'ಧುರಂಧರ್ 2' ಸಿನಿಮಾವನ್ನು ಆರ್​ಜಿವಿ ಭಾರತೀಯ ಚಿತ್ರರಂಗದ "ಗೇಮ್ ಚೇಂಜರ್" ಎಂದು ಕರೆದಿದ್ದಾರೆ. ಇಂದಿನ ಕಾಲದ ಅತಿರಂಜಿತ 'ಮಸಾಲೆ' ಸಿನಿಮಾಗಳು, ಹಾರುವ-ಜಿಗಿಯುವ ಅಸಾಧ್ಯವಾದ ಸಾಹಸ ದೃಶ್ಯಗಳು ಮತ್ತು ಸೂಪರ್ ಹ್ಯೂಮನ್ ಹೀರೋಗಳ ಕಾಲಕ್ಕೆ ಈ ಸಿನಿಮಾ ಅಂತ್ಯ ಹಾಡಲಿದೆ ಎಂಬುದು ವರ್ಮಾ ಅವರ ವಾದ.

ಧುರಂಂಧರ್ 2 ಹೊಗಳಿದ ರಾಮ್ ಗೋಪಾಲ್ ವರ್ಮಾ

Add Asianetnews Kannada as a Preferred SourcegooglePreferred

ಬಾಲಿವುಡ್‌ನ ಖ್ಯಾತ ಹಾಗೂ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಅವರು ಸದಾ ತಮ್ಮ ನೇರ ನಡೆ-ನುಡಿಗಳಿಗೆ ಹೆಸರುವಾಸಿ. ಒಂದು ಸಿನಿಮಾ ಇಷ್ಟವಾಯಿತೆಂದರೆ ಅದನ್ನು ಆಕಾಶಕ್ಕೆ ಏರಿಸುವ ವರ್ಮಾ, ಸದ್ಯ ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಚಿತ್ರದ ಗುಂಗಿನಲ್ಲಿದ್ದಾರೆ. ಈ ಚಿತ್ರದ ಯಶಸ್ಸನ್ನು ಕಂಡು ಬೆರಗಾಗಿರುವ ಅವರು, ನಿರ್ದೇಶಕ ಆದಿತ್ಯ ಧರ್ ಅವರ ಬೆನ್ನು ತಟ್ಟಿದ್ದಾರೆ.

ಸಿನಿರಂಗಕ್ಕೆ ಸುನಾಮಿ ತಂದ ‘ಧುರಂಧರ್ 2’: ಆದಿತ್ಯ ಧರ್ ಅವರೇ ‘ರಿಯಲ್ ಹಮ್ಜಾ’ ಎಂದ ರಾಮ್ ಗೋಪಾಲ್ ವರ್ಮಾ!

ಇತ್ತೀಚೆಗೆ ಆರ್​ಜಿವಿ ಅವರು ನಿರ್ದೇಶಕ ಆದಿತ್ಯ ಧರ್ ಮತ್ತು ಅವರ ಪತ್ನಿ, ಜನಪ್ರಿಯ ನಟಿ ಯಾಮಿ ಗೌತಮ್ ಅವರೊಂದಿಗೆ ಸಮಯ ಕಳೆದಿದ್ದಾರೆ. ಈ ಭೇಟಿಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, ಈ ಜೋಡಿಯನ್ನು "ಪವರ್ ಕಪಲ್" ಎಂದು ಬಣ್ಣಿಸಿದ್ದಾರೆ. ಅಷ್ಟೇ ಅಲ್ಲದೆ, ಟ್ವಿಟರ್ (X) ನಲ್ಲಿ ವರ್ಮಾ ಮಾಡಿರುವ ಪೋಸ್ಟ್ ಈಗ ಇಡೀ ಸಿನಿರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಣವೀರ್ ಸಿಂಗ್ ಅವರ 'ಹಮ್ಜಾ' ಪಾತ್ರ ಮತ್ತು ನಿರ್ದೇಶಕ ಆದಿತ್ಯ ಧರ್ ನಡುವೆ ವರ್ಮಾ ಒಂದು ರೋಚಕ ಹೋಲಿಕೆ ಮಾಡಿದ್ದಾರೆ.

ರೀಲ್ ಹಮ್ಜಾ vs ರಿಯಲ್ ಹಮ್ಜಾ:

ಸಿನಿಮಾದಲ್ಲಿ ರಣವೀರ್ ಸಿಂಗ್ ಅವರು 'ಹಮ್ಜಾ ಅಲಿ ಮಜಾರಿ' ಎಂಬ ಪಾತ್ರದಲ್ಲಿ ಪಾಕಿಸ್ತಾನಿ ಭಯೋತ್ಪಾದಕರನ್ನು ಸದೆಬಡಿಯುವ ಗೂಢಚಾರನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಆರ್​ಜಿವಿ ಅವರ ಪ್ರಕಾರ, ನಿಜ ಜೀವನದ 'ಹಮ್ಜಾ' ಎಂದರೆ ಅದು ನಿರ್ದೇಶಕ ಆದಿತ್ಯ ಧರ್! ವರ್ಮಾ ತಮ್ಮ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ: "ಪವರ್ ಕಪಲ್ ಜೊತೆ ನಾನು. ತೆರೆಯ ಮೇಲಿನ ಹಮ್ಜಾ (ರಣವೀರ್) ಪಾಕಿಸ್ತಾನಿ ಭಯೋತ್ಪಾದಕರನ್ನು ಧ್ವಂಸ ಮಾಡಿದರೆ, ನಿಜ ಜೀವನದ ಹಮ್ಜಾ ಆದಿತ್ಯ ಧರ್ ತಮ್ಮ ಅದ್ಭುತ ಪ್ರತಿಭೆಯಿಂದ ಭಾರತೀಯ ಚಿತ್ರನಿರ್ಮಾಪಕರನ್ನೇ ಧ್ವಂಸ ಮಾಡುತ್ತಿದ್ದಾರೆ. ಭಯೋತ್ಪಾದಕರು ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಬಹುದು, ಆದರೆ ಇತರ ಚಿತ್ರನಿರ್ಮಾಪಕರು ತಮ್ಮ ಸಿನಿಮಾಗಳನ್ನು ಆದಿತ್ಯ ಅವರ ಈ ಬ್ರಿಲಿಯನ್ಸ್‌ನಿಂದ ಉಳಿಸಿಕೊಳ್ಳಲು ಎಲ್ಲಿಗೆ ಓಡುತ್ತಾರೆ?" ಎಂದು ಪ್ರಶ್ನಿಸುವ ಮೂಲಕ ಆದಿತ್ಯ ಧರ್ ಅವರ ನಿರ್ದೇಶನ ಶಕ್ತಿಯನ್ನು ಕೊಂಡಾಡಿದ್ದಾರೆ.

ಮಸಾಲೆ ಸಿನಿಮಾಗಳಿಗೆ ಮುಕ್ತಾಯ ಹಾಡಿದ ‘ಧುರಂಧರ್ 2’:

'ಧುರಂಧರ್ 2' ಸಿನಿಮಾವನ್ನು ಆರ್​ಜಿವಿ ಭಾರತೀಯ ಚಿತ್ರರಂಗದ "ಗೇಮ್ ಚೇಂಜರ್" ಎಂದು ಕರೆದಿದ್ದಾರೆ. ಇಂದಿನ ಕಾಲದ ಅತಿರಂಜಿತ 'ಮಸಾಲೆ' ಸಿನಿಮಾಗಳು, ಹಾರುವ-ಜಿಗಿಯುವ ಅಸಾಧ್ಯವಾದ ಸಾಹಸ ದೃಶ್ಯಗಳು ಮತ್ತು ಸೂಪರ್ ಹ್ಯೂಮನ್ ಹೀರೋಗಳ ಕಾಲಕ್ಕೆ ಈ ಸಿನಿಮಾ ಅಂತ್ಯ ಹಾಡಲಿದೆ ಎಂಬುದು ವರ್ಮಾ ಅವರ ವಾದ. ರಣವೀರ್ ಸಿಂಗ್ ಅವರು ದೇವಮಾನವನಂತೆ ನಟಿಸದೆ, ಏಟು ಬಿದ್ದಾಗ ರಕ್ತ ಸುರಿಸುವ, ನೋವಾದಾಗ ಅಳುವ ಒಬ್ಬ ಸಾಮಾನ್ಯ ಮನುಷ್ಯನಂತೆ ಹಮ್ಜಾ ಪಾತ್ರವನ್ನು ನಿರ್ವಹಿಸಿರುವುದು ವರ್ಮಾ ಅವರಿಗೆ ತುಂಬಾ ಹಿಡಿಸಿದೆ. ಈ ಚಿತ್ರದ ನೈಜ ಕಥೆ ಮತ್ತು ಆಕ್ಷನ್ ದೃಶ್ಯಗಳ ಮುಂದೆ ಹಳೆಯ ಕಾಲದ ಸುಳ್ಳು ಸ್ಟಂಟ್‌ಗಳು ಇನ್ನು ಮುಂದೆ ನಡೆಯುವುದಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಚಿತ್ರದ ಹಿನ್ನೆಲೆ:

2025ರ ಬ್ಲಾಕ್‌ಬಸ್ಟರ್ 'ಧುರಂಧರ್' ಚಿತ್ರದ ಸೀಕ್ವೆಲ್ ಆಗಿರುವ ‘ಧುರಂಧರ್ 2: ದಿ ರಿವೇಂಜ್’, ಆದಿತ್ಯ ಧರ್ ಅವರ ಕಲ್ಪನೆಯಲ್ಲಿ ಮೂಡಿಬಂದಿದೆ. ಮಾರ್ಚ್ 19, 2026 ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್. ಮಾಧವನ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಅತ್ಯಂತ ಭವ್ಯವಾಗಿ ನಿರ್ಮಿಸಿರುವ ಈ ಚಿತ್ರವನ್ನು ಭಾರತ ಮತ್ತು ಥೈಲ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗಿದೆ. ಪ್ರಸ್ತುತ ಈ ಸಿನಿಮಾ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸುತ್ತಿದೆ.