ಶುರುವಾಗಿದೆ. ಅರ್ಹ ಪ್ರತಿಭೆಗಳಿಂದ ಎಲ್ಲಾ ಪ್ರಶಸ್ತಿಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಬರೆದಿದ್ದಾರೆ. ಆದರೆ ರಿಷಬ್ ಶೆಟ್ಟಿ, ಅನುಪಮ್ ಖೇರ್, ಆರ್ಆರ್ಆರ್ ಚಿತ್ರಗಳಿಗೆ ಪ್ರಶಸ್ತಿ ಬಂದಿರುವುದು ನಿಜವಾದ ಪ್ರಶಸ್ತಿ ಎಂದು ಅವರು ಶ್ಲಾಘಿಸಿದ್ದಾರೆ.
ನೆಪೋ ಮಕ್ಕಳು ಕೆಲಸ ಪಡೆಯಲು ಕರಣ್ ಜೋಹರ್ ಅವರನ್ನು ಹೊಗಳುತ್ತಾರೆ. ಅಷ್ಟೇ ಅಲ್ಲದೆ ಪ್ರತಿಭೆಯುಳ್ಳ ವ್ಯಕ್ತಿಯ ವೃತ್ತಿ ಜೀವನವನ್ನು ಹಾಳು ಮಾಡುತ್ತಾರೆ. ಆದರೆ ಯಾರಾದರೂ ತಮಗಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ್ರೆ ಅವರಿಗೆ ಸಮಸ್ಯೆ ತಪ್ಪಿದ್ದಲ್ಲ. ನಾನು ನೆಪೋಟಿಸಂ ಮಾಡುವವರನ್ನು ನಾಶ ಮಾಡ್ತೀನಿ. ಸುತ್ತಲೂ ದುಷ್ಟರು ಇರುವಾಗ ಒಬ್ಬರು ಜೀವನದ ಸೌಂದರ್ಯ ಸವಿಯಲು ಸಾಧ್ಯವಿಲ್ಲ. ದುಷ್ಟರ ಸಂಹಾರವೇ ಧರ್ಮದ ಗುರಿ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ ಎಂದೂ ಕಂಗನಾ ಹೇಳಿದ್ದಾರೆ.
ಆಲಿಯಾ ಭಟ್ ಹಾಡಿ ಹೊಗಳಿದ ಅನುಪಮ್ ಖೇರ್: ಕಂಗನಾ ಕಾಲೆಳೆದ ನೆಟ್ಟಿಗರು!
ಕಂಗನಾ ರಣಾವತ್ ಈ ಮಾತಿನಿಂದ ಪುನಃ ಟ್ರೋಲ್ಗೆ (Troll) ಒಳಗಾಗಿದ್ದಾರೆ. ಕೆಲವರು ಈಕೆಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ನೀವು ಅಸೂಯೆಗಳ ರಾಣಿ ಎಂದು ಕರೆಯುತ್ತಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ದುರಂತದ ಮೇಲೆ ದುರಂತ ಕಾಣುತ್ತಿರುವ ಕಾರಣ, ಹತಾಶೆಯಿಂದ ಬೇರೆ ನಟ-ನಟಿಯರ ಬಗ್ಗೆ ಬರೆಯುತ್ತಿರುವುದಾಗಿ ಕಾಲೆಳೆಯುತ್ತಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಸೋತ ಧಾಕಡ್ ಚಿತ್ರವನ್ನು ನೆನಪಿಸುತ್ತಿದ್ದಾರೆ. ಕಂಗನಾ ರಣಾವತ್ ಇದೀಗ ದಕ್ಷಿಣದ ಚಂದ್ರಮುಖಿ 2 ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರು ದಿ ಎಮರ್ಜೆನ್ಸಿ ಬಿಡುಗಡೆಗಾಗಿ ಕಾಯುತ್ತಿದ್ದಾರೆ.