KGF Chapter 2 ಸಿನಿಮಾವನ್ನು ಖ್ಯಾತ ನಿರ್ದೇಶಕರೊಬ್ಬರು 15 ನಿಮಿಷಕ್ಕಿಂತ ಹೆಚ್ಚು ಕಾಲ ನೋಡಲು ಸಾಧ್ಯವಾಗಲಿಲ್ಲ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ಚಿತ್ರದ ಮೊದಲಾರ್ಧ ನೋಡಲು ಕನಿಷ್ಠ ಎರಡು ಬ್ರೇಕ್ ಬೇಕಾಗುತ್ತದೆ ಎಂದು ಆ ನಿರ್ದೇಶಕರು ಹೇಳಿದ್ದಾರಂತೆ.
ಮುಂಬೈ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಸಿನಿಮಾಗಳಿಗಿಂತ ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿಯಲ್ಲಿದ್ದಾರೆ. ಇದೀಗ ಕನ್ನಡದ ಸೂಪರ್ ಹಿಟ್ ಸಿನಿಮಾದ ಕುರಿತು ನೆಗೆಟಿವ್ ಮಾತುಗಳನ್ನಾಡಿದ್ದಾರೆ. ಈಗಾಗಲೇ ಹಲವಷ್ಟು ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ರಾಮ್ ಗೋಪಾಲ್ ವರ್ಮಾ, ಖ್ಯಾತ ನಿರ್ದೇಶಕರೊಬ್ಬರು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ನೋಡುವಾಗ 15 ನಿಮಿಷಕ್ಕೆ ಎದ್ದು ಹೋದರು ಎಂಬ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಪಿಂಕ್ ವಿಲ್ಲಾಗೆ ನೀಡಿರುವ ಸಂದರ್ಶನದಲ್ಲಿ ರಾಮ್ ಗೋಪಾಲ್ ವರ್ಮಾ ಈ ಮಾತುಗಳನ್ನಾಡಿದ್ದಾರೆ.
ಖ್ಯಾತ ನಿರ್ದೇಶಕ ಮತ್ತು ತಮ್ಮ ನಡುವೆ ನಡೆದ ಫೋನ್ ಸಂಭಾಷಣೆಯ ಕುರಿತು ಮಾತಾಡಿರುವ ರಾಮ್ ಗೋಪಾಲ್ ವರ್ಮಾ, ಕನ್ನಡದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಅವರಿಂದ 15 ನಿಮಿಷವೂ ನೋಡಲು ಸಾಧ್ಯವಾಗಲಿಲ್ಲ. 15 ನಿಮಿಷದ ನಂತರ ಸಣ್ಣ ಬ್ರೇಕ್ ತೆಗೆದುಕೊಂಡು ಸಿನಿಮಾ ವೀಕ್ಷಣೆ ಮುಂದುವರಿಸಿದರು ಎಂಬ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಇಡೀ ವಿಶ್ವವೇ ಮೆಚ್ಚಿಕೊಂಡಿರುವಂತಹ ಕೆಜಿಎಫ್ ಸಿನಿಮಾ ಚೆನ್ನಾಗಿರಲಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಚಿತ್ರದ ಮೊದಲಾರ್ಧ ನೋಡಲು ಕನಿಷ್ಠ ಎರಡು ಬ್ರೇಕ್ ಬೇಕಾಗುತ್ತದೆ ಎಂದು ಆ ನಿರ್ದೇಶಕರು ಹೇಳಿದರು. ಎರಡ್ಮೂರು ಬ್ರೇಕ್ ತೆಗೆದುಕೊಂಡರೂ ನಿರ್ದೇಶಕರು ಸಂಪೂರ್ಣವಾಗಿ ಕೆಜಿಎಫ್ ಚಾಪ್ಟರ್ 2 ವೀಕ್ಷಿಸಲಿಲ್ಲ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
ಅವರು ತುಂಬಾನೇ ಫೇಮಸ್ ಡೈರೆಕ್ಟರ್. ಫೋನ್‌ನಲ್ಲಿ ನಾನು ಅವರೊಂದಿಗೆ ಚಾಟ್ ಮಾಡುತ್ತಿದ್ದ. ಆಗ ಅವರು, ರಾಮು, ನಾನು ಕೆಜಿಎಫ್ ಸಿನಿಮಾ ನೋಡಲು ತುಂಬಾನೇ ಪ್ರಯತ್ನಿಸಿದೆ. ಆದರೆ 15 ನಿಮಿಷದ ನಂತರ ಬೇಸರವಾಗಿ ಬ್ರೇಕ್ ತೆಗೆದುಕೊಂಡೆ. ನಂತರ ಮತ್ತೆ 15 ನಿಮಿಷ ನೋಡಿ, ಸ್ನಾನಕ್ಕೆ ಎದ್ದು ಹೋದೆ. ಸ್ನಾನದ ಬಳಿಕ ಕೆಜಿಎಫ್ ಸಿನಿಮಾ ನೋಡಲಿಲ್ಲ ಎಂದು ರಾಮ್ ಗೋಪಾಲ್ ವರ್ಮಾಗೆ ಆ ನಿರ್ದೇಶಕರು ಹೇಳಿದರಂತೆ. ಆದ್ರೆ ರಾಮ್ ಗೋಪಾಲ್ ಸಂದರ್ಶನದಲ್ಲಿ ಆ ಖ್ಯಾತ ನಿರ್ದೇಶಕ ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ಕೆಜಿಎಫ್-2 ಸ್ಟೋರಿ ಕಾಪಿ ಮಾಡಿದ ಪುಷ್ಪ-2; ಇಷ್ಟೆಲ್ಲಾ ಕಾಕತಾಳೀಯ ಇರೋಕೆ ಹೇಗೆ ಸಾಧ್ಯ?
ಸ್ನೇಹಿತ ನಿರ್ದೇಶಕನೊಂದಿಗೆ ಮಾತನಾಡುವಾಗ ನಾನು ಸಹ ಆ ಮಾತುಗಳನ್ನು ಒಪ್ಪಿಕೊಂಡೆ. ಆದ್ರೆ ಕೆಜಿಎಫ್ ಚಾಪ್ಟರ್ 2 ಯಾಕೆ ಅಷ್ಟೊಂದು ಸಕ್ಸಸ್ ಕಂಡಿತು ಎಂಬುವುದು ನಿರ್ದೇಶಕರಿಗೆ ಇನ್ನು ಅರ್ಥವಾಗಿಲ್ಲ. ನಾವು ಸಿನಿಮಾದ ವಿಷಯಗಳ ಬಗ್ಗೆ ಮಾತನಾಡಬಹುದು. ಆದ್ರೆ ಆ ಚಿತ್ರ ಕಂಡಿರುವ ಯಶಸ್ಸಿನ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂಬುದನ್ನು ಆರ್‌ಜಿವಿ ತಮ್ಮ ಮಾತುಗಳಲ್ಲಿ ಉಲ್ಲೇಖಿಸಿದ್ದಾರೆ.
2022ರಲ್ಲಿ ಬಿಡುಗಡೆಯಾದ ಕೆಜಿಎಫ್ ಚಾಪ್ಟರ್ ಬಾಕ್ಸ್ ಆಫಿಸ್‌ನಲ್ಲಿ 1200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹೊಂಬಾಳೆ ಫಿಲಂಸ್ ಚಿತ್ರ ನಿರ್ಮಾಣ ಮಾಡಿದ್ದು, ಪ್ರಶಾಂತ್ ನೀಲ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ, ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್, ಟಿಎಸ್ ನಾಗಭರಣ, ಮಾಳವಿಕಾ ಅವಿನಾಶ್, ವಶಿಷ್ಠ ಸಿಂಹ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
ಇದನ್ನೂ ಓದಿ: ಕನ್ನಡದ ಸೂಪರ್ ಸ್ಟಾರ್ ಹೀಗೆಂದು ಅಂದುಕೊಂಡೇ ಇರಲಿಲ್ಲ: ನಟ ಯಶ್ ಕುರಿತು ಬಾಲಿವುಡ್ ನಟಿ ಹೇಳಿದ್ದೇನು?

